



ಕಳೆದ ಬಾರಿ ವಿರಾಟ್ ನೆರವಿಗೆ ಬಂದಿದ್ದಂತೆಯೇ ಹಿರಿಯ ಕ್ರಿಕೆಟ್ ದಿಗ್ಗಜರು ರೋಹಿತ್ ಶರ್ಮಾ ನೆರವಿಗೂ ನಿಂತಿದ್ದಾರೆ. ಸಚಿನ್, ಸೆಹ್ವಾಗ್ ಸೇರಿದಂತೆ ಹಲವರು ಸಾಂತ್ವನ ಹೇಳಿದ್ದಾರೆ. ಆದರೆ ಫ್ಯಾನ್ಸ್ ತಣ್ಣಗಾಗಿಲ್ಲ. ಇದೆಲ್ಲ ಶುರುವಾಗಿದ್ದು ಐಪಿಎಲ್ನಿಂದ ಎನ್ನುವುದು ವಿಚಿತ್ರ. ವಿರಾಟ್ 2019ರ ನಂತರ ಸೆಂಚುರಿ ಹೊಡೆದಿಲ್ಲ ಎಂಬುದು ತಾರಕಕ್ಕೆ ಹೋದಾಗ ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಕೊಡಲಾಯಿತು.



ಕೊಹ್ಲಿ ಫ್ಯಾನ್ಸ್ ಪ್ರಕಾರ: ರೋಹಿತ್ ಶರ್ಮಾ ಡುಮ್ಮ. ಡಮ್ಮಿ ಟೀಂಗಳ ವಿರುದ್ಧ ಮಾತ್ರವೇ ಅಬ್ಬರಿಸುವ ಬ್ಯಾಟ್ಸ್ಮನ್. ಬೌಂಡರಿ ಲೈನಿನಲ್ಲಿ ಫೀಲ್ಡಿಂಗ್ ಮಾಡೋಕೆ ಬರಲ್ಲ. ರನ್ ಓಡೋಕೆ ತಿಣುಕ್ತಾನೆ. ಫಿಟ್ನೆಸ್ ಇಲ್ಲ ಎಂದು ಲೇವಡಿ ಮಾಡುತ್ತಾರೆ. ನಮ್ಮ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಕೂಡಾ ಪಾಕ್ ವಿರುದ್ಧ 10 ವಿಕೆಟ್ಟುಗಳಿಂದ ಸೋತಿತ್ತು. ಈಗ ರೋಹಿತ್ ಪಡೆ ಕೂಡಾ ಸೆಮೀಸ್ನಲ್ಲಿ 10 ವಿಕೆಟ್ಗಳಿಂದ ಸೋತಿದೆ. ಎರಡೂ ಮ್ಯಾಚ್ಗಳಲ್ಲಿ 50 ಹೊಡೆದಿದ್ದು ನಮ್ ಕೊಹ್ಲಿ ಮಾತ್ರನೇ ಅನ್ನೋದು ಇವರ ವಾದ.

ಕೊಹ್ಲಿಗೆ ಮತ್ತೊಮ್ಮೆ ನಾಯಕತ್ವ ಕೊಡಬೇಕು. ರೋಹಿತ್ನನ್ನು ತಂಡದಿಂದಲೇ ಕೈಬಿಡಬೇಕು. ರೋಹಿತ್ ಮುದುಕನಾಗಿದ್ದಾನೆ. ಇನ್ನೂ ಆಡಿಸೋದ್ರಲ್ಲಿ ಅರ್ಥವಿಲ್ಲ. ವಿರಾಟ್ ಹಂಗಲ್ಲ. ಈಗಲೂ ಚಿರತೆಯಂತೆ ಓಡ್ತಾನೆ ಅನ್ನೋವ್ರು ವಿರಾಟ್ ಫ್ಯಾನ್ಸ್.
ರೋಹಿತ್ ಫ್ಯಾನ್ಸ್ ಪ್ರಕಾರ :
ಧೋನಿ ಕ್ಯಾಪ್ಟನ್ಸಿಯಲ್ಲಿ 3 ಸಲ ಹಾಗೂ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ 1 ಸಲ ಸೆಮೀಸ್ಗೆ ತಲುಪೋಕೆ ಸಾಧ್ಯವಾಗಿರಲಿಲ್ಲ. ರೋಹಿತ್ ನೇತೃತ್ವದಲ್ಲಿ ಮೊದಲ ಸಲ ಆಡಿ ಸೆಮೀಸ್ಗೆ ತಲುಪಿದೆ. ಧೋನಿ ನೇತೃತ್ವದಲ್ಲಿ 10 ಐಸಿಸಿ ಟೂರ್ನಿ ಆಗಿವೆ. ಗೆದ್ದಿರುವುದು 3 ಸಲ.ಸೋತಿದ್ದು 7 ಸಲ. ಕೊಹ್ಲಿ ಲೀಡರ್ಶಿಪ್ನಲ್ಲಿ 5 ಐಸಿಸಿ ಟೂರ್ನಿ ಆಗಿವೆ. ಒಂದೇ ಒಂದು ಸಲವೂ ಗೆದ್ದಿಲ್ಲ. ಒಂದೇ ಒಂದು ಟೂರ್ನಿಗೆ ರೋಹಿತ್ ನಾಯಕತ್ವ ಅಳೆಯಬೇಡಿ. ಏಕಾಂಗಿಯಾಗಿ 2019ರ ವಿಶ್ವಕಪ್ನಲ್ಲಿ ಭಾರತವನ್ನು ಸೆಮೀಸ್ಗೆ ತೆಗೆದುಕೊಂಡು ಹೋಗಿದ್ದು ಮರೆಯಬೇಡಿ ಎನ್ನುವುದು ಇವರ ವಾದ. ರೋಹಿತ್ ಹಿಟ್ಮ್ಯಾನ್. ಕಮ್ ಬ್ಯಾಕ್ ಮಾಡ್ತಾರೆ ಅನ್ನೋದು ಅವರ ಭರವಸೆ. ಇವರ ಮಾತುಗಳಲ್ಲಿ ಕೊಹ್ಲಿಯನ್ನಷ್ಟೇ ಅಲ್ಲ, ಧೋನಿಯನ್ನೂ ಎಳೆದು ತಂದಿದ್ದಾರೆ. ಫಿಟ್ನೆಸ್ ಇಲ್ಲ ಅನ್ನೋವ್ರು ಏಕದಿನದಲ್ಲಿ 3 ಡಬಲ್ ಸೆಂಚುರಿ ಹೊಡೆದಿರುವ ಏಕೈಕ ಆಟಗಾರ ಅನ್ನೋದು ನೆನಪಿರಲಿ ಎನ್ನುತ್ತಾರೆ.
ಈಗ ಡಿಫೆನ್ಸ್ ಆಡುತ್ತಿರುವುದು ರೋಹಿತ್ ಫ್ಯಾನ್ಸ್, ಅಗ್ರೆಸಿವ್ ಆಗಿ ಆಡುತ್ತಿರುವುದು ಕೊಹ್ಲಿ ಫ್ಯಾನ್ಸ್. ಈ ಎಲ್ಲ ವಾದದ ನಡುವೆ ವಿರಾಟ್ ರನ್ ಬರ ಎದುರಿಸುತ್ತಿದ್ದಾಗ ರೋಹಿತ್ ಹಾಗೂ ರೋಹಿತ್ ಬಗ್ಗೆ ಕೇಳಿದ್ದಾಗ ಕೊಹ್ಲಿ ಹೇಳಿದ್ದ ಮಾತುಗಳು ನೆನಪಿಗೇ ಬರಲ್ಲ.
ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ರೋಹಿತ್ ಪಾಕ್ ವಿರುದ್ಧ ಔಟ್ ಆದಾಗ ಪತ್ರಕರ್ತರೊಬ್ಬರು ರೋಹಿತ್ನನ್ನು ತಂಡದಿಂದ ಕೈಬಿಡುತ್ತೀರಾ ಎಂದು ಪ್ರಶ್ನಿಸಿದ್ದರು. ಆಗ ಕೊಹ್ಲಿ ನೀವು ರೋಹಿತ್ ಶರ್ಮಾನನ್ನು ಕೈ ಬಿಡು ಎನ್ನುತ್ತಿದ್ದೀರಾ ಎಂದು ನಕ್ಕು ಪ್ರಶ್ನೆ ಕೇಳಿದವನಿಗೆ ಕನಿಷ್ಠ ಕ್ರಿಕೆಟ್ ಜ್ಞಾನವೂ ಇಲ್ಲ ಎಂಬಂತೆ ಉತ್ತರ ಕೊಟ್ಟಿದ್ದರು. ರೋಹಿತ್ ನಮ್ಮ ಟ್ರಂಪ್ ಕಾರ್ಡ್ ಎಂದಿದ್ದರು.
ರೋಹಿತ್ ಶರ್ಮಾಗೆ ಕೂಡಾ ಕೊಹ್ಲಿ ಬಗ್ಗೆ ಇಂತಹುದೇ ಪ್ರಶ್ನೆ ಎದುರಾಗಿತ್ತು. ಕೊಹ್ಲಿಗೆ ಶತಕ ಹೊಡೆಯಲು ಸಾಧ್ಯವಾಗಿಲ್ಲ ಅಷ್ಟೆ. ಕೆಟ್ಟ ಫಾರ್ಮಿನಲ್ಲೇನೂ ಇಲ್ಲ. ವಿರಾಟ್ ಕ್ವಾಲಿಟಿ ಪ್ಲೇಯರ್ ಎಂದಿದ್ದರು. ಅಷ್ಟೇ ಅಲ್ಲ, ತಂಡದೊಳಗೆ ಎಲ್ಲವೂ ಚೆನ್ನಾಗಿಯೇ ಇದೆ. ಟೀಂ ಆಗಿ ನಾವು ಆಟಗಾರರೆಲ್ಲ ಚೆನ್ನಾಗಿಯೇ ಇದ್ದೇವೆ. ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವ ಮೂಲಕ ಕೊಹ್ಲಿ ಮತ್ತು ರೋಹಿತ್ ಮಧ್ಯೆ ಬಿಕ್ಕಟ್ಟಿದೆ ಎಂಬ ಮಾತಿಗೆ ತೆರೆ ಎಳೆದಿದ್ದರು.

ಪಾಕ್ ವಿರುದ್ಧ ಗೆದ್ದಾಗ ಕೊಹ್ಲಿಯನ್ನು ತಾವು ತಂಡದ ನಾಯಕ ಎಂಬುದನ್ನು ಮರೆತು ಹೆಗಲ ಮೇಲೆ ಹೊತ್ತು ಕುಣಿದಿದ್ದರು. ಕೊಹ್ಲಿಯ ಪಾಕ್ ವಿರುದ್ಧ ಇನ್ನಿಂಗ್ಸ್ ಇಂಡಿಯಾದ ಬೆಸ್ಟ್ ಇನ್ನಿಂಗ್ಸ್ಗಳಲ್ಲಿ ಒಂದು ಎಂದಿದ್ದರು. ಸ್ಸೋ..ರೋಹಿತ್ ಮತ್ತು ವಿರಾಟ್ ಮಧ್ಯೆ ಎಲ್ಲವೂ ಓಕೆ. ಆದರೆ ಈ ಫ್ಯಾನ್ಸ್ ಮಧ್ಯೆ ಕಿತ್ತಾಟ ಯಾಕೆ?



