ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನಿಂದ ಹಾರಿ ಹೋದ ಕೆಲವು ಶಾಸಕರು ಕಾರಣ ಎನ್ನುವುದು ರಹಸ್ಯವೇನಲ್ಲ. ಆದರೆ ಅವರು ಹಾರಿಹೋಗುವುದರ ಹಿಂದೆ ಬಿಜೆಪಿಯ ಕೆಲವು ಪ್ರಭಾವಿ ನಾಯಕರ ಹೆಸರಿತ್ತು. ವಿಜಯೇಂದ್ರ ಯಡಿಯೂರಪ್ಪ, ಸಿ.ಪಿ.ಯೋಗೀಶ್ವರ್, ಅಶ್ವತ್ಥ್ ನಾರಾಯಣ್ ಸೇರಿದಂತೆ ಹಲವರು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವು ಅತೃಪ್ತ ಶಾಸಕರನ್ನು ತಮ್ಮತ್ತ ಸೆಳೆದಿದ್ದರು. ಈ ಎಲ್ಲ ಬೆಳವಣಿಗೆ ನಡೆಯುವ ವೇಳೆ ಕುಮಾರಸ್ವಾಮಿ ವಿದೇಶದಲ್ಲಿದ್ದರು. ಗೊತ್ತಿದ್ದೂ ವಿದೇಶಕ್ಕೆ ಹೋಗದೇ ಇದ್ದರೆ ಅಥವಾ ಶಾಸಕರ ಅಸಮಾಧಾನವನ್ನು ಸ್ವಲ್ಪ ಸೀರಿಯಸ್ಸಾಗಿ ತೆಗೆದುಕೊಂಡಿದ್ದರೆ ಸರ್ಕಾರವನ್ನು ರಕ್ಷಿಸಬಹುದಿತ್ತೇನೋ.. ಕುಮಾರಸ್ವಾಮಿ ಅವರ ನಿರ್ಲಿಪ್ತತೆ ಮತ್ತಿತರ ಗುಣಗಳೂ ಅದಕ್ಕೆ ಪೂರಕವಾದವು ಎನ್ನುವುದು ರಹಸ್ಯವೇನಲ್ಲ. ಸರ್ಕಾರ ಪತನವಾದಾಗ ಕುಮಾರಸ್ವಾಮಿ ಹಲವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಸ್ಯಾಂಟ್ರೋ ರವಿ ಎಂಬಾತನ ಹೆಸರು ಹೇಳಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿಯೇ ಸ್ಯಾಂಟ್ರೋ ರವಿ ಎಂಬುವವನ ಜೊತೆ ಬಿಜೆಪಿಯ ನಾಯಕರು ಇರುವ ಫೋಟೋಗಳನ್ನು ಹೊರಬಿಟ್ಟಿದ್ದಾರೆ ಕುಮಾರಸ್ವಾಮಿ. ಬಿಜೆಪಿಯ ಕೆಲವು ಪ್ರಭಾವಿ ಸಚಿವರು ಸ್ಯಾಂಟ್ರೋ ರವಿ ಜೊತೆ ಇರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ ಸ್ಯಾಂಟ್ರೋ ರವಿಯ ಕುರಿತು ಪ್ರಶ್ನೆಗಳನ್ನೆತ್ತಿದರು. ಸಮ್ಮಿಶ್ರ ಸರ್ಕಾರ ಬೀಳಿಸುವ ವೇಳೆ ಕೆಲವು ಶಾಸಕರ ಮೋಜು ಮಸ್ತಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕರೆ ಸ್ಯಾಂಟ್ರೋ ರವಿಯ ಇತಿಹಾಸ ಹೊರಬೀಳುತ್ತದೆ ಎನ್ನುವುದು ಹೆಚ್‍ಡಿಕೆ ವಾದ.

ಸ್ಯಾಂಟ್ರೋ ರವಿಯ ಜೊತೆ ಬಿಜೆಪಿಯ ಹಲವು ಸಚಿವರ ಸಂಪರ್ಕವಿದೆ. ಆದರೆ ಈತನನ್ನು ಹಾಗೂ ಈತನ ಬಗ್ಗೆಗಿನ ಮಾಹಿತಿಯನ್ನು ರಹಸ್ಯವಾಗಿಟ್ಟಿರೋದ್ಯಾಕೆ? ಕುಮಾರಕೃಪದಲ್ಲಿ ಅತಿಥಿ ಗೃಹದಲ್ಲಿ ಈತನಿಗೆ ಕೊಠಡಿ ಕೊಡಿಸಿದ್ದವರು ಯಾರು? ಶಿಫಾರಸು ಮಾಡಿದ್ದು ಯಾರು? ಈತನ ಹಿಂದಿರುವ ಪ್ರಭಾವಿ ನಾಯಕ ಯಾರು..? ಈತನ ಮಾಹಿತಿ ರಹಸ್ಯವಾಗಿಡಲು ಕಾರಣವೇನು? ಹೀಗೆ ಹಲವು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ ಕುಮಾರಸ್ವಾಮಿ. ಬಾಂಬೆಗೆ 12 ಶಾಸಕರು ಹೋದರು. ಅದರ ಜೊತೆಯಲ್ಲೇ 12 ಹೆಣ್ಣು ಮಕ್ಕಳೂ ಹೋದರು. ಕರೆದುಕೊಂಡು ಹೋಗಿದ್ದು ಯಾರು ಎನ್ನುವುದು ಹೆಚ್‍ಡಿಕೆ ಪ್ರಶ್ನೆ.

ಯಾರಿದು ಸ್ಯಾಂಟ್ರೋ ರವಿ..?
ಇತ್ತೀಚೆಗೆ ಮಹಿಳೆಯೊಬ್ಬರು ಕೆಲಸ ಕೊಡಿಸುವ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದ ಎಂದು ಸ್ಯಾಂಟ್ರೋ ರವಿ ವಿರುದ್ಧ ದೂರು ಕೊಟ್ಟಿದ್ದರು. ಸ್ಯಾಂಟ್ರೋ ರವಿ ಮಾರಕ ಕಾಯಿಲೆ ಇದೆ. ಹೀಗಿದ್ದೂ ಅತ್ಯಾಚಾರ ಎಸಗಿ, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಸ್ಯಾಂಟ್ರೋ ರವಿಯ ವೊರಿಜಿನಲ್ ಹೆಸರು ಕೆ.ಎಸ್.ಮಂಜುನಾಥ್ ಎಂಬ ಹೆಸರೂ ಇದ್ದು, ಸ್ಯಾಂಟ್ರೋ ರವಿ ಎಂದೇ ಪರಿಚಿತ. ಕಳೆದ ವರ್ಷ ಡಿವೈಎಸ್‍ಪಿಯೊಬ್ಬರಿಗೆ ನನ್ನನ್ನು ಸಾರ್ ಎಂದು ಯಾಕೆ ಕರೀತಿಲ್ಲ. ಮುಖ್ಯಮಂತ್ರಿಗಳೇ ನನ್ನನ್ನು ಸಾರ್ ಅಂತಾರೆ ಎಂದು ಆವಾಜ್ ಹಾಕಿದ್ದ ಆಡಿಯೋ ವೈರಲ್ ಆಗಿತ್ತು. ದಲಿತ ಯುವತಿ ನೀಡಿರುವ ಅತ್ಯಾಚಾರ ಕೇಸ್ ತನಿಖೆ ಇನ್ನೂ ನಡೆಯುತ್ತಿದೆ.



