ಇದು ಭಾರತದ ವಿಶ್ವಕಪ್ ಕನಸಿಗೆ 2ನೇ ಶಾಕ್. ಮೊದಲಿಗೆ ರವೀಂದ್ರ ಜಡೇಜಾ ಮತ್ತೀಗ ಜಸ್ ಪ್ರೀತ್ ಬೂಮ್ರಾ. ಸೀನಿಯರ್ ಬೌಲರ್ ಭುವನೇಶ್ವರ್ ವೈಫಲ್ಯ ಅನುಭವಿಸುತ್ತಿದ್ದಾರೆ. ಶಮಿ ಕೂಡಾ ಗಾಯಾಳು. ಜೊತೆಗೆ 20-ಟ್ವೆಂಟಿಯಲ್ಲಿ ಶಮಿ ಸಾಧನೆ ಹೇಳಿಕೊಳ್ಳುವಂತಿಲ್ಲ. ಹೀಗಿರುವಾಗಲೇ ಬೂಮ್ರಾ ಇಂಜುರಿ. ಮತ್ತೆ ಬೆನ್ನುನೋವು.
ಈ ವರ್ಷದಲ್ಲೇ ಬೂಮ್ರಾ ಈ ರೀತಿ ಗಾಯಾಳುವಾಗುತ್ತಿರುವುದು ಮತ್ತು ವಿಶ್ರಾಂತಿ ಹೆಸರಲ್ಲಿ ಹೊರಬಿದ್ದಿರುವುದು ಸೇರಿದರೆ ಮೈದಾನದಲ್ಲಿ ಆಡಿದ್ದಕ್ಕಿಂತ ಮನೆಯಲ್ಲಿ ಕುಳಿತಿರುವುದೇ ಹೆಚ್ಚು. ಈಗ ವೈದ್ಯರು ಇನ್ನೊಂದಾರು ತಿಂಗಳು ಸುಮ್ಮನೆ ರೆಸ್ಟ್ ಮಾಡಿ ಎಂದಿದ್ದಾರಂತೆ. ಯಾವುದೇ ಆಪರೇಷನ್ ಬೇಕಿಲ್ಲ. ಬೇಕಿರೋದು ರೆಸ್ಟ್ ಮಾತ್ರ ಅನ್ನೋದು ವೈದ್ಯರ ಮಾತು. ಹೀಗಾಗಿ ಬೂಮ್ರಾ ತಂಡದಿಂದಲೇ ಔಟ್. ವಿಶ್ವಕಪ್ ಕನಸಿಂದಲೂ ಔಟ್.
ಕೆಲವು ಸೀನಿಯರ್ ಆಟಗಾರರ ಪ್ರಕಾರ ಬೂಮ್ರಾ ಕಂಪ್ಲೀಟ್ ರಿಕವರ್ ಆಗದೇ ಆಸ್ಟ್ರೇಲಿಯಾ ವಿರುದ್ಧ ಎರಡು ಮ್ಯಾಚ್ ಆಡಿದ್ದೇ ಪ್ರಾಬ್ಲಂ. ಆ ಮ್ಯಾಚುಗಳಲ್ಲಿ 8 ಓವರಿನ ಪಂದ್ಯದಲ್ಲಿ ಬೂಮ್ರಾ ಮ್ಯಾಜಿಕ್ ಗಮನ ಸೆಳೆದಿತ್ತು. ಯಾರ್ಕರ್‍ಗಳು ಸಖತ್ತಾಗಿದ್ದವು. ವಿಕೆಟ್ಟೂ ಸಿಕ್ಕಿತ್ತು. ಆದರೆ ನಂತರದ ಪಂದ್ಯದಲ್ಲಿ 4 ಓವರಲ್ಲಿ 50 ರನ್ ಕೊಟ್ಟಿದ್ದರು. ತಮ್ಮ ಕೆರಿಯರಿನಲ್ಲೇ ಮೊದಲ ಬಾರಿಗೆ ಅಷ್ಟು ದುಬಾರಿಯಾಗಿದ್ದರು ಬೂಮ್ರಾ. ಈಗ ಟೀಮಿನಿಂದಲೇ ಹೊರನಡೆದಿದ್ದಾರೆ.
ಈ ವರ್ಷದ ಲೆಕ್ಕವನ್ನೇ ತೆಗೆದುಕೊಂಡರೆ ಮೊದಲು ಬೂಮ್ರಾಗೆ ರೆಸ್ಟ್ ಕೊಟ್ಟಿದ್ದು 2022ರ ಜುಲೈನಲ್ಲಿ. ವೆಸ್ಟ್ ಇಂಡೀಸ್ ಸರಣಿಗೆ ಹೋಗಲಿಲ್ಲ. ವಿಶ್ರಾಂತಿಯ ಹೆಸರಲ್ಲಿ ಇಂಡಿಯಾದಲ್ಲೇ ಉಳಿದರು.
ನಂತರ ಆಗಸ್ಟ್‍ನಲ್ಲಿ ಆಟ ಆಡದೇ ಇದ್ದರೂ ರೆಸ್ಟಿನಲ್ಲಿದ್ದರೂ ಇಂಜುರಿಯಾಗಿತ್ತು. ಏಷ್ಯಾ ಕಪ್ ತಪ್ಪಿಸಿಕೊಳ್ಳಬೇಕಾಯ್ತು. ಏಷ್ಯಾ ಕಪ್ ಕೂಡಾ ಮರೆಯಲಾಗದ ಸೋಲಾಗಿ ಉಳಿಯಿತು.
ನಂತರ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಂದರು. ವಿಶ್ವಕಪ್ ತಂಡಕ್ಕೂ ಸೆಲೆಕ್ಟ್ ಆದರು. ಆಸ್ಟ್ರೇಲಿಲಯಾ ವಿರುದ್ಧ 2 ಮ್ಯಾಚ್ ಆಡಿ, ದ.ಆಫ್ರಿಕಾ ವಿರುದ್ಧ ಮ್ಯಾಚ್ ಆಡುವ ಹೊತ್ತಿಗೆ ಮತ್ತೆ ಬೆನ್ನುನೋವಿಗೆ ತುತ್ತಾಗಿದ್ದಾರೆ. ವಿಶ್ವಕಪ್ ಕನಸಿಗೂ ಏಟು ಬಿದ್ದಿದೆ.
ಬಹುಶಃ ತಂಡದಲ್ಲಿ ಎನ್ನುವುದಕ್ಕಿಂತ ಬಿಸಿಸಿಐ ಮ್ಯಾನೇಜ್ ಮೆಂಟ್‍ಕೊರತೆ ಎದ್ದು ಕಾಣುತ್ತಿದೆ. ಜಡೇಜಾ ಮತ್ತು ಬೂಮ್ರಾ ಅವರ ಇಂಜುರಿಯಲ್ಲಿ ಆಟಗಾರರ ನಿರ್ಲಕ್ಷ್ಯ ಎಷ್ಟು ಕೆಲಸ ಮಾಡಿದೆಯೋ.. ಬಿಸಿಸಿಐ ಎಲ್ಲ ಓಕೆ.. ಚಿಂತೆ ಯಾಕೆ ಎನ್ನುವ ಧೋರಣೆಯೂ ಕೆಲಸ ಮಾಡಿದೆ. ಸದ್ಯಕ್ಕೆ ಟೀಂ ಇಂಡಿಯಾ ಬೌಲಿಂಗ್ ಪಡೆಯನ್ನು ಯಾರು ಲೀಡ್ ಮಾಡಬೇಕು ಅನ್ನೋದು ರೋಹಿತ್ ಶರ್ಮಾ – ರಾಹುಲ್ ದ್ರಾವಿಡ್ ಮುಂದಿರೋ ಸವಾಲು.





