ಟಿ-20 ವಿಶ್ವಕಪ್ ಕನಸು ಭಗ್ನಗೊಂಡ ಬೆನ್ನಲ್ಲೇ ಹೊಸ ನಾಯಕನ ಶೋಧ ಕಾರ್ಯವೂ ಆರಂಭವಾಗಿದೆ. ರೋಹಿತ್ ಶರ್ಮಾ ಮುಂದಿನ ವಿಶ್ವಕಪ್‍ವರೆಗೆ ಕ್ಯಾಪ್ಟನ್ ಆಗಿರುವುದಂತೂ ಕನಸಿನ ಮಾತು. ಅಮ್ಮಮ್ಮಾ ಎಂದರೆ ಏಕದಿನ ವಿಶ್ವಕಪ್ ಮುಗಿಯುವವರೆಗೆ ನಾಯಕರಾಗಿರಬಹುದು, ಅಷ್ಟೆ. ಆನಂತರ ಹೊಸ ನಾಯಕನ ಆಯ್ಕೆ ನಡೆಯಬೇಕು. ಹೊಸ ತಂಡ ಕಟ್ಟಬೇಕು. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ತ್ಯಜಿಸಿರೋದ್ರಿಂದ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗೋಕೆ ಸಾಧ್ಯವಿಲ್ಲ. ಮತ್ತು ವಿರಾಟ್ ಕೊಹ್ಲಿಗೆ ಕೂಡಾ ವಯಸ್ಸಾಗಿದೆ. ರೋಹಿತ್ ಶರ್ಮಾಗಿಂತ ಒಂದು ವರ್ಷ ಚಿಕ್ಕವರಷ್ಟೇ. ಈಗ ಬಿಸಿಸಿಐ ಎದುರು ಇರುವ ಚಾಲೆಂಜ್ ಹೊಸ ಕ್ಯಾಪ್ಟನ್ ಆಯ್ಕೆ ಮಾಡುವುದು.
ಹಾಗೆ ನೋಡಿದರೆ ನೂತನ ಕ್ಯಾಪ್ಟನ್ ಆಯ್ಕೆಗೆ ಸಾಕಷ್ಟು ಪ್ರಯೋಗಗಳಾಗಿವೆ. ಈಗಿರುವ ತಂಡದಲ್ಲಿ ಇರುವ ಹಾಲಿ-ಮಾಜಿ ಕ್ಯಾಪ್ಟನ್‍ಗಳ ಸಂಖ್ಯೆ 7. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್, ಜಸ್‍ಪ್ರೀತ್ ಬೂಮ್ರಾ.. ಎಲ್ಲರೂ ಕ್ಯಾಪ್ಟನ್‍ಗಳಾಗಿದ್ದಾರೆ. ಒಂದು ತಂಡದಲ್ಲಿ ಇಷ್ಟೊಂದು ಕ್ಯಾಪ್ಟನ್ ಮೆಟೀರಿಯಲ್ ಇರುವುದು ಖುಷಿಯ ಸುದ್ದಿಯೂ ಹೌದು. ಆತಂಕದ ಸುದ್ದಿಯೂ ಹೌದು.
ಕೆ.ಎಲ್.ರಾಹುಲ್ ಅವರನ್ನು ಭವಿಷ್ಯದ ಕ್ಯಾಪ್ಟನ್ ಎಂದು ಬಿಂಬಿಸಲಾಗುತ್ತಿತ್ತು. ಈಗಲೂ ತಂಡದ ವೈಸ್ ಕ್ಯಾಪ್ಟನ್ ಅವರೇ. ಆದರೆ ವಿಶ್ವಕಪ್ ಸೇರಿದಂತೆ ಇತ್ತೀಚಿನ ಪಂದ್ಯಗಳಲ್ಲಿ ರಾಹುಲ್ ಫಾರ್ಮ್ ಕೈಕೊಟ್ಟಿದೆ. ಫಾರ್ಮ್‍ಗಿಂತ ಹೆಚ್ಚಾಗಿ ರಾಹುಲ್ ಅವರ ಅಪ್ರೋಚ್, ಮೊದಲ ಓವರ್ ಮೇಡನ್ ಕೊಡುವ ಸಂಪ್ರದಾಯ ಆರಂಭಿಸಿರುವುದು ತಂಡವನ್ನು ಚಿಂತೆಗೀಡು ಮಾಡಿದೆ. ಒಬ್ಬ ಕ್ಯಾಪ್ಟನ್ ಮೆಟೀರಿಯಲ್ ಮನಸ್ಥಿತಿ , ಅಪ್ರೋಚ್ ಈ ರೀತಿ ಇರಬಾರದು ಎನ್ನುವುದ ಕ್ರಿಕೆಟ್ ವಿಶ್ಲೇಷಕರು ಹಾಗೂ ಕ್ರಿಕೆಟ್ ಫ್ಯಾನ್ಸ್ ಇಬ್ಬರ ವಾದವೂ ಹೌದು. ಜೊತೆಗೆ ಐಪಿಎಲ್‍ನಲ್ಲಿ ರಾಹುಲ್ ಕ್ಯಾಪ್ಟನ್ ಆಗಿ ಫೇಲ್ಯೂರ್. ಇದುವರೆಗೆ ರಾಹುಲ್ ಆರ್.ಸಿ.ಬಿ., ಸನ್‍ರೈಸರ್ಸ್ ಹೈದರಾಬಾದ್, ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಪಂಜಾಬ್ ಮತ್ತು ಲಕ್ನೋ ಟೀಂ ಕ್ಯಾಪ್ಟನ್ ಆಗಿದ್ದರೂ ಕಪ್ ಗೆದ್ದಿಲ್ಲ. ತಂಡದಲ್ಲಿ ಒಬ್ಬ ಆಟಗಾರನಾಗಿ ಸಕ್ಸಸ್ ಕಂಡಿದ್ದರೂ, ನಾಯಕನಾಗಿ ಅಷ್ಟಕ್ಕಷ್ಟೆ.
ರಿಷಬ್ ಪಂತ್ ಅವರನ್ನು ಭವಿಷ್ಯದ ಕ್ಯಾಪ್ಟನ್ ಎನ್ನಲಾಗುತ್ತಿದೆ. ಆದರೆ ಪಂತ್‍ರದ್ದು ಹುಡುಗಾಟಿಕೆಯ ಬುದ್ದಿ. ತರಲೆ ಕೀಟಲೆ ಇನ್ನೂ ಹೋಗಿಲ್ಲ. ಆಟದಲ್ಲಿಯೂ ಸೀರಿಯಸ್‍ನೆಸ್ ಬಂದಿಲ್ಲ. ಹೊಡೆದರೆ ಬಂಪರ್.. ಹೋದರೆ ಪಾಪರ್.. ಎನ್ನುವ ಆಟ ಪಂತ್‍ರದ್ದು. ಆದರೆ ಕೆ.ಎಲ್.ರಾಹುಲ್ ಮತ್ತು ಪಂತ್ ಇಬ್ಬರಿಗೂ ಚಾನ್ಸ್ ಇದೆ. ಇಬ್ಬರಿಗೂ ವಯಸ್ಸಿದೆ. ತಿದ್ದಿಕೊಂಡರೆ ಕ್ಯಾಪ್ಟನ್ ಆಗಲೂಬಹುದು. ಆದರೆ ಇವರಿಬ್ಬರಿಗಿಂತ ಸದ್ಯಕ್ಕೆ ಪ್ರಾಮಿಸಿಂಗ್ ಎನಿಸುತ್ತಿರೋದು ಹಾರ್ದಿಕ್ ಪಾಂಡ್ಯ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದವರು. ರೋಹಿತ್ ಶರ್ಮಾ ಜೊತೆ ತಂಡದ ಜವಾಬ್ದಾರಿ ಹಂಚಿಕೊಂಡಿದ್ದ ಅನುಭವವೂ ಇದೆ. ಆರಂಭದಲ್ಲಿದ್ದ ಹುಡುಗಾಟ ಸ್ವಲ್ಪ ಕಡಿಮೆಯೂ ಆಗಿದೆ. ಮೈದಾನದಲ್ಲಿ ಪ್ರದರ್ಶನವಾಗುತ್ತಿದ್ದ ಸಿಟ್ಟು-ಸೆಡವು ಆಕ್ರೋಶಗಳೆಲ್ಲ ಈಗ ಕೇವಲ ಆಟದಲ್ಲಷ್ಟೇ ಉಳಿದುಕೊಂಡಿದೆ. ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಆಗಿ ತಂಡದ ಮೊದಲ ಐಪಿಎಲ್‍ನಲ್ಲೇ ಕಪ್ ಗೆಲ್ಲಿಸಿದ್ದೂ ಆಗಿದೆ. ಇನ್ನು ಈ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ಹೊಡೆದ ಅರ್ಧಶತಕ ಹಾರ್ದಿಕ್ ಪಾಂಡ್ಯ ಅವರ ಮೇಲಿನ ನಂಬಿಕೆ ಹೆಚ್ಚಿಸಿದೆ. ನಾಕೌಟ್ ಪಂದ್ಯಗಳಲ್ಲಿನ ಆಟಕ್ಕೆ ಬೆಲೆ ಹೆಚ್ಚು.
ಸದ್ಯಕ್ಕೆ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ. ರೋಹಿತ್ ಇಲ್ಲ. ರಾಹುಲ್ ಇಲ್ಲ. ಕೊಹ್ಲಿಯೂ ಇಲ್ಲ. ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಗೆಲುವನ್ನೂ ಕಂಡಿದ್ದಾರೆ. ಆದರೆ ಈ ಬಾರಿ ನ್ಯೂಜಿಲ್ಯಾಂಡ್ ಪ್ರವಾಸ. ಕ್ಯಾಪ್ಟನ್ ಆಯ್ಕೆಯ ಪ್ರಯೋಗ ಶುರುವಾಗಿದ್ದು ಹಾರ್ದಿಕ್ ಪಾಂಡ್ಯ ಪರ ಹೆಚ್ಚು ಧ್ವನಿ ಕೇಳಿ ಬರೋಕೆ ಶುರುವಾಗಿದೆ. ಆದರೆ ಒಂದಂತೂ ಸತ್ಯ. ಕೆ.ಎಲ್. ರಾಹುಲ್ ಮನೆಯ ಹೊಸ್ತಿಲಿಗೆ ಬಂದ ಅವಕಾಶವನ್ನು ಕೈಚೆಲ್ಲಿದ್ದಾರೆ. ಇಲ್ಲದೇ ಇದ್ದರೆ ರಾಹುಲ್‍ಗೆ ಪರ್ಯಾಯ ಆಯ್ಕೆಯೇ ಇಲ್ಲದಂತೆ ಮಾಡಲಾಗಿತ್ತು.



