ಈ ಬಾರಿಯ ವಿಶ್ವಕಪ್‍ನಲ್ಲಿ ಭಾರತಕ್ಕೆ ಕಪ್ ಗೆಲ್ಲುವ ಕನಸು ಹುಟ್ಟಿಸಿರುವ ಆಟಗಾರ ನಂ.1 ವಿರಾಟ್ ಕೊಹ್ಲಿ. ಭಾರತ ಗೆದ್ದಿರುವ ಮೂರು ಮ್ಯಾಚುಗಳಲ್ಲೂ ಅರ್ಧ ಶತಕ ಗಳಿಸಿ ನಾಟೌಟ್ ಉಳಿದಿರುವ ಆಟಗಾರ. ವಿಶ್ವಕಪ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಆಟಗಾರ. ಒಂದೊಂದು ಆಟವೂ ಅದ್ಭುತ. ಅದ್ಭುತ ಫೀಲ್ಡರ್ ಕೂಡಾ ಹೌದು. ರೋಲ್ ಮಾಡೆಲ್ ಆಟಗಾರನೂ ಹೌದು. ಅಂತಹ ಆಟಗಾರನ ವಿರುದ್ಧ ಇತ್ತೀಚೆಗೆ ಫಾರ್ಮ್‍ನಲ್ಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆಟವೇ ಉತ್ತರ ಕೊಟ್ಟಿತು. ಈಗ ಫಾರ್ಮ್‍ಗೆ ಬಂದಿದ್ದಾರೆ. ಅದು ಅಂತಿಂಥಾ ಫಾರ್ಮ್ ಅಲ್ಲ. ರಣಭಯಂಕರ ಫಾರ್ಮು. ಇಂತಹ ಟೈಮಿನಲ್ಲೇ ವಿರಾಟ್ ಕೊಹ್ಲಿ ವಿರುದ್ಧ ಒಂದೊಂದು ಪಂದ್ಯದಲ್ಲೂ ಆರೋಪಗಳ ಸುರಿಮಳೆಯಾಗುತ್ತಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಂಪೈರ್‍ಗೆ ಫೋರ್ಸ್ ಮಾಡಿ ನೋಬಾಲ್ ಕೊಡುವಂತೆ ಮಾಡಿದರು ಎನ್ನುವುದು ಆರೋಪ. ಆ ಪಂದ್ಯದಲ್ಲಿಯೇ ಗಮನಿಸಿದರೆ ವಿರಾಟ್ ಕೊಹ್ಲಿ ಆಟಗಾರನಾಗಿಯಷ್ಟೇ ಅಲ್ಲ, ಮಾಜಿ ಕ್ಯಾಪ್ಟನ್ ಕೂಡಾ ಹೌದು. ಕ್ಯಾಪ್ಟನ್ ಯಾರೇ ಇದ್ದರೂ ತಂಡದ ಸೀನಿಯರ್ ಆಟಗಾರನಾಗಿ ಒಂದಿಷ್ಟು ಜವಾಬ್ದಾರಿಗಳಿರುತ್ತವೆ. ಆ ಪಂದ್ಯದಲ್ಲಿ ನೋ ಬಾಲ್ ತಲೆಯ ಮೇಲೆ ಹೋಗಿತ್ತಷ್ಟೆ. ಸ್ಕೇಲು ಹಾಕಿಕೊಂಡು ಲೆಕ್ಕ ಹಾಕಿದರೂ ಗೊತ್ತಾಗುವ ಸತ್ಯ ಅದು. ವಿರೋಧಿಗಳಿಗೆ ಗೊತ್ತಾಗಲಿಲ್ಲವೆಂದರೆ ಹೇಗೆ?
ಈಗ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಅಂತಹುದೇ ಆರೋಪ. ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದರು. ಅದನ್ನು ಅಂಪೈರ್ ನೋಡಬೇಕಿತ್ತು. ಅದರ ಪ್ರಕಾರ ನಮಗೆ 5 ರನ್ ಪೆನಾಲ್ಟಿ ರನ್ ಕೊಡಬೇಕಿತ್ತು ಎನ್ನುತ್ತಿದ್ದಾರೆ ನುರುಲ್ ಹಸನ್. ಬಾಂಗ್ಲಾದೇಶದ ಬ್ಯಾಟ್ಸ್‍ಮನ್. 7ನೇ ಓವರಿನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‍ನಲ್ಲಿ ಲಿಟ್ಟನ್ ದಾಸ್ ಹೊಡೆದ ಚೆಂಡನ್ನು ಅರ್ಶ್‍ದೀಪ್ ಸಿಂಗ್ ಪಾಯಿಂಟ್‍ನಲ್ಲಿ ತಡೆದರು. ವಿಕೆಟ್‍ನತ್ತ ಎಸೆಯುವಾಗ ಬಾಲ್ ಹಾದಿಯಲ್ಲಿ ಕೊಹ್ಲಿಯವರಿಂದ ಸ್ವಲ್ಪ ದೂರದಲ್ಲಿ ಬಾಲ್ ಹೋಯ್ತು. ಅದನ್ನು ಕೊಹ್ಲಿ ಹಿಡಿದಂತೆ ಮಾಡಿ ಎಸೆದಂತೆ ಆಕ್ಟ್ ಮಾಡಿದರು. ನುರುಲ್ ಹಸನ್ ದೂರುತ್ತಿರುವುದು ಇದನ್ನೇ..

ರೂಲ್ಸ್ ಪ್ರಕಾರ ಕೊಹ್ಲಿ ಮಾಡಿದ್ದು ಕ್ರೈಮು. ಒಬ್ಬ ಬ್ಯಾಟರ್ ಓಡುವಾಗ ಉದ್ದೇಶಪೂರ್ವಕವಾಗಿ ಆತನ ಗಮನ ಬೇರೆ ಕಡೆ ಸೆಳೆಯುವುದು, ರನ್ನಿಂಗ್‍ಗೆ ಅಡ್ಡಿ ಮಾಡುವುದು ಮಾಡುವಂತಿಲ್ಲ. ಹಾಗೆ ಮಾಡಿದರೆ ತಕ್ಷಣ ಅಂಪೈರ್‍ಗಳು ಆ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸುವ ಅಥವಾ ಪೆನಾಲ್ಟಿ 5 ರನ್ ವಿಧಿಸುವ ಅವಕಾಶ ಹೊಂದಿರುತ್ತಾರೆ. ಅದು ಅಂಪೈರ್ ವಿವೇಚನೆಗೆ ಬಿಟ್ಟಿದ್ದು. ಇದನ್ನೇ ಇಟ್ಟುಕೊಂಡು ನುರುಲ್ ಹಸನ್ ಆರೋಪ ಮಾಡಿದ್ದಾರೆ.
ಆದರೆ ಕೊಹ್ಲಿಯ ಆ ಹುಸಿ ಫೀಲ್ಡಿಂಗ್ ರನ್ನರ್ ಗಮನಕ್ಕೂ ಬಂದಿಲ್ಲ. ಬ್ಯಾಟರ್ ಗಮನಕ್ಕೂ ಬಂದಿಲ್ಲ. ಅಂಪೈರ್ ಗಮನಕ್ಕೂ ಬಂದಿಲ್ಲ. ಯಾರ ಗಮನಕ್ಕೂ ಬರದ ಕೊಹ್ಲಿಯ ಆಕ್ಟಿಂಗ್ ರನ್ನಿಂಗ್‍ಗೆ ಅಡ್ಡಿ ಮಾಡಿತು. ಪೆನಾಲ್ಟಿ ವಿಧಿಸಬೇಕು ಎಂದು ಕೇಳುವುದೇ ಹಾಸ್ಯಾಸ್ಪದ. ಇಂತಹ ಟೀಕೆಗೆ ಹರ್ಷಬೋಗ್ಲೆ ಸರಿಯಾಗಿಯೇ ಹೇಳಿದ್ದಾರೆ. ಗೆಲುವಿನ ಹತ್ತಿರಕ್ಕೆ ಬಂದು ಸೋಲುತ್ತಿರುವ ಬಗ್ಗೆ ನಮಗೂ ಕಳಕಳಿಯಿದೆ. ಆದರೆ ಇಂತಹ ಆರೋಪ ಮಾಡುವ ಮುನ್ನ ಆಟದ ನಿಯಮವನ್ನೂ ಓದಿಕೊಳ್ಳಿ ಎಂದಿದ್ದಾರೆ.
ಇನ್ನು ಕೊಹ್ಲಿ ಅಂಪೈರ್‍ಗೆ ನೋಬಾಲ್ ಸಿಗ್ನಲ್ ಕೊಡುವಂತೆ ಸೂಚಿಸುತ್ತಾರೆ ಎಂಬ ಆರೋಪದ ಬಗ್ಗೆಯೂ ಅಷ್ಟೆ. ಆಗಲೇ ಹೇಳಿದಂತೆ ಕೊಹ್ಲಿ ಕ್ಯಾಪ್ಟನ್ ಅಲ್ಲದೇ ಇರಬಹುದು. ಜವಾಬ್ದಾರಿಗಳಂತೂ ಇದ್ದೇ ಇರುತ್ತವೆ. ಹಾಗೆ ನೋಬಾಲ್‍ಗೆ ಫೋರ್ಸ್ ಮಾಡುವುದಕ್ಕೂ ಮುನ್ನ ಎಸೆದ ಎಸೆತವೂ ತಲೆಯ ಮೇಲೆ ಹೋಗಿತ್ತು. ಬೌನ್ಸರ್ ಆಗಿತ್ತು. ಒಂದು ಓವರಿನಲ್ಲಿ ಬೌಲರ್‍ಗೆ ಒಂದೇ ಒಂದು ಬೌನ್ಸರ್ ಎಸೆಯುವ ಅವಕಾಶವಿದೆ. ಎರಡನೇ ಎಸೆತ ಎಸೆದರೆ ನೋಬಾಲ್. ಸೀನಿಯರ್ ಆಟಗಾರ ಅದನ್ನು ಗಮನಿಸುತ್ತಿದ್ದಾನೆ ಎಂದರೆ ಆಟ ಫೀಲ್ಡಿನಲ್ಲಿ ಅಲರ್ಟ್ ಇದ್ದಾನೆ ಎಂದರ್ಥವೇ ಹೊರತು ಬೇರೇನಲ್ಲ. ಫೀಲ್ಡಿನಲ್ಲಿದ್ದಾಗ ಆಟ ಬಿಟ್ಟು ಬೇರೇನನ್ನೋ ಯೋಚನೆ ಮಾಡುವವರಿಗೆ ಇದು ಆರ್ಥವಾಗುವುದಿಲ್ಲ ಬಿಡಿ.



