ಇತ್ತೀಚೆಗೆ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಭರ್ಜರಿ ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿ ರನ್ನಿಂಗ್, ಪುಷ್ ಅಪ್ಸ್, ಮಕ್ಕಳೊಂದಿಗೆ ಆಡುವುದು, ಹೆಗಲ ಮೇಲೆ ಕೈಹಾಕಿ ನಡೆಯುವುದು, ವಯಸ್ಸಾದವರ ಜೊತೆ ವರ್ತನೆ, ವಿದ್ಯಾರ್ಥಿಗಳ ಜೊತೆ ಮಾತುಕತೆ.. ಹೀಗೆ ಪ್ರತಿಯೊಂದೂ ಸದ್ದು ಮಾಡುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ರನ್ನಿಂಗ್ ರೇಸ್ ಮಾಡಿ, ಡಿಕೆ ಜೊತೆ ಪುಷ್ ಅಪ್ಸ್ ಕೂಡಾ ಮಾಡಿ ಸದ್ದು ಮತ್ತು ಸುದ್ದಿ ಎರಡನ್ನೂ ಮಾಡಿದ್ದರು ರಾಹುಲ್ ಗಾಂಧಿ. ಈ ದೃಶ್ಯಗಳನ್ನು ಕಾಂಗ್ರೆಸ್ ತನ್ನ ಪ್ರಚಾರಕ್ಕೂ ಬಳಸಿಕೊಂಡಿತ್ತು. ಅದೇ ಈಗ ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಕೇಸು ಬೀಳುವಂತೆ ಮಾಡಿದೆ.
ಅನುಮತಿ ಇಲ್ಲದೆ ಕೆಜಿಎಫ್ ಹಿಂದಿ ಹಾಡಿನ ಬಳಕೆ ಮಾಡಿದ್ದಕ್ಕೆ ಕೇಸ್ ದಾಖಲಾಗಿದೆ. ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ ಕೂಡಾ ಆಗಿದೆ. ಯಶವಂತಪುರ ಠಾಣೆಯಲ್ಲಿ ನವೀನ್ ಕುಮಾರ್ ಎಂಬುವವರು ದೂರು ದಾಖಲು ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಫೋಟೋಗೆ ದೇಖೋ ದೇಖೋ ಸುಲ್ತಾನ್ ಹಾಡನ್ನು ಮತ್ತು ಮ್ಯೂಸಿಕ್ನ್ನು ಬಳಸಲಾಗಿತ್ತು. ಕೆಜಿಎಫ್ ಹಾಡಿನ ಹಿಂದಿ ರೈಟ್ಸ್ ಎಂಆರ್ಟಿ ಮ್ಯೂಸಿಕ್ ಕಂಪೆನಿ ಹೆಸರಲ್ಲಿ. ನಮ್ಮ ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ಎಂಆರ್ಟಿ ಕಂ. ಮಾಲೀಕ ನವೀನ್ ಕುಮಾರ್ ದೂರು ನೀಡಿದ್ದಾರೆ.
ಅನುಮತಿ ಇಲ್ಲದೆ ಹಾಡನ್ನ ಎಡಿಟ್ ಮಾಡಿ ಭಾರತ್ ಜೋಡೋಗೆ ಬಳಕೆ ಮಾಡಿದ್ದನ್ನು ಆಕ್ಷೇಪಿಸಿ ಐಪಿಸಿ, ಕಾಪಿರೈಪ್ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿ ಕೇಸ್ ದಾಖಲಾಗಿದೆ. ಜೈರಾಮ್ ರಮೇಶ್, ಸುಪ್ರಿತಾ ಶ್ರೀನಾಥ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಜೈರಾಮ್ ರಮೇಶ್ ಎ1 ಆಗಿದ್ದರೆ, ಸುಪ್ರಿಯಾ ಶ್ರಿನೇಟೆ ಎ2 ಆಗಿದ್ದಾರೆ. ರಾಹುಲ್ ಗಾಂಧಿ ಎ3 ಆಗಿದ್ದಾರೆ.



