ಮಾಜಿ ಸಿಎಂ ಸಿದ್ದರಾಮಯ್ಯ. ಕಲರ್ ಕಲರ್ ಕಲರ್ ಫುಲ್ ಪೊಲಿಟಿಷಿಯನ್. ಸಿದ್ದರಾಮಯ್ಯ ಮಾತಿಗೆ ನಿಂತರೆ ಭಾಷಣಕ್ಕೆ ನಿಂತರೆ ಚಪ್ಪಾಳೆಗಳ ಮೇಲೆ ಚಪ್ಪಾಳೆ ಬೀಳುತ್ತವೆ. ಎರಡು ಬಾರಿ ಡಿಸಿಎಂ ಹಾಗೂ ಒಮ್ಮೆ ಸಿಎಂ ಆಗಿರುವ ಸಿದ್ದರಾಮಯ್ಯ ಡೌಟೇ ಇಲ್ಲದಂತೆ ಈ ಭಾರಿಯೂ ಸಿಎಂ ಕ್ಯಾಂಡಿಡೇಟ್. ರಾಜ್ಯದಲ್ಲಿ ಕೆಲವೇ ಕೆಲವು ನಾಯಕರಿಗೆ ತಮ್ಮ ಒಂದು ಭಾಷಣದಿಂದ ಮತದಾರರನ್ನು ಪ್ರಭಾವಿಸುವ ಶಕ್ತಿಯಿದೆ. ಯಡಿಯೂರಪ್ಪ ಮತ್ತು ದೇವೇಗೌಡ ಬಿಟ್ಟರೆ ತಮ್ಮ ಒಂದು ಮಾತಿನಿಂದ ರಾಜ್ಯ ರಾಜಕೀಯದ ಲೆಕ್ಕ ಬುಡಮೇಲು ಮಾಡುವ ಶಕ್ತಿಯಿರುವ ಇನ್ನೊಬ್ಬ ನಾಯಕ ಸಿದ್ದರಾಮಯ್ಯ. ಈಗ ಎಲೆಕ್ಷನ್ ಹತ್ತಿರ ಬಂದಿರುವಾಗಲೇ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನೇಕೆ ಸಿನಿಮಾ ಮಾಡುವ ಸುದ್ದಿ ಹೊರಬೀಳುತ್ತಿದೆ.
ಸಿದ್ದರಾಮಯ್ಯ ಜೀವನವನ್ನು ಸಿನಿಮಾ ಮಾಡುವ ಆಲೋಚನೆ ಮೂಡಿದ್ದು ಮಾಜಿ ಸಚಿವ ಶಿವರಾಜ್ ತಂಗಡಗಿಯವರಿಗೆ. ಎಲೆಕ್ಷನ್ ಕೂಡಾ ಹತ್ತಿರದಲ್ಲೇ ಇದೆ. ಸಿದ್ದರಾಮೋತ್ಸವದ ಸಿನಿಮಾ ಕೂಡಾ ಮಾಡಿದರೆ ಅದು ಸಂಚಲನವನ್ನೇ ಮೂಡಿಸುತ್ತದೆ. ಉತ್ತರ ಕರ್ನಾಟಕದಲ್ಲಿ ನಮಗೆಲ್ಲ ಲಾಭವೂ ಆಗುತ್ತದೆ. ನೀವು ಯೆಸ್ ಅಂದ್ಬಿಡಿ ಸಾರ್, ಮಿಕ್ಕಿದ್ದು ನಾವು ನೋಡಿಕೊಳ್ತೇವೆ ಎಂದಿದ್ದಾರೆ ಶಿವರಾಜ್ ತಂಗಡಗಿ ಮತ್ತಿತರ ನಾಯಕರು.

ಸಿದ್ದರಾಮಯ್ಯ ಪಾತ್ರಕ್ಕೆ ವಿಜಯ್ ಸೇತುಪತಿಯನ್ನ ಆಯ್ಕೆ ಮಾಡಿ, ಜನವರಿ ಹೊತ್ತಿಗೆಲ್ಲ ಮುಹೂರ್ತವನ್ನೂ ಮಾಡುವ ಆಲೋಚನೆ ತಂಗಡಗಿಯವರದ್ದು. ಪರಕಾಯ ಪ್ರವೇಶ ಶಕ್ತಿಯಿರುವ ವಿಜಯ್ ಸೇತುಪತಿಯವರೇ ಸಿದ್ದರಾಮಯ್ಯ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಎನ್ನುವುದು ಉತ್ತರ ಕರ್ನಾಟಕದ ಕಾಂಗ್ರೆಸ್ಸಿಗರ ನಂಬಿಕೆ. ಅಷ್ಟೇ ಅಲ್ಲ, ಚಿತ್ರದ ಕ್ಲೈಮಾಕ್ಸ್ ಹೊತ್ತಿಗೆ ಬರುವ ಈಗಿನ ಸಿದ್ದರಾಮಯ್ಯ ಪಾತ್ರವನ್ನು ಸ್ವತಃ ಸಿದ್ದರಾಮಯ್ಯನವರೇ ಮಾಡಲಿ ಎಂಬ ಉದ್ದೇಶವೂ ಇದ್ದು ಅದಕ್ಕೆಲ್ಲ ಸಿದ್ದು ನೋ ಎಂದಿದ್ದಾರೆ.
ಸಿನಿಮಾ ಬಜೆಟ್ 20 ಕೋಟಿ. ಹೋಗ್ರಯ್ಯಾ.. ಸುಮ್ನೆ ಸಿನ್ಮಾ ಮಾಡಿ 20 ಕೋಟಿ ಯಾಕ್ ಕಳ್ಕೋತೀರಾ ಎಂದು ಬುದ್ದಿ ಹೇಳಿ ಕಳಿಸಿದ್ದಾರೆ. ಆದರೆ.. ಇಂತಹ ವಿಚಾರದಲ್ಲಿ ಸರೆಂಡರ್ ಆಗಬೇಕಿರುವುದು ಸಿದ್ದರಾಮಯ್ಯ. ಚಿತ್ರಕ್ಕೆ ಗಡ್ಡಧಾರಿ ಸಿದ್ದರಾಮಯ್ಯ ಎಂದು ಟೈಟಲ್ ಇಡುವ ಬಗ್ಗೆಯೂ ಚಿಂತನೆ ನಡೆದಿದೆ.
ಕನಕಗಿರಿ ಕ್ಷೇತ್ರವರು ನನ್ನನ್ನೇ ನಟಿಸುವಂತೆ ಕೇಳಿದರು. ನನಗೆ ನಟನೆ ಬರಲ್ಲ. ಬೇಡ ಎಂದೆ. ಬಯೋಪಿಕ್ ಮಾಡುವ ಪ್ಲಾನ್ ತಂದಿದ್ದರು. ಸುಮ್ಮನೆ ಯಾಕೆ, 20 ಕೋಟಿ ವೇಸ್ಟ್ ಮಾಡುತ್ತೀರಿ. ಬೇಡ ಎಂದಿದ್ದೇನೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ. ಇಷ್ಟಕ್ಕೂ ಸಿದ್ದರಾಮಯ್ಯ ಲೈಫಿನಲ್ಲಿ ಸಿನಿಮಾ ಮಾಡುವಂಥದ್ದು ಏನಿದೆ..?

ನೋಡುತ್ತಾ ಹೋದರೆ ಒಂದೊಂದೇ ಕುತೂಹಲಕಾರಿ ಅಂಶಗಳು ತೆರೆಗೆ ಬರುತ್ತವೆ. ಸಿದ್ದರಾಮನ ಹುಂಡಿ ಎಂಬ ಕುಗ್ರಾಮದ ಹುಡುಗ ಸಿಎಂ ಆಗುವ ಕಥೆಯೇ ಒಂದು ರೋಚಕ. ದನ ಕಾಯ್ದುಕೊಂಡಿರುತ್ತಿದ್ದ ಹುಡುಗ ನೇರವಾಗಿ ಸೇರಿದ್ದು 3ನೇ ಕ್ಲಾಸಿಗೆ. ಮರಳಿನಲ್ಲಿ ಅಕ್ಷರ ತಿದ್ದುತ್ತಿದ್ದ ಸಿದ್ದರಾಮೇಗೌಡ ಎಂಬ ಬಾಲಕ ತನ್ನ ಒಂದು ಸಹಿಯ ಮೂಲಕವೇ ರಾಜ್ಯದ ಭವಿಷ್ಯ ನಿರ್ಧರಿಸಿದ್ದು ಇನ್ನೂ ರೋಚಕ. ಮದುವೆಯೇ ಬೇಡ ಎಂದು ತಮಗಿಂತ ಮೊದಲು ತಮ್ಮ ತಮ್ಮನಿಗೆ ಮದುವೆ ಮಾಡಿದ್ದು, ಲಾಯರ್ ಓದಿದ್ದು, ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿಯಂತಹವರ ಜೊತೆಯಾಗಿದ್ದು, ಆ ಮೂಲಕ ರಾಜಕೀಯಕ್ಕೆ ಅಡಿಯಿಟ್ಟಿದ್ದು… ಎಲ್ಲವೂ ಥ್ರಿಲ್ ಕೊಡುತ್ತವೆ.
ಹೋರಾಟದ ಮೂಲಕವೇ ನಾಯಕರಾದ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್, ದೇವೇಗೌಡ ಜೊತೆಗಿನ ಒಡನಾಟ..ಅಧಿಕಾರ, ಜನತಾದಳ, ಜಾತ್ಯತೀತ ಜನತಾದಳಗಳ ಹುಟ್ಟು, ಹೋರಾಟ.. ಸೋನಿಯಾ ಗಾಂಧಿ ಮೂಲಕ ಕಾಂಗ್ರೆಸ್ ಸೇರಿದ್ದು, ಪ್ರತಿಪಕ್ಷ ನಾಯಕರಾಗಿದ್ದು, ಸಿಎಂ ಆಗಿದ್ದು.. ಅಷ್ಟೇ ಏಕೆ.. ಜೆಡಿಎಸ್ ತೊರೆದಾಗ ಕಾಂಗ್ರೆಸ್ ಸೇರಿ ಗೆದ್ದ ಚಾಮುಂಡೇಶ್ವರಿ ಉಪ ಚುನಾವಣೆಯೇ ಒಂದು ಸಿನಿಮಾಗಾಗುವಷ್ಟಿದೆ. ಈಗ ಮತ್ತೊಮ್ಮೆ ಸಿಎಂ ಆಗುವ ಅವಕಾಶವಿದೆ.
ಸೆಂಟಿಮೆಂಟ್ ವಿಷಯಕ್ಕೆ ಬಂದರೆ ಸಿದ್ದರಾಮಯ್ಯ ಸಂಬಂಧಗಳಿಗೆ ಬೆಲೆ ಕೊಟ್ಟವರು.ತಾಯಿ, ತಂದೆ, ತಮ್ಮಂದಿರ ಜೊತೆಗಿನ ಬಾಂಧವ್ಯ ಅದ್ಭುತವಾಗಿಯೇ ಇದೆ. ರೊಮ್ಯಾಂಟಿಕ್ ವಿಷಯಕ್ಕೆ ಬಂದರೆ ಸಿದ್ದರಾಮಯ್ಯನವರೇ ಸ್ವತಃ ಹೇಳಬೇಕು. ಆಕ್ಷನ್ ವಿಚಾರಕ್ಕೆ ಬಂದರೆ ಹೊಡೆದಾಟದ ಸ್ಟೋರಿಗಳಿವೆ. ಡ್ಯಾನ್ಸ್ ವಿಷಯಕ್ಕೆ ಬಂದರೆ ಸ್ವತಃ ಸಿದ್ದರಾಮಯ್ಯ ವೀರಕುಣಿತ ಮಾಡುವವರು. ಎದುರಾಳಿಗೆ ಶಾಕ್ ಕೊಟ್ಟಷ್ಟೇ.. ತಾವೂ ಕೂಡಾ ಶಾಕ್ ಅನುಭವಿಸಿದ್ದಾರೆ. ಒಟ್ಟಿನಲ್ಲಿ ನವರಸಗಳೂ ಇರುವ ಕಥೆ ಸಿದ್ದರಾಮಯ್ಯನವರ ಲೈಫು. ಸಿನಿಮಾ ಮಾಡೋಕ್ಕಾಗಲ್ವಾ?



