ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಪಂಚರತ್ನ ಯಾತ್ರೆಯ ಜೋಶ್‍ನಲ್ಲಿದ್ದಾರೆ. ಎಲ್ಲ ರಾಜಕೀಯ ಪಂಡಿತರ ಲೆಕ್ಕಾಚಾರ ತಲೆಕೆಳಕಾಗುವಂತೆ ಮಾಡಿರುವುದು ಪ್ರತಿ ಊರಿನಲ್ಲೂ ಸೇರುತ್ತಿರುವ ಜನಸ್ತೋಮ. ಯಾವ ಊರಿನಲ್ಲೇ ಹೋಗಲೀ.. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಸದ್ಯಕ್ಕೆ ಮಂಡ್ಯ ಜಿಲ್ಲೆಯಲ್ಲಿರುವ ಪಂಚರತ್ನ ಯಾತ್ರೆ, ಕುಮಾರಸ್ವಾಮಿಗೆ ಬೇಕಿದ್ದ ರಾಜಕೀಯ ಶಕ್ತಿಯನ್ನಂತೂ ಕೊಡುವ ಸೂಚನೆ ನೀಡಿದೆ.

ಇಡೀ ಯಾತ್ರೆಯಲ್ಲಿ ಗಮನ ಸೆಳೆದಿದ್ದು ಅಭಿಮಾನಿಗಳು ಹಾಕುತ್ತಿರುವ ಹಾರಗಳು. ಕಳೆದ ಬಾರಿಯ ಚುನಾವಣೆಯಲ್ಲಿ ಕ್ರೇನುಗಳ ಮೂಲಕ ಹಾರ ಹಾಕುವ ಕಲ್ಪನೆಯನ್ನು ಜಾರಿಗೆ ತಂದಿದ್ದವರೇ ಜೆಡಿಎಸ್ ಕಾರ್ಯಕರ್ತರು. ಈಗ ಅದು ಟ್ರೆಂಡ್ ಆಗಿರಬಹುದು, ಆದರೆ ಮಂಡ್ಯದಲ್ಲಿಯೇ ಬೃಹತ್ ಹಾರ ಹಾಕುವ ಕಲ್ಪನೆಗೆ ಜೀವ ತುಂಬಿದ್ದು. ಇದಾದ ಮೇಲೆ ಹಾರಗಳ ಮೂಲಕವೇ ಇದು ರೈತರ ಪಕ್ಷ ಎಂಬ ಸಂದೇಶವನ್ನು ಜನ ಹಾಗೂ ಕುಮಾರಸ್ವಾಮಿ ಪದೇ ಪದೇ ನೀಡುತ್ತಿದ್ದಾರೆ. ಸೇಬು, ಕಿತ್ತಳೆ, ಮಲ್ಲಿಗೆ ಹೂವುಗಳ ಹಾರಗಳ ಜೊತೆಗೆ ಕೊಬ್ಬರಿ, ತೆಂಗಿನ ಕಾಯಿ, ಮೆಣಸಿನಕಾಯಿ, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಸೀಬೆ ಹಣ್ಣು, ಕ್ಯಾರೆಟ್, ಬೀಟ್ರೂಟ್, ದಾಳಿಂಬೆ, ಕಬ್ಬು, ರಾಗಿ ತೆನೆ, ಭತ್ತದ ತೆನೆ, ಬಾಳೆಕಾಯಿ, ಬೆಲ್ಲ, ಚಕ್ಕೋತಾ.. ಹೀಗೆ ಹಲವು ರೀತಿಯ ವಿಭಿನ್ನ ವಿಭಿನ್ನ ಹಾರಗಳನ್ನು ಹಾಕುತ್ತಿದ್ದಾರೆ. ಎಲ್ಲ ಹಾರಗಳನ್ನೂ ಅಷ್ಟೇ ಪ್ರೀತಿಯಿಂದ ಹಾಕಿಸಿಕೊಂಡಿರುವ ಕುಮಾರಸ್ವಾಮಿ, ರುದ್ರಾಕ್ಷಿ ಹಾರಕ್ಕೆ ಮಾತ್ರ ಒಲ್ಲೆ ಎಂದಿದ್ದಾರೆ.

ಪಾಂಡವಪುರ ತಾಲೂಕಿನ ಹುಲಿಕೆರೆಯಲ್ಲಿ ವೀರಶೈವ ಲಿಂಗಾಯತ ಮುಖಂಡರು ಕುಮಾರಸ್ವಾಮಿಯವರಿಗೆ ಬೃಹತ್ ರುದ್ರಾಕ್ಷಿ ಹಾರವನ್ನು ಸಿದ್ಧ ಮಾಡಿಸಿದ್ದರು. ಹುಲಿಕೆರೆಗೆ ಕುಮಾರಸ್ವಾಮಿ ತಲುಪಿದಾಗ ಮಧ್ಯರಾತ್ರಿ 12.30. ಆದರೆ ಊರಿನವರ ಉತ್ಸಾಹಕ್ಕೆ ಕೊರತೆಯೇನೂ ಇರಲಿಲ್ಲ. ಆದರೆ ರುದ್ರಾಕ್ಷಿ ಮಾಲೆಗೆ ಕುಮಾರಸ್ವಾಮಿ ನಿರಾಕರಿಸಿದರು.
ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಹಾಕಿಕೊಳ್ಳುವಷ್ಟು ನಾನು ದೊಡ್ಡವನಲ್ಲ. ಬೇಸರ ಮಾಡಿಕೊಳ್ಳಬೇಡಿ. ದಯವಿಟ್ಟು ಈ ರುದ್ರಾಕ್ಷಿ ಹಾರವನ್ನು ಸಿದ್ಧಗಂಗಾ ಮಠದ ನಡೆದಾಡುವ ದೇವರು ಶ್ರೀಶಿವಕುಮಾರ ಸ್ವಾಮಿಗಳಿಗೆ ಅರ್ಪಣೆ ಮಾಡಿ ಎಂದು ಮನವಿ ಮಾಡಿದರು. ಕುಮಾರಸ್ವಾಮಿ ಮನವಿಗೆ ಸ್ಪಂದಿಸಿದ ಲಿಂಗಾಯತ ಮುಖಂಡರೂ ಕಳೆದ ಬಾರಿ ಯಡಿಯೂರಪ್ಪ ಅವರಿಗಾಗಿ ನಿಮ್ಮನ್ನು ವಿರೋಧಿಸಿದೆವು. ಈ ಬಾರಿ ನಿಮ್ಮೊಂದಿಗೆ ಇರುತ್ತೇವೆ ಎಂದರು. ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿಯೂ ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು ವಿಶೇಷ.

ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯ ಎಲ್ಲ 7 ಸ್ಥಾನಗಳಲ್ಲೂ ಜಯಭೇರಿ ಬಾರಿಸಿದ್ದರು. ಆದರೆ ಆಪರೇಷನ್ ಕಮಲದ ನಂತರ ನಾರಾಯಣ ಗೌಡ ಬಿಜೆಪಿಗೆ ಶಿಫ್ಟ್ ಆಗಿದ್ದರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆಲ್ಲವು ಮೂಲಕ ಇತಿಹಾಸ ಬರೆದಿದ್ದರು. ಜೊತೆಗೆ ಜೆಡಿಎಸ್ ಒಳಗಿನ ಭಿನ್ನಮತವೂ ಕಾರಣವಾಗಿತ್ತು. ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮಗನನ್ನು ನಿಲ್ಲಿಸಿ ಸೋತಿರುವ ಕುಮಾರಸ್ವಾಮಿ, ಈ ಬಾರಿ ಯಾತ್ರೆಯ ನಡುವೆಯೇ ಭಿನ್ನಮತೀಯ ಮುಖಂಡರನ್ನೆಲ್ಲ ಒಟ್ಟುಗೂಡಿಸಿ ಚುನಾವಣೆಗೆ ಅಣಿಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಕೂಡಾ ತನ್ನದೇ ರೀತಿಯಲ್ಲಿ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುತ್ತಿದ್ದು, ಚೆಲುವರಾಯ ಸ್ವಾಮಿ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ನೇತೃತ್ವ ವಹಿಸಿದ್ದು, ಹಳೇ ದೋಸ್ತಿಗಳ ಹೋರಾಟ ಕುತೂಹಲ ಹುಟ್ಟಿಸಿದೆ.



