ವಿಶ್ವಕಪ್ ಗೆದ್ದಿರುವುದು ಅರ್ಜೆಂಟೀನಾ. ಇದೇನು ಹೀಗೆ.. ಇದು ಅಭಿಮಾನಿಗಳ ಹೃದಯದ ಕಥೆ. ಹಾಗೆಂದು ಲಿಯೋನಲ್ ಮೆಸ್ಸಿ ಎಂಬ ಅದ್ಭುತ ಆಟಗಾರ ಅಭಿಮಾನಿಗಳ ಹೃದಯದಲ್ಲಿ ಸದಾ ಶಾಶ್ವತ. ಮುಂದಿನ ವಿಶ್ವಕಪ್ ಆಡುವುದಿಲ್ಲ ಎನ್ನುವ ನಂಬಿಕೆ. ಮೆಸ್ಸಿಗೀಗ 35 ವರ್ಷ. ಫುಟ್ಬಾಲಿನಲ್ಲಿ ಅದು ರಿಟೈರ್ ಆಗಿ ಮನೆಯಲ್ಲಿರಬೇಕಾದ ವಯಸ್ಸು. ಆದರೆ 35 ವರ್ಷ 177 ದಿನಗಳ ವಯಸ್ಸಿನಲ್ಲೂ ಮೆಸ್ಸಿ ಬರೆದಿದ್ದು ದಾಖಲೆ. ಆರಂಭದಲ್ಲಿ ಅಬ್ಬರಿಸಿ ಬೊಬ್ಬಿರಿದು ಮೊದಲಾರ್ಧದಲ್ಲಿಯೇ 2 ಗೋಲು ಬಾರಿಸಿತು ಅರ್ಜೆಂಟಿನಾ. ಮೊದಲನೇ ಗೋಲನ್ನು ಮೆಸ್ಸಿ ಹೊಡೆದರೆ, 2ನೇ ಗೋಲಿನಲ್ಲಿ ಮೆಸ್ಸಿ ನೀಡಿದ ಪಾಸ್ ಅರ್ಜೆಂಟಿನಾ ಗೋಲಿಗೆ ಕಿಸ್ ಕೊಡುವಂತೆ ಮಾಡಿತ್ತು. ಆದರೆ.. ಅವನೊಬ್ಬನಿದ್ದ. ಎಂಬಾಪೆ.


23 ವರ್ಷದ ಕಿಲಿಯಾನ್ ಎಂಬಾಪೆ 97 ಸೆಕೆಂಡ್ ಗ್ಯಾಪಿನಲಿ 2 ಗೋಲು ಹೊಡೆದು ಫ್ರಾನ್ಸ್‍ನಲ್ಲಿ ಮಿಂಚು ಹರಿಸಿದರೆ, ಅರ್ಜೆಂಟೀನಾಕ್ಕೆ ಪ್ರಳಯ ಹೇಗಿರುತ್ತೆ ಅನ್ನೋದರ ದರ್ಶನ ಮಾಡಿಸಿದರು. ಆಟ ಮುಗಿಯುವ ವೇಳೆಗೆ ಗೋಲು ಸಮ ಸಮ. 2-2.
80 ನಿಮಿಷಗಳವರೆಗೂ ಮುನ್ನಡೆಯಲ್ಲಿದ್ದ ಅರ್ಜೆಂಟೀನಾಗೆ ಎಂಬಾಪೆ ಗೆಲುವನ್ನು ದೂರ ದೂರಕ್ಕೆ ಹೊತ್ತುಕೊಂಡು ಹೊರಟರು. ಹೆಚ್ಚುವರಿಯಾಗಿ ಸಮಯ ಕೊಟ್ಟರೆ ಮೆಸ್ಸಿ ಒಂದು, ಎಂಬಾಪೆ ಒಂದು ಗೋಲು ಹೊಡೆದು ಮತ್ತೊಮ್ಮೆ 3-3 ಗೋಲುಗಳ ಸಮ ತಂದರು. ಪೆನಾಲ್ಟಿ ಶೂಟೌಟ್‍ನಲ್ಲಿ ಅದೃಷ್ಟ ಅರ್ಜೆಂಟೀನಾ ಪರ ಇತ್ತು. ಅಲ್ಲಿಯೂ ಮೆಸ್ಸಿ ಗೆದ್ದರು. 36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್‍ಗೆ ಮುತ್ತು ಕೊಟ್ಟಿತು. ಮರಡೋನಾ ಸ್ವರ್ಗದಿಂದಲೇ ಮೆಸ್ಸಿಯ ಆಟಕೆ ಭೇಷ್ ಎಂದಿರಬೇಕು.
ಈ ಟೂರ್ನಿಯಲ್ಲಿ ಅರ್ಜೆಂಟೀನಾ ಅದೆಂತಹ ಶಾಕ್ ಅನುಭವಿಸಿತ್ತೆಂದರೆ ವಿಶ್ವಕಪ್ ಫುಟ್‍ಬಾಲ್‍ನಲ್ಲಿ ಅರ್ಜೆಂಟೀನಾಗೆ ಹೋಲಿಸಿದರೆ ಶಿಶು ಎಂದೇ ಭಾವಿಸಬಹುದಾದ ಸೌದಿ ಅರೇಬಿಯಾ ಎದುರು ಮೊದಲ ಪಂದ್ಯದಲ್ಲೇ ಸೋತು ಹೋಗಿತ್ತು. ಅರ್ಜೆಂಟೀನಾ ಏನು ಸೋಲಸಲೇಬಾರದ ತಂಡವಲ್ಲ. ಆದರೆ.. ಅದೂ.. ಯಕಶ್ಚಿತ್ ಸೌದಿ ಅರೇಬಿಯಾದ ಎದುರು.. ಜಗತ್ತಿನ ಫುಟ್‍ಬಾಲ್ ಪ್ರೇಮಿಗಳು ಅದನ್ನು ಅರಗಿಸಿಕೊಳ್ಳೋಕೇ ಸಾಧ್ಯವಿರಲಿಲ್ಲ. ಆದರೆ.. ಅದಾದ ನಂತರ ನಡೆದಿದ್ದೇ ಪವಾಡ. ಈಗ ವಿಶ್ವಕಪ್ ಚಾಂಪಿಯನ್.
ಚಾಂಪಿಯನ್ನರಿಗೆ ಹೆಚ್ಚೂ ಕಡಿಮೆ 350 ಕೋಟಿ ದುಡ್ಡು ಸಿಗುತ್ತದೆ. ಅರ್ಜೆಂಟೀನಾಗೆ ವಿಶ್ವದಾದ್ಯಂತ ಅಭಿಮಾನಿಗಳ ಸಂಖ್ಯೆ ಇನ್ನೊಂದಷ್ಟು ಕೋಟಿ ಜನ ಹೊಸದಾಗಿ ಸೇರಿಕೊಳ್ತಾರೆ. 2016ರಲ್ಲಿ ರಿಟೈರ್ ಆಗಿದ್ದ ಮೆಸ್ಸಿ ಎಂಬ ಆಟಗಾರನನ್ನು ಮತ್ತೆ ಫುಟ್ಬಾಲಿಗೆ ಕರೆತಂದು ಮತ್ತೊಮ್ಮೆ ಅರ್ಜೆಂಟೀನಾಗೆ ಚಾಂಪಿಯನ್ ಪಟ್ಟ ದಕ್ಕುವಂತೆ ಮಾಡಿದ ಕೋಚ್ ಲಿಯೋನಲ್ ಸ್ಕಾಲೊನಿಗೆ ಫುಟ್‍ಬಾಲ್ ಜಗತ್ತಿನಲ್ಲಿ ದೇವರ ಪಟ್ಟಕ್ಕೇರುತ್ತಾರೆ. ಮೆಸ್ಸಿಯ ಅರ್ಜೆಂಟೀನಾ ಈಗ ವಿಶ್ವಕಪ್ ಚಾಂಪಿಯನ್. ವಿಶ್ವಕಪ್‍ನಲ್ಲಿ ಒಂದೇ ಒಂದು ಗೋಲು ಹೊಡೆದರೂ ಸಿಕ್ಕುವ ಗೌರವ, ಸ್ಥಾನಮಾನಗಳೇ ಬೇರೆ. ಈ ಮೆಸ್ಸಿ ಎಂಬ ಶತಮಾನದ ಶ್ರೇಷ್ಟ ಆಟಗಾರ ಟೂನಿರ್ಯಲ್ಲಿ ಒಟ್ಟಾರೆ 7 ಗೋಲು ಬಾರಿಸಿ, ಐದು ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದು ದಾಖಲೆ ಬರೆದಿದ್ದಾನೆ. ಗುಂಪು, ಪ್ರೀ-ಕ್ವಾರ್ಟರ್ ಫೈನಲ್, ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್.. ಹೀಗೆ ಎಲ್ಲ ಪ್ರಮುಖ ಪಂದ್ಯಗಳಲ್ಲೂ ಗೋಲು ಬಾರಿಸಿದ ವಿಶ್ವದ ಮೊದಲ ಆಟಗಾರ ಈ ಮೆಸ್ಸಿ. ಗೋಲ್ಡನ್ ಬಾಲ್ ವಿನ್ನರ್.


ಅಂದಹಾಗೆ ಗೋಲ್ಡನ್ ಬೂಟ್ ಪ್ರಶಸ್ತಿ ಎಂಬಾಪೆಗೆ ಸಿಕ್ಕಿದೆ. ಈತನಿಗಿನ್ನೂ ವಯಸ್ಸು 23. ಗೆದ್ದಿದ್ದರೆ ಅತೀ ಕಡಿಮೆ ವಯಸ್ಸಲ್ಲಿ 2 ಬಾರಿ ವಿಶ್ವಕಪ್ ಗೆದ್ದ ತಂಡದ ಆಟಗಾರನಾಗಿರುತ್ತಿದ್ದ ಎಂಬಾಪೆ. ಈ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿಸಿದ್ದು ಮೆಸ್ಸಿ ಅಲ್ಲ, ಎಂಬಾಪೆ. ಮೆಸ್ಸಿ 7 ಗೋಲು ಬಾರಿಸಿದರೆ ಎಂಬಾಪೆ ಬಾರಿಸಿದ ಗೋಲು 8. ಫುಟ್ಬಾಲಿನಲ್ಲಿ ಕಣ್ಣೀರಿಡುವುದು ಸಾಮಾನ್ಯ. ಅರ್ಜೆಂಟೀನಾ ಸೌದಿ ವಿರುದ್ಧ ಬಳಿಕ ಸೋತಾಗ ದುಃಖದಿಂದ ಕಣ್ಣೀರಿಟ್ಟಿತ್ತು. ಗೆದ್ದಾಗ ಸಂಭ್ರಮದಿಂದ ಕಣ್ಣೀರಿಟ್ಟಿತು. ಎಂಬಾಪೆಯದ್ದು ಬೇರೆ ಕಥೆ. ಕಣ್ಣೀರಿಡುತ್ತಿದ್ದವನಿಗೆ ಸಮಾಧಾನ ಮಾಡಿದ್ದು ಆ ದೇಶದ ಅಧ್ಯಕ್ಷ.
ಅದೆಲ್ಲವನ್ನೂ ಬಿಡಿ. ಇನ್ನು ಮೆಸ್ಸಿ ವಿಶ್ವಕಪ್ ಆಡುವುದಿಲ್ಲ. ಏಕೆಂದರೆ ಈಗಾಗಲೇ 36ರಲ್ಲಿರುವ ಮೆಸ್ಸಿಗೆ 2026ರ ಹೊತ್ತಿಗೆ 40 ದಾಟಿರುತ್ತದೆ. ಅಮೆರಿಕ, ಕೆನಡಾ, ಮೆಕ್ಸಿಕೋಗಳಲ್ಲಿ ನಡೆಯಲಿರೋ ವಿಶ್ವಕಪ್ ಟೂರ್ನಿಯ ಹೊತ್ತಿಗೆ ಎಂಬಾಪೆ ಫುಟ್‍ಬಾಲ್ ಪ್ರೇಮಿಗಳ ಹೃದಯ ಸಾಮ್ರಾಟನಾಗಿರುತ್ತಾನೆ. ಮೆಸ್ಸಿಗೆ ಶಾಶ್ವತ ಸ್ಥಾನ ಸಿಕ್ಕಿದ್ದರೂ, ಅಭಿಮಾನಿಗಳು ಹೊಸ ಹೊಸ ಆಟಗಾರರಿಗೆ ಹಾರ್ಟನ್ನು ಓಪನ್ ಆಗಿಟ್ಟುಕೊಂಡಿರುತ್ತಾರೆ. ಹಾಗಾಗಿಯೇ.. ಮೆಸ್ಸಿ ಔಟ್. ಎಂಬಾಪೆ ಇನ್. ಇದು ಹೃದಯಗಳ ವಿಷಯ…



