2023ರ ವಿಧಾನಸಭೆಗೆ ಕೌಂಟ್ಡೌನ್ ಶುರುವಾಗಿದೆ. ಗೆದ್ದಿರುವ ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ, ಚುನಾವಣೆ ತಂತ್ರದಲ್ಲಿ ಬ್ಯುಸಿಯಾಗಿದ್ದರೆ, ಸಿದ್ದರಾಮಯ್ಯನವರ ಕ್ಷೇತ್ರದ ಹುಡುಕಾಟ ಇನ್ನೂ ಮುಗಿದಿಲ್ಲ. ಬಾದಾಮಿಯೋ.. ವರುಣಾವೋ.. ಅಥವಾ ಕೋಲಾರವೋ ಎಂಬ ಬಗ್ಗೆ ಇನ್ನೂ ಜಿಜ್ಞಾಸೆ ಬಗೆಹರಿದಿಲ್ಲ. ಕೋಲಾರದಲ್ಲಿ ಒಂದಿಡೀ ದಿನ ಸುತ್ತು ಹಾಕಿದ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸೋಕೆ ಬರುತ್ತೇನೆ ಎಂದು ಹೇಳಿದರೂ, ಮರುದಿನವೇ ಇನ್ನೂ ಯಾವುದೂ ಫೈನಲ್ ಆಗಿಲ್ಲ ಅನ್ನೋ ಸಂದೇಶ ರವಾನಿಸಿಬಿಟ್ಟರು. ಇದರ ಮಧ್ಯೆ ಸಿದ್ದರಾಮಯ್ಯ ಆಪ್ತ ಸಂತೋಷ್ ಲಾಡ್ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರೂ ಚುನಾವಣೆಗೆ ನಿಲ್ಲಲೇಬಾರದು ಎಂದು ಹೇಳಿಕೆ ಕೊಟ್ಟರು. ಅವರು ಕ್ಷೇತ್ರಕ್ಕೆ ಸೀಮಿತರಾಗುವ ಬದಲು, ರಾಜ್ಯದಾದ್ಯಂತ ಸಂಚಾರ ಮಾಡಿ ಪಕ್ಷವನ್ನು ಗೆಲ್ಲಿಸಬೇಕೆಂಬ ಸಲಹೆ ಕೊಟ್ಟರು. ಇದನ್ನು ಸ್ವೀಕರಿಸಿದ್ದೇವೆ ಎಂದು ಹೇಳಿರೋ ಸಿದ್ದರಾಮಯ್ಯ ಮತ್ತೂ ಗೊಂದಲ ಹೆಚ್ಚಿಸಿದರು. ಇದರ ನಡುವೆ ಸಿದ್ದರಾಮಯ್ಯ ಪರಮಾಪ್ತ ಶಾಸಕ ಜಮೀರ್ ಅಹ್ಮದ್ ಬಾದಾಮಿ ಕ್ಷೇತ್ರದಲ್ಲಿ ರೌಂಡ್ ಹಾಕಿರೋದು ಕುತೂಹಲ ಸೃಷ್ಟಿಸಿದೆ.
2023ರ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ, ವರುಣಾ, ಬಾದಾಮಿ, 3 ಕ್ಷೇತ್ರಗಳ 3 ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಫರ್ಧಿಸುತ್ತಾರೆ ಎನ್ನಲಾಗುತ್ತಿದೆ. ಜೊತೆಯಲ್ಲೇ ಗುರುವಿನ ಕ್ಷೇತ್ರದಲ್ಲಿ ಶಿಷ್ಯ ಜಮೀರ್ ಮಿಂಚಿನ ಸಂಚಾರ ನಡಿಸಿರೋದು ಕುತೂಹಲಕಾರಿ.
ಸಿದ್ದರಾಮಯ್ಯ ಕೇತ್ರದಲ್ಲಿ ಜಮೀರ್ ಚಿಕ್ಕದಾಗಿ ಸರ್ವೆಯನ್ನೇ ನಡೆಸಿದ್ದಾರೆ. ಜನ ಪಕ್ಷಾತೀತವಾಗಿ ಸಿದ್ದರಾಮಯ್ಯ ಬರಬೇಕು ಅಂತಿದ್ದಾರೆ.. ನಾವೇ ಹೆಲಿಕಾಪ್ಟರ್ ಕೊಡಿಸ್ತೀವಿ ಎನ್ನುತ್ತಿದ್ದಾರೆ. ಜನರ ಒತ್ತಾಯದ ಮುಂದೆ ಏನು ಮಾಡೋಕಾಗಲ್ಲ.. ಜನರ ಅಭಿಮತವನ್ನು ಸಿದ್ದು ಮುಂದೆ ನಾನು ಹೇಳುತ್ತೇನೆ ಎಂದ್ದಿದ್ದಾರೆ. ಹೆಲಿಕಾಪ್ಟರ್ ಕೊಡಿಸುತ್ತೇವೆ ಎಂದು ಹೇಳಿರುವುದಕ್ಕೆ ಕಾರಣವೂ ಇದೆ. ಬಾದಾಮಿ, ಬೆಂಗಳೂರಿಗೆ ದೂರ ಎಂಬ ಕಾರಣ ನೀಡಿ ಬಾದಾಮಿಯಲ್ಲಿ ನಿಲ್ಲಲ್ಲ ಎನ್ನುತ್ತಿರುವುದೇ ಈ ಹೆಲಿಕಾಪ್ಟರ್ ಸ್ಟೋರಿ ಸೀಕ್ರೆಟ್.
ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದು ಚಿಮ್ಮನಕಟ್ಟಿ ಕುಟುಂಬ. ಸಿದ್ದರಾಮಯ್ಯ ಅವರೇ ನಿಲ್ಲಲಿ ಎನ್ನುವುದು ಚಿಮ್ಮನಕಟ್ಟಿ ಪುತ್ರ ರಾಜು(ಭೀಮಸೇನ) ಹೇಳಿಕೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಿಮ್ಮನಕಟ್ಟಿಯವರನ್ನು ಸಿದ್ದರಾಮಯ್ಯ ಕೈಬಿಟ್ಟಿಲ್ಲ. ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿರುವ ಯಾರೊಬ್ಬರನ್ನೂ ಸಿದ್ದರಾಮಯ್ಯ ಕೈ ಬಿಟ್ಟಿರುವ ಉದಾಹರಣೆ ಇಲ್ಲ. ದುರದೃಷ್ಟವಶಾತ್ ನಮ್ಮ ಸರ್ಕಾರ ಬರಲಿಲ್ಲ ಎಂದಿರುವ ಜಮೀರ್ ಅಹ್ಮದ್, ತಮ್ಮ ಪಕ್ಷದಲ್ಲೂ ಸಣ್ಣ ಪುಟ್ಟ ಗುಂಪುಗಾರಿಕೆ ನಡೆಯುತ್ತಿರುವುದನ್ನು ನಿರಾಕರಿಸಿಲ್ಲ.
ಸಿದ್ದರಾಮಯ್ಯನವರ ಇನ್ನೊಬ್ಬ ಆಪ್ತ ಹೆಚ್.ಸಿ.ಮಹದೇವಪ್ಪ ಪ್ರಕಾರ ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಿಂದ ನಿಂತರೂ ಗೆಲ್ಲುತ್ತಾರೆ ಅನುಮಾನವೇ ಇಲ್ಲ ಎಂದಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯ ನಿಲ್ಲುವುದು ವರುಣಾದಲ್ಲಿ. ತಮ್ಮ ಮಗ ಯತೀಂದ್ರಗೆ ಬಿಟ್ಟುಕೊಟ್ಟಿದ್ದ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತ. ವರುಣಾದಲ್ಲಿ ಸಿದ್ದರಾಮಯ್ಯ ಹೆಸರಿಂದಲೇ ಮಗ ಗೆದ್ದಿದ್ದಾರೆ. ಸ್ವತಃ ತಾವೇ ನಿಂತರೆ ಇನ್ನೂ ದೊಡ್ಡ ಲೀಡಿಂಗ್ನಲ್ಲಿ ಗೆಲ್ಲಬಹುದು ಎಂಬ ಆತ್ಮವಿಶ್ವಾಸವಿದೆ. ಆದರೆ ಬಾದಾಮಿ ಹಾಗೂ ಕೋಲಾರದಲ್ಲಿ ಒಳಗುಂಪುಗಳಿದ್ದು ಸೇಫ್ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವುದೆಲ್ಲ ಜಸ್ಟ್ ಪರೀಕ್ಷೆ ಮತ್ತು ಸಮೀಕ್ಷೆ. ವರುಣಾ ಕ್ಷೇತ್ರವೇ ಫೈನಲ್ ಎನ್ನಲಾಗುತ್ತಿದೆ.



