ಐಪಿಎಲ್ 2023 ನಿರ್ಣಾಯಕ ಘಟ್ಟಕ್ಕೆ ಬಂದಿದೆ. ಈ ಹಿಂದಿನ ಹಲವು ಐಪಿಎಲ್‍ಗಿಂತಲೂ ರೋಚಕವಾಗಿದೆ. ಎಲ್ಲ ತಂಡಗಳೂ 10 ಪಂದ್ಯಗಳನ್ನಾಡಿವೆ. ಆದರೆ ಪ್ಲೇ ಆಫ್ ಹಂತಕ್ಕೆ ಒಂದು ತಂಡವೂ ಫೈನಲ್ ಆಗಿಲ್ಲ. ಗುಜರಾತ್ ಬಹುತೇಕ ಪ್ಲೇ ಆಫ್ ಹಂತಕ್ಕೆ ಹೋಗಿದ್ದರೂ ಅಧಿಕೃತವಾಗಿಲ್ಲ. ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ತಾನ ರಾಯಲ್ಸ್ ಮಂಕಾದಂತಿದೆ. ಲಕ್ನೋ, ಪಂಜಾಬ್ ತಂಡಗಳೂ ಅಷ್ಟೆ. ಚೆನ್ನೈ ಏಳುತ್ತ ಬೀಳುತ್ತಾ.. ಧೋನಿಯಂತೆಯೇ ಸ್ಥಿರತೆ ಕಾಯ್ದುಕೊಂಡಿದೆ. ಡೆಲ್ಲಿ ಮತ್ತು ಸನ್ ರೈಸರ್ಸ್ ಇದ್ದಕ್ಕಿದ್ದಂತೆ ಪೈಪೋಟಿಗೆ ಬಂದಿವೆ.
ಈ ಸಲ ಕಪ್ ನಮ್ದೇ ಎನ್ನುತ್ತಿರುವ ಆರ್.ಸಿ.ಬಿಯವರಿಗೆ, ಇನ್ನೊಂದ್ ಸಲ ಕಪ್ ಎತ್ಕೊಂಡ್ ಹೋಗೋಣ ಎನ್ನುತ್ತಿರುವ ಮುಂಬೈನವರಿಗೆ ಇವತ್ತು ನಿರ್ಣಾಯಕ. ಮುಂಬೈ ಆರಂಭದಲ್ಲಿ ಮುಗ್ಗರಿಸಿತ್ತು. ಇದ್ದಕ್ಕಿದ್ದಂತೆ ಎದ್ದು ಅಬ್ಬರಿಸಿತು. ಆದರೆ ಕಡೆಯ ಪಂದ್ಯದಲ್ಲಿ ಅಬ್ಬರಿಸಿದ್ದು ಇವರೇನಾ ಎಂದು ಡೌಟ್ ಆಗುವ ಮಟ್ಟಕ್ಕೆ ಬಿದ್ದು ಹೋಯ್ತು.
ಆರ್.ಸಿ.ಬಿ. ಕಥೆಯೂ ಅಷ್ಟೆ. ನಾಲ್ವರು ಆಟಗಾರರ ಆಟದಿಂದಾಗಿ ಈ ಹಂತಕ್ಕೆ ತಲುಪಿದೆ ಎನ್ನುವುದು ಕಾಮಿಡಿಯೇನಲ್ಲ. ಇದುವರೆಗೆ ರ್‍ಸಿಬಿ ಗೆದ್ದಿರುವ ಪಂದ್ಯದಲ್ಲಿ ಆಡಿರುವುದು ಕೊಹ್ಲಿ, ಡುಪ್ಲೆಸಿಸಿ, ಮ್ಯಾಕ್ಸ್‍ವೆಲ್ ಮತ್ತು ಸಿರಾಜ್ ಮಾತ್ರ. ಉಳಿದವರು ಟೀಮಿನಲ್ಲಿ ಇದ್ದಾರೆ. ಇದ್ದಾರಷ್ಟೆ.
ಅತ್ತ ಮುಂಬೈನಲ್ಲಿ ರೋಹಿತ್ ಒಂದು ಅರ್ಧಶತಕಕ್ಕೆ ಸುಸ್ತು ಹೊಡೆದಿದ್ದಾರೆ. ಸೂರ್ಯ, ತಿಲಕ್ ವರ್ಮ, ಟಿಮ್ ಡೇವಿಡ್ ಆಡುತ್ತಿದ್ಧಾರೆ. ಇಶಾನ್ ಕಿಶನ್ ಆಡಿದ್ದು ಎರಡು ಮ್ಯಾಚುಗಳಲ್ಲಿ ಮಾತ್ರ. ಬೌಲಿಂಗ್`ನಲ್ಲಿ ಓವರ್ ಕಂಪ್ಲೀಟ್ ಮಾಡುವ ಲೆಕ್ಕಕ್ಕೆ ಬೌಲ್ ಮಾಡುತ್ತಿದ್ದಾರೆಯೇ.. ಲಯವಿಲ್ಲ. ಎದುರಾಳಿ ಬ್ಯಾಟ್ಸ್‍ಮನ್ನುಗಳಿಗೆ ಭಯವೂ ಇಲ್ಲ.
ವೈಯಕ್ತಿಕ ಲೆಕ್ಕದಲ್ಲಿ ತೆಗೆದುಕೊಂಡರೆ ರೋಹಿತ್ ಶರ್ಮಾ ಫಾರ್ಮ್‍ನಲ್ಲಿ ಇಲ್ಲ. 16ನೇ ಡಕೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದುಕೊಂಡಿದ್ದಾರೆ. ಆಡಿರುವ 10 ಪಂದ್ಯಗಳಲ್ಲಿ ಗಳಿಸಿರುವುದು 184 ರನ್. ಸರಾಸರಿ 18.40. ಕಳೆದ 4 ಪಂದ್ಯಗಳಲ್ಲಿ 2 ಸೊನ್ನೆ ಸೇರಿ ಗಳಿಸಿರುವುದು ಜಸ್ಟ್ 5 ರನ್ನು.
ಆದರೆ ಕೊಹ್ಲಿ ಹಾಗಲ್ಲ. ಅದೇ 10 ಪಂದ್ಯಗಳಲ್ಲಿ ಗಳಿಸಿರುವುದು 419 ರನ್. ಸರಾಸರಿ 45.56. ಆರೆಂಜ್ ಕ್ಯಾಪ್ ರೇಸಿನಲ್ಲಿರುವ ಕೊಹ್ಲಿ ಅದ್ಧೂರಿ ಆಟವಾಡುತ್ತಿದ್ದಾರೆ.
ಇವತ್ತು ಗೆದ್ದರೆ ಮಾತ್ರ ಎರಡೂ ತಂಡಗಳಿಗೆ ಉಳಿಗಾಲ. ಸೋತವರು ಹೆಚ್ಚು ಕಡಿಮೆ ಪ್ಲೇಆಫ್ ಕನಸು ಬಿಟ್ಟುಕೊಡಬೇಕು.



