ಕಾಂಗ್ರೆಸ್ಸಿಗರು ವಿವಾದಾತ್ಮಕ ಹೇಳಿಕೆ ನೀಡಿದಾಗಲೆಲ್ಲ ಅದನ್ನು ಬ್ಯಾಲೆನ್ಸ್ ಮಾಡುತ್ತಿದ್ದವರು ಡಿಕೆ ಶಿವಕುಮಾರ್. ಲಿಂಗಾಯತ ವೀರಶೈವ ವಿವಾದದಲ್ಲಿ ಮೊದಲಿಗೇ ಬಹಿರಂಗವಾಗಿ ಕ್ಷಮೆ ಕೇಳಿ ವಿವಾದದ ಬಿಸಿ ಪಕ್ಷದ ಮೂಲೆ ಮೂಲೆಗೂ ಹರಡುವುದನ್ನು ತಡೆದವರೇ ಡಿಕೆ. ಹಿಜಾಬ್ ವಿವಾದದಲ್ಲಿ ಸಿದ್ದರಾಮಯ್ಯ, ಜಮೀರ್.. ಸವಾಲಿಗೆ ಪ್ರತಿ ಸವಾಲು ಹಾಕುತ್ತಿದ್ದರೆ ಡಿಕೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ವ್ಯಾಪಾರಿ ದಂಗಲ್ ವಿಷಯಗಳಲ್ಲಿ, ಮಳಲಿ ಮಸೀದಿ ವಿವಾದವಿರಲಿ, ಟಿಪ್ಪು ವಿಚಾರವೇ ಇರಲಿ.. ಡಿಕೆಯವರದ್ದು ಮೃದು ಧೋರಣೆ ಎನ್ನಬಹುದು. ಎರಡೂ ಕಡೆಯವರಿಗೆ ಬೇಸರವಾಗದಂತೆ ಬ್ಯಾಲೆನ್ಸ್ ಮಾಡುತ್ತಿದ್ದ ಡಿಕೆ, ಪಕ್ಷದ ನಾಯಕರು ವಿವಾದಾತ್ಮಕ ಹೇಳಿಕೆ ನೀಡಿದಾಗಲೆಲ್ಲ ಗುರಾಣಿ ಹಿಡಿದು ರಕ್ಷಣೆಗೆ ನಿಲ್ಲುತ್ತಿದ್ದವರು. ಆದರೆ.. ಇದ್ದಕ್ಕಿದ್ದಂತೆ ಇಷ್ಟು ದಿನ ಗುರಾಣಿ ಹಿಡಿದದ್ದು ಇವರೇನಾ ಎಂಬಂತೆ ಒಂದೇ ಒಂದು ಮಾತಿನಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡು ಬಿಟ್ಟಿದ್ದಾರೆ.

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಮತದಾರರ ಮಾಹಿತಿ ಕಳವು ಹಗರಣ ಮುಚ್ಚಿ ಹಾಕುವ ಸಲುವಾಗಿ ಹೊರಬಂದ ಪ್ರಕರಣ ಎಂದು ಬಿಟ್ಟರು. ಪ್ರಕರಣದ ತನಿಖೆಗೂ ಮೊದಲೇ ಇದು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದ್ದೇಕೆ? ಘಟನೆ ಹಿಂದೆ ಯಾವ ಉಗ್ರನಿದ್ಧಾನೆ? ಯಾವ ಸಂಘಟನೆ ಇದೆ? ಯಾವುದೋ ಅಚಾತುರ್ಯದಿಂದ ನಡೆದ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ಬಿಂಬಿಸುತ್ತಿರೋದೇಕೆ? ತನಿಖೆ ಮಾಡದೇ ಟೆರರಿಸ್ಟ್ ಆಕ್ಟ್ ಎಂದು ಹೇಗೆ ಹೇಳ್ತೀರಿ? ಇದೇನು ಪುಲ್ವಾಮಾ, ಮುಂಬೈ ಅಟ್ಯಾಕ್ ಮಾದರಿ ಘಟನೆಯಾಗಿತ್ತಾ? ಡಿಜಿ ತಕ್ಷಣ ಬೆಂಗಳೂರಿಗೆ ಹೋಗಿದ್ದೇಕೆ? ಇಂತಹ ಪ್ರಶ್ನೆ ಕೇಳಿ ಇರಲಾರದೆ ಕುಕ್ಕರ್ ಬಿಟ್ಟುಕೊಂಡ್ರಾ ಅನ್ನೋ ಪ್ರಶ್ನೆ ಮೂಡದೇ ಇರಲ್ಲ.
ಅಂದಹಾಗೆ ಪುಲ್ವಾಮ, ಪಠಾಣ್‍ಕೋಟ್.. ನಂತಹ ಕೆಲವು ಪ್ರಕರಣ ಬಿಟ್ಟರೆ ಭಯೋತ್ಪಾದಕ ದಾಳಿ ಎಂಬುದು ಕಾಶ್ಮೀರಕ್ಕೆ ಸೀಮಿತವಾಗಿದೆ. ಅದಕ್ಕೆ ಕಾರಣ ಈ ರೀತಿಯ ತನಿಖೆಯೇ ಹೊರತು ಮತ್ತೇನಲ್ಲ. ಎನ್‍ಐಎ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳೂ ಕೂಡಾ ಇಂತಹ ಘಟನೆಗಳನ್ನು ಸರಳವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿಯೇ ದೇಶದ ಒಳಗೆ 2014ಕ್ಕೆ ಮುನ್ನ ನಡೆಯುತ್ತಿದ್ದಂತೆ ತಿಂಗಳಿಗೆರಡು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿಲ್ಲ. ರಾಜಕೀಯ ವಿರೋಧಕ್ಕಾಗಿ ಮೋದಿಗೆ ಕ್ರೆಡಿಟ್ ಕೊಡದಿದ್ದರೆ ಓಕೆ, ಪೊಲೀಸ್ ಮತ್ತು ತನಿಖಾ ಸಂಸ್ಥೆಗಳಿಗೂ ಬೆಲೆ ಕೊಡದಿದ್ದರೆ ಹೇಗೆ? ಇಷ್ಟಕ್ಕೂ ಶಾರೀಕ್‍ನ ಬಗ್ಗೆ ಹೊರಬಿದ್ದಿರುವ ಮಾಹಿತಿಗಳೇನೂ ಸಣ್ಣವಲ್ಲ. ಆತ, ಆತನಿಗೆ ಸಹಕಾರ ನೀಡಿದವರು.. ಹೀಗೆ ಎಲ್ಲವೂ ಬಯಲಾಗುತ್ತಿರುವಾಗ ಇದ್ದಕ್ಕಿದ್ದಂತೆ ಮುಸ್ಲಿಮರು ನನ್ನ ಸಹೋದರರಿದ್ದಂತೆ, ಎಲ್ಲವೂ ಸಂಚು ಎಂದುಬಿಟ್ಟರೆ ಹೇಗೆ? ಮುಸ್ಲಿಮರನ್ನೆಲ್ಲ ದ್ವೇಷಿಸೋದು ಬೇಡ, ಭಯೋತ್ಪಾದಕರನ್ನೂ ಸಮರ್ಥಿಸಿಕೊಳ್ಳೋ ದರ್ದು ಡಿಕೆಗೇಕೆ? ಅರ್ಥವಾಗದ ಪ್ರಶ್ನೆಯಿದು.

ಅಂದಹಾಗೆ ಅಲ್ಲಿ ಸಿಡಿದ ಕುಕ್ಕರ್‍ನಲ್ಲಿ ವೈರಿಂಗ್ ಕೂಡಾ ಇತ್ತು. ಈ ಹಿಂದಿನ ಅಹಮದಾಬಾದ್, ದೆಹಲಿ, ಹೈದರಾಬಾದ್‍ಗಳಲ್ಲಿ ಸಂಭವಿಸದ ಹಲವು ಸ್ಫೋಟ ಪ್ರಕರಣಗಳಲ್ಲಿ ಕುಕ್ಕರ್‍ನ್ನೇ ಬಳಸಲಾಗಿತ್ತು. ಕುಕ್ಕರ್‍ನಲ್ಲಿ ಏರ್ ಬ್ಲಾಕ್ ಇರುತ್ತದೆ. ಕುಕ್ಕರ್ ಬಳಸಿದರೆ ಸ್ಫೋಟದ ತೀವ್ರತೆ ಹೆಚ್ಚಾಗುತ್ತದೆ ಎನ್ನುವುದೇ ಉಗ್ರರು ಕುಕ್ಕರ್ ಬಳಸೋಕೆ ಕಾರಣ ಎನ್ನುವುದು ಗುಟ್ಟೇನಲ್ಲ. ಕಾಮನ್‍ಸೆನ್ಸ್ ಇರುವ ಪ್ರತಿಯೊಬ್ಬರಿಗೂ ಅರ್ಥವಾಗುವ ವಿಚಾರ. ಹೀಗಿದ್ದರೂ ಡಿಕೆ ಇದೆಂತಾ ಹೇಳಿಕೆ ಕೊಟ್ಟರು? ಇಷ್ಟು ದಿನ ಮೈಂಟೇನ್ ಮಾಡಿದ್ದ ಬ್ಯಾಲೆನ್ಸಿಂಗ್ ಹೇಳಿಕೆಗಳನ್ನೆಲ್ಲ ಒಂದೇ ಏಟಿಗೆ ಹೇಗೆ ಉಲ್ಟಾ ಮಾಡಿಕೊಂಡುಬಿಟ್ಟರು. ಸಹಜವಾಗಿಯೇ ಈಗ ಬಿಜೆಪಿಯವರ ಕೌಂಟರ್ ಅಟ್ಯಾಕ್ ಜೋರಾಗಿದೆ.
ಸಿಎಂ ಬೊಮ್ಮಾಯಿ ಅಲ್ಪಸಂಖ್ಯಾತರ ಓಲೈಕೆ ಕಾಂಗ್ರೆಸ್ ತಂತ್ರ. ವೋಟಿಗಾಗಿ ಇವರು ಭಯೋತ್ಪಾದನೆಯನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಪದೇ ಪದೇ ದೇಶದ ಪೊಲೀಸರು, ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಪ್ರಶ್ನಿಸಬೇಡಿ ಎಂದರೆ, ಯಡಿಯೂರಪ್ಪ ಡಿಕೆ ಶಿವಕುಮಾರ್ ತಲೆ ತಿರುಗಿ ಮಾತನಾಡುತ್ತಿದ್ದಾರೆ. ಯಾರನ್ನು ಸಮರ್ಥನೆ ಮಾಡಿಕೊಳ್ಳಬೇಕು. ಯಾರನ್ನು ವಿರೋಧಿಸಿ ಮಾತನಾಡಬೇಕು ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಗರಂ ಆಗಿಯೇ ಉತ್ತರಿಸಿದ್ದಾರೆ. ಸಾಮಾನ್ಯವಾಗಿ ಕೋಮು ವಿಚಾರಗಳಲ್ಲಿ ಬಿಜೆಪಿಯಲ್ಲಿದ್ದರೂ ಯಡಿಯೂರಪ್ಪ ಸ್ವಲ್ಪ ಮೃದುಧೋರಣೆಯನ್ನೇ ಹೊಂದಿದವರು ಎಂಬುದು ಗುಟ್ಟೇನಲ್ಲ. ಆದರೆ ಡಿಕೆಯವರದ್ದೇ ಎಡವಟ್ಟು.

ವಿವಾದವಾದ ಮೇಲೆ ಕ್ಷಮೆ ಕೇಳುವುದೇ ಇಲ್ಲ ಎನ್ನುತ್ತಿದ್ದ ಡಿಕೆ ಈಗ ನಾನು ಉಗ್ರರ ಪರ ಇಲ್ಲ. ಉಗ್ರವಾದದ ಪರವೂ ಇಲ್ಲ. ಬಾಂಬ್ ಸ್ಫೋಟದ ತನಿಖೆ ಬೇಡ ಎಂದಿಲ್ಲ. ಕುಕ್ಕರ್ ಬಾಂಬ್ ಸ್ಫೋಟ ಉಗ್ರ ಕೃತ್ಯ ಹೌದೋ ಅಲ್ಲವೋ.. ಎಂದು ತಿಳಿಯಬೇಕು ಎನ್ನುತ್ತಿದ್ದಾರೆ. ಅತ್ತ ಹಳೆಯ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳೋಕೂ ಆಗದೆ, ಇತ್ತ ಕ್ಷಮೆ ಕೇಳುವುದಕ್ಕೂ ಆಗದೆ.. ಎರಡೂ ಹೇಳಿಕೆ ಕೊಡುತ್ತಿದ್ದಾರೆ.
ಕಾಂಗ್ರೆಸ್ಸಿನವರೇ ಆದ ಮುಸ್ಲಿಂ ಮುಖಂಡ ಯು.ಟಿ.ಖಾದರ್ ಅಂತಹವರು ಡಿಕೆ ಹೇಳಿಕೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅವರದ್ದೇ ಪಕ್ಷದ ಇನ್ನೂ ಕೆಲವು ಮುಸ್ಲಿಂ ಶಾಸಕರು ಮಾತನಾಡುತ್ತಿಲ್ಲ. ಜಮೀರ್ ಅಹ್ಮದ್ ಅವರಂತಹವರು ಮಾತನಾಡಿದರೆ ಅದು ಡಿಕೆ ಹೊತ್ತಿಸಿಕೊಂಡಿರುವ ಬೆಂಕಿ ಇನ್ನಷ್ಟು ಭುಗಿಲೇಳುವಂತೆ ಮಾಡಬಹುದು. ಒಟ್ಟಿನಲ್ಲಿ ಡಿಕೆ ಇರಲಾರದೆ ಕುಕ್ಕರ್ ಬಿಟ್ಟುಕೊಂಡಿರೋದಂತೂ ಸತ್ಯ.



