



ಇದೆಲ್ಲದರ ನಡುವೆ ಕುತೂಹಲ ಮೂಡಿಸಿರುವುದು ರಾಹುಲ್ ಗಾಂಧಿಯ ಆ ಒಂದು ಮಾತು. ರಾಜನ ಆಯ್ಕೆಯೇನಿದ್ದರೂ ಯುದ್ಧ ಗೆದ್ದ ಬಳಿಕ ಎಂದು ಮಾತನಾಡಿರುವ ರಾಹುಲ್ ಗಾಂಧಿ ಮುಂದಾಳತ್ವ ವಹಿಸಿಕೊಂಡಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರಿಗೂ ಆಸೆ ಹುಟ್ಟಿಸಿದ್ದಾರೆ. ಕಾಂಗ್ರೆಸ್ನಲ್ಲಿ ಅರ್ಹತೆ ಇರುವ ನೂರಾರು ಜನರಿದ್ದಾರೆ. ಅಲ್ಲಿ ಮೂರನೆಯರೂ ರೇಸಿನಲ್ಲಿದ್ದಾರೆ ಎನ್ನುವ ಮಾತನ್ನು ಸುಮ್ಮನೆ ಬ್ಯಾಲೆನ್ಸ್ ಮಾಡುವುದಕ್ಕೆ ಹೇಳಬಹುದೇ ಹೊರತು ವಾಸ್ತವ ಎಲ್ಲರಿಗೂ ಗೊತ್ತು. ರಾಜ್ಯ ರಣರಂಗದ ರಂಗಸ್ಥಳದಲ್ಲೀಗ ಹೂಂ ಅಂತೀಯಾ..ಊಹೂಂ ಅಂತೀಯಾ ಎಂಬ ಹಾಡಿನದ್ದೇ ಸದ್ದು. ಈಗ ರೇಸಿನಲ್ಲಿರೋದು ಇಬ್ಬರು. ಇಬ್ಬರ ಪ್ಲಸ್ಸು ಮೈನಸ್ಸುಗಳ ಲೆಕ್ಕಾಚಾರ ನೋಡೋದಾದರೆ..
ಸಿದ್ಧರಾಮಯ್ಯನವರನ್ನು ತೆಂಡೂಲ್ಕರ್ಗೆ ಹೋಲಿಸಬಹುದು. ಪಿಚ್ ಯಾವ್ದೇ ಇರಲಿ, ಎದುರಾಳಿ ಬೌಲರ್ ಯಾರೇ ಇರಲಿ, ಅಪೋಸಿಟ್ ತಂಡದ ಕ್ಯಾಪ್ಟನ್ ಎಂತಹವರೇ ಇರಲಿ.. ಆಟ ಮಾತ್ರ ಬೊಂಬಾಟ್. ಆದರೆ.. ಒಬ್ಬ ನಾಯಕನಾಗಿ ತೆಂಡೂಲ್ಕರ್ ಫೇಲ್ಯೂರ್ ಆಟಗಾರ. ತಂಡವನ್ನು ಒಟ್ಟುಗೂಡಿಸಿ ಗೆಲುವಿನತ್ತ ಕೊಂಡೊಯ್ಯಲು ವಿಫಲನಾದ ಆಟಗಾರ. ಸಿದ್ದರಾಮಯ್ಯನವರೂ ಹಾಗೆ. ಆದರೆ ತೆಂಡೂಲ್ಕರ್ ಅವರಂತೆಯೇ ಸಿದ್ದುಗೆ ಪ್ರೇಮಿಗಳೂ ಉಂಟು. ದ್ವೇಷ ಮಾಡುವುವರೂ ಉಂಟು. ಹೋಲಿಕೆ ಅಲ್ಲಿಗೇ ಮುಗಿಯುತ್ತೆ.

ಸಿದ್ದರಾಮಯ್ಯ ಅಹಿಂದ ನಾಯಕರಲ್ಲಿ ಜನಪ್ರಿಯ. ಎರಡನೇ ಸಾಲಿನಲ್ಲೂ ಸರಿಸಮ ತೂಗಬಹುದಾದ ಇನ್ನೊಬ್ಬ ನಾಯಕನಿಲ್ಲ. ಕುರುಬ ಸಮುದಾಯದಲ್ಲಂತೂ ನಂ.1 ಲೀಡರ್. ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಬಂದು ಅಬ್ಬರಿಸಿ ಪ್ರಚಾರ ಮಾಡಿದರೆ ನಮಗೇ ಗೆಲುವು ಎಂಬ ನಂಬಿಕೆ ಅನೇಕ ನಾಯಕರಲ್ಲಿದೆ. ಒಂದು ಭಾಷಣದಿಂದ ವೋಟುಗಳನ್ನು ಚೇಂಜ್ ಮಾಡುವ ನಾಯಕರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು. ಮೋದಿ, ಯಡಿಯೂರಪ್ಪ, ದೇವೇಗೌಡರಿಗೂ ಆ ಶಕ್ತಿಯಿದೆ. ಪಕ್ಷದ ಶಾಸಕರಲ್ಲಿಯೂ ಸಿದ್ದು ಡಾರ್ಲಿಂಗ್. ಒಮ್ಮೆ ಸಿಎಂ ಆಗಿದ್ದವರು. ಸರ್ಕಾರದಲ್ಲಿ ಯಾರೇನೇ ಹೆಸರು ಕೆಡಿಸಿಕೊಂಡರು ಸಿದ್ದರಾಮಯ್ಯಗೆ ಕೆಸರು ಅಂಟಿಲ್ಲ ಎನ್ನುವುದು ಸಿದ್ದು ಪ್ರೇಮಿಗಳ ನಂಬಿಕೆ.
ಅದೇ ಡಿಕೆಶಿ ವಿಷಯಕ್ಕೆ ಬಂದರೆ ಪಕ್ಷ ನಿಷ್ಠೆಯಲ್ಲಿ ಅವರನ್ನು ಮೀರಿಸುವವರಿಲ್ಲ. ಹೈಕಮಾಂಡ್ ಒಂದು ಸೂಚನೆ ಕೊಟ್ಟರೆ ತಲೆ ಮೇಲೆ ಹೊತ್ತು ಮಾಡುವ ನಾಯಕ. ನುಗ್ಗಿ ಹೊಡೆಯುವ ಆಟಗಾರ. ಧನಬಲ, ಶಕ್ತಿಬಲ ಹೆಚ್ಚು. ರಾಜ್ಯದ ಒಕ್ಕಲಿಗ ನಾಯಕನಾಗುವ ಹಾದಿಯಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಸದಾ ಕಾರ್ಯೋನ್ಮುಖರನ್ನಾಗಿಸುವ ಶಕ್ತಿಯೂ ಅವರಲ್ಲಿದೆ. ಅದ್ಭುತ ಸಂಘಟಕ.
ಇವೆಲ್ಲವೂ ಪ್ಲಸ್ಸುಗಳಾದವು. ಮೈನಸ್ಸುಗಳ ವಿಚಾರಕ್ಕೆ ಬಂದರೆ ಸಿದ್ದರಾಮಯ್ಯ ಮೇಲೆ ಇಂದಿಗೂ ಒಕ್ಕಲಿಗ, ಲಿಂಗಾಯತರನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ಜಾತ್ಯತೀತತೆ ಹೆಸರಲ್ಲಿ ಮೇಲ್ವರ್ಗದವರನ್ನು ಟಾರ್ಗೆಟ್ ಮಾಡುತ್ತಾರೆ ಎಂಬ ಆರೋಪವೂ ಇದೆ. ಅಲ್ಪಸಂಖ್ಯಾತರ ಅತಿಯಾದ ಓಲೈಕೆ ಸಮಸ್ಯೆ ತಂದೊಡ್ಡಿದೆ ಎಂಬುದನ್ನು ಅಲ್ಲಗಳೆಯುವುದಿಲ್ಲ. ಸಿದ್ದು ಉತ್ಸವಮೂರ್ತಿಯೇ ಹೊರತು, ತೇರಿಗೆ ಹೆಗಲು ಕೊಡುವವರಲ್ಲ. ಜನಬಲ ಇದೆಯಾದರೂ ಧನಬಲ ಕಡಿಮೆ. ಕ್ಷೇತ್ರದ ಹುಡುಕಾಟದಲ್ಲಿ ತೊಡಗಿರುವ ಸಿದ್ದರಾಮಯ್ಯ ಎಲ್ಲ ಪ್ಲಸ್ಸುಗಳ ನಡುವೆಯೂ ವೀಕ್ ಆಗಿ ಕಾಣಿಸುವುದೂ ಅದಕ್ಕೆ.
ಅತ್ತ ಡಿಕೆ ವಿಷಯಕ್ಕೆ ಹೋದರೆ ಅವರ ವ್ಯಕ್ತಿತ್ವವೇ ಅವರಿಗೆ ಮುಳ್ಳು. ರಾಜಕೀಯದಲ್ಲಿ ಇರುವವನಿಗೆ ಎಲ್ಲಿ ತಗ್ಗಬೇಕು ಎಂಬುದು ಗೊತ್ತಿರಬೇಕು. ಆದರೆ ಡಿಕೆಗೆ ತಗ್ಗುವುದು ಗೊತ್ತಿಲ್ಲ. ಎದೆಯುಬ್ಬಿಸಿ ನಡೆಯುವ, ಜೋರು ಧ್ವನಿಯ ಮಾತಿನ, ಪಿಸುಮಾತು ಗೊತ್ತಿಲ್ಲದ, ನಾನು ಹೇಳಿದ್ದೇ ನಡೆಯಬೇಕು ಎಂಬ ವರ್ತನೆಯಿಂದಾಗಿಯೇ ಹಿಂಬಾಲಕರು ಕಡಿಮೆ. ಈ ಗ್ಯಾಪಿನಲ್ಲಿ ಹಿಂಬಾಲಕರಾಗಿ ತೂರಿಕೊಂಡಿರುವ ನಲಪ್ಪಾಡ್ ರಂತಹವರು ಡ್ಯಾಮೇಜ್ ಮಾಡಿದ್ದೇ ಜಾಸ್ತಿ. ಇದರ ಜೊತೆಗೆ ದೇಶದ ಸಕಲ ತನಿಖಾಸಂಸ್ಥೆಗಳೂ ಬೆನ್ನಿಗೆ ಬಿದ್ದಿವೆ. ಕ್ಷೇತ್ರದಲ್ಲಿ ಗೆಲ್ಲುವ ವಿಚಾರದಲ್ಲಿ ಅನುಮಾನವೇನಿಲ್ಲ. ಪರಮೇಶ್ವರ್ ಅವರಿಗಾದ ಸ್ಥಿತಿಯಂತೂ ಆಗುವುದಿಲ್ಲ. ಆದರೆ.. ಫೈನಲ್ ಲೆಕ್ಕಾಚಾರ ಬೇರೆಯದ್ದೇ ಇರುತ್ತೆ.
ಸದ್ಯಕ್ಕೇನೋ ಕಾಂಗ್ರೆಸ್ಗೆ ಪೂರಕವಾದ ವಾತಾವರಣವಂತೂ ಇದೆ. ಇದೇ ಹುಮ್ಮಸ್ಸು ಇದ್ದರೆ ಗೆಲ್ಲಲೂಬಹುದು. ಆದರೆ.. ಗೆದ್ದ ಮೇಲೆ..
ರಾಹುಲ್ ಗಾಂಧಿ ಹೇಳಿರುವಂತೆ ರಿಸಲ್ಟ್ ಬಂದ ಮೇಲೆ ನೋಡೋಣ ಎನ್ನುವ ಮಾತೇ ಎಲ್ಲವನ್ನೂ ಹೇಳುತ್ತೆ. ಡಿಕೆಶಿ ಸಿಎಂ ಆಗಬೇಕೆಂದರೂ.. ಸಿದ್ದು ಸಿಎಂ ಆಗಬೇಕು ಎಂದರೂ.. ಶಾಸಕರ ಬೆಂಬಲ ಬೇಕೇ ಬೇಕು. ಸಂಖ್ಯೆ ಮುಖ್ಯ. ಪಕ್ಷವನ್ನು ಸಂಘಟಿಸುತ್ತಲೆ.. ರಣತಂತ್ರ ರೂಪಿಸುತ್ತಲೇ.. ತನಿಖೆಗಳನ್ನು ಎದುರಿಸುತ್ತಲೇ.. ಗೆಲ್ಲಬಹುದಾದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದು ಸಿದ್ದು ಬಣದ ಸಂಖ್ಯೆಗಿಂತ ಒಂದೂವರೆ ಪಟ್ಟು ಹೆಚ್ಚು ಇರಲೇಬೇಕು. ಈ ಹಿಂದೆ ಖರ್ಗೆ ಅಥವಾ ಸಿದ್ದು ವಾದವಿದ್ದಾಗ ಗೆದ್ದಿದ್ದವರು ಸಿದ್ದು. ಒಂದು ಮೂವ್ ಇಟ್ಟರೆ ಇಡೀ ಸೈನ್ಯ ಕಬಳಿಸುವ ಕಲೆ ಅವರಿಗೂ ಕರಗತವೇ. ಸಿದ್ದು ಜೊತೆ ಜಮೀರ್, ಮಹದೇವ ಪ್ರಸಾದ್, ಆಂಜನೇಯ, ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್.. ಹೀಗೆ ಒಂದಷ್ಟು ನಾಯಕರ ಪಡೆಯಿದೆ. ಆ ವಿಷಯಕ್ಕೆ ಬಂದರೆ ಡಿಕೆ ಡಲ್ಲು ಹೊಡೆಯುತ್ತಾರೆ.
ಇದು ಕಾಂಗ್ರೆಸ್ ನಿಸ್ಸಂಶಯವಾಗಿ 113ಕ್ಕಿಂತ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೇರುವ ದಿನ ಬಂದರೆ ಆಗುವ ಲೆಕ್ಕಾಚಾರ. ಹಾಗಾಗಬೇಕೆಂದರೆ.. ಬಿಜೆಪಿ ಮತ್ತು ಜೆಡಿಎಸ್ ಹೀನಾಯವಾಗಿ ಸೋಲಬೇಕು. ಚುನಾವಣೆಗಿನ್ನೂ ಟೈಮ್ ಇದೆ. ಟ್ವೆಂಟಿ-20 ಕ್ರಿಕೆಟ್ನಲ್ಲಿ ಒಂದು ಓವರ್ ಇಡೀ ಆಟವನ್ನೇ ಹೇಗೆ ಬದಲಿಸುತ್ತೋ.. ಹಾಗೆಯೇ.. ಪಾಲಿಟಿಕ್ಸೂ ಕೂಡಾ. ಸೂಪರ್ ಓವರ್ ಆದರೆ..



