ಲಿಯೋನಲ್ ಮೆಸ್ಸಿ. ಆತ ಅರ್ಜೆಂಟೀನಾದ ಫುಟ್ ಬಾಲ್ ಆಟಗಾರ. ಕಾಲುಗಳಲ್ಲಿ ಸ್ಪ್ರಿಂಗು ಇಟ್ಟುಕೊಂಡಿದ್ದಾನೇನೋ ಎನಿಸುವಷ್ಟು ಸ್ಟ್ರಾಂಗು. ಆತನ ಆಟ ನೋಡಿ ಡಿಗೋ ಮರಡೋನಾ ಈತನೇ ನನ್ನ ಉತ್ತರಾಧಿಕಾರಿ ಎಂದಾಗ ಮೆಸ್ಸಿಗಿನ್ನೂ 12 ವರ್ಷ. ಹೈಟು ಐದಡಿ, ಏಳಿಂಚು. ಫುಟ್‍ಬಾಲ್‍ಗೆ ಇವನು ಲಾಯಕ್ಕಿಲ್ಲ ಎಂದುಕೊಂಡವರೆಷ್ಟೋ.. ಅದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡವನು ಮೆಸ್ಸಿ. ಈತನ ಜೆರ್ಸಿ ನಂಬರ್ 10.

ಸಚಿನ್ ರಮೇಶ್ ತೆಂಡೂಲ್ಕರ್. ಕ್ರಿಕೆಟ್ ದೇವರು. ಕುಳ್ಳ ಅನ್ನೋದ್ರಲ್ಲಿ ಡೌಟೇ ಇಲ್ಲ. ಈತನ ಬ್ಯಾಟು ಮಾತನಾಡತೊಡಗಿದಾಗೆಲ್ಲ ಎದುರಾಳಿ ಬೌಲರ್ ಸೈಲೆಂಟ್ ಆದ ಚರಿತ್ರೆಯಿದೆ. ಮೆಸ್ಸಿಗೆ ಮರಡೋನಾ ಹೊಗಳಿದ್ದರೆ ಸಚಿನ್‍ರಲ್ಲಿ ಉತ್ತರಾಧಿಕಾರಿಯನ್ನು ಕಂಡಿದ್ದವರು ಸುನಿಲ್ ಗವಾಸ್ಕರ್. ಸಚಿನ್ ಜೆರ್ಸಿ ನಂ. ಕೂಡಾ 10.
2016ರಲ್ಲಿ ಅರ್ಜೆಂಟೀನಾ ಕೋಪಾ ಅಮೆರಿಕ ಫೈನಲ್ಲಿನಲ್ಲಿ ಚಿಲಿ ಸೋತಾಗ ಫುಟ್‍ಬಾಲ್‍ಗೆ ನಿವೃತ್ತಿ ಘೋಷಿಸಿದ್ದರು. ಆಗ ಮೆಸ್ಸಿಯನ್ನು ಫುಟ್ಬಾಲಿಗೆ ವಾಪಸ್ ತಂದಿದ್ದು ಈಗ ಕೋಚ್ ಆಗಿರುವ ಲಿಯೊನಲ್ ಸ್ಕಾಲೊನಿ. ಸೇಮ್ ತೆಂಡೂಲ್ಕರ್. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ವಿಶ್ವಕಪ್ ಲೀಗ್ ಹಂತದಲ್ಲಿಯೇ ಇಂಡಿಯಾ ಹೊರಬಿದ್ದಾಗ ನಿವೃತ್ತಿಯ ಮನಸ್ಸು ಮಾಡಿದ್ದರು ಸಚಿನ್. ಆಗ ತೆಂಡೂಲ್ಕರ್ ರಿಟೈರ್ ಆಗದಂತೆ ತಡೆದವರು ಬ್ರಯಾನ್ ಲಾರಾ.
ಹೇಗೆ ಅದಾದ ಮುಂದಿನ ವಿಶ್ವಕಪ್‍ನಲ್ಲಿಯೇ ಭಾರತ ಧೋನಿ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿತೋ. ಹಾಗೆಯೇ ಭಾರತ ಕೂಡಾ 2011ರ ವಿಶ್ವಕಪ್ ಗೆದ್ದಿತು. ಅದು ತೆಂಡೂಲ್ಕರ್ ಆಡಿದ ಕೊನೆಯ ವಿಶ್ವಕಪ್. ಹೋಲಿಕೆ ಇಷ್ಟಕ್ಕೇ ನಿಲ್ಲಲ್ಲ.
ವಿಶ್ವಕಪ್ ಗೆಲುವುದಕ್ಕೂ ಮುನ್ನ 8 ವರ್ಷಗಳ ಹಿಂದೆ ಇಬ್ಬರ ತಂಡವೂ ಫೈನಲ್ಲಿನಲ್ಲಿ ಸೋತಿತ್ತು. 2003ರಲ್ಲಿ ತೆಂಡೂಲ್ಕರ್ ಇದ್ದ ಟೀಂ ಇಂಡಿಯಾ 2003ರ ವಿಶ್ವಕಪ್ ಫೈನಲ್ಲಿನಲ್ಲಿ ಆಸ್ಟ್ರೇಲಿಯಾ ವಿರುದ್ದ ಶರಣಾಗಿತ್ತು. ಅರ್ಜೆಂಟೀನಾ ಕೂಡಾ ಹಾಗೆಯೇ.. 8 ವರ್ಷಗಳ ಹಿಂದೆ ಫೈನಲ್ ಸೋತಿತ್ತು. ಈಗ ಚಾಂಪಿಯನ್.
ತೆಂಡೂಲ್ಕರ್ 2011ರಲ್ಲಿ ವಿಶ್ವಕಪ್ ಗೆದ್ದಾಗ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಶ್ರೀಲಂಕಾದ ಕುಮಾರ್ ಸಂಗಕ್ಕರ ಒಟ್ಟಾರೆ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದರು. ಸೇಮ್ ಟು ಸೇಮ್. ಚಾಂಪಿಯನ್ ತಂಡದ ಮೆಸ್ಸಿ ಅರ್ಜೆಂಟೀನಾ ಪರ ನಂ.1. ಸೋತ ಫ್ರಾನ್ಸಿನ ಎಂಬಾಪೆ ಅತೀ ಹೆಚ್ಚು ಗೋಲು ಗಳಿಸಿದ ಆಟಗಾರರಲ್ಲಿ ನಂ.1.
ಸಚಿನ್ ಹಾಗೂ ಮೆಸ್ಸಿ ಇಬ್ಬರೂ ಕೂಡಾ ತಂಡದ ಸೆಮಿಫೈನಲ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದಿದ್ದಾರೆ.

ಆದರೆ ಸಚಿನ್ ಒಟ್ಟಾರೆ ಆಡಿದ್ದು 6 ವಿಶ್ವಕಪ್ ಟೂರ್ನಿಗಳನ್ನು. ಮೆಸ್ಸಿ 5 ವಿಶ್ವಕಪ್ ಆಡಿದ್ದಾರೆ. ಇಬ್ಬರೂ ಎರಡು ಫೈನಲ್ಸ್ ಆಡಿದ್ದು, ಕೊನೆಯ ಫೈನಲ್ಲಿನಲ್ಲಿ ಕಪ್ ಗೆದ್ದಿದ್ದಾರೆ.
ಹೋಲಿಕೆ ಇಷ್ಟಕ್ಕೇನಾ..? ನೋ ಚಾನ್ಸ್. ಸಚಿನ್ ಹೇಗೆ ತಾವು ಔಟ್ ಆದರೆ ಅಂಪೈರ್ ತೀರ್ಮಾನಕ್ಕೂ ಕಾಯದೆ ಹೊರನಡೆಯುತ್ತಿದ್ದರೋ.. ಹಾಗೆಯೇ ಮೆಸ್ಸಿ ಕೂಡಾ. ಗೋಲ್ ನಿಯಮ ಪ್ರಕಾರ ಆಗಿಲ್ಲ ಎನ್ನುವುದನ್ನೂ ತಾವೇ ತಿಳಿಸುತ್ತಿದ್ದ ಆಟಗಾರ. ಇಬ್ಬರೂ ಇಂಜುರಿ ಎದುರಿಸಿದ್ದಾರೆ. ಅವುಗಳನ್ನು ಗೆದ್ದು ಚಾಂಪಿಯನ್ ಆಗಿದ್ದಾರೆ. ಸಚಿನ್‍ಗೆ ಹೇಗೆ ಗವಾಸ್ಕರ್, ಕಪಿಲ್ ದೇವ್, ಪೀಲೆ ಐಕಾನ್ಸ್, ಲೆಜೆಂಡ್, ಸ್ಫೂರ್ತಿಗಳೋ.. ಹಾಗೆ ಮೆಸ್ಸಿಗೆ ಮರಡೋನಾ, ಪೀಲೆ ಐಕಾನ್ & ಲೆಜೆಂಡ್ಸ್.
ಕ್ರಿಕೆಟ್ ಮತ್ತು ಫುಟ್‍ಬಾಲ್ ಹೋಲಿಕೆಯೇ ತಪ್ಪು ಎನ್ನುವವರೂ ಇದ್ದಾರೆ. ಆದರೆ, ಯಾವತ್ತೋ.. ಯಾರೋ.. ಕ್ರಿಕೆಟ್ ಸೋಮಾರಿಗಳ ಆಟ ಎಂದಿದ್ದನ್ನೇ ನೆನಪಿಟ್ಟುಕೊಂಡು ಕ್ರಿಕೆಟ್ ಸೋಂಬೇರಿಗಳ ಆಟ ಎಂದೇ ನಂಬಿಕೊಳ್ಳುವುದು ಹಾಸ್ಯಾಸ್ಪದ. ಕ್ರಿಕೆಟ್ ಕೂಡಾ ಫಿಟ್‍ನೆಸ್ ಬೇಡುತ್ತದೆ. ದೈಹಿಕ ಶ್ರಮ ಬೇಡುತ್ತದೆ. ಮೈದಾನದಲ್ಲಿ ಆಡುವ ಆಟ ಯಾವುದಾದರೂ ಇರಲಿ.. ತಾಕತ್ತು ಬೇಕೇ ಬೇಕು. ಆಡುವವರಿಗೆ ಡೆಡಿಕೇಷನ್ ಕೂಡಾ ಬೇಕು. ಅದೆಲ್ಲ ಬಿಡಿ. ಜರ್ಸಿ ನಂ.10 ಕಥೆ ಇಷ್ಟವಾಯಿತಾ?



