ಪುರುಷರ ಐಪಿಎಲ್ ಮಾದರಿಯಲ್ಲೇ ಶುರುವಾಗಿರುವ ಮಹಿಳೆಯರ ಡಬ್ಲ್ಯುಪಿಎಲ್ ಸಂಚಲನ ಹುಟ್ಟುಹಾಕಿದೆ. ಆರ್.ಸಿ.ಬಿ.ಯೇ ಈಗಲೂ ಅಭಿಮಾನಿಗಳ ಹಾರ್ಟ್ ಫೇವರಿಟ್. ಅದಕ್ಕೆ ಕಾರಣವಾಗಿದ್ದು ಸ್ಮೃತಿ ಮಂಧಾನ. ಟೀಂ ಇಂಡಿಯಾದ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ, ಸದ್ಯ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ. ಪುರುಷರ ಕ್ರಿಕೆಟ್‍ನಲ್ಲಿ ಕೊಹ್ಲಿಯನ್ನು ಪ್ರೀತಿಸಿದಂತೆಯೇ ಫ್ಯಾನ್ಸ್ ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನರನ್ನು ಪ್ರೀತಿಸುತ್ತಾರೆ. ಸ್ಮೃತಿ ಆರ್.ಸಿ.ಬಿ.ಗೆ ಸೇರ್ಪಡೆಗೊಂಡಾಗ ಥ್ರಿಲ್ಲಾಗಿದ್ದ ಫ್ಯಾನ್ಸ್‍ಗೆ ಇದುವರೆಗೆ ಸ್ಮೃತಿ ಮಂಧಾನ ವ್ಹಾವ್ ಎನ್ನುವಂತಹ ಪ್ರದರ್ಶನ ನೀಡಿಲ್ಲ. 4 ಪಂದ್ಯಗಳಲ್ಲಿಯೂ ಸೋತಿರುವ ಆರ್.ಸಿ.ಬಿ. ತಂಡದಲ್ಲಿ ಅವರದ್ದು ನಿರಾಶಾದಾಯಕ ಪ್ರದರ್ಶನ. ಆದರೆ ಸೋಲಿನ ನಡುವೆಯೂ ಸಂಚಲನ ಮೂಡಿಸಿರುವುದು ಕನ್ನಡತಿ. ಶ್ರೇಯಾಂಕಾ ಪಾಟೀಲ್.


ಬೆಂಗಳೂರಿನ ನಾಗರಬಾವಿಯ ರಾಜೇಶ್ ಪಾಟೀಲ್ ಎಂಬುವವರ ಪುತ್ರಿ. ರಾಜೇಶ್ ಹಿಂದೊಮ್ಮೆ ರಾಜ್ಯ ರಣಜಿ ತಂಡದ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರಂತೆ. ಕ್ರಿಕೆಟ್ ಅಕಾಡೆಮಿವೊಂದನ್ನು ಸಹ ನಡೆಸುತ್ತಿದ್ದಾರೆ. 8-9ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಶ್ರೇಯಾಂಕ, ಶುರುವಿನಲ್ಲಿ ಖುಷಿಗಷ್ಟೇ ಆಡುತ್ತಿದ್ದರಂತೆ. ‘ತಂದೆಯ ಅಕಾಡೆಮಿಗೆ ವಾರಾಂತ್ಯದಲ್ಲಿ ತರಬೇತಿಗೆ ಹೋಗುತ್ತಿದ್ದೆ. ಈ ವೇಳೆ ನಿಮ್ಮ ಮಗಳು ಮುಂದೊಂದು ದಿನ ಉತ್ತಮ ಕ್ರಿಕೆಟರ್ ಆಗಲೂಬಹುದು. ಕ್ರಿಕೆಟ್ ಕಲಿಸು ಎಂದು ನಮ್ಮ ತಂದೆಯ ಸ್ನೇಹಿತ ಪುಟ್ಟಸ್ವಾಮಿ ಎನ್ನುವವರು ಸಲಹೆ ನೀಡಿದರು. ಇದೇ ನನ್ನ ಕ್ರಿಕೆಟ್ ಜೀವನದ ಮೊದಲ ಟರ್ನಿಂಗ್ ಪಾಯಿಂಟ್ ಎನ್ನುವ ಶ್ರೇಯಾಂಕಾ ಅವರಿಗೆ ಕ್ರಿಕೆಟ್ ಬ್ಲಡ್‍ನಲ್ಲೇ ಬಂದಿದೆ.


2002ರ ಜುಲೈ 31ರಂದು ಹುಟ್ಟಿದ ಶ್ರೇಯಾಂಕಗೆ 317 ಲಕ್ಕಿ ನಂಬರ್. ಹರಾಜು ಪಟ್ಟಿಯಲ್ಲೂ ಅವರಿಗೆ ಇದೇ ನಂಬರ್ ಸಿಕ್ಕಿತ್ತು. ಆದರೆ ಯಾವುದಾದರೂ ತಂಡಕ್ಕೆ ಹರಾಜಾಗುವ ಒಂದಿಷ್ಟು ಭರವಸೆಯೂ ಇಲ್ಲದಿದ್ದಾಗ ಆರ್.ಸಿ.ಬಿ.ಯೇ ಅವರನ್ನು 10 ಲಕ್ಷ ರು. ಖರೀದಿಸಿತು. ಹೀಗೆ ಮೂಲಬೆಲೆಗೇ ಆರ್.ಸಿ.ಬಿ. ಸೇರಿದ ಶ್ರೇಯಾಂಕಾ ಪಾಟೀಲ್ ಇದುವರೆಗೆ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶ ನೀಡಿದ್ದಾರೆ.


ಆರ್.ಸಿ.ಬಿ. ಗೆಲ್ಲುತ್ತಾ ಹೋದರೆ ಶ್ರೇಯಾಂಕ ಪಾಟೀಲ್ ಅವರು ಹೆಸರುವಾಸಿಯಾಗುತ್ತಾರೆ. ಸೋತರೆ.. ಕಷ್ಟ.



