ಪ್ರಧಾನಿ ನರೇಂದ್ರ ಮೋದಿ. ಗುಜರಾತ್ ಸಿಎಂ ಹುದ್ದೆಯಿಂದ ಪ್ರಧಾನಿ ಹುದ್ದೆಗೆ ಬಂದು 8 ವರ್ಷಗಳಾಗಿವೆ. ಆದರೆ 2002ರಲ್ಲಿ ನಡೆದ ಗುಜರಾತ್ ಗಲಭೆಯ ರಕ್ತದ ಕಲೆಯನ್ನು ಮೋದಿಗೆ ಒರೆಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಗುಜರಾತ್ ಸಿಎಂ ಆಗಿದ್ದಾಗ 65ಕ್ಕೂ ಹೆಚ್ಚು ಸಂಸದರು ಮೋದಿಗೆ ಅಮೆರಿಕ ವೀಸಾ ಕೊಡಬೇಡಿ ಎಂದು ಅಮೆರಿಕಕ್ಕೆ ಮನವಿ ಸಲ್ಲಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಅಮೆರಿಕ ಮೋದಿಗೆ ವೀಸಾ ನಿರಾಕರಿಸಿತ್ತು. ವಿಶೇಷವೆಂದರೆ ಆಗ ವೀಸಾ ಕೊಡಬೇಡಿ ಎಂದು ಅಮೆರಿಕಕ್ಕೆ ಪತ್ರ ಬರೆದಿದ್ದ ಸಂಸದರಲ್ಲಿ ಯಾರೊಬ್ಬರೂ ಈಗ ಸಂಸತ್‍ನಲ್ಲಿಲ್ಲ. ಆದರೆ ಮೋದಿಯ ಚರಿಷ್ಮಾ ಈ 20 ವರ್ಷಗಳಲ್ಲಿ ಬದಲಾಗಿದೆ. ಈಗ ಮೋದಿ ಅಮೆರಿಕಕ್ಕೆ ಹೋಗಬೇಕೆಂದರೆ ವೀಸಾಗೆ ಅರ್ಜಿ ಹಾಕುವ ಅಗತ್ಯವಿಲ್ಲ. ಅಮೆರಿಕದ ಅಧ್ಯಕ್ಷರೇ ವೆಲ್‍ಕಂ ಹೇಳುತ್ತಾರೆ.


ಗೋದ್ರೋತ್ತರ ಗಲಭೆ ಬಗ್ಗೆ ರೂಪಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ಗೋದ್ರಾ ಗಲಭೆ ಪ್ರಸ್ತಾಪ ಒಂದು ಲೈನಿನಲ್ಲಿ ಬಂದು ಹೋಗುತ್ತದೆ ಎಂಬ ಮಾತು ಬೇರೆ. ದಿ ಮೋದಿ ಕ್ವಶ್ಚನ್, ಇದು ಡಾಕ್ಯುಮೆಂಟರಿಯ ಟೈಟಲ್. ಮೊದಲ ಎಪಿಸೋಡ್ ಬುಧವಾರ ಪ್ರಸಾರವಾಗಿದ್ದರೆ, 2ನೇ ಎಪಿಸೋಡ್ ಜನವರಿ 24ರಂದು, ಭಾರತದ ಗಣರಾಜ್ಯೋತ್ಸಕ್ಕೆ 2 ದಿನ ಮೊದಲು ಪ್ರಸಾರವಾಗಲಿದೆ. ಮುಸ್ಲಿಮರ ಬಗ್ಗೆ ಮೋದಿ ಉದ್ದೇೀಶಪೂರ್ವಕ ದ್ವೇಷ ಹೊಂದಿದ್ದರು.
ಮೋದಿಯವರ ಸರ್ಕಾರವೂ ಈ ಹಿಂಸೆಯಲ್ಲಿ ಭಾಗಿಯಾಗಿತ್ತು ಎನ್ನುವುದು ಡಾಕ್ಯುಮೆಂಟರಿಯ ಸಾರಾಂಶ. ಎಂದಿನಂತೆ ಪಾಕಿಸ್ತಾನ ಹಾಗೂ ಪಾಕ್ ಪ್ರೇರಿತ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಸುದ್ದಿಯನ್ನು ಚಪ್ಪರಿಸುತ್ತಿವೆ.
ಈ ಡಾಕ್ಯುಮೆಂಟರಿ ಬಗ್ಗೆ ಬ್ರಿಟನ್ ಸಂಸತ್‍ನಲ್ಲಿ ಪ್ರಸ್ತಾಪ ಮಾಡಲು ಪಾಕ್ ಮೂಲದ ಸಂಸದ ಇಮ್ರಾನ್ ಹುಸೇನ್ ಅವರಿಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೇ ತಿರುಗೇಟು ನೀಡಿರುವುದು ವಿಶೇಷ. ಹಿಂಸಾಚಾರಕ್ಕೆ ನಾವೂ ವಿರೋಧಿಗಳೇ. ಆದರೆ ಮೋದಿಯವರನ್ನು ಕಳಂಕಿತರಂತೆ ಬಿಂಬಿಸಿರುವ ಬಿಬಿಸಿ ಡಾಕ್ಯುಮೆಂಟರಿಯನ್ನು ನಾನು ಒಪ್ಪುವುದಿಲ್ಲ. ಭಾರತದ ಬಗ್ಗೆ ಬ್ರಿಟನ್ ನಿಲುವು ಸ್ಪಷ್ಟ. ಅದು ಎಂದಿಗೂ ಬದಲಾಗಲ್ಲ ಎಂದಿದ್ದಾರೆ ರಿಷಿ ಸುನಕ್.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್ ಬಗ್ವಿ ಡಾಕ್ಯುಮೆಂಟರಿ ಬಗ್ಗೆ ಕಿಡಿಕಾರಿದ್ದು, ಬ್ರಿಟನ್ನಿನವರ ವಸಾಹತುಶಾಹಿ ಬುದ್ದಿ ಬದಲಾಗಿಲ್ಲ. ಇದು ಅವರ ಮನಸ್ಥಿತಿಯ ಮುಂದುವರಿಕೆಯಷ್ಟೆ. ಇವರ ಹಿಂದಿನ ಉದ್ದೇಶ ಮತ್ತು ಕಾರ್ಯನಿರ್ವಹಣೆ ಅಚ್ಚರಿ ಹುಟ್ಟಿಸುತ್ತದೆ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲ, ಈ ಡಾಕ್ಯುಮೆಂಟರಿಯನ್ನು ಭಾರತದಲ್ಲಿ ಪ್ರಸಾರ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.


ಹಾಗೆಂದು ಮೋದಿಯನ್ನು ಟೀಕಿಸಲೇಬಾರದಾ..? ಹಾಗೇನಿಲ್ಲ. ಮೋದಿಯನ್ನು ಭಾರತೀಯರು ಟೀಕಿಸದೆ ಇನ್ಯಾರು ಟೀಕಿಸಬೇಕು. ಆದರೆ ಭಾರತದ ಪ್ರಧಾನಿಯನ್ನು ಟೀಕಿಸುವ ಅರ್ಹತೆ ಇರುವುದು ಕೂಡಾ ಭಾರತೀಯರಿಗೇ.



