ಇದು ಹಲವರಿಗೆ ಕಾಡುವ ಪ್ರಶ್ನೆ. ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ಹೊಸದಲ್ಲ. ಕಳೆದ ವರ್ಷ ಗಲ್ವಾನ್‍ನಲ್ಲಿ ನಡೆದ ಸಂಘರ್ಷದಲ್ಲಿ ಭಾರತ 20 ಯೋಧರನ್ನು ಕಳೆದುಕೊಂಡಿತ್ತು. ಜಗತ್ತಿನ ಹಲವು ಮಾಧ್ಯಮಗಳು ಚೀನಾ 30ರಿಂದ40 ಯೋಧರನ್ನು ಕಳೆದುಕೊಂಡಿದೆ ಎಂದು ವರದಿ ಮಾಡಿದವಾದರೂ ಚೀನಾ ತಮ್ಮ ದೇಶದ ಸತ್ತ ಸೈನಿಕರ ಬಗ್ಗೆ ತುಟಿ ಬಿಚ್ಚಲಿಲ್ಲ. ಅನಿರೀಕ್ಷಿತವಾಗಿ ಬಂದ ಹೊಡೆತವನ್ನೂ ಭಾರತೀಯ ಯೋಧರು ಯಶಸ್ವಿಯಾಗಿ ನಿಭಾಯಿಸಿದ್ದರು. ಆ ಬಾರಿ ಮುಳ್ಳು ತಂತಿಯಿಂದ ಸುತ್ತಿದ್ದ ಬಡಿಗೆಗಳನ್ನು ಬಳಸಿ ಅಟ್ಯಾಕ್ ಮಾಡಿದ್ದರು. ಈ ಬಾರಿಯೂ ಅಷ್ಟೆ, ಚೀನಾ ಸೈನಿಕರು ಅಟ್ಯಾಕ್ ಮಾಡಿದ್ದು ಚೂಪು ಮೊಳೆಗಳ ಆಯುಧಗಳಿಂದ.

ಡಿ.9ರ ಮುಂಜಾನೆ 3 ಗಂಟೆಯ ಹೊತ್ತಿಗೆ ಚೀನಾದ ಗಡಿಯಿಂದ 300ಕ್ಕೂ ಹೆಚ್ಚು ಸೈನಿಕರು ಶಸ್ತ್ರಾಸ್ತ್ರಗಳೊಂದಿಗೆ ನುಗ್ಗಿ ಬಂದರು. ಆಗ ತವಾಂಗ್‍ನ ಆ ಪ್ರದೇಶದಲ್ಲಿ ಇದ್ದ ಭಾರತೀಯ ಯೋಧರ ಸಂಖ್ಯೆ ಸುಮಾರು 50 ಅಷ್ಟೆ. ಚೂಪಾದ ಮೊಳೆಗಳನ್ನು ಜೋಡಿಸಿದ್ದ ಕಟ್ಟಿಗೆಯ ಬಡಿಗೆ, ಟೀಸರ್ ಗನ್, ಹಗ್ಗಗಳನ್ನು ತಂದಿದ್ದರು. ಸಾಧ್ಯವಾದರೆ ಭಾರತೀಯ ಯೋಧರನ್ನು ಕಿಡ್ನಾಪ್ ಮಾಡುವ ಸಂಚೂ ಇತ್ತೆನ್ನಬಹುದು.
ಭಾರತದ ವಶದಲ್ಲಿರುವ ಈ ಪ್ರದೇಶ ಅತ್ಯಂತ ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ಕ್ಯಾಂಪ್ ಇದ್ದರೆ ಸುಮಾರು 30 ಕಿ.ಮೀ. ದೂರದವರೆಗೆ ಸುತ್ತಮುತ್ತ ಕಣ್ಗಾವಲು ಹಾಕಬಹುದು. ಅತ್ಯಂತ ಸೂಕ್ಷ್ಮ ಮತ್ತು ತಂತ್ರಗಾರಿಕೆಗೆ ಸೂಕ್ತವಾದ ಪ್ರದೇಶ ಇದು. ಹೀಗಾಗಿಯೇ ತವಾಂಗ್‍ಗೆ ಯಾಂಗ್ ಟ್ಸೆ ಪ್ರದೇಶದ ವಶಕ್ಕೆ ಚೀನಾ ಯತ್ನಿಸಿದೆ. ಚೀನಾ ಸೈನಿಕರನ್ನು ಅಟ್ಟಾಡಿಸಿಕೊಂಡು ಹೊಡೆದಿದೆ. ಸಂಸತ್‍ನಲ್ಲಿ ಏನೇ ಗದ್ದಲವಾದರೂ ಖುದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಉತ್ತರ ಕೊಟ್ಟಿದ್ದಾರೆ.

ಆದರೆ ಚೀನಾ ಗಡಿಯಲ್ಲಿ ಬಂದೂಕು, ಗನ್, ಗ್ರೆನೇಡ್, ಯುದ್ಧ ಟ್ಯಾಂಕ್.. ಇದಾವುಗಳನ್ನೂ ಬಳಸದೆ ಮುಷ್ಠಿ ಯುದ್ಧಕ್ಕೆ ಇಳಿಯುವುದು ಏಕೆ? ಭಾರತ ಚೀನಾ ನಡುವಿನ ಒಪ್ಪಂದದ ಪ್ರಕಾರ ಗಡಿ ಪ್ರದೇಶದಲ್ಲಿ ಆಯುಧಗಳನ್ನು ಬಳಸುವಂತಿಲ್ಲ. ಒಂದೇ ಒಂದು ಬಾಂಬ್ ಸಿಡಿದರೆ, ಒಂದೇ ಒಂದು ಬುಲೆಟ್ ಹಾರಿದರೆ.. ಅದು ಯಾವ ದೇಶದ ಸೈನಿಕರಿಂದಾದರೂ ಸರಿ, ಅದು ನೇರವಾಗಿ ಯುದ್ಧಕ್ಕೆ ಆಹ್ವಾನ ಕೊಟ್ಟಂತೆಯೇ. ಹೀಗಾಗಿ ಚೀನಾದವರು ಕಿರಿಕ್ಕು ಮಾಡಿದರೂ ಭಾರತೀಯರು ಗನ್ ಎತ್ತುತ್ತಿತ್ತಿಲ್ಲ. ಮುಷ್ಠಿ ಯುದ್ಧ ನಡೆಸಿ ಭಾರತೀಯ ಸೈನಿಕರ ತಾಳ್ಮೆಯನ್ನು ಕೆಣಕುವುದು ಚೀನಾ ತಂತ್ರ. ತಾವು ಬಾಂಬ್ ಅಥವಾ ಬುಲೆಟ್ಟಿಗೆ ಕೈ ಹಾಕಿದರೆ ಜಗತ್ತಿನ ಮೇಲೆ ಆಗುವ ಪರಿಣಾಮ ಎಂಥದ್ದು ಎನ್ನುವುದನ್ನು ಭಾರತೀಯ ಸೈನಿಕರು ಚೆನ್ನಾಗಿಯೇ ಅರಿತಿದ್ದಾರೆ. ಅಕಸ್ಮಾತ್ ತಾವು ಆ ಕೆಲಸಕ್ಕೆ ಕೈ ಹಾಕಿದರೆ ಜಗತ್ತಿನ ಎದುರು ಭಾರತವನ್ನು ಯುದ್ಧೋನ್ಮಾದಿ ದೇಶವನ್ನಾಗಿ ಮಾಡುವ ಚೀನಾ ತಂತ್ರ ಫಲಿಸುತ್ತದೆ ಎನ್ನುವುದೂ ಅವರಿಗೆ ಗೊತ್ತು. ಅದರಿಂದ ಸೃಷ್ಟಿಯಾಗುವ ಅಪಾಯಗಳೇನು ಎನ್ನುವುದೂ ಅವರಿಗೆ ಗೊತ್ತು. ಹೀಗಾಗಿಯೇ ಭಾರತೀಯ ಯೋಧರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿಲ್ಲ.

ಅಂದಹಾಗೆ ಭಾರತೀಯ ಯೋಧರಿದ್ದದ್ದು 50 ಜನ. ನುಗ್ಗಿ ಬಂದ ಚೀನಾ ಯೋಧರ ಸಂಖ್ಯೆ 300ಕ್ಕೂ ಹೆಚ್ಚು. ಹೀಗಿದ್ದರೂ ಕೇವಲ 50 ಜನ ಅಷ್ಟೂ ಜನರನ್ನು ಕೇವಲ ಮುಷ್ಠಿಯುದ್ಧದಲ್ಲಿ ಎದುರಿಸಿದ್ದು ಹೇಗೆ? ಅದು ಪಂಜಾಬಿಗಳ ತಾಕತ್ತು. ಆ ಗ್ರೂಪ್‍ನಲ್ಲಿದ್ದವರಲ್ಲಿ ಪಂಜಾಬಿಗಳೇ ಹೆಚ್ಚು. ಎತ್ತರದ ದೇಹದಾಢ್ರ್ಯದ ಎದುರು ಚೀನಾ ಸೈನಿಕರು ಸುಸ್ತಾಗಿದ್ದಾರೆ. ಜೊತೆಗೆ ಭಾರತವೂ ಗಲ್ವಾನ್ ಸಂಘರ್ಷದ ನಂತರ ಮುಷ್ಠಿಯುದ್ಧದ ಬಗ್ಗೆ ಸೈನಿಕರಿಗೆ ಹೆಚ್ಚಿನ ತರಬೇತಿ ಕೊಟ್ಟಿದೆ.
ಅಂದಹಾಗೆ ಚೀನಾ ಸಿಟ್ಟಿಗೆ ಕಾರಣಗಳು ಒಂದೆರಡಲ್ಲ. ಅರುಣಾಚಲ ಪ್ರದೇಶದ ಸ್ವಲ್ಪ ಪ್ರದೇಶ ನಮ್ಮದು ಬಿಟ್ಟುಬಿಡಿ ಎನ್ನುತ್ತಿತ್ತು. ಇಡೀ ಅರುಣಾಚಲ ಪ್ರದೇಶವೇ ನನ್ನದು ಎಂದು ವಾದ ಮಂಡಿಸುತ್ತಿದೆ ಭಾರತ. ಅಷ್ಟೇ ಅಲ್ಲ, ಚೀನಾ ಕಿರಿಕ್ಕಿನ ಕಾರಣವಾಗಿ ಅಲ್ಲಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದವು. ಈಗ ಪ್ರವಾಸೋದ್ಯಮ, ರಸ್ತೆ ಮೊದಲಾದ ಕೆಲಸಗಳು ಚುರುಕು ಪಡೆದಿವೆ. ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತೆಯ ಕೆಲಸಗಳಾಗಿವೆ. ಅಲ್ಲದೆ ಇತ್ತೀಚೆಗೆ ಭಾರತ-ಅಮೆರಿಕ ಇದೇ ಪ್ರದೇಶದಲ್ಲಿ ಜಂಟಿ ಸಮರಾಭ್ಯಾಸ ನಡೆಸಿದ್ದವು.




