ಟೀಂ ಇಂಡಿಯಾ ಮೇಲೆ, ಟೀಂ ಇಂಡಿಯಾ ಆಟಗಾರರ ಮೇಲೆ ಮೋಸ ಮಾಡಿ ಗೆದ್ದ ಆರೋಪ. ಇಂಥಾದ್ದೊಂದು ಆರೋಪ ಮಾಡಿರೋದು ಪಾಕ್ ಕ್ರಿಕೆಟ್ ಪ್ರೇಮಿಗಳು. ಚೀಟಿಂಗ್ ಅನ್ನೋದು ಟ್ವಿಟ್ಟರ್‍ನಲ್ಲಿ ಟ್ರೆಂಡ್ ಆಗಿದೆ. ಅವರು ಒಂದಿಷ್ಟು ಕಾರಣ ಕೊಟ್ಟಿದ್ದಾರೆ. ನೆಪ ಹುಡುಕಿದ್ದಾರೆ. ವಿವರವಾಗಿ ನೋಡುವ ಮುಂಚೆ.. ಒಂದಿಷ್ಟು ವಿಷಯಗಳನ್ನು ಹೇಳುತ್ತೇವೆ. ಅದರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್.ರಾಹುಲ್, ತಂಡವನ್ನು ಗೆಲ್ಲಿಸಿದ ಕಿಂಗ್ ಕೊಹ್ಲಿ ಬಗ್ಗೆ.

ನಾಯಕ ರೋಹಿತ್ ಶರ್ಮಾ ಐಪಿಎಲ್ ಪಂದ್ಯವೊಂದರಲ್ಲಿ ಎದುರಾಳಿ ಕೆ.ಎಲ್. ರಾಹುಲ್ ತಂಡದ ತಂಡದ ಬ್ಯಾಟ್ಸ್‍ಮನ್‍ಗೆ ತಮ್ಮ ತಂಡದ ಫೀಲ್ಡರ್ ಅಡ್ಡ ಬಂದಿದ್ದ ಎಂಬ ಕಾರಣಕ್ಕೆ ರನೌಟ್ ಮಾಡಿದ್ದರೂ ಅಪೀಲ್ ಮಾಡಲಿಲ್ಲ. ನಿಯಮಗಳ ಪ್ರಕಾರ ಔಟ್ ಇದ್ದರೂ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಆ ಪಂದ್ಯದಲ್ಲಿ ತಂಡ ಸೋತಿತ್ತು.
ಇನ್ನು ಉಪನಾಯಕ ಕೆ.ಎಲ್.ರಾಹುಲ್ ಟೆಸ್ಟ್ ಪಂದ್ಯವೊಂದರಲ್ಲಿ ಔಟ್ ಎಂದು ಅಂಪೈರ್ ತೀರ್ಪಿತ್ತಿದ್ದರು. ಕ್ಯಾಮೆರಾ ಕಣ್ಣಿನಲ್ಲಿ ಸೂಕ್ಷ್ಮವಾಗಿ ನೋಡಿದ್ದರಷ್ಟೇ ಗೊತ್ತಾಗುವ ಸತ್ಯ ಅದು. ಆದರೆ ರಾಹುಲ್ ಔಟ್ ಇಲ್ಲ ಎಂದು ಸ್ವತಃ ಹೇಳಿ ಅಂಪೈರ್ ಕೊಟ್ಟಿದ್ದ ಔಟ್‍ನ್ನು ಕ್ಯಾನ್ಸಲ್ ಮಾಡಿಸಿದ್ದರು. ರಾಹುಲ್ ಕ್ರೀಡಾಸ್ಫೂರ್ತಿ ಮೆರೆದಿದ್ದರು.
ಇನ್ನು ವಿರಾಟ್ ಕೊಹ್ಲಿ ಇದೇ ಪಾಕಿಸ್ತಾನ ವಿರುದ್ಧದ ಕಳೆದ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಅದ್ಭುತವಾಗಿ ಆಡುತ್ತಿದ್ದಾಗ ಔಟ್ ಆಗಿದ್ದರು. ಅಂಪೈರ್ ಬೆರಳೆತ್ತುವುದಕ್ಕೂ ಮೊದಲೇ ಪೆವಿಲಿಯನ್‍ನತ್ತ ಹೋಗಿದ್ದರು. ಡ್ರೆಸಿಂಗ್ ರೂಂಗೆ ಹೋಗಿ ರೀಪ್ಲೇ ನೋಡಿದಾಗ ಬಾಲ್, ಬ್ಯಾಟ್‍ಗೆ ಟಚ್ಚೇ ಆಗಿರಲಿಲ್ಲ ಎಂಬುದು ಗೊತ್ತಾಗಿತ್ತು. ಆದರೆ ಕೊಹ್ಲಿಯ ಕ್ರೀಡಾ ಸ್ಫೂರ್ತಿ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ನು ಪಾಕಿಸ್ತಾನದ ಕ್ರೀಡಾ ಸ್ಫೂರ್ತಿ ವಿಷಯಕ್ಕೆ ಬಂದರೆ ರಾಶಿ ರಾಶಿ ವಿಡಿಯೋಗಳು ಸಿಗುತ್ತವೆ. ಬಾಲ್ ನೆಲಕ್ಕೆ ಬಿದ್ದು ಎತ್ತಿಕೊಂಡು, ಬಾಚಿಕೊಂಡಿದ್ದನ್ನೆಲ್ಲ ಔಟ್ ಅಪೀಲ್ ಮಾಡಿ, ಥರ್ಡ್ ಅಂಪೈರ್‍ಗೂ ಹೋದ ಉದಾಹರಣೆಗಳಿವೆ. ಈಗ ಅವರು ಮಾಡುತ್ತಿರುವ ಚೀಟಿಂಗ್ ಆರೋಪಕ್ಕೆ ಬರೋಣ.
ಮೊದಲನೆಯದ್ದು 20ನೇ ಓವರ್‍ನಲ್ಲಿ ನೋಬಾಲ್‍ಗೆ ಸಿಕ್ಸ್ ಹೊಡೆದದ್ದು. ಸಿಕ್ಸ್ ಹೊಡೆದ ಮೇಲೆ ಅದು ನೋಬಾಲ್ ಎಂದು ಕೊಹ್ಲಿ ಹೇಳುತ್ತಾರೆ. ಅಂಪೈರ್ ನೋಬಾಲ್ ಕೊಡ್ತಾರೆ. ಅಂದಹಾಗೆ ನೋಬಾಲ್ ಅನ್ನೋದು ಬೌಲರ್ ಬಾಲ್ ಎಸೆಯುವ ಮುಂಚೆ ಗೆರೆ ದಾಟಿದ್ದರಷ್ಟೇ ಅಲ್ಲ, ಪಿಚ್ ಬೀಳದೆ ಸೊಂಟದ ಎತ್ತರಕ್ಕೆ ಬಂದ ಫುಲ್ ಟಾಸ್‍ಗೂ ನೋಬಾಲ್ ಕೊಡ್ತಾರೆ.

ಕೊಹ್ಲಿ ಕೇಳಿರುವುದರಲ್ಲಿ ತಪ್ಪೇನಿದೆ. ನೂರಾರು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಕೊಹ್ಲಿ ಸರಿಯಾಗಿಯೇ ಪ್ರಶ್ನಿಸಿದ್ದಾರೆ. ನಿಯಮಗಳನ್ನಂತೂ ದಾಟಿ ಹೋಗಿಲ್ಲ. ಇದನ್ನು ಪಾಕ್ ಕ್ರಿಕೆಟಿಗರೂ ಹಲವು ಬಾರಿ ಮಾಡಿದ್ದಾರೆ. ಬೇರೆ ಬೇರೆ ದೇಶಗಳ ಆಟಗಾರರೂ ಮಾಡಿದ್ದಾರೆ.
ವಿಚಿತ್ರವೆಂದರೆ ಇದನ್ನು ಪಾಕ್ ಕ್ರಿಕೆಟ್ ಬೋರ್ಡ್ ಹಾಗೂ ಪಾಕ್‍ನ ಮಾಜಿ ಆಟಗಾರರು ಕೂಡಾ ಸಮರ್ಥಿಸುತ್ತಿರುವುದು. ವಕಾರ್ ಯೂನಸ್, ವಾಸಿಂ ಅಕ್ರಂ, ಶೋಯೆಬ್ ಮಲಿಕ್, ಇಂಗ್ಲೆಂಡ್‍ನ ಮಾಜಿ ಕ್ರಿಕೆಟರ್ಸ್ ಬ್ರಾಡ್ ಹಾಗ್, ನಾಸಿರ್ ಹುಸೇನ್‍ರಂತ ಹಿರಿಯ ಕ್ರಿಕೆಟಿಗರೂ ಇದಕ್ಕೆ ಸಮರ್ಥನೆ ಕೊಡುತ್ತಿರುವುದು. ಇದನ್ನು ಏನು ಹೇಳಬೇಕೋ.. ಗೊತ್ತಾಗಲ್ಲ.

ಅಷ್ಟೇ ಅಲ್ಲ, ನೋ ಬಾಲ್ ನಂತರ ಫ್ರೀಹಿಟ್ ಇರುತ್ತೆ. ಆಗ ವೈಡ್ ರೌಫ್ ವೈಡ್ ಎಸೆದರು. ಹೀಗಾಗಿ ನಂತರದ ಎಸೆತವೂ ಫ್ರೀಹಿಟ್. ಫ್ರೀ ಹಿಟ್ ಬಾಲ್‍ನಲ್ಲಿ ಬ್ಯಾಟ್ಸ್‍ಮನ್ ಕ್ಯಾಚ್ ಕೊಟ್ಟರೂ ಔಟ್ ಇಲ್ಲ. ಬೌಲ್ಡ್ ಆದರೂ ಔಟ್ ಇಲ್ಲ. ಈ ಎಸೆತದಲ್ಲಿ ಕೊಹ್ಲಿ ಬೌಲ್ಡ್ ಆದರೂ ಬೈಸ್ 3 ರನ್ ಓಡಿದರು. ನಿಯಮಗಳ ಪ್ರಕಾರವೂ ಕರೆಕ್ಟ್ ಆಗಿಯೇ ಇದೆ. ಮೋಸವಾಗಿದ್ದೆಲ್ಲಿ?
ಇನ್ನು ಕ್ಯಾಚ್ ವಿವಾದ. ಇಫ್ತಿಕಾರ್ ಥರ್ಡ್ ಮ್ಯಾನ್ ಕಡೆ ಚೆಂಡು ಹೊಡೆದಾಗ ದೂರದಲ್ಲಿದ್ದ ಆರ್.ಅಶ್ವಿನ್ ಕ್ಯಾಚ್ ಹಿಡಿದಿದ್ದರು. ಅದನ್ನು ಚೀಟಿಂಗ್ ಎನ್ನುತ್ತಿದ್ದಾರೆ ಪಾಕ್ ಕ್ರಿಕೆಟ್ ಫ್ಯಾನ್ಸ್. ಕ್ಯಾಚ್ ಹಿಡಿಯುವಾಗ ಅಶ್ವಿನ್ ಡೈ ಹೊಡೆದು ಬಿದ್ದರು. ಆಗ ಬಾಲ್ ಮೊದಲು ನೆಲಕ್ಕೆ ಬಿದ್ದು ಫೀಲ್ಡರ್ ಕೈಗೆ ಬಂದಿದ್ದು ಹೌದು. ಅದಕ್ಕೆ ಔಟ್ ಕೊಡಲಿಲ್ಲ. ರೀಪ್ಲೇನಲ್ಲಿ ಚೆಕ್ ಮಾಡಿಕೊಂಡರಷ್ಟೇ. ಇಷ್ಟಕ್ಕೂ ನೆಲಕ್ಕೆ ಬಿದ್ದಿದ್ದನ್ನು ಮೊಣಕೈನಲ್ಲಿ ಎತ್ತಿಕೊಳ್ಳಲಿಲ್ಲ ಅಶ್ವಿನ್. ಮೋಸದಾಟ ನಡೆದಿದ್ದಾರೂ ಎಲ್ಲಿ..?
ಇನ್ನು ಇದೇ ಪಂದ್ಯದಲ್ಲಿ ಅಕ್ಷರ್ ಪಟೇಲ್ ರನೌಟ್ ಆದರು. ರಿಜ್ವಾನ್ ಬೇಲ್ ಎಗರಿಸಿದಾಗ ಬಾಲ್ ಕೈಲಿ ಇರಲಿಲ್ಲ. ಕೈಲಿ ಬಾಲ್ ಇಲ್ಲದೆ ಮಾಡುವ ರನೌಟ್, ರನೌಟ್ ಆಗಲ್ಲ ಎಂದು ಅಭಿಮಾನಿಗಳು ಹುಡುಕಿಟ್ಟಿದ್ದ್ದಾರೆ. ನಂತರ ದಿನೇಶ್ ಕಾರ್ತಿಕ್ ಸ್ಟಂಪ್ ಮಾಡಿದ್ದನ್ನೂ ಅಷ್ಟೇ, ವಿಕೆಟ್ ಮುಂದೆ ನಿಂತು ಬೇಲ್ಸ್ ಎಗರಿಸುವುದು ಅದೂ ಬಾಲ್ ಪ್ಯಾಡ್‍ಗೆ ಬಡಿದಿದ್ದಾಗ ನಿಯಮಗಳ ಪ್ರಕಾರ ಔಟ್ ಇಲ್ಲ. ಈ ಹಿಂದೆ ನಮ್ಮ ರಿಷಬ್ ಪಂತ್ ಈ ರೀತಿ ಮಾಡಿದ್ದಾಗ ಔಟ್ ಕೊಟ್ಟಿರಲಿಲ್ಲ…

ಇವನ್ನೆಲ್ಲ ಬಿಡಿ. ಟೀಕೆ ಮಾಡುವವರೂ ಟೀಕೆ ಮಾಡುತ್ತಲೇ ಇರುತ್ತಾರೆ. ಕ್ರೀಡಾ ಸ್ಫೂರ್ತಿಗೆ ಹೆಸರಾಗಿರುವವರು ಭಾರತೀಯ ಕ್ರಿಕೆಟ್ ಆಧಾರಸ್ತಂಭವಾಗಿದ್ದಾರೆ. ಕ್ರೀಡಾಸ್ಫೂರ್ತಿಯನ್ನು ಪಾಕ್ ಕ್ರಿಕೆಟಿಗರಿಂದ ಭಾರತ ಕಲಿಯುವ ಹಂತವಂತೂ ಬಂದಿಲ್ಲ. ಭಾರತ ರಣರೋಚಕ ಪಂದ್ಯದಲ್ಲಿ ಮ್ಯಾಚ್ ಗೆದ್ದಿದೆ. ಗೆಲುವನ್ನು ಸಂಭ್ರಮಿಸೋಣ.



