ಇತ್ತೀಚೆಗೆ ಬಿಡುಗಡೆಯಾಗಿ ವಿವಾದ ಸೃಷ್ಟಿಸಿರುವ ಅಡ್ಡಂಡ ಕಾರ್ಯಪ್ಪ ರಚಿತ ಟಿಪ್ಪು ನಿಜ ಕನಸುಗಳು ಕೃತಿಯ ಮಾರಾಟ ಮತ್ತು ವಿತರಣೆಗೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆ ನೀಡಿದೆ. ಆನ್‍ಲೈನ್ ಮಾರಾಟಕ್ಕೂ ತಡೆ ನೀಡಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ರಚಿಸಿರುವ ನಾಟಕವನ್ನು ಇದೇ 20ನೇ ತಾರೀಕಿನಿಂದ ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತಿದೆ. ನಾಟಕವನ್ನು ಘೋಷಿಸಿದ ದಿನದಿಂದಲೇ ಪರ-ವಿರೋಧ ಅಭಿಪ್ರಾಯಗಳು ಬಂದಿವೆ. ಇದು ಕಾಲ್ಪನಿಕ ಕೃತಿಯಲ್ಲ. ನಾನು ಬರೆದ ಪ್ರತಿಯೊಂದಕ್ಕೂ ದಾಖಲೆಗಳಿವೆ ಎಂದಿದ್ದಾರೆ ಅಡ್ಡಂಡ ಕಾರ್ಯಪ್ಪ.
ನಾಟಕವನ್ನು ಪ್ರಶ್ನಿಸಿ ರಫೀವುಲ್ಲ ಬಿ.ಎಸ್.ಎಂಬುವವರು ನ್ಯಾಯಾಲಯದ ಮೊರೆ ಹೋಗಿದ್ದರು. ರಫಿವುಲ್ಲ ವಕ್ಫ್ ಬೋರ್ಡ್ ಕಮಿಡಿಯ ಮಾಜಿ ಅಧ್ಯಕ್ಷರೂ ಹೌದು. ಕೃತಿಯನ್ನು ಪ್ರಕಟಿಸಿರುವ ಅಯೋಧ್ಯಾ ಪ್ರಕಾಶನ ಹಾಗೂ ಮುದ್ರಣ ಮಾಡಿರುವ ರಾಷ್ಟ್ರೋಥ್ಥಾನ ಮುದ್ರಣಾಲಯಗಳನ್ನು ಪ್ರತಿವಾದಿಗಳನ್ನಾಗಿಸಿದ್ದರು.
ಕೃತಿಯಲ್ಲಿ ಬರೆದಿರುವ ಅಂಶಗಳು ಸುಳ್ಳಾಗಿದ್ದರೆ, ಕಪೋಲಕಲ್ಪಿತವಾಗಿದ್ದರೆ, ತಪ್ಪು ಮಾಹಿತಿ ಹೊಂದಿದ್ದರೆ.. ಅವುಗಳನ್ನೇ ಕೃತಿಯಲ್ಲಿ ಮಾಡಿದ್ದರೆ ಕೋಮು ಸಾಮರಸ್ಯ ಕದಡಿದ ಆರೋಪ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿರುವ ನ್ಯಾಯಾಲಯ ತಾತ್ಕಾಲಿಕವಾಗಿ ಪುಸ್ತಕವನ್ನು ಮಾರಾಟ ಮಾಡದಂತೆ, ವಿತರಣೆ ಮಾಡದಂತೆ ಸೂಚನೆ ನೀಡಿದೆ.
ಕೃತಿಯನ್ನು ಬರೆದವರು ತಪ್ಪು ಮಾಹಿತಿಯನ್ನೇ ನೀಡಿದ್ದಾರೆ. ಅವರ ಎಲ್ಲಿಂದ, ಯಾವ ಮೂಲದಿಂದ ಈ ರೀತಿ ತಪ್ಪು ಮಾಹಿತಿ ಸಂಗ್ರಹ ಮಾಡಿದರೋ ಗೊತ್ತಿಲ್ಲ. ಇತಿಹಾಸಕ್ಕೆ ಅಪಚಾರ ಬಗೆಯುತ್ತಿದ್ದಾರೆ ಎಂದು ರಫೀವುಲ್ಲ ಆರೋಪಿಸಿದ್ದಾರೆ.



