ಶತಶತಮಾನಗಳಿಂದ ನಾವು ಓದುತ್ತಿರುವ ಇತಿಹಾಸ ಹೇಗಿದೆ ಎಂದರೆ.. ನಮ್ಮನ್ನು ಲೂಟಿ ಮಾಡಿದರು. ನಮ್ಮನ್ನು ಹೀನಾಯವಾಗಿ ಸೋಲಿಸಿದರು. ನಮ್ಮನ್ನು ಹಿಂಸಿಸಿದರು… ನಾವು ದೌರ್ಜನ್ಯಕ್ಕೊಳಗಾದೆವು.. ಬರೀ ಇಂತಹ ಇತಿಹಾಸವನ್ನೇ ಓದುತ್ತಿದ್ದೇವೆ. ಆದರೆ ಭಾರತದ ಇತಿಹಾಸದಲ್ಲಿ ಶೌರ್ಯ ಮೆರೆದವರಿದ್ದಾರೆ. ದಿಗ್ವಿಜಯ ಸಾಧಿಸಿದವರಿದ್ದಾರೆ. ಸಾಹಸಗಳ ಕಥೆಗಳಿವೆ. ತ್ಯಾಗ ಬಲಿದಾನದ ಕಥೆಗಳಿವೆ. ಆದರೆ ನಾವು ಸ್ವಾತಂತ್ರ್ಯಪೂರ್ವದಲ್ಲಿ ಗುಲಾಮಿತನಕ್ಕಾಗಿಯೇ ಸೃಷ್ಟಿಸಿದ ಕಥೆಗಳನ್ನೇ ಇತಿಹಾಸ ಎಂದು ಓದುತ್ತಿದ್ದೇವೆ. ಅದು ಬದಲಾಗಬೇಕು. ನಮ್ಮ ದೇಶದ ಹೆಮ್ಮೆಯ ಕಥೆಗಳು, ಸಂಸ್ಕøತಿಯನ್ನು ಬಿಂಬಿಸುವ ಹೊಸ ಇತಿಹಾಸ ಬರೆಯಬೇಕು..ಇಂಥಾದ್ದೊಂದು ಮಾತು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಅಂದಹಾಗೆ ಮೋದಿ ಈ ಮಾತು ಹೇಳಿದ್ದು ಅಸ್ಸಾಮಿನಲ್ಲಿದ್ದ ಅಹೋಮ್ ಸಾಮ್ರಾಜ್ಯದ ಹೋರಾಟದ ಕಥೆಯನ್ನು. ಅಹೋಮ್ ಸಾಮ್ರಾಜ್ಯದ ಸೇನಾಧಿಪತಿ ಲಚಿತ್ ಬೋರ್ಪುಖಾನ್ ಎಂಬ ವೀರಯೋಧನ 400ನೇ ಜನ್ಮ ದಿನಾಚರಣೆಯಲ್ಲಿ. ಈ ಲಚಿತ್ ಬರ್ಪುಖಾನ್ ಮೊಘಲರನ್ನು ಒಂದಲ್ಲ..ಎರಡಲ್ಲ.. ಮೂರಲ್ಲ.. 17 ಸಲ ಹೀನಾಯವಾಗಿ ಸೋಲಿಸಿದ್ದ. ಬ್ರಹ್ಮಪುತ್ರ ನದಿ ದಾಟಿ ಬರಲು ಮೊಘಲರಿಗೆ ಅವಕಾಶವನ್ನೇ ಕೊಟ್ಟಿಲ್ಲ. ಅಂತಹ ವೀರಯೋಧನ ಚರಿತ್ರೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಇಲ್ಲ. ಅಂತಹ ವೀರರ ಕಥೆ, ಇತಿಹಾಸವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಲಚಿತ್ ಬರ್ಪುಖಾನ್ ಮೊಘಲರಿಗೆ ಸಿಂಹಸ್ವಪ್ನವಾಗಿದ್ದ. ಅಸ್ಸಾಂನ ಗುವಾಹಟಿಯನ್ನು ಗೆಲ್ಲಲು ಔರಂಗಜೇಬ್ ಮಾಡಿದ ಪ್ರಯತ್ನಗಳು ಒಂದೆರಡಲ್ಲ. ಕುತಂತ್ರಗಳೂ ಒಂದೆರಡಲ್ಲ. ಆದರೆ ಎಲ್ಲವನ್ನೂ ಮೆಟ್ಟಿ ನಿಂತ ಲಚಿತ್ ಬರ್ಪುಖಾನ್ ಒಂದು ಹಂತದಲ್ಲಿ ತನ್ನ ಚಿಕ್ಕಪ್ಪನನ್ನೇ ಕೊಲ್ಲುತ್ತಾನೆ. ಲಚಿತ್ ಬರ್ಪುಖಾನ್ ಚಿಕ್ಕಪ್ಪ ಔರಂಗಜೇಬ್ ಕುತಂತ್ರಕ್ಕೆ ಸಿಕ್ಕು ದ್ರೋಹ ಮಾಡಲು ಹೊರಟಾಗ ತನಗೆ ತನ್ನ ದೇಶವೇ ಮುಖ್ಯ ಎನ್ನುತ್ತಾನೆ. ದೇಶವೇ ಮೊದಲು ಇಂತಹವರ ವೀರಗಾಥೆಗಳನ್ನು ಮುಂದಿನ ಪೀಳಿಗೆಯವರಿಗೆ ಹೇಳಬೇಕು. ಭಾರತಾಂಬೆಯ ಮಕ್ಕಳ ಕಥೆಗಳು ಈ ಮಣ್ಣಿನಲ್ಲಿ ಬೆರೆತಿವೆ. ಅಂತಹ ಕಥೆಗಳನ್ನು ಹೇಳಬೇಕು. ಇತಿಹಾಸ ಮರುನಿರ್ಮಾಣ ಆಗಬೇಕು ಎಂದು ಕರೆ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ.



