ಈ ಸಲ ಕಪ್ಪು ನಮ್ದೇ.. ಈ ಸಲ ಕಪ್ಪು ನಮ್ದೇ..
ಈ ಗೀತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಟೀಂ ಆಂಥಮ್ ಕೂಡಾ ಹೌದು. ಈ ಗೀತೆಯನ್ನು ಈ ವರ್ಷವೂ ಹಾಡಿ.. ಮಂದಿನ ವರ್ಷಕ್ಕೆ ಶಿಫ್ಟ್ ಮಾಡಿಕೊಳ್ಳಬೇಕಾಗಿದೆ. ಈ ಸಲವೂ ಕಪ್ ನಮ್ದಲ್ಲ. ಏಕೆಂದರೆ ಪ್ಲೇ ಆಫ್‍ಗೆ ಹೋಗುವುದಕ್ಕೂ ಸಾಧ್ಯವಿಲ್ಲ. ಅಕಸ್ಮಾತ್ ಮುಂದಿನ ಹಂತಕ್ಕೆ ಹೋಗಬೇಕು ಎಂದರೆ ಪವಾಡಗಳೇ ನಡೆಯಬೇಕು. ಒಂದಲ್ಲ..ಎರಡಲ್ಲ.. ಮೂರು.. ಮತ್ತೊಂದಿಷ್ಟು ಪವಾಡಗಳೆಲ್ಲ ಆಗಿ.. ಆರ್‍ಸಿಬಿ ಪ್ಲೇಆಫ್‍ಗೆ ಹೋಗಬೇಕು..!
ಕಾರಣ ಇಷ್ಟೆ, ಸೂರ್ಯನ ಆಟದಲ್ಲಿ ಮಂಕಾದ ಆರ್‍ಸಿಬಿ, ಇನ್ನೂ 21 ಎಸೆತಗಳಿರೋ ಹಾಗೆಯೇ ಮ್ಯಾಚ್ ಸೋತಿದೆ. ರನ್ ರೇಟು ಪಾತಾಳಕ್ಕಿಳಿದಿದೆ. 35 ಎಸೆತಗಳಲ್ಲಿ 83 ರನ್ ಹೊಡದ ಸೂರ್ಯ, ಆರ್‍ಸಿಬಿಯ ಪ್ಲೇ ಆಫ್ ಕನಸಿಗೆ ಅಕ್ಷರಶಃ ಸಮಾಧಿ ಕಟ್ಟಿಬಿಟ್ಟರು. ಪ್ಲೇ ಆಫ್ ರೇಸಿನಲ್ಲಿ ಇದೂವರೆಗೆ ಟಾಪ್ 5 ಒಳಗೆ ಇಣುಕುತ್ತಿದ್ದ ರಾಯಲ್ ಚಾಲೆಂಜರ್ಸ್ ಪಡೆ 7ನೇ ಸ್ಥಾನಕ್ಕೆ ಕುಸಿದಿದೆ.
ಆರ್ಸಿಬಿ ಪತನಕ್ಕೆ ಏನು ಕಾರಣ..?
ಎಲ್ಲ ಟೀಮುಗಳೂ 11 ಆಟಗಾರರೊಂದಿಗೆ ಆಟವಾಡಿದರೆ ಆರ್‍ಸಿಬಿ ಮಾತ್ರ ನಾಲ್ವರು ಆಟಗಾರರೊಂದಿಗೆ ಆಡಿದ್ದೇ ಆರ್‍ಸಿಬಿ ಅನಾಹುತಕ್ಕೆ ಕಾರಣ. ಹೌದು, ನೀವು ಟಾಪ್ ರನ್ ಸ್ಕೋರರ್ ಲಿಸ್ಟ್ ತೆಗೆದು ನೋಡಿ. ನಂ.1 ಪಟ್ಟದಲ್ಲಿ ಡುಪ್ಲೆಸಿಸ್ ಇದ್ದರೆ, 5ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. ಮ್ಯಾಕ್ಸ್‍ವೆಲ್ ಕೂಡಾ ಭರ್ಜರಿ ಆಟವಾಡಿದ್ದು ಟಾಪ್ 10ನೊಳಗೇ ಇದ್ದಾರೆ. ಆದರೆ..ಉಳಿದವರ ಕಥೆ..ಕೊನೆಯಿಂದ ಟಾಪ್ 10 ಲಿಸ್ಟಿನಲ್ಲಿದ್ದಾರೆ. ಬೌಲರುಗಳಲ್ಲಿ ಆಟವಾಡುತ್ತಿರುವುದು ಸಿರಾಜ್ ಮಾತ್ರ. ಸಿರಾಜ್ ವಿಕೆಟ್ಸ್ ಕಡಿಮೆ ಇರಬಹುದು.(ಹಾಗಂತ ಕಡಿಮೆಯೇನಲ್ಲ) ಆದರೆ ಸಿರಾಜ್ ಮಾಡಿದ್ದ ಕಂಟ್ರೋಲ್ ಇದ್ದ ಬೌಲಿಂಗಿಗೆ ಇನ್ನೊಂದೆಡೆಯಿಂದ ಸಪೋರ್ಟ್ ಸಿಕ್ಕಿದ್ದರೆ, ಆಟವೇ ಬೇರೆ ಇರುತ್ತಿತ್ತು ಎನ್ನುವುದು ಸುಳ್ಳಲ್ಲ.


ಈಗ ಸಮಯ ಮೀರಿ ಹೋಗಿದೆ. ಮುಂಬೈ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿತ್ತು. ಭರ್ಜರಿ ಸ್ಕೋರ್‍ನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವ ಅವಕಾಶವನ್ನು ಅನ್ಯಾಯವಾಗಿ ಎಂದಿನಂತೆ ಮಿಸ್ ಮಾಡಿಕೊಂಡರು. ಏಕೆಂದರೆ ಅಷ್ಟೇ ಅನಿವಾರ್ಯತೆ ಮುಂಬೈ ಇಂಡಿಯನ್ಸ್ ತಂಡಕ್ಕೂ ಇತ್ತು. ಅದರಲ್ಲೂ ರೋಹಿತ್ ಶರ್ಮಾ ಲಯದಲ್ಲಿ ಇಲ್ಲ. ಆಡಿರುವ 11 ಪಂದ್ಯಗಳಲ್ಲಿ ಗಳಿಸಿರುವ ಟೋಟಲ್ ಮೊತ್ತ 200ರ ಗಡಿ ದಾಟಿಲ್ಲ. ಆದರೆ ಬೆಂಗಳೂರು ಪರ ಕೊಹ್ಲಿ, ಡುಪ್ಲೆಸಿಸ್, ಮ್ಯಾಕ್ಸ್‍ವೆಲ್..ಮೂವರ ಆಟವೂ ಭರ್ಜರಿ.


ಏನೇನೆಲ್ಲ ಪವಾಡಗಳಾಗಬೇಕಕು..?
ಈಗ ಆರ್‍ಸಿಬಿ ಮುಂದಿರೋದು ಇನ್ನು ಮೂರು ಪಂದ್ಯಗಳಷ್ಟೇ. ಹೈದರಾಬಾದ್, ರಾಜಸ್ತಾನ ಹಾಗೂ ಗುಜರಾತ್ ವಿರುದ್ಧ ಪಂದ್ಯಗಳು ಬಾಕಿ ಇವೆ. ಇದ್ದುದರಲ್ಲಿ ಡಮ್ಮಿ ಎನ್ನುವಂತಿರೋದು ಹೈದರಾಬಾದ್ ಮಾತ್ರ. ಹಾಗಂತ ನಿರ್ಲಕ್ಷ್ಯ ಮಾಡೋಕ್ ಆಗಲ್ಲ. ದೊಡ್ಡವರನ್ನೆಲ್ಲ ಬಗ್ಗುಬಡಿದಿರೋ ಖ್ಯಾತಿಯೂ ಹೈದರಾಬಾದಿಗೆ ಇದೆ. ಅತ್ತ ರಾಜಸ್ತಾನ್ ಮತ್ತು ಗುಜರಾತ್ ಭರ್ಜರಿಯಾಗಿ ಆಡುತ್ತಿವೆ. ಈ ಮೂರೂ ತಂಡಗಳನ್ನು ಆರ್‍ಸಿಬಿ ಸೋಲಿಸಬೇಕು, ಅಷ್ಟೆ ಅಲ್ಲ. ಭರ್ಜರಿಯಾಗಿ ಭಾರೀ ಅಂತರದಲ್ಲಿ ಸೋಲಿಸಬೇಕು. ಅದಾದ ಮೇಲೆ ಉಳಿದ ತಂಡಗಳೂ ರೇಸಿನಲ್ಲಿ ಇವೆಯಲ್ಲ.. ಅ ಎಲ್ಲ ತಂಡಗಳೂ ಹೀನಾಯವಾಗಿ ಸೋಲಬೇಕು. ಇವೆಲ್ಲವೂ ಆಗಿ ಕೊನೆಯಲ್ಲಿ ಅದೃಷ್ಟ ನೆಟ್ಟಗಿದ್ದರೆ ಆರ್‍ಸಿಬಿ ಪ್ಲೇ ಆಫ್`ಗೆ ಹೋಗಬಹುದು.



