ಪಿಎಫ್ಐ ಬ್ಯಾನ್ ಆಯ್ತು. ಪಿಎಫ್‍ಐ ಜೊತೆಯಲ್ಲೇ ಅದರ ಜೊತೆ ನೆಂಟಸ್ತಿಕೆ ಹೊಂದಿದ್ದ 8 ಸಂಘಟನೆಗಳೂ ಬ್ಯಾನ್ ಆದವು. ಒಟ್ಟು 9 ಸಂಘಟನೆಗಳು. ಎಲ್ಲ ಸಂಘಟನೆಗಳೂ ಐದು ವರ್ಷ ನಿಷೇಧ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಪಿಎಫ್ಐ ಅಂಗಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (ಆರ್ ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್ ಸಿಎಚ್ ಆರ್ ಒ), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳ. ಎಲ್ಲ ಸಂಘಟನೆಗಳನ್ನೂ ಐದು ವರ್ಷ ಮಾತ್ರವೇ ನಿಷೇಧಿಸಿದ್ದು ಏಕೆ? ಶಾಶ್ವತವಾಗಿಯೇ ನಿಷೇಧಿಸಬಹುದಿತ್ತಲ್ಲ ಎಂಬ ವಾದ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿಯಾಗಿ ಚರ್ಚೆಯಾಗುತ್ತಿದೆ. ಕಾರಣ ಕುತೂಹಲಕಾರಿ.
ಯುಎಪಿಎ ಕಾಯಿದೆ ಪ್ರಕಾರ 5 ವರ್ಷಕ್ಕಿಂತ ಹೆಚ್ಚು ನಿಷೇಧ ವಿಧಿಸುವ ಹಾಗಿಲ್ಲ. ಗರಿಷ್ಠ 5 ವರ್ಷ ನಿಷೇಧ ಹೇರಲು ಅವಕಾಶವಿದೆ. ಆನಂತರ ಆ 5 ವರ್ಷವನ್ನು ವಿಸ್ತರಿಸಬಹುದು. ಈ ಹಿಂದೆ ನಿಷೇಧಿಸಲ್ಪಟ್ಟ ಎಲ್ಲ 39 ಸಂಘಟನೆಗಳಿಗೂ ಇದೇ ನಿಯಮ ಅನ್ವಯವಾಗಿದೆ. ನಿಯಮಗಳ ಪ್ರಕಾರ ಅನಿರ್ಧಿಷ್ಟಾವಧಿಗೆ ನಿಷೇಧಿಸುವ ಹಾಗಿಲ್ಲ. ಈ ಮಧ್ಯೆ ಅವುಗಳು ಪರಿವರ್ತನೆಗೊಂಡಿವೆಯೇ ಎಂಬುದನ್ನು ಪರಿಶೀಲಿಸಿ ನಿಷೇಧ ಹಿಂತೆಗೆದುಕೊಳ್ಳುವ ಬಗ್ಗೆಯೂ ಪ್ರಮಾಣೀಕರಿಸಬೇಕು. ಸಂಘಟನೆ ಸದಸ್ಯರು ಮರುಪರಿಶೀಲನೆಗೆ ಮನವಿ ಮಾಡುವ ಅವಕಾಶವಿದೆ. ನಿಯಮಗಳ ಆ ಅವಕಾಶವನ್ನು ಮುಕ್ತವಾಗಿಡಲೇಬೇಕು.
ಮತ್ತೊಂದು ಪ್ರಶ್ನೆ ಎಸ್‍ಡಿಪಿಐನ್ನು ನಿಷೇಧ ಏಕೆ ಮಾಡಿಲ್ಲ ಎನ್ನುವುದು. ಸಚಿವ ಆರ್.ಅಶೋಕ್ ಅವರೇನೋ ಎಸ್‍ಡಿಪಿಐ ನಿಷೇಧ ಕುರಿತೂ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ವೀರಾವೇಶದಿಂದ ಮಾತನಾಡಿದರು. ಆದರೆ ನಿಯಮಗಳ ಪ್ರಕಾರ ಎಸ್‍ಡಿಪಿಐ ರಾಜಕೀಯೇತರ ಸಂಘಟನೆ ಅಲ್ಲ. ರಾಜಕೀಯ ಪಕ್ಷವಾಗಿರುವ ಸಂಘಟನೆ. ಒಂದು ರಾಜಕೀಯ ಪಕ್ಷವನ್ನು ನಿಷೇಧಿಸಬೇಕೆಂದರೆ ಚುನಾವಣೆ ಆಯೋಗ ವರದಿ ಸಲ್ಲಿಸಬೇಕು. ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.
ಹೀಗಾಗಿ ಸದ್ಯಕ್ಕಂತೂ ಎಸ್‍ಡಿಪಿಐನ ಜನಪ್ರತಿನಿಧಿಗಳಿಂದ ಆಯ್ಕೆಯಾಗಿರುವ ಸದಸ್ಯರ ಸದಸ್ಯತ್ವಕ್ಕೆ ಧಕ್ಕೆಯಿಲ್ಲ. ಶಾಸಕರು , ಕಾರ್ಪೊರೇಟರುಗಳ ಸದಸ್ಯತ್ವ ವಜಾ ಮಾಡಲು ಬರುವುದಿಲ್ಲ. ಆದರೆ ಅವರ ವಿರುದ್ಧ ದೇಶವಿರೋಧಿ ಕೃತ್ಯಕ್ಕೆ ಸಹಕಾರ ಎಸಗಿರ ಆರೋಪವಿದ್ದರೆ, ಸಾಕ್ಷಿಗಳಿದ್ದರೆ ಅರೆಸ್ಟ್ ಮಾಡಬಹುದು.
ಈಗ ಸಿಎಫ್‍ಐ ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಹೋಗುತ್ತೇವೆ ಎಂದು ಘೋಷಿಸಿದೆ. ಆದರೆ ಸದ್ಯಕ್ಕಂತೂ ಪಿಎಫ್‍ಐ ಎಲ್ಲವುಗಳನ್ನೂ ಬಂದ್ ಮಾಡಬೇಕು. ಪಿಎಫ್‍ಐ ಆಸ್ತಿ, ಕಚೇರಿ ಜಪ್ತಿಯಾಗಲಿದೆ. ಬ್ಯಾಂಕ್ ವ್ಯವಹಾರ ಮಾಡುವಂತಿಲ್ಲ. ಅಕೌಂಟ್ ಸೀಝ್ ಆಗಿವೆ. ಪಿಎಫ್‍ಐ ಸದಸ್ಯರಿಗೆ ಪಾಸ್‍ಪೋರ್ಟ್, ವೀಸಾ ಸಿಗುವುದು ಕಷ್ಟವಾಗಲಿದೆ. ಬಂಧಿತರಿಗಷ್ಟೇ ಅಲ್ಲ, ಅವರ ಕುಟುಂಬದವರಿಗೂ ಪಾಸ್‍ಪೋರ್ಟ್ ಸಿಗುವುದಿಲ್ಲ. ಆಸ್ತಿಗಳ ಮಾರಾಟ ಸದ್ಯಕ್ಕಂತೂ ಸಾಧ್ಯವಿಲ್ಲ. ಇದೆಲ್ಲದರ ಜೊತೆಗೆ ಜನರ ಜೊತೆ ಬೆರೆಯುವುದು ಕಷ್ಟವಾಗಲಿದೆ.



