ಆಕಾಶ ದೀಪ ಅನ್ನೋ ಸೀರಿಯಲ್ ನೋಡಿದ್ದವರಿಗೆ ಈಕೆಯ ಹೆಸರು ಚಿರಪರಿಚಿತ. ಕೆಲ ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ಧಾರಾವಾಹಿ ಅದು. ಅಲ್ಲಿ ನಟಿಸುತ್ತಿದ್ದ ನಟಿಯ ಹೆಸರು ದಿವ್ಯಾ ಶ್ರೀಧರ್. ಈಗ ಆಸ್ಪತ್ರೆಯಲ್ಲಿದ್ದಾರೆ. ಪತಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪವನ್ನೂ ಮಾಡಿದ್ದಾರೆ. ಅಲ್ಲದೆ ಲವ್ ಜಿಹಾದ್ ಶಂಕೆಯನ್ನೂ ಇದು ಹುಟ್ಟುಹಾಕಿದೆ. ದೂರನ್ನೂ ದಾಖಲಿಸಿದ್ದಾರೆ.
ದಿವ್ಯಾ ಶ್ರೀಧರ್ ಪತಿಯ ಹೆಸರು ಅರ್ನವ್. ಆತನ ಮೂಲ ಹೆಸರು ಅಮ್ಜದ್. ಆತನೂ ಕಿರುತೆರೆ ನಟ. ತಮಿಳಿನಲ್ಲಿ. ದಿವ್ಯಾ ಅವರಿಗೆ ಅಮ್ಜದ್, ಅರ್ನವ್ ಹೆಸರಲ್ಲಿ ಪರಿಚಯವಾಗಿದ್ದನಂತೆ. ಇವರಿಬ್ಬರೂ 2015ರಿಂದ ಪರಿಚಯವಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿತು. 2017ರಿಂದ ಪ್ರೀತಿಯಲ್ಲಿದ್ದ ಇವರಿಬ್ಬರೂ ಕೊರೊನಾ ಟೈಮಿಗೆ ಮುಂಚೆ ಮದುವೆಯಾಗಿದ್ದರು. ಚೆನ್ನೈನಲ್ಲಿ ಸಂಸಾರ ಹೂಡಿದ್ದರು. ಆದರೆ ದಿವ್ಯಾ ಶ್ರೀಧರ್ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಅಮ್ಜದ್ ಅಲಿಯಾಸ್ ಅರ್ನವ್ ಈಕೆಯ ಮೇಲೆ ಹಲ್ಲೆಗೆ ಮುಂದಾದ. ಹೊಟ್ಟೆಗೆ ಒದ್ದ. ಹಿಂಸೆ ಕೊಟ್ಟ ಎಂದು ದಿವ್ಯಾ ಶ್ರೀಧರ್ ಸ್ವತಃ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದು ತಮಿಳುನಾಡು. ಇಲ್ಲಿ ಯಾರೂ ನಿನ್ನ ರಕ್ಷಣೆಗೆ ಬರಲ್ಲ ಎಂದಿದ್ದನಂತೆ ಅಮ್ಜದ್ ಅಲಿಯಾಸ್ ಅರ್ನವ್. ಈಗ ವಕೀಲರ ಮೂಲಕ ದಿವ್ಯಾ ಶ್ರೀಧರ್ ದೂರು ದಾಖಲಿಸಿದ್ದಾರೆ.








