ಆಟ ರಣರೋಚಕವಾಗಿತ್ತು. ಕಟ್ಟ ಕಡೆಯ ಎಸೆತದವರೆಗೂ ಗೆಲ್ಲುತ್ತೇವೆ ಎಂಬ ಭರವಸೆ ಇರಲಿಲ್ಲ. ಅದಕ್ಕೆ ಇತಿಹಾಸ ಕಾರಣ. ಸೋಲೋಕೆ ಸಾಧ್ಯವೇ ಇಲ್ಲ ಎನ್ನುವ ಭಾವನೆಯಿತ್ತು. ಏಕೆಂದರೆ ಕ್ರೀಸಿನಲ್ಲಿ ಕೊಹ್ಲಿ ಎಂಬ ಸಿಡಿಲಿತ್ತು. ಅದರಲ್ಲೂ 19ನೇ ಓವರ್‍ನ ಕಡೆಯಲ್ಲಿ ಡಬ್ಕುಡಬಲ್ ತುದಾಂಡಲ್ ಅಂತ ಎರಡು ಸಿಕ್ಸ್ ಹೊಡೆದ ಮೇಲೆ ಸೋಲುವ ಕಲ್ಪನೆ ಮಾಡಿಕೊಳ್ಳುವಂತೆಯೂ ಇರಲಿಲ್ಲ. ಇನ್ನು ಕಡೆಯ ಓವರ್ ಆಟ.. 20ನೇ ಓವರ್.
8 ಬಾಲ್ : 28 ರನ್. ಸಿಕ್ಸ್
7 ಬಾಲ್ : 22 ರನ್. ಸಿಕ್ಸ್
6 ಬಾಲ್ : 16 ರನ್. ಹಾರ್ದಿಕ್ ಔಟ್
5 ಬಾಲ್ : 16 ರನ್. ಸಿಂಗಲ್
4 ಬಾಲ್ : 15 ರನ್. 2 ರನ್
3 ಬಾಲ್ :13 ರನ್. ಸಿಕ್ಸ್. ನೋಬಾಲ್.
3 ಬಾಲ್ : 6 ರನ್. ವೈಡ್ ಸಿಂಗಲ್
3 ಬಾಲ್ : 5 ರನ್. ಫ್ರೀ ಹಿಟ್ನಲ್ಲಿ 3 ಬೈಸ್
2 ಬಾಲ್: ಎರಡು ರನ್. ಕಾರ್ತಿಕ್ ಔಟ್
1 ಬಾಲ್ : 2 ರನ್. ವೈಡ್ ಸಿಂಗಲ್, ಸ್ಕೋರ್ ಸಮಸಮ
1 ಬಾಲ್ : 1 ರನ್. ಅಶ್ವಿನ್ 1 ರನ್ . ಭಾರತಕ್ಕೆ ಜಯ..
ಹೀಗೆ ಕಟ್ಟಕಡೆಯ 8 ಎಸೆತಗಳಲ್ಲಿ ನಡೆದ ಟ್ವಿಸ್ಟ್ & ಟರ್ನ್ ರೋಮಾಂಚಕವಾಗಿತ್ತು. ಕ್ಯಾಪ್ಟನ್ ರೋಹಿತ್ ಶರ್ಮ ಫೀಲ್ಡಿಗೆ ಬಂದವರು ಕೊಹ್ಲಿಯನ್ನು ಹೆಗಲ ಮೇಲೆ ಹೊತ್ತಿದ್ದಕ್ಕೂ ಕಾರಣವಿತ್ತು. ದಿನೇಶ್ ಕಾರ್ತಿಕ್, ರಾಹುಲ್, ಪಾಂಡ್ಯ, ಅರ್ಶ್‍ದೀಪ್ ಸಿಂಗ್, ಭುವಿ ಎಲ್ಲರೂ ಭಾವುಕರಾಗಿದ್ದರು. ಒಬ್ಬೊಬ್ಬರಿಗೂ ಒಂದೊಂದು ಕಾರಣವಿತ್ತು. ನೋ ಡೌಟ್. ಜಯದ ರೂವಾರಿ ವಿರಾಟ್ ಕೊಹ್ಲಿಯೇ. 53 ಎಸೆತಗಳಲ್ಲಿ 83 ರನ್. ಅದೂ 31 ರನ್ನಿಗೆ 4 ವಿಕೆಟ್ ಕಳೆದುಕೊಂಡಾಗ ಆಡಿದ ಅದ್ಭುತ ಇನ್ನಿಂಗ್ಸ್. ಗೆಲುವಿಗೆ ಕಾರಣ. ಆದರೆ ಟೀಂ ಗೆಲ್ಲೋಕೆ ಪ್ರತಿಯೊಬ್ಬರೂ ಕೊಡುಗೆ ಕೊಟ್ಟಿರುತ್ತಾರೆ. ಹಾಗೆಯೇ.. ಈ ಮ್ಯಾಚಿನಲ್ಲಿ ಕೊಹ್ಲಿಯನ್ನು ಹೊರತುಪಡಿಸಿ ಚೆನ್ನಾಗಿ ಆಡಿದವರು ಯಾರ್ ಯಾರು?

ಅರ್ಶದೀಪ್ ಸಿಂಗ್ : ಏಷ್ಯಾ ಕಪ್‍ನಲ್ಲಿ ಕ್ಯಾಚ್ ಬಿಟ್ಟು ಟೀಕೆಗೆ ಗುರಿಯಾಗಿದ್ದ ಅರ್ಶದೀದ್ ಆರಂಭದಲ್ಲಿಯೇ ಬೆಂಕಿಯುಂಡೆಗಳಂತ ಚೆಂಡುಗಳನ್ನೆಸೆದರು. 4 ಓವರ್. 3 ವಿಕೆಟ್. ಬಾಬರ್ ಅಜಂ, ಮಹಮ್ಮದ್ ರಿಜ್ವಾನ್ ಮತ್ತು ಆಸಿಫ್ ಅಲಿ ವಿಕೆಟ್. ಪವರ್ ಪ್ಲೇನಲ್ಲಿ ಪಾಕ್ ಬ್ಯಾಟರ್‍ಗಳನ್ನು ಕಟ್ಟಿ ಹಾಕಿದ್ದೇ ಅರ್ಶದೀಪ್.
ಮಹಮ್ಮದ್ ಶಮಿ : ಬೂಮ್ರಾ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ನೇತೃತ್ವ ವಹಿಸಿದ್ದ ಶಮಿ ಪಡೆದಿದ್ದು ಒಂದು ವಿಕೆಟ್. ಅದು ಅರ್ಧಶತಕ ಗಳಿಸಿ ಅಪಾಯಕಾರಿಯಾಗಿದ್ದ ಇಫ್ತಿಕಾರ್ ಅಹ್ಮದ್‍ರದ್ದು. 4 ಓವರುಗಳಲ್ಲಿ ಬಿಟ್ಟು ಕೊಟ್ಟಿದ್ದು 25 ರನ್.
ಭುವನೇಶ್ವರ್ ಕುಮಾರ್ : ವಿಶ್ವಕಪ್ ಟೂರ್ನಿ ಆರಂಭಕ್ಕೆ ಲಯದ ಸಮಸ್ಯೆ ಎದುರಿಸಿದ್ದ ಭುವಿ ಪಾಕ್ ವಿರುದ್ಧ ಕರಾರುವಾಕ್ ಬೌಲಿಂಗ್ ಮಾಡಿ ಸಮರ್ಥಿಸಿಕೊಂಡರು. 4 ಓವರ್‍ಗಳಲ್ಲಿ 22 ರನ್ ನೀಡಿ 1 ವಿಕೆಟ್ ಪಡೆದರು.
ರವಿಚಂದ್ರನ್ ಅಶ್ವಿನ್ : ಲೆಕ್ಕಾಚಾರದ ಬೌಲಿಂಗ್‍ಗೆ ಹೆಸರುವಾಸಿಯಾದ ಅಶ್ವಿನ್ 3 ಓವರಲ್ಲಿ ಕೊಟ್ಟಿದ್ದು 23 ರನ್. ವಿಕೆಟ್ ಬೀಳದೇ ಹೋದರೂ ಸ್ಪಿನ್ನರುಗಳು ದುಬಾರಿಯಾಗುತ್ತಿದ್ದ ಪಿಚ್‍ನಲ್ಲಿ ಅನುಭವವನ್ನೆಲ್ಲ ಧಾರೆಯೆರೆದರು. ಅನುಭವ ಬ್ಯಾಟಿಂಗ್‍ನಲ್ಲಿ ಕೂಡಾ ಉಪಯೋಗಕ್ಕೆ ಬಂತು. ಚೇಸಿಂಗ್‍ನಲ್ಲಿ 6ನೇ ಎಸೆತವನ್ನು ವೈಡ್ ಹಾಕಿದಾಗ ಅದನ್ನು ಆಡದೆಯೇ ಬಿಟ್ಟರು ಅಶ್ವಿನ್. ಅನುಭವ ಮತ್ತು ತಾಳ್ಮೆ ಕಲಿಸುವ ಚಾಕಚಕ್ಯತೆ ಅದು. ಕಡೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ಆತುರಕ್ಕೆ ಬೀಳದೆ ಸಿಂಗಲ್ ಓಡುವುದಕ್ಕೆ ಅನುಕೂಲವಾಗುವ ನೋ ಮ್ಯಾನ್ ಲ್ಯಾಂಡ್‍ಗೆ ಎತ್ತಿ ಹೊಡೆದರು. ತಾಳ್ಮೆ ಮತ್ತು ಅನುಭವ ಪಂದ್ಯವನ್ನು ಗೆಲ್ಲಿಸಿಕೊಟ್ಟಿತು.

ಫೇಲ್ ಆದವರು : ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ವಿಫಲರಾಗಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಮಿಂಚುವ ಭರವಸೆಯಂತೂ ಇದೆ.



