ಸದ್ಯಕ್ಕೆ ದೇಶದಾದ್ಯಂತ ಸುದ್ದಿಯಲ್ಲಿರುವ ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಒಂದು ವಾರಾಣಸಿಯ ಜ್ಞಾನವಾಪಿ ಶಿವಲಿಂಗದ್ದು. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಲೇ ಜ್ಞಾನವಾಪಿ ಮಸೀದಿ ಇದೆ. ಆ ಮಸೀದಿಯಲ್ಲಿಯೇ ಈ ಜ್ಞಾನವಾಪಿ ಶಿವಲಿಂಗ ಸಿಕ್ಕಿದ್ದು ಇದರ ವೈಜ್ಞಾನಿಕ ಪರೀಕ್ಷೆಗಾಗಿ ಕಾರ್ಬನ್ ಡೇಟಿಂಗ್ ಟೆಸ್ಟ್ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು. ಈಗ ವಾರಾಣಸಿ ಜಿಲ್ಲಾ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ಹಿಂದೂಗಳಿಗೆ ನಿರಾಸೆಯಾಗಿರುವುದಂತೂ ನಿಜ.
ಜ್ಞಾನವಾಪಿ ಮಸೀದಿ ಮೂಲತಃ ದೇಗುಲ. ಅದನ್ನು ಔರಂಗಜೇಬ್ ಕಾಲದಲ್ಲಿ ಒಡೆಯಲಾಗಿತ್ತು. ಮಸೀದಿಯನ್ನು ಕಟ್ಟಿದ್ದು ದೇಗುಲದ ಮೇಲೆ. ಅದು ಇತಿಹಾಸ. ಮಸೀದಿ ಆವರಣದಲ್ಲಿ ಶೃಂಗಾರ ಗೌರಿ ವಿಗ್ರಹಗಳು ಈಗಲೂ ಇವೆ. ಮಸೀದಿಯ ಎದುರು ನಂದಿಯ ವಿಗ್ರಹವೂ ಇದೆ. ನಂದಿ ವಿಗ್ರಹ ಶಿವಲಿಂಗಕ್ಕೆ ಎದುರಾಗಿಯೇ ಇರುತ್ತದೆ ಎನ್ನುವುದು ಸತ್ಯ. ಹೀಗಾಗಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆ. 

ಕಾರ್ಬನ್ ಡೇಟಿಂಗ್ ಮಾಡಿದರೆ ಶಿವಲಿಂಗ ಎಷ್ಟು ವರ್ಷ ಹಳೆಯದು ಎಂಬುದನ್ನು ವೈಜ್ಞಾನಿಕವಾಗಿ ಹೇಳಬಹುದು ಎನ್ನುವುದು ಹಿಂದೂಗಳ ವಾದ. ಆದರೆ ವಾರಣಾಸಿ ಕೋರ್ಟ್ ನಿರಾಕರಿಸಿದೆ. ಇದೇ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಮತ್ತೆ ವಾರಾಣಸಿ ಕೋರ್ಟ್ ಅಂಗಳಕ್ಕೆ ಬರುವ ಮುಂಚೆ ಸುಪ್ರೀಂಕೋರ್ಟ್ ಶಿವಲಿಂಗಕ್ಕೆ ಯಾವುದೇ ಹಾನಿಯಾಗುವುದು ಬೇಡ ಎಂದು ಸೂಚಿಸಿತ್ತು. ಅದಂತೆಯೇ ಸ್ಥಳ ಹಾಗೂ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಮಸೀದಿಯೊಳಗೆ ಕಾರ್ಬನ್ ಡೇಟಿಂಗ್ ಅಥವಾ ರಾಡಾರ್ ಯಾವುದನ್ನೇ ಬಳಸಿದರೂ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗುತ್ತದೆ ಹಾಗೂ ಸುಪ್ರೀಂಕೋರ್ಟಿನ ತೀರ್ಪು ಉಲ್ಲಂಘನೆಯಾಗುತ್ತದೆ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಹೇಳಿದೆ.



