ಮತ್ತೊಂದು ರಣರೋಚಕ ಪಂದ್ಯದಲ್ಲಿ ಭಾರತ ಗೆದ್ದಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಬೇಕಿತ್ತು. ಅಕಸ್ಮಾತ್ ಸೋತಿದ್ದರೆ ಸೆಮಿಫೈನಲ್ ಹಾದಿ ಲೀಗ್ ಮುಗಿಯುವವರೆಗೂ ಗೊಂದಲದಲ್ಲೇ ಇರುತ್ತಿತ್ತು. ಆದರೆ ಹಾಗಾಗಲಿಲ್ಲ. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಭಾರತ ಅನುಮಾನವೇ ಇಲ್ಲದಂತೆ ಗೆದ್ದಾಗಿದೆ. ಐರ್ಲೆಂಡ್ ವಿರುದ್ಧದ ಮ್ಯಾಚ್ ಬಿಟ್ಟರೆ ಪಾಕಿಸ್ತಾನ, ದ.ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧದ ಪಂದ್ಯಗಳು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು. ಬಾಂಗ್ಲಾದೇಶದ ವಿರುದ್ಧವೂ ಅದೇ ಆಗಿತ್ತು.
ಸೂರ್ಯ-ಕೊಹ್ಲಿ ಆಡುವಾಗ 200ರ ಗಡಿ ದಾಟುತ್ತಾರೆ ಎಂದುಕೊಂಡಿದ್ದ ಭಾರತಕ್ಕೆ ಹಾರ್ದಿಕ್, ದಿನೇಶ್ ಕಾರ್ತಿಕ್ ಕೈಕೊಟ್ಟಾಗ ಟೆನ್ಷನ್ ಶುರುವಾಗಿದ್ದು ಸುಳ್ಳಲ್ಲ. ಆದರೆ ಕೊಹ್ಲಿ, ಅಶ್ವಿನ್ ಮಿಂಚು ಟಾರ್ಗೆಟ್‍ನ್ನು 185ಕ್ಕೆ ಒಯ್ದಿತ್ತು. ಆದರೆ ಬಾಂಗ್ಲಾದೇಶದ ಓಪನಿಂಗ್ ಮಾತ್ರ ಅತ್ಯದ್ಭುತವಾಗಿತ್ತು. ಲಿಟನ್ ದಾಸ್ ಸಿಡಿದ ಆರ್ಭಟಕ್ಕೆ ಈ ಮ್ಯಾಚ್ ಹೊಗೆ ಎಂದುಕೊಂಡವರೇ ಹೆಚ್ಚು.

ಆದರೆ ಮಳೆ ನಿಂತು ಮತ್ತೆ ಮ್ಯಾಚ್ ಶುರುವಾದಾಗ ಆಗಿದ್ದೇ ಬೇರೆ. ಕೆ.ಎಲ್. ರಾಹುಲ್ ಇಟ್ಟ ಗುರಿಗೆ ಲಿಟನ್ ದಾಸ್ ವಿಕೆಟ್ ಎಗರಿಬಿತ್ತು. ಅಕಸ್ಮಾತ್ ಮಳೆ ನಿಲ್ಲದೇ ಹೋಗಿದ್ದರೆ ಮ್ಯಾಚ್ ಗೆಲ್ಲುತ್ತಿದ್ದುದು ಬಾಂಗ್ಲಾ. ಆಗ ಬಾಂಗ್ಲಾ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕಿಂತ 17 ರನ್ ಲೀಡ್‍ನಲ್ಲಿತ್ತು. ಕೊನೆಗೆ 5 ರನ್ನಿನಿಂದ ಭಾರತ ಗೆದ್ದಿತು, ಆ ಮಾತು ಬೇರೆ. ಆದರೆ ಈಗ ಬಾಂಗ್ಲಾದೇಶದವರ ಗೋಳಾಟ ನೋಡೋಕಾಗ್ತಿಲ್ಲ.
ಅಂದಹಾಗೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮತ್ತ ಬಂದ ಚೆಂಡನ್ನು ಹೊಡೆದ ನಂತರ ಅದು ನೋಬಾಲ್ ಎಂಬ ಸಿಗ್ನಲ್ ಕೊಟ್ಟರು. ಅಂಪೈರ್ ಎಸ್ ಎಂದರು. ಬಾಲ್ ತಲೆಯ ಮೇಲೆ ಹೋಗಿತ್ತು. ವಿರಾಟ್ ಕೊಹ್ಲಿ ಹೈಟ್‍ನ್ನೂ ಮೀರಿ ತಲೆ ಮೇಲೆ ಹಾರಿತ್ತು ಬಾಲ್. ಅದನ್ನು ಅಂಪೈರ್ ಹೇಳಿಯೆ ನೋಬಾಲ್ ಕೊಟ್ಟರು. ನಂತರದ ಎಸೆತದಲ್ಲಿ ಡಿಕೆ ಫ್ರೀಹಿಟ್ಟಿನಲ್ಲೂ ಹೊಡೆಯೋಕೆ ಆಗಲಿಲ್ಲ. ಹೊಡೆದಿದ್ದು ಒಂದು ರನ್. ಚೀಟಿಂಗ್ ಎಲ್ಲಿದೆ?
ಇನ್ನೊಂದು ಬಾಂಗ್ಲಾದೇಶ ಬ್ಯಾಟಿಂಗ್ ಮಾಡುತ್ತಿದ್ದಾಗ ಕಡೆಯ ಓವರಿನಲ್ಲಿ ವೈಡ್‍ಗೆ ಬಾಂಗ್ಲಾಬ್ಯಾಟರ್‍ಗಳು ಆಗ್ರಹಿಸಿದರು. ಆದರೆ ಅಂಪೈರ್ ಓಕೆ ಎನ್ನಲಿಲ್ಲ. ರೀಪ್ಲೇನಲ್ಲಿ ನೋಡಿದಾಗ ಬಾಲ್, ಸೇಫ್ ಝೋನ್ ಒಳಗೇ ಪಾಸ್ ಆಗಿರುವುದು ಗೊತ್ತಾಗುತ್ತಿತ್ತು. ಚೀಟಿಂಗ್ ಎಲ್ಲಿದೆ?

ಅಂದಹಾಗೆ ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಲಿಟನ್ ದಾಸ್ ಔಟ್ ಆಗಿದ್ದರು. ಡಿಕೆ ಕ್ಯಾಚ್ ಹಿಡಿದಿದ್ದರು. ಥರ್ಡ್ ಅಂಪೈರ್‍ಗೆ ಹೋದಾಗ ಬಾಲ್ ಮೊದಲೇ ನೆಲಕ್ಕೆ ತಾಗಿದ್ದು ಗೊತ್ತಾಗಿತ್ತು. ಆಗ ರೋಹಿತ್, ಕೊಹ್ಲಿ ಇಬ್ಬರೂ ಅಂಪೈರ್ ಜೊತೆ ಮಾತನಾಡಿ ಡೌಟ್ ಕ್ಲಿಯರ್ ಮಾಡಿಕೊಂಡರೇ ಹೊರತು ಡ್ರಾಮಾ ಸೃಷ್ಟಿಸಲಿಲ್ಲ. ಮಳೆ ಬಂದು ಮತ್ತೆ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮೊದಲೇ ಪಿಚ್ ಮೇಲಿನ ಕವರ್ ತೆಗೆದರು. ಅಂಪೈರ್ ಕೂಡಾ ಬುಕ್ ಆಗಿದ್ದರು ಎನ್ನುವ ವಾದವೂ ಕೇಳಿಬಂದಿದೆ. ಅವರಿಗೆ ಕ್ರಿಕೆಟ್ ನೀತಿ ನಿಯಮಗಳು ಗೊತ್ತಿಲ್ಲ ಎಂದಷ್ಟೇ ಹೇಳಬಹುದು.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ತಂಡ ಸೋತ ತಕ್ಷಣ, ಅದರಲ್ಲೂ ಭಾರತದ ವಿರುದ್ಧ ಸೋತ ತಕ್ಷಣ ಫಿಕ್ಸಿಂಗ್ ಮ್ಯಾಚ್ ಎಂದು ಕರೆಯುವುದು, ಭಾರತ ಅಂಪೈರ್‍ಗಳನ್ನು ಬುಕ್ ಮಾಡಿಕೊಂಡು ಆಡುತ್ತಿದೆ ಎನ್ನೋದು, ಮೋಸದಾಟ ಎಂದು ಹುಯಿಲೆಬ್ಬಿಸುವುದು ರೋಗವಾಗಿ ಬಿಟ್ಟಿದೆ. ಕಾಯಿಲೆಗೆ ಮದ್ದಿದೆ. ಕಾಯಿಲೆಯಾಗಿದೆ ಎಂಬಂತೆ ನಟಿಸುವುದಕ್ಕೆ ಮದ್ದಿಲ್ಲ.

ಅದೆಲ್ಲವನ್ನೂ ಪಕ್ಕಕ್ಕಿಟ್ಟು ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಓಟ ಅಮೋಘವಾಗಿದೆ. ವಿರಾಟ್ ಕೊಹ್ಲಿ ವಿಶ್ವಕಪ್‍ನಲ್ಲಿಯೇ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ನಂ.1. ಮಹೇಲ ಜಯವರ್ಧನೆಯವರನ್ನು ಹಿಂದಿಕ್ಕಿದ್ದಾರೆ. ಈ ವಿಶ್ವಕಪ್‍ನಲ್ಲಿಯೂ ಅಷ್ಟೆ, ಅಧಿಕ ರನ್ ಗಳಿಸಿದವರಲ್ಲಿ ಕೊಹ್ಲಿಯೇ ನಂ.1. ಅತಿ ಹೆಚ್ಚು ಬೌಂಡರಿ, ಸಿಕ್ಸರ್ ಎಲ್ಲವೂ ಕೊಹ್ಲಿ ಹೆಸರಲ್ಲೇ ಇದೆ. ಪಂದ್ಯಶ್ರೇಷ್ಠ ಪುರಸ್ಕಾರಗಳೂ ಕೂಡಾ. ಭಾರತ ಆಡಿರುವುದು 4 ಮ್ಯಾಚ್. ಆ 4ರಲ್ಲಿ ಕೊಹ್ಲಿಯದ್ದೇ 3 ಹಾಫ್ ಸೆಂಚುರಿ. ಆ ಮೂರೂ ಪಂದ್ಯಗಳನ್ನು ಭಾರತ ಗೆದ್ದಿದೆ. ಕೊಹ್ಲಿಯನ್ನು ಬಿಟ್ಟರೆ ಅದ್ಬುತ ಫಾರ್ಮಿನಲ್ಲಿರೋ ಸೂರ್ಯ 2 ಹಾಫ್ ಸೆಂಚುರಿ ಸಿಡಿಸಿದ್ದಾರೆ. ರೋಹಿತ್,ರಾಹುಲ್, ಹಾರ್ದಿಕ್ ಕೂಡಾ ತಲಾ ಒಂದು ಹಾಫ್ ಸೆಂಚುರಿ ದಾಖಲಿಸಿದ್ದಾರೆ. ಬೌಲಿಂಗ್‍ವೊಂದು ಮಾತ್ರ ಹಳಿಗೆ ಬರುತ್ತಲೇ ಇಲ್ಲ. ಒಮ್ಮೊಮ್ಮೆ ಅಮೋಘ ಅದ್ಭುತ ಎನ್ನುವಂತೆ.. ಇನ್ನೊಮ್ಮೆ ಇವರೇನಾ ಈಗ ಸ್ವಲ್ಪ ಹೊತ್ತಿಗೆ ಬೌಲ್ ಮಾಡಿದ್ದು ಎಂದು ಡೌಟ್ ಬರುವಂತೆ ಬೌಲ್ ಮಾಡುತ್ತಿದ್ದಾರೆ. ಇನ್ನೊಂದು ಲೀಗ್ ಮ್ಯಾಚ್ ಇದೆ. ಗೆದ್ದರೆ ನಂ.1 ಪಟ್ಟ ಹೊತ್ತುಕೊಂಡು ಸೆಮಿಫೈನಲ್ ತಲುಪಲಿದೆ ಭಾರತ.



