ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಫ್ಯಾನ್ಸ್ ಪ್ರಕಾರ ಹೇಳೋದಾದ್ರೆ ಈ ಪಂದ್ಯದಲ್ಲಿ ಇಡೀ ತಂಡದಲ್ಲಿ ಗೆಲುವಿಗೆ ಹೋರಾಟ ನಡೆಸಿದ್ದು ಸೂರ್ಯ ಕುಮಾರ್ ಯಾದವ್ ಮಾತ್ರ. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ತಲಾ ಒಂದೊಂದು ರನೌಟ್ ಅವಕಾಶ ಕೈಚೆಲ್ಲಿದರೆ, ಕ್ರಿಕೆಟ್ ಜಗತ್ತಿನ ಅದ್ಭುತ ಫೀಲ್ಡರುಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕೈಗೆ ಬಂದಿದ್ದ ಕ್ಯಾಚ್ ಕೈಚೆಲ್ಲಿದರು. ಪಾಕ್ ವಿರುದ್ಧದ ಪಂದ್ಯದಲ್ಲಿ ಅನುಭವವನ್ನು ಧಾರೆಯೆರೆದು ರೋಚಕ ಜಯಕ್ಕೆ ಕಾರಣರಾಗಿದ್ದ ಅಶ್ವಿನ್ 19ನೇ ಓವರಲ್ಲಿ ಎರಡು ಸಿಕ್ಸರ್ ಹೊಡೆಸಿಕೊಂಡು ಕೈಕೊಟ್ಟರು. ವಿಶ್ವಕಪ್‍ನಲ್ಲಿ ದಿನೇಶ್ ಕಾರ್ತಿಕ್ ವಂಡರ್ ಆಟದ ನಿರೀಕ್ಷೆಯಿದ್ದ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ರಾಹುಲ್, ರೋಹಿತ್ ಬ್ಯಾಟಿಂಗ್ ಮರೆತು ಹೋದವಂತೆ ಆಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಭಾರತಕ್ಕೆ ಒಂದು ಆಶಾಕಿರಣ ಗೋಚರಿಸಿದೆ. ಅದು 2011ರ ಏಕದಿನ ವಿಶ್ವಕಪ್ ಹಿಸ್ಟರಿ.
2011ರ ಏಕದಿನ ವಿಶ್ವಕಪ್‍ನಲ್ಲಿ ಭಾರತ-ದ.ಆಫ್ರಿಕಾ ನಡುವೆ ನಾಗ್ಪುರದಲ್ಲಿ ಪಂದ್ಯ ನಡೆದಿತ್ತು. ಸಚಿನ್ ತೆಂಡೂಲ್ಕರ್ ಮತ್ತು ಸೆಹ್ವಾಗ್ ಮೊದಲ ವಿಕೆಟ್‍ಗೆ ಭರ್ಜರಿ 142 ರನ್ ಜೊತೆಯಾಟ ನೀಡಿದ್ದರು. ಸಚಿನ್ ಶತಕ (111 ರನ್. 101 ಎಸೆತ), ಸೆಹ್ವಾಗ್ (73 ರನ್ 66 ಎಸೆತ), ಗಂಭೀರ್ (69 ರನ್, 75 ಎಸೆತ) ಅರ್ಧ ಶತಕ ಗಳಿಸಿದ್ದರೂ ಭಾರತ 296 ರನ್ನಿಗೆ ಆಲೌಟ್ ಆಗಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ದ.ಆಫ್ರಿಕಾ 300 ರನ್ ಗಳಿಸಿ ಗೆದ್ದು ಬೀಗಿತ್ತು. ಬೌಲರುಗಳೆಲ್ಲ ಕೈಕೊಟ್ಟಿದ್ದರು.
ಅದೇ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಇದ್ಯಲ್ಲ, ಅದು ಐರ್ಲೆಂಡ್‍ಗೆ ಶರಣಾಗಿತ್ತು. ಬೆಂಗಳೂರಿನಲ್ಲೇ ನಡೆದಿದ್ದ ಮ್ಯಾಚ್ ಅದು. ಇಂಗ್ಲೆಂಡ್‍ಗೆ ಕೆವಿನ್ ಪೀಟರ್ಸನ್, ಜೊನಾಥನ್ ಟ್ರಾಟ್, ಇಯಾನ್ ಬೆಲ್ ಭರ್ಜರಿ ಆಟದ ನೆರವಿನಿಂದ 327 ರನ್ ಗಳಿಸಿತ್ತು. ಐರ್ಲೆಂಡ್ ಎದುರು ಡಮ್ಮಿ ಟೀಂ ಎನಿಸಿಕೊಂಡಿದ್ದ ಐರ್ಲೆಂಡ್ 111ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆಗ ಬಂದ ಕೆವಿನ್ ಒಬ್ರಿಯಾನ್ 63 ಎಸೆತಗಳಲ್ಲಿ 113 ರನ್ ಚಚ್ಚಿದ್ದರು. ಹೀನಾಯವಾಗಿ ಸೋಲಲಿದೆ ಎಂದುಕೊಂಡಿದ್ದ ಐರ್ಲೆಂಡ್ ಇನ್ನೂ 4 ಎಸೆತಗಳಿರುವಂತೆಯೇ 329 ರನ್ ಗಳಿಸಿ ಗೆದ್ದಿತ್ತು.
ಅಂದಹಾಗೆ ಆ ವಿಶ್ವಕಪ್‍ನಲ್ಲಿ ಭಾರತ ಚಾಂಪಿಯನ್ ಆಗಿತ್ತು. ಆ ಇತಿಹಾಸವನ್ನು ನೆನಪಿಸಿಕೊಂಡು ಕೆಲವು ಆಸೆ ಕಣ್ಣಿನಿಂದ ನೋಡುತ್ತಿದ್ದಾರೆ. ಇತಿಹಾಸ ರಿಪೀಟ್ ಆಗುತ್ತಾ? ಎನ್ನುವ ಆಸೆಯಲ್ಲಿದ್ದಾರೆ. ಅಂದಹಾಗೆ ಈ ಟಿ-20 ವಿಶ್ವಕಪ್‍ನಲ್ಲಿ ಕೂಡಾ ಇದು ರಿಪೀಟ್ ಆಗಿದೆ. ದ.ಆಫ್ರಿಕಾ ವಿರುದ್ಧ ಭಾರತ ಸೋತಿದೆ. ಅತ್ತ ಇಂಗ್ಲೆಂಡ್ ಕೂಡಾ ಐರ್ಲೆಂಡ್ ವಿರುದ್ಧ ಸೋತಿದೆ. ಮೊದಲು ಬ್ಯಾಟ್ ಮಾಡಿದ್ದ ಐರ್ಲೆಂಡ್ 157 ರನ್ ಗಳಿಸಿತ್ತು. 158 ರನ್ ಬೇಟೆಗೆ ಹೊರಟ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲೇ ಇತ್ತು. 14.3 ಓವರುಗಳಲ್ಲಿ 105 ರನ್ ಗಳಿಸಿತ್ತು. ಮೊಯಿನ್ ಅಲಿ ಮತ್ತು ಲಿಯಾನ್ ಲಿವಿಂಗ್ ಸ್ಟೋನ್ ಕ್ರೀಸ್‍ನಲ್ಲಿದ್ದರು. ಸ್ಯಾಮ್ ಕರನ್ ಇನ್ನೂ ಕ್ರೀಸಿಗೆ ಇಳಿದಿರಲಿಲ್ಲ. ಹೊಡೆಯಬೇಕಿದ್ದುದು 53 ರನ್. ಕಷ್ಟವೇನೂ ಆಗಿರಲಿಲ್ಲ. ಆದರೆ ಮಳೆ ಬಂತು. ಮ್ಯಾಚ್ ಸ್ಟಾಪ್ ಆಯ್ತು. ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ 14.3 ಓವರಿಗೇ ಮ್ಯಾಚ್ ಎಂಡ್ ಆಯ್ತು. ಆಗ ಮ್ಯಾಚ್ ಗೆಲ್ಲಬೇಕಿದ್ದರೆ ಇಂಗ್ಲೆಂಡ್ 110 ರನ್ ಗಳಿಸಬೇಕಿತ್ತು. ಆದ್ದರಿಂದ 5 ರನ್ನಿಂದ ಪಂದ್ಯವನ್ನು ಕೈಚೆಲ್ಲಬೇಕಾಯ್ತು ಇಂಗ್ಲೆಂಡ್. ಅದು ಇಂಗ್ಲೆಂಡಿನ ದುರಾದೃಷ್ಟ. ಆದರೆ ಇದೇ ಭಾರತದ ಪಾಲಿಗೆ ಅದೃಷ್ಟವೂ ಆಗಿ ಭಾರತ ಈ ಬಾರಿ ವಿಶ್ವಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು.



