ಒಂದರ ಹಿಂದೊಂದು ಎರಡು ಸರಣಿ ಗೆದ್ದಿದೆ. ಆಸ್ಟ್ರೇಲಿಯ ವಿರುದ್ಧ ಒಂದು, ದ.ಆಫ್ರಿಕಾ ವಿರುದ್ಧ ಮತ್ತೊಂದು. ಎರಡೂ ಸರಣಿಗಳಲ್ಲಿ ಸೋತಿದ್ದು ಒಂದು ಪಂದ್ಯದಲ್ಲಿ ಮಾತ್ರ. ರೋಹಿತ್ ಶರ್ಮಾಗೆ ಇದು 7ನೇ ಸರಣಿ ಗೆಲುವು. ಏಷ್ಯಾ ಕಪ್ ಸೋಲನ್ನು ಬಿಟ್ಟರೆ ಮಿಕ್ಕಿದ್ದೆಲ್ಲ ಗೆಲುವಿನ ದಾರಿಯೇ. ಸರಣಿಯಲ್ಲಿ ಗೆಲುವಿನ ಮಧ್ಯೆಯೂ ಒಂದಿಷ್ಟು ಟೆನ್ಷನ್ ಇವೆ. ಸಮಾಧಾನಕರ ಅಂಶಗಳೂ ಇವೆ. ವಿಶ್ವಕಪ್ ಹತ್ತಿರದಲ್ಲೇ ಇರುವಾಗ ಸಮಾಧಾನಕ್ಕಿಂತ ಟೆನ್ಷನ್ನುಗಳ ಬಗ್ಗೆ ಗಮನ ಹರಿಸೋದು ಒಳ್ಳೆಯದು.
ಸೂರ್ಯ ಕುಮಾರ್ ಯಾದವ್ ಅದ್ಭುತ ಆಟ. ಈ ಫಾರ್ಮ್ ವಿಶ್ವಕಪ್‍ಗೂ ಮುಂದುವರೆಯಲಿ. ವಿರಾಟ್ ಕೊಹ್ಲಿ ಒಳ್ಳೆಯ ಫಾರ್ಮ್‍ನಲ್ಲಿದ್ಧಾರೆ. ಆದರೆ ಸ್ವತಃ ನಾಯಕ ಮತ್ತು ಉಪನಾಯಕರಿಂದ ನಿರೀಕ್ಷಿತ ಆಟ ಮೂಡಿ ಬರುತ್ತಿಲ್ಲ. ಒಂದು ಪಂದ್ಯದಲ್ಲಿ ಅಬ್ಬರಿಸುವ ರಾಹುಲ್ ಮತ್ತು ರೋಹಿತ್, ಮರು ಪಂದ್ಯದಲ್ಲಿ ಅವತ್ತು ಆಡಿದ್ದು ಇವರೇನಾ ಎಂದು ಅನುಮಾನ ಮೂಡುವಂತೆ ಆಡುತ್ತಿದ್ದಾರೆ.

ದಿನೇಶ್ ಕಾರ್ತಿಕ್ ಎಂಬ ನಡುವಯಸ್ಸಿನ ಯುವಕನ ಆಟ ಪ್ರೇಕ್ಷಕರಿಗೆ ರೋಮಾಂಚನ ಹುಟ್ಟಿಸಿರುವುದಂತೂ ಸತ್ಯ. ಹಾರ್ದಿಕ್ ಪಾಂಡ್ಯ ಆಡುತ್ತಿದ್ದರೂ ಸರಣಿಯ ಮಧ್ಯೆ ವಿಶ್ವಕಪ್ ಹತ್ತಿರವಿರುವಾಗ ವೈಯಕ್ತಿಕ ಕಾರಣಗಳಿಗಾಗಿ ರೆಸ್ಟ್ ಪಡೆಯುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಇನ್ನು ಟೆನ್ಷನ್ನಿನ ವಿಚಾರಗಳು ಸಾಕಷ್ಟಿವೆ. ಜಸ್ ಪ್ರೀತ್ ಬೂಮ್ರಾ ಇಲ್ಲ. ಕಳೆದ ವಿಶ್ವಕಪ್‍ನಲ್ಲಿ ಇದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಆದರೆ ಈ ಬಾರಿ ನಿರೀಕ್ಷೆಗಳೂ ಹೆಚ್ಚಿದ್ದವು.


ಶಮಿಯ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಾರಾದರೂ ಶಮಿಯ 20-20 ಇತಿಹಾಸ ಅವರ ಪರವಾಗಿಲ್ಲ ಎನ್ನುವುದಂತೂ ಸತ್ಯ. ಅರ್ಷ್‍ದೀಪ್, ಹರ್ಷಲ್, ದೀಪಕ್ ಚಹರ್ ಭರವಸೆ ಹುಟ್ಟಿಸುತ್ತಿರುವುದು ನಿಜವಾದರೂ ಕನ್ಸಿಸ್ಟೆನ್ಸಿ ಬರಲು ಇನ್ನೂ ಪಳಗಬೇಕು. ಟೀಮಿನಿಂದ ಹೊರಬಿದ್ದು ಮತ್ತೆ ಒಳಬಂದು ಮ್ಯಾಜಿಕ್ ಮಾಡಿದ್ದ ಯಜುವೇಂದ್ರ ಚಹಲ್ ಮತ್ತೆ ಹೊಡೆಸಿಕೊಳ್ಳೋಕೆ ಸೀಮಿತವಾಗಿದ್ದಾರೆ. ಅಕ್ಷರ್ ಪಟೇಲ್ ಅವರನ್ನೇ ನಂಬಬೇಕಾ ಎಂದು ಅಯ್ಕೆ ಮಂಡಳಿ ಕನ್ ಫ್ಯೂಸ್ ಆದರೆ ಅದು ಅವರ ತಪ್ಪಲ್ಲ.
ತಂಡಕ್ಕೆ ಶಾಪವಾಗುತ್ತಿರೋದು ಸ್ಲಾಗ್ ಓವರ್ಸ್. ಆ ಹಂತದಲ್ಲಿ ತಂಡದ ಯಾವೊಬ್ಬ ಆಟಗಾರನೂ ಕಾನ್ಫಿಡೆನ್ಸ್ ಮೂಡಿಸುತ್ತಿಲ್ಲ. ಕಡೆಯ 5 ಓವರುಗಳಲ್ಲಿ ಮಿನಿಮಮ್ 60 ಬಿಟ್ಟು ಕೊಡುತ್ತಿರೋದು ರಾಹುಲ್ ದ್ರಾವಿಡ್ ಟೆನ್ಷನ್ ಹೆಚ್ಚಿಸಿರಲೇಬೇಕು. ಈ ಎರಡು ಸರಣಿಯ ಪಂದ್ಯಗಳಲ್ಲಿ ಭಾರತಕ್ಕೆ ಒಂದೇ ಒಂದು ಬಾರಿಯೂ ಎದುರಾಳಿಯನ್ನು ಆಲೌಟ್ ಮಾಡಲು ಆಗಲಿಲ್ಲ. 9ಕ್ಕೆ 5 ವಿಕೆಟ್ ಹೋದಾಗಲೂ.. ತಂಡದ ಸ್ಕೋರ್ 230ಕ್ಕೂ ಹೆಚ್ಚು ಇದ್ದಾಗಲೂ.. ಇವೆಲ್ಲದರ ನಡುವೆ ವಿಶ್ವಕಪ್‍ಗೆ ರೆಡಿಯಾಗಲೇಬೇಕು.



