ದೀಪ್ತಿ ಶರ್ಮಾ. ಭಾರತೀಯ ಕ್ರಿಕೆಟ್ ತಂಡದ ಆಟಗಾರ್ತಿ. ಇತ್ತೀಚೆಗೆ ಕೆಲವು ಕ್ರಿಕೆಟರ್ಸ್ ಆಕೆಯನ್ನು ಸ್ಪಿರಿಟ್ ಆಫ್ ಕ್ರಿಕೆಟ್ಗೆ ವಿರುದ್ಧವಾಗಿ ಆಡಿದ್ದಾರೆ ಎಂದು ಟೀಕಿಸಿದ್ದರು. ರವಿಚಂದ್ರನ್ ಅಶ್ವಿನ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್.. ಮೊದಲಾದ ಕೆಲವೇ ಕೆಲವರು ದೀಪ್ತಿ ಶರ್ಮಾ ಬೆನ್ನಿಗೆ ನಿಂತಿದ್ದರು. ಆದರೆ ಬೇರೆ ದೇಶಗಳ ದಿಗ್ಗಜ ಆಟಗಾರರು ಅದು ಕ್ರಿಕೆಟ್ ಸ್ಫೂರ್ತಿಯಲ್ಲ ಎಂದು ಟೀಕಿಸಿದ್ದರು. ಈಗ ಆಕೆಗೆ ಭೀಮಬಲ ಸಿಕ್ಕಂತಾಗಿದೆ. ಏಕೆಂದರೆ ಕ್ರಿಕೆಟ್ ದೇವರು ದೀಪ್ತಿ ಶರ್ಮಾ ಮಾಡಿದ್ದು ಸರಿ ಎಂದಿದ್ದಾರೆ.
ಕ್ರಿಕೆಟ್ ನಿಯಮಗಳಲ್ಲಿಯೇ ಅದು ಇದೆ. ಒಬ್ಬ ಬ್ಯಾಟ್ಸ್ಮನ್ ಬೌಲರ್ ಬೌಲ್ ಮಾಡುವ ಮುಂಚೆಯೇ ಕ್ರೀಸ್ ಬಿಟ್ಟಿದ್ದರೆ ರನೌಟ್ ಮಾಡುವ ಅವಕಾಶ ಇದೆ. ನಿಯಮಗಳ ಪ್ರಕಾರವೇ ಮಾಡಿರುವ ಔಟ್ ನಿಯಮ ಬಾಹಿರ ಅಥವಾ ಕ್ರಿಕೆಟ್ ಸ್ಫೂರ್ತಿಗೆ ವಿರುದ್ಧ ಎನ್ನುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ ಸಚಿನ್ ತೆಂಡೂಲ್ಕರ್. ಬ್ಯಾಟ್ಸ್ಮನ್ ಬಾಲ್ ಎದುರಿಸುವಾಗ ಲೈನ್ನಲ್ಲಿದ್ದು ಬ್ಯಾಟ್ಸ್ಮನ್ ಮಿಸ್ ಮಾಡಿಕೊಂಡರೆ ಎಲ್ಬಿ ಔಟ್ ಕೊಡುವುದಿಲ್ಲವೇ. ಹಾಗೆಯೇ ಇದು. ಐಸಿಸಿಯೇ ರೂಲ್ಸ್ ಮಾಡಿರುವಾಗ ಅದರಲ್ಲೇನು ತಪ್ಪಿದೆ ಎನ್ನುವುದು ಸಚಿನ್ ತೆಂಡೂಲ್ಕರ್ ವಾದ.
ಇಂಗ್ಲರೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ದೀಪ್ತಿ ಶರ್ಮಾ, ಇಂಗ್ಲೆಂಡ್ನ ಚಾರ್ಲೋಟ್ ಡೀಮ್ರನ್ನು ರನೌಟ್ ಮಾಡಿದ್ದರು. ಬೌಲ್ ಮಾಡುವ ಮುಂಚೆಯೇ ಚಾರ್ಲೊಟ್ ಕ್ರೀಸ್ ಬಿಟ್ಟಿದ್ದರು. ಹಾಗೆ ಬೌಲ್ ಮಾಡುವುದನ್ನು ಕ್ರಿಕೆಟ್ ಜಗತ್ತು ಮಂಕಡಿಂಗ್ ಎನ್ನುತ್ತದೆ. ವಿನು ಮಂಕಡ್ 1948ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇದೇ ರೀತಿ ರನೌಟ್ ಮಾಡಿದ್ದರು. ಅದು ಆ ರೀತಿಯ ಮೊದಲ ರನೌಟ್. ಅದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದೇ ಕ್ರಿಕೆಟ್ ಜಗತ್ತು ಭಾವಿಸುತ್ತದೆ. ಅದಾದ ಮೇಲೆ ಆರ್.ಅಶ್ವಿನ್ ಕೂಡಾ ಅದೇ ರೀತಿ ಔಟ್ ಮಾಡಿದ್ದರು. ಅಶ್ವಿನ್ ಅವರನ್ನೂ ಟೀಕಿಸಿದ್ದರು. ಆದರೆ ಅಶ್ವಿನ್ ಸಮರ್ಥನೆ ಮಾಡಿಕೊಂಡಿದ್ದರು. ದೀಪ್ತಿ ಶರ್ಮಾ ವಿಷಯದಲ್ಲೂ ಅಶ್ವಿನ್ ಬೆಂಬಲಕ್ಕೆ ಬಂದಿದ್ದರು. ಅದಾದ ಮೇಲೆ ದೀಪ್ತಿ ಶರ್ಮಾ ಮೇಲೆ ಕೆಲವು ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರು ಮುರಕೊಂಡು ಬಿದ್ದಿದ್ದರು. ಹಿಗ್ಗಾಮುಗ್ಗ ಝಾಡಿಸಿದ್ದರು. ಈಗ ತೆಂಡೂಲ್ಕರ್ ಬೆಂಬಲವೂ ಸಿಕ್ಕಿದೆ. ಅಂದಹಾಗೆ ಆ ಪಂದ್ಯದಲ್ಲಿ ದೀಪ್ತಿ ಶರ್ಮಾ ಚಾರ್ಲೊಟ್ ಹಾಗೆ ಮಾಡುವುದನ್ನು ಮೊದಲೇ ಗುರುತಿಸಿದ್ದರು. ಒಮ್ಮೆ ವಾರ್ನಿಂಗ್ ಕೂಡಾ ಕೊಟ್ಟಿದ್ದರು. ಕೊನೆಗೆ ರನೌಟ್ ಮಾಡಿದ್ದರು.

ಆದರೆ ಬೌಲರ್ ಬಾಲ್ ಎಸೆಯುವ ಮುನ್ನ ಕ್ರೀಸ್ ಬಿಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಲ್ಲವೇ? ಎಂದು ಯಾರೂ ಪ್ರಶ್ನೆ ಮಾಡಿರಲಿಲ್ಲ. ಬೌಲರ್ಗಳು ಮಾತ್ರ ಕ್ರೀಡಾ ಸ್ಫೂರ್ತಿ ಪಾಲಿಸಬೇಕೆ.. ಬ್ಯಾಟ್ಸ್ಮನ್ಗೂ ಅದು ಇರಬೇಕಲ್ಲವೇ ಎಂದು ಯಾರೂ ಪ್ರಶ್ನಿಸಿರಲಿಲ್ಲ. ನೆಲಕ್ಕೆ ಬಿದ್ದ ಬಾಲ್ನ್ನು ಕ್ಯಾಚ್ ಹಿಡಿದು ಔಟ್ ತೆಗೆದುಕೊಂಡಿದ್ದವರು, ಪಿಚ್ ತುಳಿದು ಬೌಲಿಂಗ್ ಮಾಡಿದ್ದವರು, ಬಾಡಿ ಲೈನ್ ಬೌಲಿಂಗ್ ಮಾಡಿದ್ದವರು, ಬ್ಯಾಟ್ಸ್ಮನ್ ರನ್ ಓಡೋಕೆ ಅಡ್ಡಿ ಮಾಡಿ ರನೌಟ್ ಮಾಡಿದ್ದವರು, ಕ್ಯಾಚ್ ಹಿಡಿದು ಔಟ್ ಆದಾಗಲೂ ಹಠ ಹಿಡಿದು ಔಟ್ ಆಗದೆ ನಿಂತಿದ್ದವರು, ಬ್ಯಾಟ್ಸ್ಮನ್ ಭುಜಕ್ಕೆ ಬಾಲ್ ಟಚ್ ಆದಾಗ ಎಲ್ಬಿ ಔಟ್ ಕೊಟ್ಟಿದ್ದ ಕ್ರೀಡಾ ಸ್ಫೂರ್ತಿಯುಳ್ಳ ಆಟಗಾರರು ದೀಪ್ತಿ ಶರ್ಮಾ ಮೇಲೆ ಮುಗಿಬಿದ್ದಿದ್ದನ್ನು ಕ್ರಿಕೆಟ್ ಪ್ರೇಮಿಗಳು ಅಚ್ಚರಿಯಿಂದ ನೋಡಿದ್ದರು.
ಅಂದಹಾಗೆ ಕ್ರಿಕೆಟ್ ಲೋಕದಲ್ಲಿ ಅತೀ ಹೆಚ್ಚು ರನ್, ಅತೀ ಹೆಚ್ಚು ಶತಕ, ಅರ್ಧಶತಕ ಅತೀ ಹೆಚ್ಚು 90+ನಲ್ಲಿ ಔಟ್ ಆಗಿರುವ ಆಟಗಾರ, ಅತೀ ಹೆಚ್ಚು ಪಂದ್ಯಶ್ರೇಷ್ಟಗಳನ್ನೆಲ್ಲ ಪಡೆದಿರುವ ಕ್ರಿಕೆಟ್ ದೇವರು ಅತೀ ಹೆಚ್ಚು ಕೆಟ್ ಅಂಪೈರಿಂಗ್ಗೆ ಔಟ್ ಆಗಿರುವ ಆಟಗಾರರೂ ಹೌದು. ಔಟ್ ಇಲ್ಲದಿದ್ದರೂ ಅಂಪೈರ್ ಔಟ್ ಎಂದು ತೀರ್ಪು ಕೊಟ್ಟಾಗ ಬೇಸರದಿಂದ ಹೊರನಡೆದಿದ್ದವರು ಸಚಿನ್. ತಾವು ಔಟ್ ಇದ್ದರೂ ಅಂಪೈರ್ ಗಮನಿಸದೇ ಹೋದಾಗ ತಾವೇ ಕ್ರೀಸ್ ತೊರೆದ ಉದಾಹರಣೆಗಳೂ ತೆಂಡೂಲ್ಕರ್ ಹೆಸರಲ್ಲಿವೆ. ಕ್ರೀಡಾಸ್ಫೂರ್ತಿಗೆ ಮತ್ತೊಂದು ಹೆಸರು ಸಚಿನ್. ಈಗ ಅವರೇ ದೀಪ್ತಿ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ.



