ಬಿಸಿಸಿಐ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಟೀಂ ಇಂಡಿಯಾ ಆಟಗಾರರೂ ಅಷ್ಟೆ. ಶ್ರೀಮಂತರೇ. ಇಂಡಿಯಾದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ. ಧರ್ಮ. ಭಾವನೆ ಮತ್ತು ಹಣ. ಕ್ರಿಕೆಟಿಗರಿಗೆ ಕೇವಲ ಆಟದಿಂದಷ್ಟೇ ಅಲ್ಲ, ಬೇರೆ ಬೇರೆ ಮೂಲಗಳಿಂದಲೂ ಹಣ ಬರುತ್ತೆ. ಬಿಸಿಸಿಐ ವಾರ್ಷಿಕ ಗುತ್ತಿಗೆ ಹಣವನ್ನಷ್ಟೇ ಅಲ್ಲದೆ, ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಮ್ಯಾಚ್ಗಳಿಗೆ ರಣಜಿ ಸೇರಿದಂತೆ ದೇಸೀ ಟೂರ್ನಿಗಳ ಪಂದ್ಯಕ್ಕೂ ಲಕ್ಷ ಲಕ್ಷ ಹಣ ಕೊಡುತ್ತೆ. ಹಾಗೆಯೇ ಅದರಿಂದ ಅವರಿಗೆ ಲಾಭವೂ ಇದೆ. ಇದರ ಜೊತೆಗೆ ಜಾಹೀರಾತು, ಬ್ರಾಂಡ್ ರಾಯಭಾರಿಗಳಾಗುವುದು ಸೇರಿದಂತೆ ವಿವಿಧ ಮೂಲಗಳಿಂದ ಸಂಪಾದನೆ ಮಾಡೋ ಆಟಗಾರರ ಪೈಕಿ ಭಾರತೀಯರಿಗೆ ಮೊದಲ ಸ್ಥಾನ. ಇಂತಹ ಆಟಗಾರರ ಟಾಪ್ 10 ಶ್ರೀಮಂತ ಆಟಗಾರರ ಪಟ್ಟಿ ಇಲ್ಲಿದೆ.
10. ರವೀಂದ್ರ ಜಡೇಜಾ : ಆಲ್ರೌಂಡರ್. ಕನ್ಸಿಸ್ಟೆನ್ಸಿ ಜಡೇಜಾ ಆಸ್ತಿ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್. ಮೂರರಲ್ಲೂ ಕರಾಮತ್ತು ತೋರಿಸೋ ಜಡೇಜಾ, ಭಾರತದ ಪರ ಮೂರೂ ಫಾರ್ಮಾಟ್ ಆಡುತ್ತಾರೆ. ಐಪಿಎಲ್ನಲ್ಲಿ ಚೆನ್ನೈ ತಂಡ ಪ್ರತಿನಿಧಿಸುವ ಇವರು ಕ್ಯಾಪ್ಟನ್ ಕೂಡಾ ಆಗಿದ್ದರು. ಇವರ ವಾರ್ಷಿಕ ವರಮಾನ 5 ಕೋಟಿಗೂ ಹೆಚ್ಚು. ಹಲವು ಜಾಹೀರಾತುಗಳಲ್ಲಿ ನಟಿಸುವ ಜಡೇಜಾಗೆ ಪರ್ಸನಲ್ ಬ್ಯುಸಿನೆಸ್ ಕೂಡಾ ಇದೆ. ಇವರ ಸಂಪತ್ತಿನ ಮೌಲ್ಯ 100 ಕೋಟಿಗೂ ಹೆಚ್ಚು.
09.ಶಿಖರ್ ಧವನ್ : ಆರಂಭಿಕ ಎಡಗೈ ಆಟಗಾರ. ಈಗ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಒನ್ ಡೇ ಕ್ಯಾಪ್ಟನ್ ಕೂಡಾ ಹೌದು. ಪಂಜಾಬ್ ಕಿಂಗ್ಸ್ ನಾಯಕನೂ ಹೌದು. ಇವರ ವಾರ್ಷಿಕ ಆದಾಯ ಕೂಡಾ 5 ಕೋಟಿ. ಟೋಟಲ್ ಆಸ್ತಿ 96 ಕೋಟಿಗೂ ಹೆಚ್ಚು.
08. ಕೆ.ಎಲ್.ರಾಹುಲ್: ಟೀಂ ಇಂಡಿಯಾ ವೈಸ್ ಕ್ಯಾಪ್ಟನ್. ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟ ನಂತರ ಉಪನಾಯಕ ಪಟ್ಟಕೇರಿದ ರಾಹುಲ್ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡವರು. ಮೂರೂ ಫಾರ್ಮಾಟ್ ಆಡುತ್ತಿರುವ ಆಟಗಾರ. ಐಪಿಎಲ್ನಲ್ಲಿ ಲಖನೌ ಕ್ಯಾಪ್ಟನ್ ಆಗಿರೋ ಕೆ.ಎಲ್.ರಾಹುಲ್ ಆಸ್ತಿ ಒಟ್ಟಾರೆ 43 ಕೋಟಿಗೂ ಹೆಚ್ಚು. ನಟ ಸುನಿಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿ ಕೈಹಿಡಿಯಲಿರುವ ರಾಹುಲ್, ವಾರ್ಷಿಕ ವರಮಾನ 5 ಕೋಟಿಗೂ ಹೆಚ್ಚು.
07. ರಿಷಬ್ ಪಂತ್ : ವಿಕೆಟ್ ಕೀಪರ್.ಎಡಗೈ ಬ್ಯಾಟ್ಸ್ಮನ್. ಮೈದಾನದಲ್ಲಿ ಚೆಲ್ಲುಚೆಲ್ಲಾಗಿ ಆಡುವ ಪಂತ್, ಬ್ಯಾಟಿಂಗ್ನಲ್ಲಿ ಪ್ರಚಂಡ. ಅದರಲ್ಲೂ ಟೆಸ್ಟ್ನಲ್ಲಿ. ವಾರ್ಷಿಕ ಆದಾಯ 5 ಕೋಟಿಗೂ ಹೆಚ್ಚು. ಆಸ್ತಿ ಮೌಲ್ಯ 36ಕೋಟಿಗೂ ಹೆಚ್ಚು.
06. ಹಾರ್ದಿಕ್ ಪಾಂಡ್ಯ : ಆಲ್ರೌಂಡರ್. ಮುಂಬೈ ಇಂಡಿಯನ್ಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಈಗ ಗುಜರಾತ್ ಟೈಟನ್ಸ್ ಕ್ಯಾಪ್ಟನ್. 5 ಕೋಟಿಗೂ ಹೆಚ್ಚು ವಾರ್ಷಿಕ ವರಮಾನ ಹೊಂದಿರೋ ಹಾರ್ದಿಕ್ ಅವರನ್ನು ಕಪಿಲ್ ದೇವ್ ಅವರಿಗೆ ಹೋಲಿಸಿದವರೂ ಇದ್ದರು. ಇವರ ಟೋಟಲ್ ಪ್ರಾಪರ್ಟಿ ಬೆಲೆ 30 ಕೋಟಿಗೂ ಹೆಚ್ಚು
05. ಜಸ್ಪ್ರೀತ್ ಬೂಮ್ರಾ : ವೇಗದ ಬೌಲರ್. ತನ್ನ ಯಾರ್ಕರುಗಳಿಂದಲೇ ಎಂತಹ ಬ್ಯಾಟ್ಸ್ಮನ್ನ್ನೂ ಕಂಗೆಡಿಸೋ ಆಟಗಾರ. ಇತ್ತೀಚೆಗೆ ಌಂಕರ್ ಸಂಜನಾ ಗಣೇಶನ್ ಅವರನ್ನು ಮದುವೆಯಾಗಿರೋ ಬೂಮ್ರಾ 29ಕೋಟಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.
04. ರೋಹಿತ್ ಶರ್ಮಾ : ಕ್ಯಾಪ್ಟನ್. ಹಿಟ್ ಮ್ಯಾನ್ ಎಂದೇ ಕರೆಸಿಕೊಳ್ಳೋ ರೋಹಿತ್ ಶರ್ಮಾ ಸೆಕ್ಯುರಿಟಿ ಗಾರ್ಡ್ ಮಗ. ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್. ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆದ್ದಿರುವ ತಂಡದ ನಾಯಕ. ಈಗ ಇವರ ಒಟ್ಟಾರೆ ಆಸ್ತಿ 130 ಕೋಟಿಗೂ ಹೆಚ್ಚು.
03. ಎಂ.ಎಸ್. ಧೋನಿ : ಮಾಜಿ ಕ್ಯಾಪ್ಟನ್. ಚೆನ್ನೈ ತಂಡಕ್ಕೆ ಅತೀ ಹೆಚ್ಚು ಟ್ರೋಫಿ ಗೆಲ್ಲಿಸಿಕೊಟ್ಟ ಆಟಗಾರ. ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಐಪಿಎಲ್ ಬಿಟ್ಟರೆ ಬೇರೆ ಮ್ಯಾಚ್ ಆಡುತ್ತಿಲ್ಲ. ಇವರ ಒಟ್ಟಾರೆ ಆಸ್ತಿ 767 ಕೋಟಿ
02. ವಿರಾಟ್ ಕೊಹ್ಲಿ : ಮಾಜಿ ಕ್ಯಾಪ್ಟನ್. ಸೆನ್ಸೇಷನಲ್ ಕ್ರಿಕೆಟರ್. ಪತ್ನಿ ಅನೂಷ್ಕಾ ಶರ್ಮ ನಟಿ ಕೂಡಾ ಹೌದು. ರನ್ ಮೆಷಿನ್ ಎಂದೇ ಕರೆಸಿಕೊಳ್ಳೋ ಕೊಹ್ಲಿ ತೆಂಡೂಲ್ಕರ್ ದಾಖಲೆ ಮುರಿಯಲಿದ್ದಾರೆ ಎನ್ನುವುದು ಸ್ವತಃ ಸಚಿನ್ ನಂಬಿಕೆ. ಒಟ್ಟಾರೆ ಆಸ್ತಿ 980 ಕೋಟಿ.
01.ಸಚಿನ್ ತೆಂಡೂಲ್ಕರ್ : ಕ್ರಿಕೆಟ್ ದೇವರು. ಭಾರತರತ್ನ. ದೇವರು ನಿವೃತ್ತರಾಗುವುದಿಲ್ಲವಾದ್ದರಿಂದ ಹಾಲಿ ಆಟಗಾರರ ಪಟ್ಟಿಯ ಜೊತೆ ಇವರ ಹೆಸರೂ ಇದೆ. ತೆಂಡೂಲ್ಕರ್ ಒಟ್ಟಾರೆ ಆಸ್ತಿ 1100 ಕೋಟಿಗೂ ಹೆಚ್ಚು. ಮುಂಬೈ ತಂಡದ ಬ್ರಾಂಡ್ ಅಂಬಾಸಿಡರ್. ಜಗತ್ತಿನ ಹಾಲಿ ಮಾಜಿ ಶ್ರೀಮಂತ ಮಾಜಿ ಕ್ರಿಕೆಟಿಗರ ಪಟ್ಟಿಯಲ್ಲೂ ಸಚಿನ್ ನಂ.1 ಇದ್ದಾರಾದ್ದರಿಂದ ಇವರ ಹೆಸರನ್ನು ಸೇರಿಸಲಾಗಿದೆ ಹಾಗೂ ಧೋನಿಯ ಹೆಸರನ್ನೂ ಸೇರಿಸಲಾಗಿದೆ.
ಅಂದಹಾಗೆ ಮಾಜಿ ಕ್ರಿಕೆಟರ್ಸ್ ಆಸ್ತಿಯೇನೂ ಕಮ್ಮಿಯಿಲ್ಲ. ಗಂಗೂಲಿ 365 ಕೋಟಿ ಆಸ್ತಿ ಹೊಂದಿದ್ದರೆ, ವೀರೇಂದ್ರ ಸೆಹ್ವಾಗ್ ಆಸ್ತಿ 300 ಕೋಟಿ. ಯುವರಾಜ್ ಸಿಂಗ್ 255 ಕೋಟಿ. ಸುರೇಶ್ ರೈನಾ 185 ಕೋಟಿ. ರಾಹುಲ್ ದ್ರಾವಿಡ್ 175 ಕೋಟಿ. ಗೌತಮ್ ಗಂಭೀರ್ 150 ಕೋಟಿಗೆ ವಾರಸುದಾರರು.



