ಬುರ್ಖಾ, ಹಿಜಾಬ್, ನಿಖಾಬ್.. ಕೇವಲ ನಮ್ಮ ದೇಶದಲ್ಲಿ ಮಾತ್ರವೇ ಚರ್ಚೆಯಾಗುತ್ತಿರೋ ವಿಷಯವಲ್ಲ. ನಮ್ಮಲ್ಲಿ ಶಾಲೆಯ ವೇಳೆ ಮಕ್ಕಳು ಹಿಜಾಬ್ ಧರಿಸುವುದಕ್ಕೆ ಅವಕಾಶ ಕೊಡಬೇಕೋ ಬೇಡವೋ ಎಂದು ನಿರ್ಧರಿಸುವ ವಿಚಾರ ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಹೋಗಿದೆ. ಆಧರೆ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಬುರ್ಖಾವನ್ನು ಶಾಲೆಗಳಿರಲಿ, ಸಾರ್ವಜನಿಕ ಸ್ಥಳಗಳಲ್ಲೂ ಹಾಕುವಂತಿಲ್ಲ. ಹಾಕಿದರೆ 83 ಸಾವಿರ ದಂಡ.
ಕಳೆದ ವರ್ಷ ಎಸ್.ವಿ.ಪಿ (ಸ್ವಿಸ್ ಪೀಪಲ್ಸ್ ಪಾರ್ಟ್) ಈ ಕುರಿತು ಪ್ರಸ್ತಾವನೆ ಮಂಡಿಸಿತ್ತು. ಬುರ್ಖಾ ಅಥವಾ ನಿಖಾಬ್ ಧರಿಸುವುದು ಸಾಮಾನ್ಯ ವಸ್ತ್ರ ಸಂಹಿತೆ ಅಲ್ಲ. ಜನರು ತಮ್ಮ ಮುಖ ತೋರಿಸಲು ಅವಕಾಶ ನೀಡಬೇಕು. ಮುಖ ಮುಚ್ಚುವುದು ತಪ್ಪು ಎಂಬ ಅಭಿಯಾನವನ್ನೇ ನಡೆಸಿತ್ತು. 2017ರಲ್ಲಿ 1 ಲಕ್ಷ ಜನರ ಸಹಿ ಸಂಗ್ರಹಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಮತದಾನವೂ ನಡೆದು ಶೇ.51.2ರಷ್ಟು ಮತಗಳಲ್ಲಿ ಬುರ್ಖಾ ಧರಿಸುವುದು ಕಾನೂನಿಗೆ ವಿರುದ್ಧ ಎಂಬ ಅಭಿಪ್ರಾಯ ಬಂದಿತ್ತು.

ಈಗ ಅದು ಜಾರಿಗೆ ಬರುತ್ತಿದೆ. ಮುಖ ಮುಚ್ಚಿಕೊಂಡಿದ್ದರೆ 1000 ಡಾಲರ್ ದಂಡ. ಉದ್ದೇಶಪೂರ್ವಕವಾಗಿ ಮುಖ ಮುಚ್ಚಿಕೊಂಡಿದ್ದರೆ 10 ಸಾವಿರ ಡಾಲರ್ವರೆಗೂ ದಂಡ ಹಾಕಬಹುದು. ಆದರೆ ಆಯ್ದ ಧಾರ್ಮಿಕ ಸ್ಥಳಗಳು, ಏರ್ಕ್ರಾಫ್ಟ್, ನಿರ್ದಿಷ್ಟ ಪ್ರದೇಶಗಳು, ಆಸ್ಪತ್ರೆಗಳಂತ ಪ್ರದೇಶಗಳಿಗೆ ಇದು ಅನ್ವಯವಾಗಲ್ಲ. ಆರೋಗ್ಯ ಸಮಸ್ಯೆಯಿದ್ದವರು ಮುಖ ಮುಚ್ಚಿಕೊಳ್ಳುವ ಬಟ್ಟೆ ಧರಿಸಬಹುದು. ಕ್ಯಾಬಿನೆಟ್ ನಿರ್ಣಯದಲ್ಲಿ ಎಲ್ಲಿಯೂ ಇಸ್ಲಾಂ ಅಥವಾ ಬುರ್ಕಾ ಎಂದು ಹೇಳಿಲ್ಲ.
ಇಂತಹುದೇ ನಿಯಮ ಫ್ರಾನ್ಸ್, ಡೆನ್ಮಾರ್ಕ್, ಆಸ್ಟ್ರಿಯಾ, ಬಲ್ಗೇರಿಯ, ನೆದರ್ಲೆಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ಚಾಲ್ತಿಯಲ್ಲಿದೆ.



