ಭಾರತ ತಂಡವೀಗ ವಿಶ್ವಕಪ್ ಸೆಮಿಫೈನಲ್ ತಲುಪಿದೆ. ಭಾರತ ಸೆಮಿಫೈನಲ್‍ಗೆ ಹೋಗುವ ಹಾದಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಹಾಗೂ ಅರ್ಶದೀಪ್ ಸಿಂಗ್ ಬೌಲಿಂಗ್ ಕಾರಣ ಎನ್ನುವುದು ಎಲ್ಲರಿಗೂ ಗೊತ್ತು. ಈ ಮೂವರ ಬೊಂಬಾಟ್ ಆಟದಿಂದಲೇ ರೋಹಿತ್ ಬಳಗ ಸೆಮಿಫೈನಲ್ ತಲುಪಿರೋದು. ಕೆ.ಎಲ್. ರಾಹುಲ್ 2 ಅರ್ಧ ಶತಕ ಹಾಗೂ ರೋಹಿತ್ ಶರ್ಮಾ ಕೂಡಾ ಒಂದು ಹಾಫ್ ಸೆಂಚುರಿ ಬಾರಿಸಿದ್ದಾರೆ. ಆದರೆ ಅವು ಆ ಇಬ್ಬರ ಆಟಕ್ಕಿರುವ ಖ್ಯಾತಿಗೆ ತಕ್ಕಂತಿಲ್ಲ ಎನ್ನುವುದು ವಾಸ್ತವ. ಹಾರ್ದಿಕ್ ಅವರದ್ದೂ ಒಂದು ಹಾಫ್ ಸೆಂಚುರಿ ಇದೆ. ಮೊದಲ ಓವರ್ ಮೇಡನ್ ಕೊಡುವ ಚಾಳಿಯನ್ನು ರಾಹುಲ್ ಮುಂದುವರೆಸಿದ್ದರೆ, ತಮ್ಮ ಟ್ರಂಪ್ ಕಾರ್ಡ್ ಆಗಿದ್ದ ಶಾರ್ಟ್ ಬಾಲ್ ಸಿಕ್ಸರ್‍ನಲ್ಲೇ ರೋಹಿತ್ ಔಟ್ ಆಗುತ್ತಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅವರಂತಹ ಸೀನಿಯರ್ ಇದ್ದರೂ ಓಕೆ ಓಕೆ ಎನ್ನುವ ಆಟ ಮೂಡಿ ಬಂದಿದ್ದರೂ ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋದು ಅರ್ಶ್‍ದೀಪ್ ಸಿಂಗ್. ಆಡಿರುವ 5 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿರೋ ಅರ್ಶ್‍ದೀಪ್ ಸಿಂಗ್ ಒತ್ತಡದ ವೇಳೆಯಲ್ಲೂ ಉತ್ತಮ ಬೌಲಿಂಗ್ ಮಾಡಿದ್ದಾರೆ. ಭುವನೇಶ್ವರ್ ರನ್ ಕಂಟ್ರೋಲ್ ಮಾಡಿದ್ದರೂ ಪಡೆದಿರೋ ವಿಕೆಟ್ ಸಂಖ್ಯೆ ಕೇವಲ 4.ಮಹಮ್ಮದ್ ಶಮಿ 6 ಹಾಗೂ ಹಾರ್ದಿಕ್ ಪಾಂಡ್ಯ 8 ವಿಕೆಟ್ ಪಡೆದಿದ್ದಾರೆ. ಆದರೆ ಇವರ ಈ ಸಾಧನೆ ಹಿಂದೆ ಭಾರತದ ಕ್ಯಾಪ್ಟನ್, ವೈಸ್ ಕ್ಯಾಪ್ಟನ್, ಮಾಜಿ ಕ್ಯಾಪ್ಟನ್ ಹಾಗೂ ಕೋಚ್ ತ್ಯಾಗವೂ ಸೇರಿದೆ.

ಆಸ್ಟ್ರೇಲಿಯಾದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟೀಂ ಇಂಡಿಯಾ ಆಟಗಾರರು ಮತ್ತು ಸಿಬ್ಬಂದಿ ಸಂಚರಿಸುವಾಗ ಬ್ಯುಸಿನೆಸ್ ಕ್ಲಾಸ್ ಸೌಲಭ್ಯ ನೀಡುವುದು ತಂಡದ 4 ಆಟಗಾರರಿಗೆ ಮಾತ್ರ. ನಾಯಕ, ಉಪನಾಯಕ, ಕೋಚ್ ಮತ್ತು ಮ್ಯಾನೇಜರ್ ಈ ಸೌಲಭ್ ಪಡೆಯುತ್ತಾರೆ. ಟೀಂ ಇಂಡಿಯಾದಲ್ಲಿ ಮ್ಯಾನೇಜರ್ ಬದಲಿಗೆ ಆ ಸೌಲಭ್ಯ ಕೊಹ್ಲಿಗೆ ಮಾತ್ರ ಇದೆ. ಅದು ರೋಹಿತ್ ಶರ್ಮಾ ಪ್ಲಾನ್. ಆದರೆ ವೇಗದ ಪಿಚ್‍ಗಳಲ್ಲಿ ಬೌಲರ್‍ಗಳ ಮಹತ್ವ ಅರಿತಿರುವ ದ್ರಾವಿಡ್ ಮತ್ತು ರೋಹಿತ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲರೂ ಒಟ್ಟಿಗೇ ಸೇರಿ ಬ್ಯುಸಿನೆಸ್ ಕ್ಲಾಸ್ ಬಿಟ್ಟು ಕೊಟ್ಟಿದ್ದಾರೆ. ತಮ್ಮ ಆ ಸೌಲಭ್ಯವನ್ನು ಅವರು ನೀಡಿರುವುದು ಭುವನೇಶ್ವರ್, ಶಮಿ, ಅರ್ಶ್‍ದೀಪ್ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ.
ಈ ವಿಶ್ವಕಪ್ ಟೂರ್ನಿಯಲ್ಲಿ ಒಂದು ಪಂದ್ಯ ಮುಗಿದ ಮೇಲೆ ತಕ್ಷಣ ಪ್ಯಾಕ್ ಮಾಡಿಕೊಂಡು ಇನ್ನೊಂದು ಸ್ಥಳಕ್ಕೆ ಹೊರಡಬೇಕು. ಆಸ್ಟ್ರೇಲಿಯಾದ 3 ವಲಯಗಳಲ್ಲಿ ನಡೆಯುತ್ತಿರುವ ಮ್ಯಾಚುಗಳಿಗಾಗಿ ಟೀಂ ಇಂಡಿಯಾ ಇದುವರೆಗೆ 34 ಸಾವಿರ ಕಿ.ಮೀ. ಪ್ರಯಾಣ ಮಾಡಿದೆ. ಭಾರತ-ಪಾಕ್ ಪಂದ್ಯ ಗೆದ್ದ ನಂತರ ಸಣ್ಣದೊಂದು ಪಾರ್ಟಿ ಮಾಡುವುದಕ್ಕೂ ಟೀಂ ಇಂಡಿಯಾಗೆ ಟೈಂ ಇರಲಿಲ್ಲ. ಎಲ್ಲಿಯ ಸೆಲಬ್ರೇಷನ್. ಇದು ಮುಗಿದ ಕೂಡಲೇ ಹೊರಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು ಆರ್.ಅಶ್ವಿನ್. ಈ ಬಿಡುವಿಲ್ಲದ ಪ್ರಯಾಣದ ಮಧ್ಯೆ ಆಟಗಾರರಿಗೆ ಅದರಲ್ಲೂ ಬೌಲರುಗಳಿಗೆ ರೆಸ್ಟ್ ಸಿಗುವುದಿಲ್ಲ. ಹೀಗಾಗಿಯೇ ಬ್ಯುಸಿನೆಸ್ ಕ್ಲಾಸ್‍ನ್ನು ರೋಹಿತ್,ರಾಹುಲ್, ದ್ರಾವಿಡ್ ಮತ್ತು ಕೊಹ್ಲಿ ವೇಗದ ಬೌಲರುಗಳಿಗೆ ಬಿಟ್ಟುಕೊಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲೀಗ ಚಳಿಯೂ ಇದೆ. ಮಳೆಯೂ ಇದೆ. ಆಟ ಮುಗಿಸಿ ಬಂದ ಆಟಗಾರರ ಪಾದಗಳಿಗೆ ಮಸಾಜ್ ಆಗಬೇಕು. ಆದರೆ ಅದು ಅಲ್ಲಿಯ ವಾತಾವರಣ ಕೋಲ್ಡ್ ಇರುವ ಕಾರಣದಿಂದ ಆಗುತ್ತಿಲ್ಲ. ಹೀಗಾಗಿ ವಿಮಾನದ ಬ್ಯುಸಿನೆಸ್ ಕ್ಲಾಸ್‍ನಲ್ಲಿ ಕಾಲಿಗೆ ಮಸಾಜ್ ವ್ಯವಸ್ಥೆ ಇದೆ. ಲೋಪಿಂಗ್ ಲೆಗ್ ವ್ಯವಸ್ಥೆಯಲ್ಲಿ ಕಾಲಿಟ್ಟು ರೆಸ್ಟ್ ಮಾಡಿದರೆ ಆಯ್ತು, ಕಾಲಿನ ಮಸಾಜ್ ಆಗುತ್ತದೆ. ಹೀಗಾಗಿ ಅದನ್ನು ತಮ್ಮ ತಂಡದ ಬೌಲರ್‍ಗಳಿಗಾಗಿ ಸ್ವತಃ ಬಿಟ್ಟುಕೊಟ್ಟಿದ್ದಾರೆ ಈ ನಾಲ್ವರೂ ದಿಗ್ಗಜರು. ಅದರ ಫಲಿತಾಂಶ ಆಟದಲ್ಲಿ ಕಾಣಿಸುತ್ತಿದೆ.



