ಟಿಪ್ಪು ನಿಜ ಕನಸುಗಳು. ಅಡ್ಡಂಡ ಕಾರ್ಯಪ್ಪನವರ ಈ ನಾಟಕ ಕೃತಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕೃತಿ ಬಿಡುಗಡೆಯಾಗಿ ನಾಟಕ ಪ್ರದರ್ಶನ ಆರಂಭವಾದ ದಿನಗಳಲ್ಲಿ ಬಿ.ಎಸ್.ರಫೀವುಲ್ಲ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೃತಿಯಲ್ಲಿ ಮುಸ್ಲಿಮರಿಗೆ ಅವಮಾನ ಮಾಡಲಾಗಿದೆ ಎಂದು ಬೆಂಗಳೂರು ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಫೀವುಲ್ಲ ಕೋರ್ಟ್ ಮೆಟ್ಟಿಲೇರಿದ್ದರು. ಈಗ ದೂರು ಕೊಟ್ಟಿದ್ದವರೇ ದೂರನ್ನು ವಾಪಸ್ ಪಡೆದಿದ್ದಾರೆ.
ದೂರು ವಾಪಸ್ ಪಡೆದ ರಫೀವುಲ್ಲಾ ಈಗ ಹೇಳುತ್ತಿರುವುದೇನು?
ನಮಗೆ ಬಿಜೆಪಿ ಆಡಳಿತದಲ್ಲಿ ಯಾವ ವ್ಯವಸ್ಥೆಯ ಮೇಲೂ ನಂಬಿಕೆ ಇಲ್ಲ. ಇಲ್ಲಿ ನಮ್ಮದೇನು ನಡೆಯುತ್ತದೆ. ಯಾರೂ ಸಹ ನಮ್ಮ ಧ್ವನಿ ಕೇಳುವುದಿಲ್ಲ. ವಕೀಲರಿಗೆ ಲಕ್ಷಾಂತರ ರೂ. ಹಣ ಕೊಡಬೇಕು. ನಮಗೆ ಸಂಘ-ಸಂಸ್ಥೆಗಳು, ಹಣ ನೀಡುವವರು ಇಲ್ಲ. ಅವರಿಗೆ ಸಂಘ ಪರಿವಾರದಿಂದ, ಸರ್ಕಾರದಿಂದ ಹಣ ಬರುತ್ತದೆ. ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ನಮ್ಮ ಸಮಯ, ಹಣ ವ್ಯಯವಾಗುತ್ತದೆ ಅಷ್ಟೆ.

ಕೃತಿಯ ಲೇಖಕ ಅಡ್ಡಂಡ ಕಾರ್ಯಪ್ಪ ಹೇಳಿಕೆ ಇದು : ನಾಟಕದಲ್ಲಿ ಟಿಪ್ಪು ಸುಲ್ತಾನ್‍ಗೆ ಅವಮಾನ ಮಾಡಲಾಗಿದೆ. ಪವಿತ್ರ ಆಜಾನ್‍ನ್ನು ನಾಟಕದಲ್ಲಿ ಬಳಸಲಾಗಿದೆ. ಮುಸ್ಲಿಮರನ್ನು ತುರುಕರು ಎಂದು ಸಂಬೋಧಿಸಿ ಕೀಳಾಗಿ ಚಿತ್ರಿಸಲಾಗಿದೆ. ಸಮಾಜದಲ್ಲಿ ಅಶಾಂತಿ ಮೂಡಿಲಾಗುತ್ತಿದೆ ಎಂದು ದೂರಿದ್ದರು. ನಾವು ಪುಸ್ತಕದಲ್ಲಿರುವ ಪ್ರತಿ ಅಂಶಕ್ಕೂ ದಾಖಲೆಯ ಪುಟಗಳನ್ನು ಮುಂದಿಟ್ಟೆವು. ನಾಟಕಗಳಲ್ಲಿ ಗಣಪತಿ ಸ್ತೋತ್ರ, ಭಜನೆ ಬಳಸುವಂತೆಯೇ, ಪ್ರಾರ್ಥನೆಗಾಗಿ ಆಜಾನ್ ಬಳಸಿದ್ದೇವೆ ಎಂದು ತಿಳಿಸಿದ್ದೆವು. ಅಗೌರವ ತೋರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದೆವು. ಮುಸ್ಲಿಮರನ್ನು ತುರುಕರು ಎಂದು ಕರೆಯುವ ಸಂಪ್ರದಾಯ ಇದೆ, ಅದು ಅವಮಾನಿಸಲು ಬಳಸಿದ ಪದ ಅಲ್ಲ ಎಂದು ತಿಳಿಸಿದ್ದೆವು. ಟಿಪ್ಪು ಒಬ್ಬ ರಾಜನೇ ಹೊರತು, ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಆತನ ಕ್ರೌರ್ಯ, ಕೊಡವರು, ಕ್ರಿಶ್ಚಿಯನ್ನರ ಮತಾಂತರ, ಮೇಲುಕೋಟೆ ಅಯ್ಯಂಗಾರಿಗಳ ಮಾರಣಹೋಮ, ದೇವಾಲಯ ಧ್ವಂಸ ಕುರಿತಂತೆ ಚರಿತ್ರೆಯಲ್ಲಿದ್ದ ದಾಖಲೆ ಕೊಟ್ಟಿದ್ದೆವು. ಈಗ ಪ್ರಕರಣ ಹಿಂದಕ್ಕೆ ಪಡೆಯಲಾಗಿದೆ. ಇದನ್ನು ನಮ್ಮ ಗೆಲುವು ಎಂದೇ ಭಾವಿಸುತ್ತೇನೆ.
ರೋಹಿತ್ ಚಕ್ರತೀರ್ಥ ಹೇಳಿದ್ದು : ಟಿಪ್ಪು ನಿಜಕನಸುಗಳು ಕೃತಿಯಲ್ಲಿ ಇತಿಹಾಸ ತಿರುಚಿದ್ದೇವೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನಾವು ದಾಖಲೆಗಳನ್ನು ಒದಗಿಸಿದ ಮೇಲೆ ಕೇಸ್ ವಾಪಸ್ ಪಡೆದಿದ್ದಾರೆ. ಅಷ್ಟೇ ಅಲ್ಲ, ಲೇಖಕ ಅಡ್ಡಂಡ ಕಾರ್ಯಪ್ಪ, ಅಯೋಧ್ಯಾ ಪ್ರಕಾಶಣ ಹಾಗೂ ಮುದ್ರಣಾಲಯಕ್ಕೆ ಸಲ್ಲುವಂತೆ ನ್ಯಾಯಾಲಯಕ್ಕೆ ದಂಡ ಪಾವತಿ ಮಾಡಬೇಕು. ಒಟ್ಟಾರೆ ಟಿಪ್ಪು ನಿಜ ಕನಸುಗಳು ಕೃತಿ ಐತಿಹಾಸಿಕ ಸತ್ಯಗಳ ಮೇಲೆ ನಿಂತಿರುವ ಕೃತಿ ಎಂದು ನ್ಯಾಯಾಯದಲ್ಲೂ ಸಾಬೀತಾಗಿದೆ.



ಹೇಗೆ ನಡೆಯುತ್ತಿದೆ ನಾಟಕ : ಅಡ್ಡಂಡ ಕಾರ್ಯಪ್ಪ ಅವರೇ ರಚಿಸಿ ನಿರ್ದೇಶನ ಮಾಡಿರುವ ಟಿಪ್ಪು ನಿಜ ಕನಸುಗಳು ನಾಟಕದ ಪ್ರದರ್ಶನ ಭರ್ಜರಿಯಾಗಿದೆ. ತಿರುಗಾಟ ಜೋರಾಗಿ ನಡೆಯುತ್ತಿದೆ. ಮೈಸೂರು ಪ್ರದರ್ಶನ ಮುಗಿಸಿದ ನಂತರ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರಗಳಲ್ಲಿ ಪ್ರದರ್ಶನಗೊಂಡಿದೆ. ಈ ದಿನವೂ ಬಾಗಲಕೋಟೆಯಲ್ಲಿ ಪ್ರದರ್ಶನ ಇದೆ. ಬಾಗಲಕೋಟೆ ಮುಗಿದ ನಂತರ 8ನೇ ತಾರೀಕು ಬೀದರ್‍ನಲ್ಲಿ, 10ನೇ ತಾರೀಕು ಕಲಬುರಗಿಯಲ್ಲಿ, 12ನೇ ತಾರೀಕು ರಾಯಚೂರಿನಲ್ಲಿ, 14ನೇ ತಾರೀಕಕು ಬಳ್ಳಾರಿಯಲ್ಲಿ ಹಾಗೂ 18ನೇ ತಾರೀಕು ಗದಗ ನಗರದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರಧರ್ಶನಗೊಳ್ಳಲಿದೆ.


