ಸಿದ್ದರಾಮಯ್ಯ ಎಲ್ಲಿ ನಿಲ್ಲುವುದು ಎಂದು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಬಿಜೆಪಿಯನ್ನು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತೇವೆ ಎಂದು ಹುಮ್ಮಸ್ಸಿನಲ್ಲಿ ಅಬ್ಬರಿಸುತ್ತಿರುವ ಸಿದ್ದರಾಮಯ್ಯ, ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬುದನ್ನೇ ಇನ್ನೂ ಫೈನಲ್ ಮಾಡಿಲ್ಲ. ಬಾದಾಮಿಯಲ್ಲಂತೂ ನಿಲ್ಲಲ್ಲ. ಅದು ಬೆಂಗಳೂರಿಂದ ದೂರ ಎಂದಿರುವ ಸಿದ್ದರಾಮಯ್ಯ, ಕೋಲಾರದಲ್ಲೊಂದು ರೌಂಡ್ ಹಾಕಿದ್ದರು. ಆ ದಿನ ಎಲ್ಲ ಜಾತಿ, ಸಮುದಾಯ, ಧರ್ಮದವರನ್ನೂ ರೀಚ್ ಮಾಡುವ ಉದ್ದೇಶದಿಂದ ದೇವಸ್ಥಾನ, ಚರ್ಚು, ಮಸೀದಿ, ಕುರುಬರು, ಲಿಂಗಾಯರು, ಒಕ್ಕಲಿಗರು.. ಹೀಗೆ ಎಲ್ಲರನ್ನೂ ಟಚ್ ಮಾಡುವ ಪ್ರಯತ್ನ ಮಾಡಿದ್ದರು. ಅದೇ ದಿನ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂಬ ಹೇಳಿಕೆ ಕೊಟ್ಟು ಕೋಲಾರವೇ ಫೈನಲ್ ಎಂದಿದ್ದರು. ಆದರೆ ಬೆಂಗಳೂರಿಗೆ ವಾಪಸ್ ಆದ ನಂತರವೇ ರಿಯಾಲಿಟಿ ಅರ್ಥವಾಗತೊಡಗಿದ್ದು.

ಕೋಲಾರಕ್ಕೆ ಹೋಗಿ ಘೋಷಣೆ ಮಾಡುವುದಕ್ಕೂ ಮೊದಲು ಕಾಣಿಸಿದ್ದ ಪಾಸಿಟಿವ್ ಅಂಶಗಳೇ ನೆಗೆಟಿವ್ ಆಗಿ ಕಾಣಿಸೋಕೆ ಶುರುವಾಗಿದ್ದವು. ಈಗ ನೀವು ನಿಲ್ಲಿ, ನಾವು ಗೆಲ್ಲಿಸುತ್ತೇವೆ ಎಂದು ಮಾತನಾಡುತ್ತಿರುವುದು ರಮೇಶ್ ಕುಮಾರ್ ಬಣ ಮಾತ್ರ. ಏಕೆಂದರೆ ನಾನು ಸಿದ್ದರಾಮಯ್ಯ ವಿರೋಧಿ ಅಲ್ಲ, ಅವರು ನಿಂತರೆ ಗೆಲ್ಲಿಸುತ್ತೇವೆ ಎಂದು ಜಿಲ್ಲೆಯ ಪ್ರಭಾವಿ ನಾಯಕ ಮುನಿಯಪ್ಪನವರೇನೋ ಹೇಳಿದ್ದಾರೆ. ಆದರೆ ಅದಕ್ಕೆ ಮುನ್ನ ಕೋಲಾರದಲ್ಲಿ ನಿಲ್ಲುವ ಮುನ್ನ ಎಲ್ಲರನ್ನೂ ಒಟ್ಟುಗೂಡಿಸಬೇಕು ಎಂದಿದ್ದ ಅವರ ಮಾತನ್ನು ಸಿದ್ದು ಮರೆಯಲು ಆಗುತ್ತಿಲ್ಲ. ಜೊತೆಗೆ ತಾವು ಕೋಲಾರಕ್ಕೆ ಹೋದ ದಿನ ಮುನಿಯಪ್ಪ ಪುತ್ರಿ ರೂಪಾ ಶಶಿಧರ್ ಇರಲಿಲ್ಲ ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿಯೇ ನಿಧಾನವಾದರೂ ಪರವಾಗಿಲ್ಲ, ಪರ್ಫೆಕ್ಟ್ ಒಪೀನಿಯನ್ ಕೊಡಿ ಎಂದಿದ್ದಾರಂತೆ ಸಿದ್ದರಾಮಯ್ಯ.
ಆ ವರದಿಯ ಪ್ರಕಾರ..
ಪಕ್ಷದಲ್ಲಿರುವ ಕೆಲವು ನಾಯಕರು ನಿಮ್ಮ ಸೋಲನ್ನು ಎದುರು ನೋಡುತ್ತಿದ್ದಾರೆ. ಅವರಿಗೆ ನೀವು ಗೆಲ್ಲುವುದು ಬೇಕಿಲ್ಲ.
ಎಡಗೈ ಮತ್ತು ಬಲಗೈ ಮತಗಳು ನಾವು ನಿರೀಕ್ಷಿಸಿದಂತೆ ಕೈ ಹಿಡಿಯುವ ಸಾಧ್ಯತೆ ಕಡಿಮೆ.
ಶ್ರೀನಿವಾಸ ಗೌಡರು ಪಕ್ಷಕ್ಕೆ ಬಂದಿರೋದು, ಪಕ್ಷದ ಒಕ್ಕಲಿಗ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಅವರನ್ನು ಕರೆತಂದವರೂ ನೀವೇ. ಇದು ಉಲ್ಟಾ ಹೊಡೆಯಬಹುದು.
ನೀವು ಬರುವವವರೆಗೆ ಕುರುಬರದ್ದು ಸಾಲಿಡ್ ವೋಟು ಸಿದ್ದರಾಮಯ್ಯಗೆ ಎನ್ನುವ ಸ್ಥಿತಿ ಇತ್ತು. ಆದರೆ ನೀವು ಬಂದ ಹೋದ ಮೇಲೆಯೇ ವರ್ತೂರು ಪ್ರಭಾವ ಗೊತ್ತಾಗುತ್ತಿದೆ. ಕುರುಬರ ಮತಗಳೂ ಸರಳವಾಗಿ ಬುಟ್ಟಿಗೆ ಬೀಳುವುದಿಲ್ಲ.
ಮುಸ್ಲಿಮರ ಸಾಲಿಡ್ ಬೆಂಬಲ ಸಿಗಬಹುದು. ಆದರೆ ಜೆಡಿಎಸ್ ಮತ್ತು ಓವೈಸಿ ಪಕ್ಷದಿಂದ ಸ್ಟ್ರಾಂಗ್ ಕ್ಯಾಂಡಿಡೇಟ್ ನಿಂತರೆ ಮುಸ್ಲಿಮರ ಮತಗಳೂ ವಿಭಜನೆಯಾಗಬಹುದು.
ಹೀಗೆ ಅಭಿಪ್ರಾಯಗಳು ಬಂದಿದ್ದೇ ತಡ ಸಿದ್ದರಾಮಯ್ಯ ಹುಷಾರಾಗಿದ್ದಾರೆ. ಜೊತೆಗೆ ಆ ಅಭಿಪ್ರಾಯ ಕೊಟ್ಟವರೂ ಕೂಡಾ ಸಿದ್ದುಗೆ ಹೇಳುತ್ತಿರೋದು ವರುಣಾ ಕ್ಷೇತ್ರವನ್ನೇ. ವರುಣಾ ಕ್ಷೇತ್ರದ ಇಂಚಿಂಚು ರಾಜಕೀಯವೂ ಸಿದ್ದುಗೆ ಗೊತ್ತು. ಯಾರು ಏನೇ ತಂತ್ರ ಮಾಡಿದರೂ ಅದನ್ನು ಸ್ವತಃ ಸಿದ್ದರಾಮಯ್ಯನವರೇ ಎದುರಿಸಬಹುದು. ಹೀಗಾಗಿ ವರುಣಾ ಈಸ್ ಸೇಫ್ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಎರಡು ಕ್ಷೇತ್ರದಲ್ಲಿ ನಿಲ್ಲುವ ಸಾಧ್ಯತೆಯಂತೂ ಇಲ್ಲ. ಏಕೆಂದರೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಬಹಿರಂಗವಾಗಿಯೇ ಯಾರಿಗೂ ಎರಡು ಟಿಕೆಟ್ ಇಲ್ಲ ಎಂದು ಘೋಷಿಸಿ ಆಗಿದೆ. ಅದನ್ನು ಸಿದ್ದರಾಮಯ್ಯ ಅವರನ್ನು ಉದ್ದೇಶವಾಗಿಟ್ಟುಕೊಂಡೇ ಹೇಳಿದ್ದಾರೆ ಎನ್ನುವುದು ಸಿದ್ದರಾಮಯ್ಯ ಬೆಂಬಲಿಗರ ವಾದ. ಹಾಗೇನಿಲ್ಲ ಎನ್ನುವುದು ಡಿಕೆ ಬಣದವರ ವಾದ. ಇದು ಹೀಗೆ ಎನ್ನುವ ಸಂದೇಶಕ್ಕಿಂತ ಹಂಗಲ್ಲ ಎಂಬ ಮಾತು ಕೊಡುವ ಸಂದೇಶಕ್ಕೆ ರಾಜಕೀಯದಲ್ಲಿ ಬೆಲೆ ಜಾಸ್ತಿ. ಇಷ್ಟಕ್ಕೂ ಕಾಂಗ್ರೆಸ್ಸಿಗೆ ಬಂದ ದಿನದಿಂದಲೂ ಸಿದ್ದುಗೆ ಪರ್ಫೆಕ್ಟ್ ಫೈಟ್ ಕೊಟ್ಟೂ, ವಿವಾದ ಮಾಡಿಕೊಳ್ಳದಂತೆ ಸಿದ್ದುಗೆ ಮಾತನಾಡುವ ಅವಕಾಶವೂ ಸಿಗದಂತೆ ಡಿಕೆಶಿ ನಡೆಸುತ್ತಿರುವ ಆಟ ರೋಮಾಂಚಕವಾಗಿಯೇನೋ ಇದೆ. ಇತಿಹಾಸದಲ್ಲಿ ಸಿದ್ದರಾಮಯ್ಯ ಏನೇ ಗೆದ್ದಿರಬಹುದು, ಈಗ ಆ ಆಟದಲ್ಲಿ ಅಷ್ಟೇ ಚತುರ ಚದುರಂಗ ಆಡುತ್ತಿರೋದು ಡಿಕೆ. ಆಟ ಕುತೂಹಲ ಘಟ್ಟದಲ್ಲಿದೆ.



