ಮೈಸೂರು ರಾಜನಾಗಿದ್ದ ಟಿಪ್ಪು ಸುಲ್ತಾನ್ ಮೈಸೂರು ಹುಲಿ ಎಂದು ಎಡಪಂಥೀಯರು ವಾದಿಸಿದರೆ ಟಿಪ್ಪು ವೀರನೂ ಅಲ್ಲ, ಧೀರನೂ ಅಲ್ಲ. ಅವನೊಬ್ಬ ರಣಹೇಡಿ. ಟಿಪ್ಪು ಯಾವುದಾದರೂ ಯುದ್ದ ಗೆದ್ದಿದ್ದಾನಾ ಎಂದು ಪ್ರಶ್ನೆ ಮಾಡುತ್ತಾರೆ ಬಲಪಂಥೀಯರು. ಅವನೊಬ್ಬ ಕನ್ನಡ ಪ್ರೇಮಿ ಎಂದು ಎಡಪಂಥ ಹೇಳಿದರೆ ಅವನೊಬ್ಬ ಕನ್ನಡ ದ್ವೇಷಿ, ಅವನ ಕಾಲದಲ್ಲೇ ಪರ್ಷಿಯನ್ ಆಡಳಿತ ಭಾಷೆಯಾಗಿದ್ದು, ಇವತ್ತಿಗೂ ಕಂದಾಯ ದಾಖಲೆಗಳಲ್ಲಿರುವ ಪರ್ಷಿಯನ್ ಪದಗಳು ಟಿಪ್ಪು ಕೊಡುಗೆ ಎಂದು ಸಾಕ್ಷಿ ಮುಂದಿಡುತ್ತಾರೆ. ಅವನೊಬ್ಬ ಜನಾನುರಾಗಿಯಾಗಿದ್ದ, ಹಿಂದೂಗಳ ಬಗ್ಗೆ ಸದ್ಭಾವನೆ ಹೊಂದಿದ್ದ ಎಂದು ಇವರು ಹೇಳಿದರೆ ಮಡಿಕೇರಿಯಲ್ಲಿ ನಡೆದ ಕೊಡವರ ಹತ್ಯಾಕಾಂಡ, ಮೇಲುಕೋಟೆಯಲ್ಲಿ ನಡೆದ ಬ್ರಾಹ್ಮಣರ ನರಮೇಧ, ಮಂಗಳೂರಿನಲ್ಲಿ ಕ್ರೈಸ್ತ ಹಿಂದೂಗಳನ್ನು ಬೇಟೆಯಾಡಿ ಕೊಂದಿದ್ದು, ಚಿತ್ರದುರ್ಗದಲ್ಲಿ ನಡೆಸಿದ ಮಾರಣಹೋಮದ ಇತಿಹಾಸ ತೋರಿಸಿ ಇವನು ಹೇಗೆ ಸರ್ವಧರ್ಮ ಸಹಿಷ್ಣು ಎನ್ನುತ್ತಾರೆ.
ಟಿಪ್ಪುವಿನ ಖಡ್ಗದ ಮೇಲಿದ್ದ ಕಾಫಿರರನ್ನು ಕೊಲ್ಲುವ ಪ್ರತಿಜ್ಞೆಯ ಬರಹ ಸೇರಿದಂತೆ ಟಿಪ್ಪುವಿನ ವೈಭವೀಕರಣಕ್ಕೆ ಮಾಡಿದವುಗಳಿಗೆ ಸಾಕ್ಷಿಗಳು ಸಿಗುತ್ತಿಲ್ಲ. ಈಗ ಮತ್ತೊಂದು ಪ್ರಶ್ನೆ ಉದ್ಭವವಾಗಿದೆ. ಟಿಪ್ಪುವನ್ನು ಕೊಂದವರು ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎನ್ನುತ್ತದೆ ಇತಿಹಾಸ. ಈಗ ಇದು ಇನ್ನೊಂದು ತಿರುವು ಪಡೆಯುತ್ತಿದೆ. ಅದಕ್ಕೆ ಕಾರಣ ಅಡ್ಡಂಡ ಕಾರ್ಯಪ್ಪನವರ ಟಿಪ್ಪು ನಿಜ ಕನಸುಗಳು ನಾಟಕ. ಇತ್ತೀಚೆಗೆ ಈ ನಾಟಕದ ಪುಸ್ತಕ ಬಿಡುಗಡೆಯಾಗಿದ್ದು 2ನೇ ಮುದ್ರಣಕ್ಕೆ ಹೋಗಿದೆ.
ಪತ್ರಕರ್ತರೂ ಆಗಿರುವ ಪರುಷೋತ್ತಮ ಬಿಳಿಮಲೆ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾವು ಒಕ್ಕಲಿಗರ ಸಂಸ್ಕøತಿಯ ಬಗ್ಗೆಯೇ ಪಿಹೆಚ್‍ಡಿ ಮಾಡಿದ್ದು, ಒಕ್ಕಲಿಗರಲ್ಲಿ ಉರಿ ಗೌಡ ಎಂಬ ಹೆಸರೇ ಇಲ್ಲ. ಅದು ಕ್ರಿಯಾಪದವಾಗಿ ಅಥವಾ ನಾಮಪದವಾಗಿ ಇರುವ ಸಾಧ್ಯತೆಯೇ ಇಲ್ಲ ಎಂದಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವುದು ರೋಹಿತ್ ಚಕ್ರತೀರ್ಥ. ಬಿಳಿಮಲೆಯವರನ್ನು ಜೆಎನ್‍ಯು ಪ್ರಾಡಕ್ಟ್ ಎಂದು ಲೇವಡಿ ಮಾಡಿರುವ ರೋಹಿತ್ ಚಕ್ರತೀರ್ಥ ಉರಿಗೌಡ ಎಂಬ ಹೆಸರು ಒಕ್ಕಲಿಗರಲ್ಲಿ ಹೇಗೆ ಹಾಸುಹೊಕ್ಕಾಗಿದೆ. ಸಾಮಾನ್ಯವಾಗಿ ಇಡುವ ಹೆಸರಾಗಿದೆ ಎಂಬುದಕ್ಕೆ ದಾಖಲೆ ಮುಂದಿಟ್ಟಿದ್ದಾರೆ. ಅವರಷ್ಟೇ ಅಲ್ಲ, ಚಕ್ರತೀರ್ಥ ಪೇಜಿನಲ್ಲಿ ಕೆಲವರು ತಾವೂ ಹುಡುಕಿ ಉರಿಗೌಡ ಎಂಬ ಹೆಸರಿನ ಹಲವರ ಪೇಜ್ ತೋರಿಸಿದ್ದಾರೆ.
ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಪುರುಷೋತ್ತಮ ಬಿಳಿಮಲೆ ಒಂದು ತೈಲವರ್ಣದ ಚಿತ್ರವನ್ನು ಪೋಸ್ಟ್ ಮಾಡಿದ್ದು ಇದರಲ್ಲಿ ಯಾವ ದೊಡ್ಡ ನಂಜೇಗೌಡ ಅಥವಾ ಉರಿಗೌಡ ಇಲ್ಲ. ಆತನನ್ನು ಕೊಂದಿದ್ದು ಬ್ರಿಟಿಷರೇ. ಇವರೆಲ್ಲ ವಾಟ್ಸಪ್ ವಿವಿಯವರು ಎಂದಿದ್ದಾರೆ. ಆದರೆ ತಾವೇ ಬರೆದಿದ್ದ ಉರಿಗೌಡ ಎಂಬ ಹೆಸರಿನವರೇ ಒಕ್ಕಲಿಗರಲ್ಲಿ ಇರುವುದಿಲ್ಲ ಎಂಬುದರ ಬಗ್ಗೆ ಎದ್ದ ಟೀಕೆಗೆ ಉತ್ತರ ಕೊಡೋಕೆ ಹೋಗಿಲ್ಲ. ವಿವಾದ ಇಷ್ಟಕ್ಕೇ ಮುಗಿಯುವುದಿಲ್ಲ. ಮುಂದುವರೆಯಲಿದೆ..



