ಸಾನಿಯಾ ಮಿರ್ಜಾ. ಭಾರತೀಯ ಟೆನ್ನಿಸ್ ಲೋಕದ ನಕ್ಷತ್ರ. ಶೋಯೆಬ್ ಮಲಿಕ್. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ. 2010ರಲ್ಲಿ ಮದುವೆಯಾದ ಇವರಿಬ್ಬರದ್ದೂ 12 ವರ್ಷಗಳ ದಾಂಪತ್ಯ. ಈ ದಾಂಪತ್ಯಕ್ಕೀಗ ಪುಟಾಣಿ ಮಗುವೂ ಇದೆ. ಈಗ.. 12 ವರ್ಷಗಳ ನಂತರ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಇಬ್ಬರ ಸ್ಟೇಟ್ಮೆಂಟುಗಳೂ ಇದನ್ನೇ ಪುಷ್ಟೀಕರಿಸುತ್ತಿವೆ.
ಇಷ್ಟೆಲ್ಲ ಸುದ್ದಿ ಹರಡೋಕೆ ಕಾರಣವಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾನಿಯಾ ಪೋಸ್ಟ್ ಮಾಡಿದ್ದ ಒಂದೇ ಒಂದು ಪೋಸ್ಟ್. ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಭಗ್ನಗೊಂಡ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನ ಹುಡುಕಲು ಹೋಗುತ್ತವೆ.. ಇದು ಸಾನಿಯಾರ ಪೋಸ್ಟ್. ಇದರಿಂದ ಅವರ ಖಾಸಗಿ ಜೀವನದಲ್ಲಿ ಬಿರುಕು ಬಿಟ್ಟಿದೆ ಎಂಬ ಊಹಾಪೋಹ ಎದ್ದಿದೆ. ಅದಕ್ಕೂ ಮುನ್ನ ತಮ್ಮ ಮಗ ಇಜಾಂ ಮಲಿಕ್ ಜೊತೆ ಒಂದು ಫೋಟೋ ಹಾಕಿದ್ದ ಸಾನಿಯಾ ಕಡುಕಷ್ಟದ ದಿನಗಳಿಂದ ಹೊರಬರಲು ಸಹಾಯ ಮಾಡಿದ ಕ್ಷಣ ಎಂಬ ಪೋಸ್ಟ್ ಹಾಕಿದ್ದರು. ಅದಾದ ನಂತರ ಈ ಪೋಸ್ಟ್ ಹೊರಬಿದ್ದು, ಮದುವೆ ಮುರಿದುಬಿತ್ತಾ ಎಂಬ ಅನುಮಾನ ಮೂಡಿದೆ.
ಅತ್ತ ಶೋಯೆಬ್ ಮಲಿಕ್ ಕೂಡಾ ಅಷ್ಟೆ. ಮಗನ ಫೋಟೋದೊಂದಿಗೆ ನೀನು ಹುಟ್ಟಿದ ಮೇಲೆ ನಾವು ಇನ್ನಷ್ಟು ತಾಳ್ಮೆ ಪಡೆದುಕೊಂಡೆವು. ವಿನೀತರಾದೆವು. ನಿನ್ನ ಆಗಮನವೇ ವಿಶೇಷ ದಿನ. ನಾವಿಬ್ಬರೂ ಜೊತೆಗಿಲ್ಲದಿರಬಹುದು. ದಿನವೂ ಭೇಟಿಯಾಗದೆ ಇರಬಹುದು. ಆದರೆ ನಿನ್ನ ಅಪ್ಪನ ಹೃದಯ ನಿನ್ನ ನಗುವಿಗಾಗಿ ಸದಾ ಹಾರೈಸುತ್ತದೆ ಎಂದು ಬರೆದುಕೊಂಡಿದ್ದರು. ಆ ಮೂಲಕ ತಾವಿಬ್ಬರೂ ಜೊತೆಗಿಲ್ಲ ಎಂದು ಸ್ಪಷ್ಟವಾಗಿ ಸಾರಿದ್ದರು.
ಒಂದು ಮೂಲದ ಪ್ರಕಾರ ಶೋಯೆಬ್ ಮಲಿಕ್ ಅವರಿಗೆ ಇನ್ನೊಬ್ಬ ಯುವತಿಯ ಜೊತೆ ಅಫೇರ್ ಇತ್ತು. ಇತ್ತೀಚೆಗೆ ಅದು ಬೆಳಕಿಗೆ ಬಂತು. ಸಾನಿಯಾಗೂ ಗೊತ್ತಾಯ್ತು. ಆ ಅಫೇರ್ ಇವರಿಬ್ಬರ ಬಿರುಕಿಗೆ ಕಾರಣ ಎನ್ನಲಾಗಿದೆ. ಹೀಗಾಗಿಯೇ ಇಬ್ಬರು ಕೆಲ ಸಮಯದಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಮತ್ತು ಮಗ ಇಜಾನ್ನನ್ನು ಒಬ್ಬೊಬ್ಬರು ಒಂದಷ್ಟು ದಿನ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಅದಕ್ಕೂ ಮೊದಲು ಬಾಲ್ಯದ ಗೆಳೆಯನೊಂದಿಗೆ ಎಂಗೇಜ್ಮೆಂಟ್ ಕೂಡಾ ಆಗಿದ್ದನ್ನು ಬ್ರೇಕ್ ಮಾಡಿ ಶೋಯೆಬ್ ಜೊತೆ ಮದುವೆ ಮಾಡಿಕೊಂಡಿದ್ದರು.ಆಗ ಈ ಮದುವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು
ಕೆಲವರು ಇದನ್ನು ಖಂಡಿಸಿದ್ದರೆ, ಕೆಲವರು ಪ್ರೀತಿಗೆ ದೇಶದ ಹಂಗಿಲ್ಲ ಎಂದಿದ್ದರು. ಜೊತೆಗೆ ಮದುವೆ ನಂತರ ಸಾನಿಯಾ, ಪಾಕಿಸ್ತಾನದಲ್ಲಿ ಸಂಸಾರ ಮಾಡಲಿಲ್ಲ. ದುಬೈನಲ್ಲೇ ಉಳಿದರು. ಆದರೆ ಭಾರತದ ನಾಗರಿಕತ್ವ ಬಿಟ್ಟುಕೊಡಲಿಲ್ಲ. ಮದುವೆಯಾದ ಮೇಲೂ ಕೂಡಾ ಸಾನಿಯಾ ಮಿರ್ಜಾ ಭಾರತದ ಪರವಾಗಿಯೇ ಟೆನ್ನಿಸ್ ಆಡಿದರು. ಇದು ಪಾಕಿಸ್ತಾನದಲ್ಲಿ ಸಾನಿಯಾ ಮಿರ್ಜಾ ವಿರೋಧ ಎದುರಿಸುವಂತೆ ಮಾಡಿತ್ತು. ಭಾರತ-ಪಾಕ್ ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ಗೆದ್ದಾಗ ಸಾನಿಯಾ ಬಹಿರಂಗವಾಗಿಯೇ ಸೆಲಬ್ರೇಟ್ ಮಾಡುತ್ತಿದ್ದರು. ಪತಿಯ ಬಗ್ಗೆ ಕನಿಕರ, ಪ್ರೀತಿಯನ್ನೂ ತೋರಿಸುತ್ತಿದ್ದರು. ಇದೆಲ್ಲದರ ನಡುವೆಯೂ ಚೆನ್ನಾಗಿಯೇ ಇದ್ದ ದಾಂಪತ್ಯದ ಮಧ್ಯೆ ಬಿರುಕು ಮೂಡಿಸಿದ್ದು ಒಬ್ಬ ಯುವತಿ ಎನ್ನಲಾಗಿದೆ.
ಮೊದಲೇ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಹಬ್ಬುತ್ತಿರುವ ಸಮಯದಲ್ಲೇ ಸಾನಿಯಾ ಮಿರ್ಜಾ ಕಷ್ಟದ ದಿನಗಳು ಎಂಬ ಪೋಸ್ಟ್ ಮಾಡಿರುವುದು ಊಹಾಪೋಹಗಳಿಗೆ ಪುರಾವೆ ಒದಗಿಸಿದಂತಾಗಿದೆ. ಇತ್ತೀಚೆಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮಗ ಇಜಾನ್ನ ನಾಲ್ಕನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದಾರೆ. ಆದರೆ ಇದರ ಫೋಟೊಗಳನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಆದರೆ ಶೋಯೆಬ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೂ ಕೂಡ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿತ್ತು.
ಇತ್ತೀಚೆಗೆ ಪಾಕಿಸ್ತಾನಿ ಕ್ರಿಕೆಟ್ ಶೋ ಒಂದರಲ್ಲಿ ಸಾನಿಯಾ ಮಿರ್ಜಾ ಅವರ ಟೆನ್ನಿಸ್ ಅಕಾಡೆಮಿಗಳು ಮತ್ತು ಅವು ಎಲ್ಲೆಲ್ಲಿವೆ ಎಂಬ ಪ್ರಶ್ನೆಗೆ ಶೋಯೆಬ್ ಮಲಿಕ್ ನನಗೆ ಅದರ ಕುರಿತು ಯಾವುದೇ ಮಾಹಿತಿಯಿಲ್ಲ ಎಂದಿದ್ದರು. ನಾನು ಯಾವ ಅಕಾಡೆಮಿಗಳಿಗೂ ಇದುವರೆಗೂ ಹೋಗಿಲ್ಲ ಎಂದಿದ್ದರು. ಇದರಿಂದ ಸಿಟ್ಟಾದ ವಕಾರ್ ಯೂನಸ್ ಶೋಯೆಬ್ ನೀನೆಂತ ಗಂಡ, ಹೆಂಡತಿಯ ಅಕಾಡೆಮಿ ಎಲ್ಲಿದೆ ಎಂಬುದೂ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದರು. ಅತ್ತ ಪತಿಯನ್ನು ಪ್ರೀತಿಸುತ್ತಲೇ ಭಾರತೀಯತೆ ಬಿಟ್ಟುಕೊಡದ ಸಾನಿಯಾ ಮಿರ್ಜಾ, ತಾವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೇ ಅಫೇರ್ ಇಟ್ಟುಕೊಂಡಿದ್ದು ಕೇಳಿ ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗಿದೆ.



