ಚನ್ನಪಟ್ಟಣ ಸರ್ಕಸ್ ಮುಗಿದಿಲ್ಲ. ಟಿಕೆಟ್ ಯಾರಿಗೆ, ಯಾವ ಪಕ್ಷದವರಿಗೆ ಕೊಡಬೇಕು ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಚನ್ನಪಟ್ಟಣಕ್ಕೆ ಕಾಂಗ್ರೆಸ್ ಈಗಲೂ ಅಚ್ಚರಿಯ ಅಭ್ಯರ್ಥಿ ಎಂದೇ ಹೇಳ್ತಾ ಇದೆ. ಡಿಕೆ ಸುರೇಶ್ ಅವರೇ ನಾನು ಎಲೆಕ್ಷನ್ನಿಗೆ ನಿಲ್ಲೋದಿಲ್ಲ ಅಂತಿದ್ದಾರೆ. ಇತ್ತ ಬಿಜೆಪಿ ಮತ್ತು ಜೆಡಿಎಸ್ʻನಲ್ಲಿ ಟಿಕೆಟ್ ಯಾರಿಗೆ, ಯಾವ ಪಕ್ಷಕ್ಕೆ ಕೊಡಬೇಕು ಅನ್ನೋದು ಗೊಂದಲವೋ ಗೊಂದಲ.
ಈ ಮಧ್ಯೆ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಜೆಡಿಎಸ್ ಮುಖಂಡರ ಮನವೊಲಿಕೆ ಪ್ರಯತ್ನ ಫಲ ನೀಡಿದಂತೆ ಕಾಣುತ್ತಿಲ್ಲ. ”ನಾನೇ ಸ್ಪರ್ಧಿಸುವೆ. ನನಗೇ ಬೆಂಬಲ ನೀಡಿ” ಎಂದು ಸಿ.ಪಿ.ಯೋಗೇಶ್ವರ್ ತಮ್ಮನ್ನು ಮನವೊಲಿಸಲು ಯತ್ನಿಸಿದ ಜೆಡಿಎಸ್ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಶಾಸಕ ಎ.ಮಂಜು, ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಸಿ.ಎಸ್. ಪುಟ್ಟರಾಜು, ಮಾಗಡಿ ಮಂಜು, ಸುರೇಶ್ ಗೌಡ ಸೇರಿದಂತೆ ಹಲವರು ಹೇಳಿದರೂ, ಯೋಗೇಶ್ವರ್ ಜಗ್ಗಿಲ್ಲ.
ಯೋಗೇಶ್ವರ್ ಅವರು ತಮ್ಮನ್ನು ಮನವೊಲಿಸಲು ಬಂದಿದ್ದ ಮುಖಂಡರಿಗೆ ಜೆಡಿಎಸ್ ಅಭ್ಯರ್ಥಿಯನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿದರೆ ಆಗುವ ನಷ್ಟ ಏನು ಅನ್ನೋದನ್ನ ತಿಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಆಡಳಿತರೂಢ ಕಾಂಗ್ರೆಸ್‌ಗೆ ಲಾಭ ಮಾಡಿಕೊಡದಂತೆ ನೋಡಿಕೊಳ್ಳಬೇಕಾದರೆ ತಾವು ಸ್ಪರ್ಧಿಸುವ ಅಗತ್ಯ ಇದೆ. ಚುನಾವಣಾ ಫಲಿತಾಂಶದಲ್ಲಿ ಹೆಚ್ಚು- ಕಡಿಮೆ ಆದರೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರವಾಗಲಿದೆ. ಅದಕ್ಕೆ ಯಾಕೆ ಆಸ್ಪದ ಮಾಡಿಕೊಡಬೇಕು. ಎನ್‌ಡಿಎ ಅಭ್ಯರ್ಥಿಯಾಗಲು ಸಹಕಾರ ಮಾಡಿಕೊಡಿ ಎಂದು ಕೇಳಿದ್ದಾರಂತೆ. ಕೊನೆಗೆ ಜೆಡಿಎಸ್ ಮುಖಂಡರು ಈ ಸಂದೇಶವನ್ನೇ ಕುಮಾರಸ್ವಾಮಿ ಅವರಿಗೆ ತಲುಪಿಸಿದ್ದಾರೆ.
”ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಬೇರೆ ಯಾರೇ ಕಣಕ್ಕಿಳಿದರೂ ಎನ್‌ಡಿಎಗೆ ಕಷ್ಟವಾಗಲಿದೆ. ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಚುನಾವಣೆಗೆ ಟಿಕೆಟ್ ಕೇಳುತ್ತಿದ್ದು, ಕೇಳುತ್ತಲೇ ಇರುತ್ತೇನೆ. ಪಕ್ಷದ ಕಾರ್ಯಕರ್ತರ ಭಾವನೆಗೆ ತಕ್ಕಂತೆ ಮಾತನಾಡುತ್ತಿದ್ದು, ಅದಕ್ಕೆ ನಾನು ಬದ್ಧʼʼ ಎಂದಿದ್ದಾರೆ ಯೋಗೇಶ್ವರ್.
ಇನ್ನು ಕುಮಾರಸ್ವಾಮಿ ಅವರಿಗೆ ನಿಖಿಲ್ ಅವರಿಗೆ ಟಿಕೆಟ್ ಕೊಟ್ಟರೆ ಹೇಗೆ ಅನ್ನೋದು ತಲೆಯಲ್ಲಿ ಕೊರೆಯುತ್ತಿದೆ. ನಿಖಿಲ್, ಬಹಿರಂಗವಾಗಿ ಏನೂ ಹೇಳದೇ ಇದ್ದರೂ, ತಾನು ಆಕಾಂಕ್ಷಿ ಅಲ್ಲ ಎನ್ನುತ್ತಿದ್ದರೂ, ಜೆಡಿಎಸ್ ಮುಖಂಡರ ವರ್ತನೆ ಅಧ್ಯಯನ ಮಾಡಿರುವವರ ಪ್ರಕಾರ ನಿಖಿಲ್ ಅವರಿಗೆ ಟಿಕೆಟ್ ಕೊಡುವ ಇಂಟ್ರೆಸ್ಟ್ ಇದೆ. ಜೆಡಿಎಸ್ ಕಾರ್ಯಕರ್ತರು ನಿಖಿಲ್ ಅವರಿಗೆ ಟಿಕೆಟ್ ಕೊಡಿ ಎಂದು ಕೇಳುತ್ತಿರುವುದು ಇದರ ಒಂದು ಭಾಗ ಅಷ್ಟೇ, ಎಂದಿನಂತೆ ಅವರು ನಿರ್ಧಾರ ಮಾಡಿಕೊಂಡೇ ಬಂದಿದ್ದಾರೆ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಶನಿವಾರ ನಡೆಯುವ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿದೆ. ಕ್ಯಾಂಡಿಡೇಟ್ ಯಾರು.. ಅನ್ನೋದು ಫೈನಲ್ ಆಗಲಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ನಿರ್ಧಾರವಾದ ನಂತರವೇ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದನ್ನು ಘೋಷಣೆ ಮಾಡಲಿದೆ.



