ಸೂರ್ಯ ಕುಮಾರ್ ಯಾದವ್. ಟ್ವೆಂಟಿ-20 ಕ್ರಿಕೆಟ್‍ನ ಸೆನ್ಸೇಷನ್. ನಂ.1 ರ್ಯಾಂಕಿಂಗ್‍ನಲ್ಲಿರೋ ಬ್ಯಾಟರ್. ಒಂದು ಕಾಲದ ಸಿಡಿಲಮರಿ ವೀರೇಂದ್ರ ಸೆಹ್ವಾಗ್ ರಂತಹವರೇ ನಿನ್ನ ಆಟ ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆಂದರೆ, ಸಾಮಾನ್ಯ ಪ್ರೇಕ್ಷಕರ ಪರಿಸ್ಥಿತಿ ಹೇಗಿರಬೇಡ. ನೋ ಬೆಟರ್ ಫೀಲಿಂಗ್ ಎಂದು ಸೂರ್ಯ ಬ್ಯಾಟಿಂಗ್ ಪೋಸ್ಟ್ ಹಾಕಿ ಮೂರು ಪದಗಳಲ್ಲಿಯೇ ಕೊಹ್ಲಿ ಸೂರ್ಯ ಸಾಮಥ್ರ್ಯ ಹಿಡಿದಿಟ್ಟಿದ್ದರು. ಕೊಹ್ಲಿ ಅಪ್ರೂವ್ಸ್ ಎಂದು ಸೆಲಬ್ರೇಟ್ ಮಾಡಿತ್ತು ಬಿಸಿಸಿಐ.ಅಂದಹಾಗೆ ಸೂರ್ಯನಿಗೀಗ 32 ವರ್ಷ. 100 ಟೆಸ್ಟ್ ಆಡಿರುವ ಕೊಹ್ಲಿಗಿಂತ ಎರಡು ವರ್ಷ ಚಿಕ್ಕವರಾದರೆ, ಕ್ಯಾಪ್ಟನ್ ರೋಹಿತ್ ಶರ್ಮಾಗಿಂತ 3 ವರ್ಷ ಚಿಕ್ಕವ. ತಂಡದ ಸೀನಿಯರ್ ಪ್ಲೇಯರ್ ರವಿಚಂದ್ರನ್ ಅಶ್ವಿನ್ ಅವರಿಗಿಂತ 4 ವರ್ಷ ಚಿಕ್ಕವ.

ಸೂರ್ಯ ಆಟ ನೋಡಿದವರೆಲ್ಲ ಅಚ್ಚರಿಯಾಗುವುದು ಆತನ ಆಟದ ಜೊತೆಗೆ ಆತನ ವಯಸ್ಸು ನೋಡಿ. ಈತನ ಆಟ ಹದಿಹರೆಯದವರನ್ನೂ ನಾಚಿಸುವಂತಿದೆ. ಜಿಂಬಾಬ್ವೆ ವಿರುದ್ಧ ಆಫ್ ಸೈಡ್ ವೈಡ್ ಬಾಲ್‍ನ್ನು ಲೆಗ್ ಸೈಡಿಗೆ ಸಿಕ್ಸ್ ಹೊಡೆಯೋಕೆ ಟೆಕ್ನಿಕ್ ಅಷ್ಟೇ ಇದ್ದರೆ ಸಾಲದು, ಫಿಟ್ ನೆಸ್ ಕೂಡಾ ಇರಬೇಕು. ಬೌಲರ್ ಏನೇ ಪ್ಲಾನ್ ಮಾಡಿಕೊಂಡು ಪ್ಲಾನ್ ಹಾಕಿದರೂ ಅದನ್ನು ಚಿಂದಿ ಚಿಂದಿ ಮಾಡುವ ಕಲೆ ಸೂರ್ಯನಿಗೆ ಕರಗತ. ಆದರೆ ಇಂತಹ ಆಟಗಾರ ತೀರಾ ಇತ್ತೀಚೆಗೆ. 2021ರ ಮಾರ್ಚ್ 14ರಂದು ಇಂಗ್ಲೆಂಡ್ ವಿರುದ್ಧ ಸೂರ್ಯ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಸೂರ್ಯನ ವಯಸ್ಸು 31 ವರ್ಷ. ಇಂತಹ ಆಟಗಾರ ಮೊದಲೇ ಟೀಂ ಇಂಡಿಯಾಗೆ ಸಿಗಬೇಕಿತ್ತು ಎನ್ನುವವರೇ ಎಲ್ಲ. ಆದರೆ ಲೇಟ್ ಆಗಿದ್ದು ಯಾಕೆ? ಏಕೆಂದರೆ ಬಹುತೇಕ ಕ್ರೀಡಾಪಟುಗಳ ಅಂತ್ಯಕಾಲ 30 ಪ್ಲಸ್ ವಯಸ್ಸು.
ಸೂರ್ಯ ಕುಮಾರ್ ಯಾದವ್ ಕಡಿಮೆ ಆಟಗಾರನೇನಲ್ಲ. ಮುಂಬೈ ಪರ ರಣಜಿ ತಂಡದಲ್ಲಿ ಆಡಿದವನು. 2014-15ರಲ್ಲಿ ರಣಜಿ ತಂಡದ ಕ್ಯಾಪ್ಟನ್ ಆಗಿದ್ದ ಸೂರ್ಯ ಅವರನ್ನು ಕಾರಣವನ್ನೇ ನೀಡದೆ ತಂಡದಿಂದ ಹೊರಗಿಟ್ಟಿತ್ತು ಮುಂಬೈ. ಆತ ಉತ್ತರ ಪ್ರದೇಶದವನು ಎನ್ನುವುದೇ ಕಾರಣ ಎನ್ನಲಾಗುತ್ತದೆಯಾದರೂ ಅಧಿಕೃತವಾಗಿ ಯಾರೊಬ್ಬರೂ ಹೇಳಿಕೆ ನೀಡುವುದಿಲ್ಲ. ಇದು ಮುಂಬೈ ಕ್ರಿಕೆಟ್ ಗಲ್ಲಿಯ ಗಾಸಿಪ್ಪು. ಮತ್ತೆ ವಾಪಸ್ ಬಂದಿದ್ದು 2018-19ರಲ್ಲಿ. ಆಗ ಸೂರ್ಯ ಬೆನ್ನಿಗೆ ನಿಂತಿದ್ದು ಹಿಟ್ ಮ್ಯಾನ್ ರೋಹಿತ್ ಶರ್ಮಾ.
ಇದರ ಮಧ್ಯೆ ಸೂರ್ಯ ಕುಮಾರ್ ಯಾದವ್ ಐಪಿಎಲ್‍ನಲ್ಲಿ ಮೊದಲು ಆಡಿದ್ದು ಮುಂಬೈ ಇಂಡಿಯನ್ಸ್‍ಗೇ ಆದರೂ ಚಾನ್ಸ್ ಸಿಕ್ಕಲಿಲ್ಲ. ನಂತರ ಕೋಲ್ಕತ್ತಾ ನೈಟ್ ರೈಡರ್ಸ್‍ಗೆ ಆಡುತ್ತಿದ್ದವನ ವಿಶೇಷ ಪ್ರತಿಭೆ ಗುರುತಿಸಿದ್ದು ಗೌತಮ್ ಗಂಭೀರ್. ಫಿನಿಷರ್ ಆಗಿ ಕೊನೆಯಲ್ಲಿ ಬ್ಯಾಟಿಂಗಿಗೆ ಬರುತ್ತಿದ್ದ ಸೂರ್ಯನನ್ನು ಮೇಲಿನ ಕ್ರಮಾಂಕಕ್ಕೆ ಕರೆತಂದರು. ಮುಂಬೈ ಇಂಡಿಯನ್ಸ್ ವಿರುದ್ಧವೇ 20 ಎಸೆತಗಳಲ್ಲಿ 46 ರನ್ ಸಿಡಿಸಿ ಕೋಲ್ಕತ್ತಾ ತಂಡವನ್ನು ಗೆಲ್ಲಿಸಿದ ಸೂರ್ಯನ ಮೇಲೆ ಮುಂಬೈ ಕಣ್ಣು ಬಿತ್ತು. ತಂಡದ ಒಳಗಿನ ರಾಜಕೀಯಕ್ಕೆ ಆಟಗಾರರನ್ನು ಕೈಬಿಟ್ಟಾಗ 2018ರಲ್ಲಿ ಎರಡೂ ಕೈಗಳಿಂದ ಬಾಚಿ ತಬ್ಬಿಕೊಳ್ತು ಮುಂಬೈ ಇಂಡಿಯನ್ಸ್. ಅಲ್ಲಿಂದ ಇಲ್ಲಿಯವರೆಗೆ ಸೂರ್ಯ ಹಿಂದಿರುಗಿ ನೋಡಿಲ್ಲ. ಸೂರ್ಯನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗರು ಗುರುತಿಸುವಂತೆ ಮಾಡಿದ್ದೇ ಐಪಿಎಲ್.

ಅಂದಹಾಗೆ ಸೂರ್ಯ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು ವಿರಾಟ್ ಕೊಹ್ಲಿ ಜೊತೆ ಆಡಿದ ಜಗಳದಿಂದ ಎನ್ನುವುದು ಆಶ್ಚರ್ಯ ಆದರೂ ಸತ್ಯ. ಆರ್‍ಸಿಬಿ ಜೊತೆಗಿನ ಪಂದ್ಯವೊಂದರಲ್ಲಿ ಸೂರ್ಯ ಮತ್ತು ಆರ್‍ಸಿಬಿ ಕ್ಯಾಪ್ಟನ್ ಕೂಡಾ ಆಗಿದ್ದ ಕೊಹ್ಲಿ ಮಧ್ಯೆ ಒಂದು ಕಿರಿಕ್ ಆಗಿತ್ತು. ಆ ಪಂದ್ಯದಲ್ಲಿ ಸೂರ್ಯ 79 ರನ್ ಗಳಿಸಿ ಕೊಹ್ಲಿ ಪಡೆಯನ್ನು ಸೋಲಿಸಿದ್ದರು. ಆರ್‍ಸಿಬಿ ಕ್ಯಾಪ್ಟನ್ ಆಗಿ ಜಗಳವಾಡಿದ್ದ ಕೊಹ್ಲಿ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಯೋಚಿಸೋಕೆ ಶುರು ಮಾಡಿದಾಗ ಸೂರ್ಯನಿಗೆ ಟೀಂ ಇಂಡಿಯಾ ಹೆಬ್ಬಾಗಿಲು ತೆರೆದಿತ್ತು.
2020ರ ಆಸ್ಟ್ರೇಲಿಯಾ ಪ್ರವಾಸಕ್ಕೆ ನಾನು ಸೆಲೆಕ್ಟ್ ಆಗುವ ನಿರೀಕ್ಷೆಯಿತ್ತು. ಇದನ್ನು ಅಹಂಕಾರ ಎನ್ನಬೇಡಿ. 2019, 2020ರ ಐಪಿಎಲ್ ಮತ್ತು ರಣಜಿಯಲ್ಲಿ ನಾನು ಆಡಿದ ಆಟವೇ ನನಗೆ ಕಾನ್ಫಿಡೆನ್ಸ್ ಕೊಟ್ಟಿತ್ತು. ತಂಡ ಪ್ರಕಟವಾದಾಗ ನನ್ನ ಹೆಸರು ಇರಲಿಲ್ಲ. ನಿರಾಸೆಯಲ್ಲಿ ಮುಳುಗಿ ಹೋದೆ. ಕೆಲವು ಪ್ರಾಕ್ಟೀಸ್ ಸೆಷನ್ಸ್ ತಪ್ಪಿಸಿಕೊಂಡೆ. ಹೆಂಡತಿ ಜೊತೆ ಬೀಚ್‍ನಲ್ಲಿ ತಿರುಗೋಕೆ ಶುರು ಮಾಡಿದೆ. ಆಗ ಆರ್.ಸಿ.ಬಿ ವಿರುದ್ಧ ಮುಂಬೈ ಪಂದ್ಯವಿತ್ತು. ಮಹೇಲ ಜಯರ್ವರ್ಧನೆ ಮತ್ತು ಜಹೀರ್ ಖಾನ್ ನನ್ನನ್ನು ಕಂಡು ಈ ಪಂದ್ಯದಲ್ಲಿ ನಿನ್ನ ಆಟ ಪ್ರೂವ್ ಮಾಡು. ನಿನಗೆ ಒಳ್ಳೆ ಚಾನ್ಸ್ ಎಂದರು. ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ನನಗೆ ಸಮಾಧಾನ ಹೇಳಿದರು. ಆದರೆ ಎಷ್ಟು ನಿರಾಸೆಯಲ್ಲಿದ್ದೆನೆಂದರೆ ನನಗೆ ಯಾರು ಯಾರು ಏನು ಹೇಳಿದರೂ ಅನ್ನೋದು ನೆನಪಿನಲ್ಲಿಲ್ಲ ಎಂದು ಹೇಳಿಕೊಂಡಿದ್ದರು ಸೂರ್ಯ.
ತಂಡದ ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಕೊಟ್ಟ ಕಾನ್ಫಿಡೆನ್ಸ್, ಫ್ರೀಯಾಗಿ ಆಡುವಂತೆ ಪ್ರೋತ್ಸಾಹಿಸಿದ್ದೇ ನನ್ನ ಈಗಿನ ಬ್ಯಾಟಿಂಗ್‍ಗೆ ಕಾರಣ ಎನ್ನುವ ಸೂರ್ಯ ಕೊಹ್ಲಿಯ ಫ್ಯಾನು. ಈಗ ಸೂರ್ಯ ಜೊತೆ ಕ್ರೀಸಿನಲ್ಲಿದ್ದರೆ ಸ್ವತಃ ಕೊಹ್ಲಿ ಸಿಂಗಲ್ಸ್ ತೆಗೆದುಕೊಂಡು ಸೂರ್ಯನನ್ನು ಸ್ಟ್ರೈಕಿಗೆ ಬಿಡುತ್ತಾರೆ. ನಾನ್ ಸ್ಟ್ರೈಕ್ ಎಂಡ್‍ನಲ್ಲಿ ನಿಂತು ಸೂರ್ಯನ ಆಟ ನೋಡುವುದೇ ಒಂದು ಆನಂದ ಎನ್ನುವ ಕೊಹ್ಲಿ, ಸೂರ್ಯ ಔಟ್ ಆದಾಗ ತೋರಿಸುವ ಮುಖಭಾವ ನೋಡಿ ಸೂರ್ಯ ಔಟ್ ಆದ ಬೇಸರದಲ್ಲೂ ಖುಷಿ ಪಡುವ ಫ್ಯಾನ್ಸ್ ಇದ್ದಾರೆ.
ವಾಸ್ತವವಾಗಿ ಹೇಳಬೇಕೆಂದರೆ ಸೂರ್ಯ ಕುಮಾರ್ ಯಾದವ್ ಬಳಿ ದಂಡಿಯಾಗಿ ವಯಸ್ಸಿಲ್ಲ. 32 ಬಹುತೇಕ ಆಟಗಾರರು ನಿವೃತ್ತಿಯ ಕುರಿತು ಯೋಚಿಸುವ ಸಮಯವಿದು. ರೋಹಿತ್ ಶರ್ಮಾಗೆ ಇದೇ ಕಡೆಯ ಟ್ವೆಂಟಿ-20 ವಿಶ್ವಕಪ್ ಆಗಬಹುದು. ಮುಂದಿನ ಏಕದಿನ ವಿಶ್ವಕಪ್ ಕಡೆಯ ಟೂರ್ನಿಯೂ ಆಗಬಹುದು. ಕೊಹ್ಲಿಯದ್ದೂ ಅಮ್ಮಮ್ಮಾ ಎಂದರೆ ಮೂರ್ನಾಲ್ಕು ವರ್ಷ. ಆ ಹೊತ್ತಿನಲ್ಲಿ ಅವರಿಗಿಂತ ಕೇವಲ 2-3 ವರ್ಷ ಚಿಕ್ಕವನಿರುವ ಸೀನಿಯರ್ ಸೂರ್ಯ ಅರ್ಜೆಂಟಾಗಿ ಹೆಜ್ಜೆ ಗುರುತು ಮೂಡಿಸಬೇಕಿದೆ. ಹಾಗಾಗಿಯೇ ಸೂರ್ಯ, ನೇರ ಸೂರ್ಯನಿಗೇ ಗುರಿಯಿಡುತ್ತಿದ್ದಾನೆ.



