ಟೀಂ ಇಂಡಿಯಾ ಕ್ಯಾಪ್ಟರ್ ರೋಹಿತ್ ಶರ್ಮಾ ಒಂದು ಅಪಾಯದಿಂದ ಬಚಾವ್ ಆಗಿದ್ದಾರೆ. ವಿಶ್ವಕಪ್‍ನಲ್ಲಿ ಸೆಮಿಫೈನಲ್ ತಲುಪಿರುವ ರೋಹಿತ್ ಆರ್ಮಿ ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್ ತಲುಪುವ ಕನಸು ಕಾಣುತ್ತಿದೆ. ತಂಡದಲ್ಲಿ ಎಲ್ಲ ಓಕೆ ಎನ್ನುವಂತಿದೆ. ಆರಂಭಿಕರಾದ ರೋಹಿತ್ 1, ರಾಹುಲ್ 2 ಹಾಫ್ ಸೆಂಚುರಿ ಬಾರಿಸಿದ್ದಾರೆ. ಆದರೆ ಇವರಿಬ್ಬರಿಂದು ಇದುವರೆಗೂ ಕನಿಷ್ಠ 50 ರನ್ ಜೊತೆಯಾಟವೂ ಬಂದಿಲ್ಲ. ರಾಹುಲ್ 2 ಹಾಫ್ ಸೆಂಚುರಿ ಬಾರಿಸಿದ್ದರೂ, ಸ್ಟ್ರೈಕ್ ರೇಟ್ ಚೆನ್ನಾಗಿ ಕಾಣುತ್ತಿದ್ದರೂ ಡಾಟ್ ಬಾಲ್ ಹೆಚ್ಚಾಗಿವೆ. ಇವರಿಬ್ಬರೂ ಓಪನಿಂಗ್‍ನಲ್ಲಿ ಸ್ಫೋಟಿಸಿದರೆ ತಂಡದ ಗೆಲುವಿನ ಹಾದಿ ಅರ್ಧ ಸಲೀಸು.
ಇಂತಹ ವೇಳೆಯಲ್ಲಿಯೇ ರೋಹಿತ್ ಶರ್ಮಾ ಗಾಯಾಳುವಾಗುವ ಅಪಾಯದಿಂದ ಬಚಾವ್ ಆಗಿದ್ದಾರೆ. ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಬಾಲ್ ಕೈಗೆ ಟಚ್ ಆಯಿತು. ಇಮ್ಮೀಡಿಯೆಟ್ಟಾಗಿ ಊದಿಕೊಳ್ಳೋಕೆ ಶುರು ಮಾಡಿತು. ನೆಟ್ಸ್‍ನಲ್ಲಿ ತಕ್ಷಣ ಐಸ್ ಪ್ಯಾಕ್ ಹಾಕಿಕೊಂಡು ಕುಳಿತರು ರೋಹಿತ್ ಶರ್ಮಾ. ಇದು ತಂಡದ ಮ್ಯಾನೇಜ್‍ಮೆಂಟ್‍ನ್ನು ಟೆನ್ಷನ್ನಿಗೆ ದೂಡಿದ್ದು ಸುಳ್ಳಲ್ಲ. ಆದರೆ ಕೆಲ ಹೊತ್ತಿನಲ್ಲೇ ಊತ ಇಳಿದು ರೋಹಿತ್ ಶರ್ಮಾ ಮತ್ತೆ ಪ್ರಾಕ್ಟೀಸ್ ಮಾಡೋಕೆ ಬಂದರು. ಗಂಟೆಗಳ ಕಾಲ ನೆಟ್ಸ್‍ನಲ್ಲಿ ಬೆವರು ಹರಿಸಿದರು.

ರೋಹಿತ್ ಶರ್ಮಾ ಸದ್ಯಕ್ಕೆ ಕಳಪೆ ಫಾರ್ಮಿನಲ್ಲಿರಬಹುದು. ಆದರೆ ಯಾವುದೇ ಕ್ಷಣದಲ್ಲಿಯೂ ಫಾರ್ಮಿಗೆ ವಾಪಸ್ ಬರಬಹುದು. ಒಮ್ಮೆ ರೋಹಿತ್ ಶರ್ಮಾ ಕನೆಕ್ಟ್ ಆದರೆ ಎದುರಾಳಿ ತಂಡದ ಎಲ್ಲ ಪ್ಲಾನುಗಳೂ ಛಿದ್ರವಿಚ್ಛಿದ್ರವಾಗುತ್ತವೆ ಅನ್ನೋದಂತೂ ಸತ್ಯ.
ನಾಳೆ ಜಾಸ್ ಬಟ್ಲರ್ ಪಡೆಯನ್ನು ಎದುರಿಸಬೇಕಿರೋ ರೋಹಿತ್ ಶರ್ಮಾ ತಮ್ಮ ಅದ್ಭುತ ಆಟವನ್ನು ಸೆಮಿಫೈನಲ್ ಹಾಗೂ ಫೈನಲ್‍ಗಾಗಿಯೇ ಕಾದಿರಿಸಿಕೊಂಡಿದ್ದಾರೆ ಎನ್ನುವ ಆಸೆಯ ಕಣ್ಣಿನಲ್ಲಿ ಎದುರು ನೋಡುತ್ತಿದ್ದಾರೆ ಅಭಿಮಾನಿಗಳು. ರೋಹಿತ್ ಶರ್ಮಾ ನಾಳೆ ಹಿಟ್ ಮ್ಯಾನ್ ಆಟವಾಡಿದರೆ.. ಫೈನಲ್‍ಗೆ ಟಿಕೆಟ್ ಸಿಕ್ಕಂತೆಯೇ ಲೆಕ್ಕ. ರೋಹಿತ್ ಶರ್ಮಾ ಅದ್ಭುತ ಆಟವಾಡಿದರೆ ನಂತರ ಬರುವ ಸೂರ್ಯ, ಕೊಹ್ಲಿ ಇಂಗ್ಲೆಂಡ್ ಬೌಲರುಗಳನ್ನು ಚೆಂಡಾಡುತ್ತಾರೆ.



