ಅಪ್ಪ ಕ್ರಿಕೆಟ್ ದೇವರು. ಮಗನೂ ಕ್ರಿಕೆಟ್ ಆಟಗಾರ. ಹೀಗಾದರೆ ಏನಾಗಬಹುದು ಎಂಬುದು ಊಹಿಸಲು ಅಸಾಧ್ಯವೇನಲ್ಲ. ಅಪರಿಚಿತರ ಮಗನಾಗಿ ಸಾಧನೆ ಮಾಡುವುದು ಬೇರೆಯದೇ ಸವಾಲು. ಅಲ್ಲಿ ನಿರೀಕ್ಷೆಗಳಿರುವುದಿಲ್ಲ. ಖುದ್ದು ತೆಂಡೂಲ್ಕರ್ ಕೂಡಾ ಗೆದ್ದಿದ್ದು ಹಾಗೆಯೇ. ಆಡಿದ್ದೇ ಆಟ. ಸೃಷ್ಟಿಯಾಗಿದ್ದೆಲ್ಲ ದಾಖಲೆ. ಆದರೆ ಸನ್ ಆಫ್ ಸಚಿನ್ ತೆಂಡೂಲ್ಕರ್ ಎಂಬುದಿದೆಯಲ್ಲ.. ಅದನ್ನು ಮೆಟ್ಟಿ ನಿಲ್ಲುವುದು ಅಷ್ಟು ಸುಲಭವಲ್ಲ.

ಇಂತಹ ಅನುಭವ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್‍ಗಾಗಿದೆ. ಡಾ.ರಾಜ್ ಪುತ್ರ ಶಿವರಾಜಕುಮಾರ್ ಅವರಿಗೂ ಆಗಿದೆ. ರೋಹನ್ ಗವಾಸ್ಕರ್ (ಸುನಿಲ್ ಗವಾಸ್ಕರ್ ಪುತ್ರ) ಕೂಡಾ ಈ ಅನುಭವ ಎದುರಿಸಿದ್ದಾರೆ. ಶ್ರೀದೇವಿಯ ಮಗಳು ಜಾಹ್ನವಿ ಕಪೂರ್, ಕಮಲ್ ಹಾಸನ್ ಮಗಳು ಶೃತಿ ಹಾಸನ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಪುತ್ರ ಚರಣ್, ತಮಿಳು ನಟ ಸೂರ್ಯನ ತಮ್ಮ ಕಾರ್ತಿ, ಎನ್‍ಟಿಆರ್ ಮೊಮ್ಮಗ ಜ್ಯೂ.ಎನ್.ಟಿ.ಆರ್. ಚಿರಂಜೀವಿ ಪುತ್ರ ರಾಮ್‍ಚರಣ್, ಕೃಷ್ಣ ಅವರ ಮಹೇಶ್ ಬಾಬು, ದೇವರಾಜ್ ಮಗ ಪ್ರಜ್ವಲ್, ಅಂಬರೀಷ್ ಮಗ ಅಭಿಷೇಕ್.. ಹೀಗೆ ಒಬ್ಬಿಬ್ಬರಲ್ಲ. ಆರಂಭದಲ್ಲೇ ತಂದೆ/ತಾಯಿಯ ಶ್ರೇಷ್ಟತೆಯ ಮಟ್ಟಕ್ಕೆ ಹೋಲಿಸುವ ಅಭಿಮಾನಿಗಳು.. ಇವನಾ.. ಅಪ್ಪನ ಹೆಸರಲ್ಲಿ ಬಂದಿದ್ದಾನೆ ಬಿಡು.. ಎನ್ನುವ ಟೀಕೆಗಳನ್ನು ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ.
ಅದೆಲ್ಲವನ್ನೂ ಮೀರಿಸಿ ಅರ್ಜುನ್ ತೆಂಡೂಲ್ಕರ್ ಅಪ್ಪನ ಸಾಧನೆಯನ್ನೂ ಮೆಟ್ಟಿ ನಿಂತಿದ್ದಾರೆ. ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. 34 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ರಣಜಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಡಿಸೆಂಬರ್ 11, 1988ರಲ್ಲಿ ಗುಜರಾತ್ ವಿರುದ್ಧದ ಪ್ರಪ್ರಥಮ ರಣಜಿ ಪಂದ್ಯದಲ್ಲಿ 100 ರನ್ ಸಿಡಿಸಿದ್ದರು. ಅದೇ ಡಿಸೆಂಬರ್ 14 ರಂದು ಈಗ ರಾಜಸ್ಥಾನ್ ವಿರುದ್ಧದ ಪ್ರಥಮ ರಣಜಿ ಪಂದ್ಯದಲ್ಲಿ ಅರ್ಜುನ್ 120 ರನ್ ಸಿಡಿಸಿದ್ದಾರೆ. ಪ್ರಥಮ ಪಂದ್ಯದಲ್ಲೇ.
ಅರ್ಜುನ್ ತೆಂಡೂಲ್ಕರ್ 207 ಎಸೆತಗಳನ್ನೆದುರುಸಿ 120 ರನ್ ಸಿಡಿಸಿದ್ದಾರೆ. ಅಪ್ಪನಿಗಿಂತ ಹೆಚ್ಚು ರನ್. 16 ಬೌಂಡರಿ, 2 ಸಿಕ್ಸರ್‍ಗಳಿದ್ದ ಶತಕ. ಸೂರ್ಯ ಪ್ರಭುದೇಸಾಯಿ (212 ರನ್) ಜೊತೆ 310 ರನ್ ಜೊತೆಯಾಟ. ಅದೂ ದಾಖಲೆಯೇ. ನಾನು ಕ್ರೀಸಿಗೆ ಬಂದಾಗ ಪ್ರಭುದೇಸಾಯಿ 80 ರನ್ ಗಳಿಸಿದ್ದರು. ನಾನು ಅವರಿಗೆ ಸಪೋರ್ಟಿವ್ ಆಗಿ ಆಡುವ ಜವಾಬ್ದಾರಿ ಹೊತ್ತು ಆಡಿದೆ. ಆರಂಭದಲ್ಲಿ ಹೊಸ ಬಾಲ್. ಬೌಲರ್‍ಗಳಿಗೆ ಸಹಾಯವಾಗುತ್ತಿತ್ತು. ಒಂದು ಗಂಟೆಯ ನಂತರ ಬ್ಯಾಟ್ಸ್‍ಮನ್‍ಗಳಿಗೂ ಸಹಾಯವಾಗುವಂತೆ ಆಯಿತು. ಅದನ್ನು ಯೂಸ್ ಮಾಡಿಕೊಂಡು ರನ್ ಗಳಿಸಿದೆವು ಎಂದಿದ್ದಾರೆ ಅರ್ಜುನ್.

ಅಂದಹಾಗೆ ಅರ್ಜುನ್ ತೆಂಡೂಲ್ಕರ್ ಅಪ್ಪನಂತೆ ಬ್ಯಾಟ್ಸ್‍ಮನ್ ಅಲ್ಲ. ಬೌಲರ್. ಆಡೋಕೆ ಕ್ರೀಸಿಗೆ ಬಂದಿದ್ದು 7ನೇ ಬ್ಯಾಟ್ಸ್‍ಮನ್ ಆಗಿ. ಈ ಹಿಂದೆ ಅಂಡರ್ 14, ಅಂಡರ್ 16 ಹಾಗೂ ಅಂಡರ್ 19ನಲ್ಲಿ ತಂಡದಲ್ಲಿ ಕೂಡಾ ಆಡಿದ್ದವರೇ. ಅಂಡರ್ 19ನಲ್ಲಿ ಉತ್ತರ ಪ್ರದೇಶ ವಿರುದ್ಧ 91 ರನ್ ಹೊಡೆದಿದ್ದೇ ಅತ್ಯಧಿಕ ಸ್ಕೋರ್. ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ ಅರ್ಜುನ್ ಅವರಿಗೆ ಇದೇ ಮೊತ್ತ ಮೊದಲ ಶತಕ. ಮುಂಬೈ ಪರ ಆಡುತ್ತಿದ್ದರೂ ಅವಕಾಶ ಸಿಗದ ಕಾರಣಕ್ಕೆ ಅರ್ಜುನ್ ಗೋವಾಕ್ಕೆ ಶಿಫ್ಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ ಐಪಿಎಲ್‍ನಲ್ಲಿ ಕೂಡಾ ಇನ್ನೂ ಪಾದಾರ್ಪಣೆಯಾಗಿಲ್ಲ.
ರಣಜಿಯಲ್ಲಿಯೂ ಮುಂಬೈ ಹಾಗೂ ಐಪಿಎಲ್‍ನಲ್ಲಿಯೂ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಕಾರಣಕ್ಕೆ ಅರ್ಜುನ್ ನೆಪೋಟಿಸಂ ಆರೋಪ ಎದುರಿಸಿದ್ದರು. ನೆಪೋಟಿಸಂ ಎಂದರೆ ಬೇರೆ ಅರ್ಥವೇನಲ್ಲ. ಪ್ರತಿಭೆಯಿಲ್ಲದಿದ್ದರೂ ತಂದೆ ತಾಯಂದಿರ ಹೆಸರು, ಪ್ರಭಾವದಿಂದಾಗಿ ಅವಕಾಶ ಗಿಟ್ಟಿಸುವವರು ಎಂದರ್ಥ ಅಷ್ಟೆ. ನೆಪೋಟಿಸಂ ಹೆಸರಲ್ಲಿ ಟೀಕಿಸುತ್ತಿದ್ದ ಬಹುತೇಕರಿಗೆ ಅರ್ಜುನ್ ತೆಂಡೂಲ್ಕರ್ ಬ್ಯಾಟ್ಸ್‍ಮನ್ ಅಲ್ಲ. ಬೌಲರ್ ಎಂಬ ವಿಷಯವೂ ಗೊತ್ತಿರಲಿಲ್ಲ. ರಣಜಿಗೂ ಮೊದಲು ಏಕದಿನದಲ್ಲಿ ಬೌಲಿಂಗ್‍ನಲ್ಲಿಯೂ ಉತ್ತಮ ಪ್ರದರ್ಶನ ತೋರಿಸಿದ್ದ ಅರ್ಜುನ್, ರಣಜಿಯಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ಆದರೆ.. ಗೊತ್ತಿರಲಿ. ಆತ ಅರ್ಜುನ್ ತೆಂಡೂಲ್ಕರ್ ಅಷ್ಟೆ, ಸಚಿನ್ ತೆಂಡೂಲ್ಕರ್ ಅಲ್ಲ.

ಅಪ್ಪ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು ಎಂದು ಮಗ 15ನೇ ವಯಸ್ಸಿಗೆ ಕ್ರಿಕೆಟ್ ಆಡೋಕಾಗಲ್ಲ. ಅಪ್ಪ, 20 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಸೆಂಚುರಿ ಹೊಡೆದಿದ್ದಾರೆಂದು, ಮಗ 10 ವರ್ಷಕ್ಕೇ 100 ಸೆಂಚುರಿ ಹೊಡೆಯೋಕಾಗಲ್ಲ. ಬೌಲರ್ ಅಲ್ವಾ.. ಎಲ್ಲೀ.. ಬೂಮ್ರಾ, ಶಮಿ ತರಾ ಬೌಲ್ ಮಾಡ್ತಾರಾ ಅನ್ನೋ ಪ್ರಶ್ನೆ ಕೇಳಿದ್ರೆ ಎಲ್ಲಿಂದ ಉತ್ತರ ಕೊಡೋದು.
ಅಂದ ಹಾಗೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಮಕ್ಕಳೂ ಕ್ರಿಕೆಟ್‍ನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನೂ ರಾಜ್ಯ ಮಟ್ಟದ ತಂಡಕ್ಕೆ ಬಂದಿಲ್ಲ. ಅವರಿಗೂ ಕೂಡಾ ಅಪ್ಪಂದಿರ ಖ್ಯಾತಿ, ಸಾಧನೆ ತೋರಿಸಿ ತೋರಿಸಿ ಜನ ಗೋಳು ಹೊಯ್ಕೊಳ್ಳೋಕ್ಕೆ ಬಾಕಿಯಿದೆ.



