ಜನಾರ್ದನ ರೆಡ್ಡಿ ಈಗ ಕರ್ನಾಟಕ ರಾಜಕೀಯದಲ್ಲಿ ಸೆನ್ಸೇಷನ್. ಈ ವರ್ಷ ಅಖಾಡಕ್ಕಿಳಿಯೋ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ,ಕಾಂಗ್ರೆಸ್, ಜೆಡಿಎಸ್ ಹಾಗೂ ಆಮ್ ಆದ್ಮಿಗಳಂತೆಯೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವೂ ಇರಲಿದೆ. ಇದು ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಹೊಸ ಪಕ್ಷ. ಈ ಪಕ್ಷದ ಮೂಲಕ ರಾಜ್ಯದ ಹಳ್ಳಿ ಹಳ್ಳಿ ತಿರುಗಿ ಹೊಸ ಪಕ್ಷ ಸಂಘಟಿಸುವ ಮಾತನ್ನಾಡಿರುವ ಜನಾರ್ದನ ರೆಡ್ಡಿ ತಮ್ಮ ಜೀವನದ ಕಷ್ಟ ಸುಖಗಳನ್ನೆಲ್ಲ ಹೇಳಿಕೊಂಡರು.

ಸುಷ್ಮಾ ಸ್ವರಾಜ್ ಸೇರಿದಂತೆ ಕೆಲವು ಬಿಜೆಪಿ ನಾಯಕರ ಜೊತೆಗಿನ ಒಡನಾಟವೇ ತಮ್ಮ ಪತನಕ್ಕೆ ಕಾರಣವಾಗಿದ್ದು, ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಎಲ್ಲವನ್ನೂ ಬಿಚ್ಚಿಟ್ಟರು. ಗೆಳೆಯ ಶ್ರೀರಾಮುಲು, ಸಹೋದರರಾದ ಕರುಣಾಕರ ರೆಡ್ಡಿ, ಸೋಮನಾಥ ರೆಡ್ಡಿ ಸೇರಿದಂತೆ ಯಾರನ್ನೂ ಪಕ್ಷಕ್ಕೆ ಆಹ್ವಾನಿಸಿಲ್ಲ. ನನ್ನೊಂದಿಗೆ ನನ್ನ ಪತ್ನಿ ಇರುತ್ತಾಳೆ. ಉಳಿದಂತೆ ಯಾರೊಬ್ಬರಿಗೂ ಪಕ್ಷಕ್ಕೆ ಸೇರಿ ಎಂದು ಆಹ್ವಾನ ನೀಡಿಲ್ಲ. ಒತ್ತಡ ಹಾಕಿಲ್ಲ ಎಂದರು ಜನಾರ್ದನ ರೆಡ್ಡಿ.

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುತ್ತಾ ನನ್ನ ಕಷ್ಟದ ದಿನಗಳಲ್ಲಿ ಆವತ್ತಿಗೆ ನೆರವಾಗಿದ್ದು ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಮಾತ್ರ ಎಂದಾಗ ರೆಡ್ಡಿಯವರಿಗೆ ಯಡಿಯೂರಪ್ಪ ಸರ್ಕಾರಕ್ಕೆ ಕೊಟ್ಟಿದ್ದ ಕಾಟ ನೆನಪಾಯ್ತಾ? ಗೊತ್ತಿಲ್ಲ. ಯಡಿಯೂರಪ್ಪ ಸರ್ಕಾರ ಅಸ್ಥಿತ್ವಕ್ಕೆ ಬರುವುದಕ್ಕೂ, ಅದಾದ ನಂತರ ಯಡಿಯೂರಪ್ಪ ರಾಜೀನಾಮೆ ನೀಡುವುದಕ್ಕೂ ಜನಾರ್ದನ ರೆಡ್ಡಿ ಕೊಡುಗೆ ಬಹಳವಾಗಿರುವುದು ರಾಜ್ಯ ರಾಜಕೀಯ ಬಲ್ಲವರಿಗೆ ಗೊತ್ತಿಲ್ಲದ್ದೇನಲ್ಲ. ಆದರೆ ಮೂಲಗಳ ಪ್ರಕಾರ ಯಡಿಯೂರಪ್ಪ ಸಹಾಯ ಮಾಡಿರುವುದು ಇದೆಲ್ಲ ಆಗಿ, ಜನಾರ್ದನ ರೆಡ್ಡಿ ಅವರನ್ನು ಯಾರೊಬ್ಬರೂ ಹತ್ತಿರಕ್ಕೆ ಬಿಟ್ಟುಕೊಳ್ಳದಿದ್ದ ಸಂದರ್ಭದಲ್ಲಿ ಎನ್ನವುದು ವಿಶೇಷ. ತಮ್ಮ ಸಿಟ್ಟು, ಆಕ್ರೋಶಗಳನ್ನೆಲ್ಲ ಬದಿಗಿಟ್ಟು ಯಡಿಯೂರಪ್ಪ ಸಹಾಯ ಮಾಡಿದ್ದರಂತೆ. ಆದರೆ ಎಂತಹ ಸಹಾಯ ಎನ್ನುವುದು ಮಾತ್ರ ಗುಟ್ಟು. ಯಡಿಯೂರಪ್ಪ ತಮ್ಮ ಆಪ್ತ ಬಳಗಕ್ಕೆ ಬಂದವರನ್ನು ದೂರ ತಳ್ಳಿದವರಲ್ಲ. ಸ್ನೇಹಿತರಾಗಿ ಎದುರಾಳಿಯಾಗಿ ಕಂಟಕ ತಂದವರಿಗೂ ಸಹಾಯ ಎಂದು ಬಂದಾಗ ನೆರವು ನೀಡಿದ್ದಾರೆ.
ಇನ್ನು ಜನಾರ್ದನ ರೆಡ್ಡಿ ಕೊಪ್ಪಳದ ಗಂಗಾವತಿಯಿಂದಲೇ ಸ್ಪರ್ಧೆ ಮಾಡಲಿದ್ದಾರಂತೆ. ಇನ್ನು 15 ದಿನಗಳಲ್ಲಿ ಪಕ್ಷದ ಚಿಹ್ನೆ ಸೇರಿದಂತೆ ಮತ್ತಿತರ ವಿವರಗಳನ್ನೆಲ್ಲ ಫೈನಲ್ ಮಾಡಲಿದ್ದಾರಂತೆ. ಅಟಲ್ ಬಿಹಾರಿ ವಾಜಪೇಯಿ ಹುಟ್ಟಿದ ದಿನಕ್ಕಾಗಿಯೇ ಕಾದು ಹೊಸ ಪಕ್ಷ ಘೋಷಣೆ ಮಾಡಿರುವ ಜನಾರ್ದನ ರೆಡ್ಡಿ, ಇನ್ನು ಮುಂದೆ ಹೋರಾಡುವುದು ಬಿಜೆಪಿ ವಿರುದ್ಧವೇ ಎನ್ನುವುದು ವಿಶೇಷ. ಆದರೆ ಯಡಿಯೂರಪ್ಪ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.
ಕಳೆದ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ವರುಣಾದಿಂದ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದರೆ ಬಿಜೆಪಿ 130 ಸ್ಥಾನ ಗೆಲ್ಲುತ್ತಿತ್ತು. ಯಡಿಯೂರಪ್ಪ ಅವರನ್ನು ಅವರ ಪಕ್ಷದಲ್ಲೇ ತುಳಿದರು ಎನ್ನುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ರೆಡ್ಡಿಯವರ ಜೊತೆ ಮಾತನಾಡುತ್ತೇನೆ ಎಂದಿದ್ದ ಯಡಿಯೂರಪ್ಪ ಅವರ ಸಂಧಾನವೂ ವಿಫವಲಾಗಿದೆ ಎನ್ನವುದು ಗಮನಾರ್ಹ.




