2023ರ ಕ್ರಿಕೆಟ್ ವರ್ಷವನ್ನು ಟೀಂ ಇಂಡಿಯಾ ಕೆಲವು ಸಂಚಲನಾತ್ಮಕ ನಿರ್ಧಾರಗಳೊಂದಿಗೆ ಆರಂಭ ಮಾಡಿದೆ. 2023ರ ಮೊದಲ ಸರಣಿಯಲ್ಲಿಯೇ ಮೇಜರ್ ಸರ್ಜರಿಗಳ ಸೂಚನೆ ನೀಡಿದೆ. ಕೆಲವನ್ನೂ ಜಾರಿಗೆ ತಂದೂಬಿಟ್ಟಿದೆ ಬಿಸಿಸಿಐ. ಈ ನಿರ್ಧಾರಗಳಲ್ಲಿ ಕೆಲವು ಅಚ್ಚರಿಗಳಿದ್ದರೆ, ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಶಾಕ್ ಇವೆ. ಏಕೆಂದರೆ ಕಳೆದ ಒಂದೆರಡು ವರ್ಷಗಳಿಂದ ಭವಿಷ್ಯದ ನಾಯಕ ಎಂದು ಕರೆಸಿಕೊಳ್ಳುತ್ತಿದ್ದ ಕೆ.ಎಲ್.ರಾಹುಲ್, ಈಗ ಉಪನಾಯಕನ ಪಟ್ಟವನ್ನೂ ಕಳೆದುಕೊಂಡಿದ್ದಾರೆ. ಉಪನಾಯಕನ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ಬಂದಿದ್ದಾರೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಭಾರತ ತಂಡ ಏಕದಿನ ಹಾಗೂ 20-20ಗೆ ತಂಡವನ್ನು ಪ್ರಕಟಿಸಿದೆ. ಖಾಯಂ ನಾಯಕ ರೋಹಿತ್ ಶರ್ಮಾ ಬೆರಳಿನ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ವಿರಾಟ್ ಕೊಹ್ಲಿ ರೆಸ್ಟ್ ತೆಗೆದುಕೊಂಡಿದ್ದಾರೆ.

ಕಳೆದ 6 20-20 ಇನ್ನಿಂಗ್ಸ್‍ಗಳಲ್ಲಿ ರಾಹುಲ್ ಸರಾಸರಿ 21.33. ಗಳಿಸಿರುವ ರನ್ 128. ಅದೂ ವಿಶ್ವಕಪ್‍ನಲ್ಲಿ. ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ವಿರುದ್ಧ ಅರ್ಧ ಶತಕ ಗಳಿಸಿಯೂ ಒಟ್ಟಾರೆ ರನ್ 128. ಪಾಕ್, ನೆದರ್‍ಲೆಂಡ್, ದ.ಅಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ ಸ್ಕೋರ್ ಒಂದಂಕಿ ದಾಟಿರಲಿಲ್ಲ. ಅತ್ತ ರೋಹಿತ್ ಶರ್ಮಾ ಕೂಡಾ ಅಷ್ಟೆ, ಇಡೀ ಟೂರ್ನಿಯಲ್ಲಿ ರೋಹಿತ್ ಸರಾಸರಿ ಉಪನಾಯಕ ರಾಹುಲ್‍ಗಿಂತ ಕಡಿಮೆ. ಕೇವಲ 19.33. ಇಡೀ ಟೂರ್ನಿಯಲ್ಲಿ ಗಳಿಸಿದ್ದು ಒಂದು ಹಾಫ್ ಸೆಂಚುರಿ. ಒಟ್ಟಾರೆ ರನ್ 116 ಮಾತ್ರ. ಈಗ ಶ್ರೀಲಂಕಾ ವಿರುದ್ಧದ ಟೂರ್ನಿಗೆ 20-20ಯಿಂದ ರಾಹುಲ್‍ರನ್ನು ಹೊರಗಿಡಲಾಗಿದೆ. ರೋಹಿತ್ ಶರ್ಮಾಗೆ ಇಂಜುರಿ ಕಾರಣ ನೀಡಿ ಹೊರಗಿಡಲಾಗಿದೆ. ವಿರಾಟ್ ಕೊಹ್ಲಿ ಬಗ್ಗೆ ಕೆಮ್ಮುವಂತಿಲ್ಲ. ಖಾಯಂ ನಾಯಕ ಮತ್ತು ಉಪನಾಯಕರ ಗೈರಿನಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದರೆ, 2022ರ ಕ್ರಿಕೆಟ್ ಸೆನ್ಸೇಷನ್ ಸೂರ್ಯ ಕುಮಾರ್ ಯಾದವ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಆದರೆ ಅಚ್ಚರಿ ಇರುವುದು ಅಲ್ಲಲ್ಲ.

ಇದೇ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ತಂಡ ಘೋಷಣೆಯಾಗಿದೆ. ರೋಹಿತ್ ಶರ್ಮಾ ವಾಪಸ್ ಆಗಿದ್ದು, ಕ್ಯಾಪ್ಟನ್ ಆಗಿದ್ದಾರೆ. ಕೆ.ಎಲ್.ರಾಹುಲ್ ಸ್ಥಾನ ಗಿಟ್ಟಿಸಿದ್ದರೂ, ತಂಡದಲ್ಲಿದ್ದರೂ ಉಪನಾಯಕನಾಗಿರುವುದು ಮಾತ್ರ ಹಾರ್ದಿಕ್ ಪಾಂಡ್ಯ. ರಿಷಬ್ ಪಂತ್ ಅವರನ್ನೂ ತಂಡದಿಂದ ಹೊರಗಿಡಲಾಗಿದೆ. ಅಲ್ಲಿಗೆ ಏಕದಿನ ತಂಡದ ಉಪನಾಯಕ ಪಟ್ಟದಿಂದ ರಾಹುಲ್ ಅವರನ್ನು ತೆಗೆದು ಹಾಕಲಾಗಿದೆ ಎಂಬುದು ಸ್ಪಷ್ಟ. ಈ ಮೂಲಕ ಹಾರ್ದಿಕ್ ಪಾಂಡ್ಯ ಭವಿಷ್ಯದ ಕ್ಯಾಪ್ಟನ್ ಎಂದು ಬಿಸಿಸಿಐ ಬಿಂಬಿಸುತ್ತಿದೆ ಎನ್ನುವುದೂ ಸ್ಪಷ್ಟ.


2022ರಲ್ಲಂತೂ ಟೀಂ ಇಂಡಿಯಾ ಕ್ಯಾಪ್ಟನ್ಸಿ ಮ್ಯೂಸಿಕಲ್ ಚೇರ್ ಆಗಿತ್ತು. ಜನವರಿಯಲ್ಲಿ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟರು. ರೋಹಿತ್ ಶರ್ಮಾರನ್ನು ಖಾಯಂ ನಾಯಕರನ್ನಾಗಿ ಮಾಡಲಾಯಿತು. ರೋಹಿತ್ ಜೊತೆ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಜಸ್‍ಪ್ರೀತ್ ಬೂಮ್ರಾ, ಶಿಖರ್ ಧವನ್ ನಾಯಕರಾಗಿದ್ದರು. ಈಗ 2022ರಲ್ಲಿ ತಂಡದ ಕ್ಯಾಪ್ಟನ್ ಆಗಿದ್ದ ಶಿಖರ್ ಧವನ್, ರಿಷಬ್ ಪಂತ್ ಇಬ್ಬರೂ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರೆ, ರಾಹುಲ್ ಉಪನಾಯಕ ಸ್ಥಾನ ಕಳೆದುಕೊಂಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಆಗಿ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ತಂಡದಲ್ಲಿದ್ದಾರೆ. ರಾಹುಲ್ ಅವರ ಓಪನಿಂಗ್ ಬ್ಯಾಟ್ಸ್‍ಮನ್ ಸ್ಥಾನವೂ ಚೇಂಜ್ ಆಗಬಹುದು.



