ಬೆಂಗಳೂರಿನಲ್ಲಿ ಆಟೋ ಮೀಟರ್ ರೇಟ್ ಗೊತ್ತಿದೆ. ಸರ್ಕಾರ ನಿಗದಿ ಪಡಿಸಿರುವ ದರಗಳ ಪ್ರಕಾರ ಮಿನಿಮಮ್ ಚಾರ್ಜ್ 30 ರೂ. ಅಂದರೆ ಒಮ್ಮೆ ಆಟೋ ಹತ್ತಿದರೆ 30 ರೂ. ಕೊಡಲೇಬೇಕು. ಎರಡು ಕಿ.ಮೀ.ವರೆಗೆ 30 ರೂ. ದರ ಇರುತ್ತದೆ. 2 ಕಿ.ಮೀ.ಗಿಂತ ಕಡಿಮೆ ದೂರ ಹೋದರೂ 30 ರೂ. ಕೊಡಬೇಕು. ಅದಾದ ನಂತರ ಪ್ರತಿ ಕಿ.ಮೀ.ಗೆ 15 ರೂ. ದರ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ, ಆರಂಭದ 5 ನಿಮಿಷಗಳ ಕಾಲಕ್ಕೆ ವೇಯ್ಟಿಂಗ್ ಚಾರ್ಜ್ ಕೂಡಾ ಇಲ್ಲ. ಅದಾದ ನಂತರ ವೇಯ್ಟಿಂಗ್ ಚಾರ್ಜ್ 5 ರೂ. ಕೊಡಬೇಕು. ಇದು ಸಾರಿಗೆ ಇಲಾಖೆಯೇ ರೂಪಿಸಿರುವ ನಿಯಮ. ಆದರೆ ಇತ್ತೀಚೆಗೆ ವೋಲಾ, ಉಬರ್, ರಾಪಿಡೋ ಸೇವೆಗಳೆಲ್ಲ ಲೂಟಿ ಹೊಡೆಯುತ್ತಿವೆ.


ಸಾರಿಗೆ ಇಲಾಖೆಯವರಿಗೆ ಇದು ಗೊತ್ತೇ ಇಲ್ಲವಂತೆ. ಅವರ ಪ್ರಕಾರ ಮಿನಿಮಮ್ ಚಾರ್ಜ್ 30 ರೂ. ರಾತ್ರಿ ವೇಳೆ 10 ಗಂಟೆಯಿಂದ ಬೆಳಗ್ಗೆ 5ರ ವರೆಗೆ ಒಂದೂವರೆ ಪಟ್ಟು. ಅದು ನಿಯಮಬದ್ಧ ಎನ್ನುತ್ತಾರೆ. ಕಂಪ್ಲೇಂಟ್ ಕೊಟ್ಟರೆ ನಾವು ನಿಯಮಗಳ ಪ್ರಕಾರ ಆಟೋ ಸೀಝ್ ಮಾಡಬಹುದು. ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ನಮಗೆ ಅಧಿಕಾರವಿಲ್ಲ ಎನ್ನುವುದು ಸಾರಿಗೆ ಇಲಾಖೆಯವರ ಅಸಹಾಯಕತೆ. ಏಕೆಂದರೆ ಈ ಕುರಿತು ವಿವಾದವೊಂದು ಹೈಕೋರ್ಟಿನಲ್ಲಿದೆ. ಇತ್ಯರ್ಥವಾಗಿಲ್ಲ. ಹೀಗಾಗಿ ಸಾರಿಗೆ ಇಲಾಖೆಯವರೂ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಅಕಸ್ಮಾತ್ ಯಾರಾದರೂ ದೂರು ಕೊಟ್ಟರೆ ಆಟೋವನ್ನು ಸೀಝ್ ಮಾಡಬಹುದು. ಅಷ್ಟೆ. ಬಿಡಿಸಿಕೊಂಡು ಹೋಗಬೇಕಾದವರು ಆಟೋದವರೇ ಹೊರತು ಓಲಾ ಅಥವಾ ಉಬರ್ ಕಂಪೆನಿಯವರಲ್ಲ. ಈಗೇನೋ ವೋಲಾ, ಉಬರ್ ಆಟೋಗಳ ಮಾರ್ಕೆಟ್ ಶೇ.60ರಷ್ಟು ಕುಸಿದಿದೆಯಂತೆ.
ಹೀಗಾಗಿಯೇ ನವೆಂಬರ್ 1ರಿಂದ ಯಾತ್ರಿ ಅನ್ನೋ ಆಪ್ ಓಪನ್ ಆಗುತ್ತಿದೆ. ಇದನ್ನು ರೂಪಿಸಿರುವುದು ಆಧಾರ್ ವ್ಯವಸ್ಥೆಯನ್ನು ರೂಪಿಸಿದ್ದ ನಂದನ್ ನಿಲೇಕಣಿ. ಆಟೋ ರಿಕ್ಷಾ ಡ್ರೈವರುಗಳೇ ಇದನ್ನು ನಂದನ್ ನಿಲೇಕಣಿಯವರ ಜೊತೆಗೂಡಿ ಇದನ್ನು ರೂಪಿಸಿರುವುದು ವಿಶೇಷತೆ.





