ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ವಿವಿಧ ಕಾರಣಗಳಿಗಾಗಿ ಮಹತ್ವ ಪಡೆದುಕೊಂಡಿತ್ತು. ಒಂದು ಕಡೆ ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಅದರ ಮುಂದಿನ ಕೆಲಸವನ್ನು ಮಾಡಬೇಕಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೀಸಲಾತಿ ಹೆಚ್ಚಳದ ಆದೇಶ ಹೊರಬಿದ್ದ ದಿನದಿಂದ ಸಂವಿಧಾನದ 9ನೇ ತಿದ್ದುಪಡಿಗೆ ಏಕೆ ಕಳಿಸಿಲ್ಲ ಎಂದು ಕೆಣಕುತ್ತಾ, ಮೀಸಲಾತಿ ಏರಿಕೆಯ ಲಾಭ, ಬಿಜೆಪಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದರು. ಅತ್ತ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿಗಳೂ ಅಷ್ಟೆ, ಅಮಿತ್ ಶಾರನ್ನೂ ಭೇಟಿ ಮಾಡದೆ ಬೇರೆಯದೇ ಸಂದೇಶ ಕೊಟ್ಟಿದ್ದರು. ಇದೆಲ್ಲವನ್ನೂ ಗಮನಿಸುತ್ತಲೇ ಇದ್ದವರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಂವಿಧಾನದ 9ನೇ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ ಪಡೆದುಕೊಂಡೇ ವಾಲ್ಮೀಕಿ ಜಾತ್ರೆಗೆ ಬಂದಿದ್ದರು. ಆದರೆ ಆ ಖುಷಿ, ಸಾಧನೆಯನ್ನು ವಾಲ್ಮೀಕಿ ಜಾತ್ರೆಯಲ್ಲೇ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. ಕಾರಣ ಸುದೀಪ್ ಫ್ಯಾನ್ಸ್.
ದಾವಣಗೆರೆಯ ಹರಿಹರದಲ್ಲಿರೋ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಸುದೀಪ್ ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದು ಅಚ್ಚರಿಯೇನಲ್ಲ. ಕಳೆದ ಬಾರಿ ಸುದೀಪ್ ಬಂದಿದ್ದರು. ಸಾಮಾನ್ಯವಾಗಿ ವಾಲ್ಮೀಕಿ ಸಮುದಾಯದ ಹಿರಿಯರು, ಸೆಲಬ್ರಿಟಿಗಳನ್ನೆಲ್ಲ ವಾಲ್ಮೀಕಿ ಜಾತ್ರೆಗೆ ಕರೆದು ಗೌರವಿಸುವ ಪದ್ಧತಿ ಇದೆ. ಈ ಬಾರಿಯೂ ಹಾಗೆಯೇ ಆಯಿತು. ಸುದೀಪ್ ಬರುತ್ತಾರೆಂದು ಸುದ್ದಿ ಹಬ್ಬಿ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಆದರೆ, ಸುದೀಪ್ ಬರಲಿಲ್ಲ. ಅದು ವಿಪರೀತಕ್ಕೂ ಹೋಯ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಭಾಷಣಕ್ಕೂ ಅಡ್ಡಿಯಾಗುವಷ್ಟರ ಮಟ್ಟಿಗೆ ಹೋಯಿತು.




ಸ್ನೇಹಿತರಿಗೆ ನಲ್ಮೆಯ ನಮಸ್ಕಾರ -ದಾವಣಗೆರೆಯ ಜಿಲ್ಲೆಯ ರಾಜನಹಳ್ಳಿಯ ಘಟನೆ ತಿಳಿದು ಬೇಸರವಾಯಿತು.ನನಗೆ ಕಾರ್ಯಕ್ರಮದ ಆಯೋಜಕರಿಂದ ಆಹ್ವಾನವಿರಲಿಲ್ಲ.ಕಾರ್ಯಕ್ರಮದ ಕುರಿತು ಮಾಹಿತಿಯೂ ಇರಲಿಲ್ಲ.ನಾನು ಒಪ್ಪಿಕೊಂಡ ಕಾರ್ಯಕ್ರಮಗಳನ್ನು ತಪ್ಪಿಸಿದವನಲ್ಲ. ಆದರೂ ಇಂದು ನಡೆದ ಘಟನೆಯ ಬಗ್ಗೆ ತೀವ್ರ ವಿಷಾದವಿದೆ.ನಿಮ್ಮ ಜೊತೆ ಬೆರೆಯಲು ನನಗೂ ಸದಾ ಆತೀವ ಆಸೆ ..ಮುಂದೆ ಖಂಡಿತ ಬರುವೆ.ಪ್ರೀತಿ ಇರಲಿ.ಶಾಂತರೀತಿಯಿಂದ ವರ್ತಿಸಿ …
ಇದು ಸುದೀಪ್ ಮಾಡಿರುವ ಟ್ವೀಟ್. ಸುದೀಪ್ ಅವರಿಗೆ ಕಾರ್ಯಕ್ರಮದ ಬಗ್ಗೆ ಆಹ್ವಾನವೇ ಇರಲಿಲ್ಲ ಎಂಬುದು ಸುದೀಪ್ ಹೇಳುತ್ತಿರುವ ಮಾತು. ಸುದೀಪ್ ಅವರಿಗೇ ಒಂದು ಮಾತು ತಿಳಿಸದೆ, ಸುದೀಪ್ ಬರುತ್ತಾರೆಂದು ಸುದ್ದಿ ಮಾಡಿದ್ದೇಕೆ? ಮುಖ್ಯಮಂತ್ರಿ ಮತ್ತು ಪೀಠದ ಸ್ವಾಮೀಜಿಗಳಿಗೂ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಲಾಯಿತೇ.. ಇದು ಎಲ್ಲರನ್ನೂ ಕಾಡುತ್ತಿರೋ ಪ್ರಶ್ನೆ. ಸುದೀಪ್ ಅವರನ್ನು ಜಾತ್ರೆಗೆ ಕರೆಯದೆಯೇ, ಸುದ್ದಿ ಮಾಡಿದ್ದು ಯಾರು? ವಾಲ್ಮೀಕಿ ಪೀಠದ ಪೀಠಾಧಿಪತಿಗಳೂ ಸುದೀಪ್ ಬರುತ್ತಾರೆ, ಸುಮ್ಮನಿರಿ ಎಂದು ಹೇಳಿದ್ದಾರೆ. ಹಾಗಾದರೆ ಅವರನ್ನೂ ದಾರಿ ತಪ್ಪಿಸಲಾಯ್ತಾ? ರಿಯಾಲಿಟಿ ನೋಡಿದರೆ ಸುದೀಪ್ ಒಮ್ಮೆ ಕಾರ್ಯಕ್ರಮಕ್ಕೆ ಬರುತ್ತೇನೆಂದು ಒಪ್ಪಿಕೊಂಡರೆ, ಯಾವ ಕಾರಣಕ್ಕೂ ತಪ್ಪಿಸುವವರಲ್ಲ. ಕಾರ್ಯಕ್ರಮಕ್ಕಷ್ಟೇ ಅಲ್ಲ, ಕೊಟ್ಟ ಮಾತಿಗೆ ಬದ್ಧರಾಗಿರುತ್ತಾರೆ. ಹೀಗಿರುವಾಗ ಸುದೀಪ್ ಅವರ ವಿಷಯ ಇಡೀ ವಾಲ್ಮೀಕಿ ಜಾತ್ರೆಯ ಮಹತ್ವವನ್ನೇ ಕೆಡಿಸಿದ್ದು ಸುಳ್ಳಲ್ಲ. ಸುಳ್ಳು ಸುದ್ದಿ ಮಾಡಿದ್ದು ಯಾರು.. ಎನ್ನುವುಗೂ ಗೊತ್ತಾಗಬೇಕಿದೆ.



