ಅಜಿತ್ ಕುಮಾರ್. ತಮಿಳುನಾಡಿನ ಸೂಪರ್ ಸ್ಟಾರ್. ಇದೇ ವರ್ಷ ವಲಿಮೈ ಅನ್ನೋ ಹಿಟ್ ಸಿನಿಮಾ ಕೊಟ್ಟಿರೋ ಅಜಿತ್, ಇದೀಗ ಅಜಿತ್ ತುನಿವು ಅನ್ನೋ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇತ್ತೀಚೆಗಂತೂ ಅಜಿತ್ ಚಿತ್ರಗಳು ಸೋತದ್ದೇ ಇಲ್ಲ. ಒಂದು ಸಿನಿಮಾಗೆ 25 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುವ ಅಜಿತ್, ಸಿನಿಮಾ ಪ್ರಚಾರ ಮಾಡುವುದಿಲ್ಲ. ಬೇಬಿ ಶ್ಯಾಮಿಲಿ ನೆನಪಿದ್ದಾರಲ್ವಾ? ಅವರ ಸಹೋದರಿ ಶಾಲಿನಿ ಅಜಿತ್ ಅವರ ಪತ್ನಿ. ಅಜಿತ್ ಸಿನಿಮಾ ರಿಲೀಸ್ ಎಂದರೆ ತಮಿಳುನಾಡಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಅಂತಹ ಅಜಿತ್ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳೋಕೆ ನಿರ್ಧರಿಸಿದ್ದಾರೆ. ಅದೂ ಹೆಚ್ಚೂ ಕಡಿಮೆ ಒಂದೂವರೆ ವರ್ಷ.
ಈ ಒಂದೂವರೆ ವರ್ಷದಲ್ಲಿ ಅಜಿತ್ ಪ್ರಪಂಚ ಪರ್ಯಟನೆ ಮಾಡಲಿದ್ದಾರೆ. 7 ಖಂಡಗಳ ಸುತ್ತ 16 ದೇಶಗಳಲ್ಲಿ ಬೈಕ್ ಸವಾರಿ ಹೊರಡಲಿದ್ದಾರೆ. ಇದು ಅಭಿಮಾನಿಗಳಿಗೆ ಶಾಕ್ ಸುದ್ದಿಯೇ. ಆದರೆ ಅಚ್ಚರಿಯಲ್ಲ. ಇಂತಹ ಅಚ್ಚರಿಗಳನ್ನು ಈ ಹಿಂದೆಯೂ ಕೊಟ್ಟಿದ್ದಾರೆ ಅಜಿತ್. ಡೈ ಹಾಕದೆ ವೈಟ್ ಹೇರ್ನಲ್ಲೇ ನಟಿಸುವ ಅಜಿತ್ ಸಿಂಪಲ್ ಸೂಪರ್ ಸ್ಟಾರ್. ಥೈಲ್ಯಾಂಡ್ನಲ್ಲಿ ತುನಿವು ಚಿತ್ತೀಕರಣ ಮುಗಿಸಿ ಟ್ರಿಪ್ ಆರಂಭಿಸಲಿದ್ದಾರೆ. ಅಂಟಾರ್ಟಿಕಾದ ತುತ್ತತುದಿ ತಲುಪುವುದು ಅಜಿತ್ ಪ್ಲಾನ್.
ಬೈಕ್ ರೈಡಿಂಗ್ ಅಜಿತ್ ಹವ್ಯಾಸಗಳಲ್ಲೊಂದು. ಇತ್ತೀಚೆಗೆ ಕನ್ನಡಿಗ ಮಂಜು ಕಶ್ಯಪ್ ಎನ್ನುವವರಿಗೆ ಲಡಾಖ್ನಲ್ಲಿ ಬೈಕ್ ಕೆಟ್ಟು ನಿಂತಿದ್ದಾಗ ಸಹಾಯ ಮಾಡಿದ್ದರು. ತಮಗೆ ಸಹಾಯ ಮಾಡಿದ್ದು ಸ್ಟಾರ್ ನಟ ಎನ್ನುವುದು ಆನಂತರ ಅವರಿಗೆ ಗೊತ್ತಾಗಿತ್ತು. ಅದಷ್ಟೇ ಅಲ್ಲ, ಅಜಿತ್ ಇರುವುದೇ ಹಾಗೆ. ಅಜಿತ್ಗೆ ಬೈಕ್ ಕ್ರೇಜ್ ಅಷ್ಟೇ ಅಲ್ಲ, ಅದರಲ್ಲಿ ಎಕ್ಸ್ಪರ್ಟ್ ಕೂಡಾ.
ಅಜಿತ್ ಫಾರ್ಮುಲಾ 2 ಬೈಕ್ ರೇಸರ್. ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೂರ್ನಿಗಳನ್ನು ಪ್ರತಿನಿಧಿಸಿದ್ದಾರೆ. ಅವರಿಗೆ ಪೈಲಟ್ ಲೈಸೆನ್ಸ್ ಕೂಡಾ ಇದೆ. ಅದ್ಭುತ ಕ್ಯಾಮೆರಾಮನ್. ಕ್ಯಾಮೆರಾ ಹಿಡಿದು ಕುಳಿತರೆ ಜಗತ್ತು ಮರೆತುಬಿಡುತ್ತಾರೆ. ಅದ್ಭುತ ಅಡುಗೆ ಭಟ್ಟ. ಯಾವುದೇ ಸಿನಿಮಾ ಇರಲಿ, ಆ ಸಿನಿಮಾ ಮುಗಿಯುವ ಒಳಗೆ ಇಡೀ ಫಿಲಂ ಟೀಂಗೆ ಒಮ್ಮೆ ಕೈಯಾರೆ ಅಡುಗೆ ಮಾಡಿ ಬಡಿಸುತ್ತಾರೆ. ಒಳ್ಳೆಯ ಮೆಕಾನಿಕ್ ಕೂಡಾ ಹೌದು. ತಮಿಳುನಾಡು ರೈಫಲ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ 10 ಮೀ. 25 ಮೀ. ಹಾಗೂ 50 ಮೀ. ಶೂಟಿಂಗ್ನಲ್ಲಿ ಮೆಡಲ್ ಗೆದ್ದಿದ್ದಾರೆ. ಇಂತಹ ಅಜಿತ್ ಸದಾ ಬ್ಯುಸಿ. ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಈಗ ಅವರಿಗೆ ವಿಶ್ವ ಪ್ರವಾಸ ಮಾಡಬೇಕು ಎನ್ನಿಸಿದೆ. ಅದೂ ಬೈಕ್ನಲ್ಲಿ. ಕೋಟಿ ಕೋಟಿ ಸಂಭಾವನೆ ಕೊಡುವ ಸಿನಿಮಾ, ಬಣ್ಣದ ಜಗತ್ತು ಎರಡನ್ನೂ ಬಿಟ್ಟು ಹೊರಡೋಕೆ ಸಿದ್ಧರಾಗಿದ್ದಾರೆ. ಒನ್ಸ್ ಎಗೇನ್.. ಅಭಿಮಾನಿಗಳು ಬೇಸರಗೊಂಡಿದ್ದಾರೆ. ಆದರೆ ಶಾಕ್ ಆಗಿಲ್ಲ. ಏಕೆಂದರೆ ಇಂತಹ ಶಾಕ್ ಕೊಟ್ಟು ಅಜಿತ್ಗೂ, ಶಾಕ್ ಅನುಭವಿಸಿ ಅಭಿಮಾನಿಗಳಿಗೂ ಪ್ರಾಕ್ಟೀಸ್ ಆಗಿದೆ.



