ಪಾಕಿಸ್ತಾನ ವಿರುದ್ಧ ರೋಚಕವಾಗಿ ಗೆದ್ದ ನಂತರ ಟೀಂ ಇಂಡಿಯಾ ನೆದರ್ಲೆಂಡ್‍ನ್ನು ಸದೆಬಡಿದಿದೆ. ಈ ಪಂದ್ಯದಲ್ಲಿ ಮೂರು ಅರ್ಧಶತಕಗಳು ದಾಖಲಾದವು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯ ಕುಮಾರ್ ಯಾದವ್ ಮೂವರೂ ಹಾಫ್ ಸೆಂಚುರಿ ಹೊಡೆದರು. ರೋಹಿತ್ ಇರುವವರೆಗೆ ವಿರಾಟ್ ಒಂದೇ ಒಂದು ಫೋರ್ ಹೊಡೆಯಲಿಲ್ಲ. ಸ್ಲೋ ಪಿಚ್‍ನಲ್ಲಿ ಒಬ್ಬರು ಅಟ್ಯಾಕ್ ಮತ್ತೊಬ್ಬರು ಡಿಫೆನ್ಸ್‍ಗೆ ನಿಂತರು. ನಂತರ ಸೂರ್ಯ ಬಂದ ಮೇಲೆ ಕೂಡಾ ಅಷ್ಟೆ. ಕಡೆಯ ಓವರುಗಳಲ್ಲಿ ಅಬ್ಬರಿಸಿದ್ದು ಬಿಟ್ಟರೆ ಅನುಭವಿಯಾಗಿ ಇಡೀ ಆಟದುದ್ದಕ್ಕೂ ನಿಂತರು. ಸ್ಕೋರು 179 ರನ್. ವಿರಾಟ್ 62 ನಾಟೌಟ್, ರೋಹಿತ್ 53, ಸೂರ್ಯ 51 ನಾಟೌಟ್. ಆಮೇಲೆ ಭುವಿಯ ಮ್ಯಾಜಿಕ್ ಬೌಲಿಂಗ್ ಮತ್ತು ತಂಡದ ಒಟ್ಟಾರೆ ಪ್ರದರ್ಶನದ ಎದುರು ನೆದರ್ಲೆಂಡ್‍ಗೆ ಗಳಿಸಲು ಸಾಧ್ಯವಾಗಿದ್ದು 123 ರನ್. ಅಂತಿಮವಾಗಿ ಭಾರತಕ್ಕೆ 56 ರನ್ ಜಯಭೇರಿ. ಈ ಪಂದ್ಯದ ನಂತರ ಟೀಂ ಇಂಡಿಯಾದ ನಾಲ್ವರು ಆಟಗಾರರು ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ.

ವಿರಾಟ್ ಇಲ್ಲಿ ನಂ.1 : ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಅರ್ಧಶತಕ ಗಳಿಸಿದ ವಿರಾಟ್ ಟಿ-20 ರ್ಯಾಂಕಿಂಗ್‍ನಲ್ಲಿ ಮತ್ತೆ ಟಾಪ್ 10ಗೆ ಲಗ್ಗೆಯಿಟ್ಟಿದ್ದಾರೆ. ಕೊಹ್ಲಿಯ ರ್ಯಾಂಕಿಂಗ್ 9ನೇ ಸ್ಥಾನಕ್ಕೇರಿದೆ. ಆದರೆ ನಂ.1 ಸ್ಥಾನಕ್ಕೇರಿರುವುದು ವಿಶ್ವಕಪ್ ಟೂರ್ನಿಯಲ್ಲಿ ಗಳಿಸಿದ ಸ್ಕೋರಿನಲ್ಲಿ. ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ವಿರಾಟ್ ಸ್ಕೋರ್ 989 ರನ್. ಸರಾಸರಿ 89.90. ಅಂದ್ರೆ ಆಲ್‍ಮೋಸ್ಟ್ 90. 21 ಪಂದ್ಯಗಳನ್ನಾಡಿರೋ ಕೊಹ್ಲಿ 10 ಬಾರಿ ನಾಟೌಟ್. ಆ ಎಲ್ಲ ಪಂದ್ಯಗಳಲ್ಲೂ ಭಾರತ ಗೆದ್ದಿದೆ. ನೆದರ್ಲೆಂಡ್ ವಿರುದ್ಧ ಗಳಿಸಿದ್ದು 7ನೇ ವಿಶ್ವಕಪ್ ಹಾಫ್ ಸೆಂಚುರಿ. ವಿಶ್ವಕಪ್ ಟೂರ್ನಿಗಳಲ್ಲಿ ಅತೀ ಹೆಚ್ಚು 50+ ಸ್ಕೋರ್ ಇರುವುದು ಇನ್ನು ಡೇವಿಡ್ ವಾರ್ನರ್ ಅವರದ್ದು ಮಾತ್ರ. ಅಷ್ಟೇ ಅಲ್ಲ, ಸೇನಾ (ದ.ಆಫ್ರಿಕಾ.ಇಂಗ್ಲೆಂಡ್.ನ್ಯೂಜಿಲ್ಯಾಂಡ್. ಆಸ್ಟ್ರೇಲಿಯಾ) ಪಿಚ್‍ಗಳಲ್ಲಿ ಅರ್ಧ ಶತಕಗಳ ಸಂಖ್ಯೆಯಲ್ಲಿ ಕೊಹ್ಲಿ ಸಚಿನ್ ದಾಖಲೆ ಹಿಂದಿಕ್ಕಿದ್ದಾರೆ. 2019ರ ನಂತರ ಈ ವರ್ಷದಲ್ಲಿ 1000 ರನ್ ಪೂರೈಸಿದ್ದಾರೆ. ಆಗಸ್ಟ್‍ನಲಿ 35ನೇ ರ್ಯಾಂಕ್ ಇದ್ದ ಕೊಹ್ಲಿ ಈಗ 9ನೇ ರ್ಯಾಂಕ್‍ಗೆ ಏರಿದ್ದಾರೆ. ಅಲ್ಲದೆ ಟಿ-20 ಒಟ್ಟಾರೆ ರನ್ನುಗಳ ಸಂಖ್ಯೆಯಲ್ಲಿ ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ.




ಇನ್ನು ಭುವನೇಶ್ವರ್ ಅವರು ಸತತ 13 ಡಾಟ್ ಬಾಲ್ ಮಾಡಿದ್ದು ಕೂಡಾ ಒಂದು ದಾಖಲೆ. ಇನ್ನೊಂದು ಬಾಲ್ ಡಾಟ್ ಮಾಡಿದ್ದರೆ ಲಂಕಾದ ರಂಗಾನಾ ಹೆರಾತ್ ಹೆಸರಲ್ಲಿದ್ದ ದಾಖಲೆ ದೂಳೀಪಟವಾಗುತ್ತಿತ್ತು. ಆದರೂ ಭಾರತೀಯ ಬೌಲರುಗಳಲ್ಲಿ ಭುವಿ ಸಾಧನೆಯೇ ಬೆಸ್ಟ್.



