ಇನ್ನು ಕೆಲವೇ ದಿನಗಳಲ್ಲಿ ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿಯಾಗುವುದು ಖಚಿತ. ರೇಸಿನಲ್ಲಿದ್ದವರೆಲ್ಲ ಹಿಂದೆ ಸರಿದಿದ್ದಾರೆ. ಕನ್ಸರ್ವೇಟಿವ್ ಪಕ್ಷದಿಂದ ಬೇರೆ ಸ್ಪರ್ಧಿಗಳೇ ಇಲ್ಲ. ಯಾವ ರಿಷಿ ಸುನಕ್‍ನನ್ನು ಸೋಲಿಸಿ ಅಧಿಕಾರ ಹಿಡಿದಿದ್ದರೋ ಅದೇ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿ ಬ್ರಿಟನ್ ಪ್ರಧಾನಿ ಪಟ್ಟದಿಂದ ಕೆಳಕ್ಕಿಳಿದಿದ್ದಾರೆ. ರಿಷಿ ಸುನಕ್ ಅವರಿಗೆ ಪ್ರಬಲ ಎದುರಾಳಿಯಾಗಬಹುದು ಎಂದುಕೊಂಡಿದ ಪ್ರತಿಸ್ಪರ್ಧಿಗಳಾಗಿದ್ದ ಪೆನ್ನಿ ಮೊರ್ಡೌನಟ್ ಹಾಗೂ ಬೋರಿಸ್ ಜಾನ್ಸನ್ ಕೂಡಾ ರಿಷಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಲ್ಲಿಗೆ ರಿಷಿ ಅವಿರೋಧ ಆಯ್ಕೆ. ಆದರೆ ಕಳೆದ ಬಾರಿ ಕೊನೆಯ ಸುತ್ತಿನವರೆಗೆ ಪ್ರಬಲ ಪೈಪೋಟಿ ಒಡ್ಡಿದ್ದ ರಿಷಿ ಸುನಕ್ ಸೋಲಿಗೆ ಕಾರಣವಾದ ಅಂಶಗಳನ್ನು ನೋಡಿದರೆ ಅಚ್ಚರಿಯಾಗಬಹುದು.

ರಿಷಿ ಸೋಲಿಗೆ ಟೀ ಕಪ್ ಕೂಡಾ ಕಾರಣ : ಒಂದು ಟೀ ಕಪ್‍ನಿಂದಾಗಿ ರಿಷಿ ಸುನಕ್ ಜನಪ್ರಿಯತೆ ಕುಸಿಯಬಹುದಾ? ಹೌದು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ರಿಷಿ ಸುನಕ್ ಪ್ರಧಾನಿ ಅಭ್ಯರ್ಥಿಯಾಗಿದ್ದ ವೇಳೆ ಅವರ ಮನೆಗೆ ಪತ್ರಕರ್ತರು ಬರುತ್ತಾರೆ. ಅವರಿಗೆ ಅಕ್ಷತಾ ಮೂರ್ತಿ ದುಬಾರಿ ಚಹಾ ಕಪ್ಪುಗಳಲ್ಲಿ ಚಹಾ ನೀಡುತ್ತಾರೆ. ದುಬಾರಿಯೆಂದರೆ ಒಂದು ಕಪ್ ಬೆಲೆ ಭಾರತೀಯ ರೂಪಾಯಿಗಳಲ್ಲಿ 3 ಸಾವಿರ ರೂ. ಚಹಾ ಕಪ್ ಭಾರಿ ಸುದ್ದಿಯಾಗುತ್ತದೆ. ಅದು ಶ್ರೀಮಂತಿಕೆಯ ಪ್ರದರ್ಶನ ಎಂದು ಹುಯಿಲೆಬ್ಬಿಸುತ್ತಾರೆ. ಅಲ್ಲಿಂದ ಶುರುವಾಗುತ್ತದೆ ಸೋಲಿನ ಆರಂಭ. ಹಠಕ್ಕೆ ಬಿದ್ದು ಮಧ್ಯಮ ವರ್ಗಕ್ಕೆ ಹತ್ತಿರದರಾಗಿದ್ದ ಲಿಜ್ ಟ್ರುಸ್‍ರನ್ನು ಗೆಲ್ಲಿಸುತ್ತಾರೆ.
ಭಾರತೀಯ. ಬಿಳಿಯನಲ್ಲ : ಜಗತ್ತಿಗೇ ಸೌಹಾರ್ದತೆಯ ಪಾಠ ಹೇಳುವ ಬ್ರಿಟಿಷರು ಇವತ್ತಿಗೂ ಕರಿಯರು ಮತ್ತು ಬಿಳಿಯರು ಎಂಬ ಭಾವನೆಯಿಂದ ಹೊರಬಂದಿಲ್ಲ. ಇವನು ಭಾರತೀಯ, ಬಿಳಿಯನಲ್ಲ ಎಂಬ ಕಾರಣ ನೀಡಿ ಬ್ರಿಟನ್‍ನ ಬಲಪಂಥವಾದಿಗಳು ಅವರದ್ದೇ ಕನ್ಸರ್ವೇಟಿವ್ ಪಕ್ಷದವರೂ ಸೇರಿ ರಿಷಿ ಸುನಕ್‍ರನ್ನು ಸೋಲಿಸುತ್ತಾರೆ. ಜೊತೆಗೆ ಅಪ್ಪ ಪಂಜಾಬ್‍ನಿಂದ ವಲಸೆ ಹೋಗಿ ಬ್ರಿಟನ್‍ನಲ್ಲಿ ನೆಲೆ ನಿಂತವರು. ಇದೆಲ್ಲದರ ಜೊತೆಗೆ ರಿಷಿ ಸುನಕ್‍ಗೆ ಅಮೆರಿಕದ ಗ್ರೀನ್ ಕಾರ್ಡ್ ಕೂಡಾ ಇತ್ತು. ಇವೆಲ್ಲವನ್ನೂ ಎದುರಾಳಿಗಳು ಸಮರ್ಥವಾಗಿ ಬಳಸಿಕೊಂಡರು.

ದುಬಾರಿ ಸ್ಕೂಲು : ರಿಷಿ ಓದಿದ್ದು ಇಂಗ್ಲೆಂಡ್‍ನ ವಿಂಚೆಸ್ಟರ್ ಶಾಲೆಯಲ್ಲಿ. ಅದೂ ಸ್ಕಾಲರ್‍ಶಿಪ್ ಇಲ್ಲದೆ. ನಾನು ಸ್ಕಾಲರ್‍ಶಿಪ್‍ನಲ್ಲಿ ಓದಿದವನಲ್ಲ ಎಂಬ ಹೆಮ್ಮೆಯಿದೆ ಎಂದೂ ರಿಷಿ ಹಿಂದೊಮ್ಮೆ ಹೇಳಿಕೊಂಡಿದ್ದರು. ಆಕ್ಚುಯಲಿ ರಿಷಿ ಸುನಕ್ ಬಾಲ್ಯದಲ್ಲಿ ಓದುತ್ತಿದ್ದಾಗ ಭಾರತೀಯ ಮೂಲದ ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಸಿಗುವುದು ಅಷ್ಟು ಸುಲಭವಿರಲಿಲ್ಲ. ಆದರೆ ಅದನ್ನೆಲ್ಲ ಪಕ್ಕಕ್ಕಿಟ್ಟು ದುಬಾರಿ ಶಾಲೆಯಲ್ಲಿ ಓದಿದವನಿಗೆ ಬ್ರಿಟಿಷ್ ಬಡವರ ಕಷ್ಟವೇನು ಗೊತ್ತು ಎಂಬ ಪ್ರಚಾರ ನಡೆಯಿತು. ರಿಷಿ ಸೋತಿದ್ದರು.




ಕೊರೊನಾ : ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದವರು ರಿಷಿ ಸುನಕ್. ಆರ್ಥಿಕ ಹೊಡೆತ ತಪ್ಪಿಸಲು 3.50 ಬಿಲಿಯನ್ ಪೌಂಡ್ ಪರಿಹಾರ ಪ್ಯಾಕೇಜ್ ಘೋಷಿಸಿದರು. ಅದರಿಂದಾಗಿ ರಿಷಿ ಜನಪ್ರಿಯತೆಯೂ ಹೆಚ್ಚಿತು. ಆದರೆ ಬೋರಿಸ್ ಜಾನ್ಸನ್ ಕದ್ದು ಪಾರ್ಟಿ ಮಾಡಿದರು. ಇದರ ಜೊತೆ ವ್ಯಾಪಾರಿಗಳಿಗೆ ಉತ್ತೇಜನ ನೀಡಲು ಜನರನ್ನು ಬಿಸಿನೆಸ್‍ಗೆ ಬರುವಂತೆ ಮಾಡಲು ರಿಷಿ ಹೊರಗೆ ತಿಂಡಿ ಸೇವಿಸುತ್ತಿದ್ದರು. ಆ ಹಳೆಯ ಫೋಟೋಗಳನ್ನು ಬಳಸಿಕೊಂಡು ಅಪಪ್ರಚಾರ ನಡೆಸಿದರು.
ಬೋರಿಸ್ ಜಾನ್ಸನ್ : ಕೊರೊನಾ ಸಂದರ್ಭದಲ್ಲಿ ದೇಶಕ್ಕೆಲ್ಲ ಲಾಕ್ ಡೌನ್ ಹೇರಿ ತಾನು ಮಾತ್ರ ಕದ್ದು ಪಾರ್ಟಿ ಮಾಡಿ ಸಿಕ್ಕಿಕೊಂಡು ಅಧಿಕಾರ ಕಳೆದುಕೊಂಡವರ ಆಗ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್. ಆದರೆ ಪಟ್ಟ ಹೋದ ನಂತರ ರಿಷಿ ಸುನಕ್ ಇದಕ್ಕೆಲ್ಲ ಕಾರಣ ಎಂದರು. ಸಮರ್ಥನೆ ಕೊಡಲು ಕೂಡಾ ರಿಷಿಗೆ ಸಮಯ ಕೊಡದೆ ಚುನಾವಣೆಯ ಕಡೆ ಗಳಿಗೆಯಲ್ಲಿ ಹೇಳಿಕೆ ನೀಡಿ ರಿಷಿ ಸುನಕ್‍ರನ್ನು ದ್ರೋಹಿಯೆಂಬಂತೆ ಬಿಂಬಿಸಿದರು.

ಹಿಂದುತ್ವ : ರಿಷಿ ಸುನಕ್ ತಂದೆ ತಾಯಿ ಪಂಜಾಬ್‍ನವರು. ಇಂಗ್ಲೆಂಡ್‍ನ ಸೌಥ್ ಆಂಪ್ಟನ್‍ನಲ್ಲಿ ಡಾಕ್ಟರ್ ಆಗಿದ್ದವರು. ತಾಯಿ ಮೆಡಿಕಲ್ ಸ್ಟೋರ್ ಇಟ್ಟುಕೊಂಡಿದ್ದರು. ರಿಷಿ ಓದುವಾಗ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಂಪ್ರದಾಯವಾದಿಗಳು. ಮದುವೆಯಾಗಿದ್ದು ಅಕ್ಷತಾ ಅವರನ್ನು. ಸುಧಾಮೂರ್ತಿ ಅವರ ಸಂಪ್ರದಾಯ ಎಲ್ಲರಿಗೂ ಗೊತ್ತಿರುವಂತಹುದೇ. ರಿಷಿಗೆ ಇಂಗ್ಲಿಷ್ ಜೊತೆ ಪಂಜಾಬಿ ಹಾಗೂ ಹಿಂದಿ ಚೆನ್ನಾಗಿ ಬರುತ್ತೆ. ಇನ್ನು ರಿಷಿ ಹಸುಗಳನ್ನು ಪೂಜಿಸುವುದು, ದೇವಸ್ಥಾನಕ್ಕೆ ಹೋಗುವುದನ್ನು ಬ್ರಿಟಿಷ್ ಪ್ರಧಾನಿ ಹುದ್ದೆ ಚುನಾವಣೆ ಹೊತ್ತಿನಲ್ಲಿ ಕೆಟ್ಟದಾಗಿ ಬಿಂಬಿಸಲಾಯಿತು. ಇದು ಕೂಡಾ ರಿಷಿ ಸುನಕ್ ಹಿನ್ನಡೆಗೆ ಕಾರಣವಾಯಿತು.
ಇದೆಲ್ಲ ಈಗ ಇತಿಹಾಸ. ಕಳೆದ ಬಾರಿ ಸಂಸದರ ಬೆಂಬಲ ಗಿಟ್ಟಿಸಿದ್ದರೂ 1.80 ಲಕ್ಷ ಸದಸ್ಯರ ಮತಗಳನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು. ಈಗ ಚುನಾವಣೆಯೇ ಇಲ್ಲ. ಸ್ಪರ್ಧಿಗಳೂ ಇಲ್ಲ. ಕಳೆದ ಬಾರಿ ಎದುರಿಸಿದ್ದ ಸವಾಲುಗಳೂ ಇಲ್ಲ. ಹಾಗೆಂದು ಇವರಿಂದ ಭಾರತಕ್ಕೆ ಲಾಭವಾಗಲಿದೆ ಎಂದು ಬೀಗಬೇಕಿಲ್ಲ. ಆತ ಬ್ರಿಟನ್ನಿಗೆ ಪ್ರಧಾನಿ. ಬ್ರಿಟನ್ನಿಗೆ ನಿಷ್ಟವಾಗಿರುತ್ತಾರೆ. ಆತ ಇಂಡಿಯನ್ ಮೂಲದವರು ಎಂಬುದಷ್ಟೇ ಸಂತೋಷದ ವಿಷಯ.



