ರವೀಂದ್ರ ಜಡೇಜಾಗೆ ಇತ್ತೀಚೆಗೆ ಟೈಂ ಸರಿಯಿಲ್ಲವೇನೋ ಎಂದು ಅನಿಸುತ್ತಿದೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿದ್ದ ರವೀಂದ್ರ ಜಡೇಜಾಗೆ ಧೋನಿಯಂತ ಧೋನಿಗೇ ಕ್ಯಾಪ್ಟನ್ ಆಗುವ ಅವಕಾಶ ಸಿಕ್ಕಿತ್ತು. ಆಗ ವಿಶ್ವದ ನಂ.1 ಆಲ್ರೌಂಡರ್ ಆಗಿದ್ದ ರವೀಂದ್ರ ಜಡೇಜಾ ಮೇಲೆ ಭಾರಿ ವಿಶ್ವಾಸವಿತ್ತು. ಐಪಿಎಲ್ನಲ್ಲಿ ಸತತ ಸೋಲುಗಳ ನಂತರ ತಂಡದ ಮ್ಯಾನೇಜ್ಮೆಂಟ್ ಜೊತೆ ವೈಮನಸ್ಯ ಮೂಡಿ ಚೆನ್ನೈಗೆ ಗುಡ್ ಬೈ ಹೇಳೋಕೆ ರೆಡಿಯಾಗಿದ್ದಾರೆ. ಐಪಿಲ್ ಶುರುವಾದಾಗಿನಿಂದ ಚೆನ್ನೈ ತಂಡದಲ್ಲಿ, ಧೋನಿಯ ಜೊತೆಯಲ್ಲೇ ಇರುವ ಜಡೇಜಾಗೆ ಚೆನ್ನೈ ತೊರೆಯುವ ಕಾಲ ಹತ್ತಿರದಲ್ಲಿದೆ. ಸದ್ಯಕ್ಕೆ ಅದಕ್ಕೆ ಬ್ರೇಕ್ ಹಾಕಿರುವುದು ಧೋನಿ.
ಇತ್ತ ವಿಶ್ವಕಪ್ ತಂಡದಲ್ಲಿ ಜಡೇಜಾ ಟ್ರಂಪ್ ಕಾರ್ಡ್ ಎನಿಸಿದ್ದರು. ಫಾರ್ಮ್ ಕೂಡಾ ಅದ್ಭುತವಾಗಿತ್ತು. ಆದರೆ ಇನ್ನೊಂದು ತಿಂಗಳಿದೆ ಎನ್ನುವಾಗ ಇಂಜುರಿಗೊಳಗಾಗಿ ವಿಶ್ವಕಪ್ ಬಸ್ ಮಿಸ್ ಮಾಡಿಕೊಂಡರು. ಹೀಗೆ ಐಪಿಎಲ್ ಕ್ರಿಕೆಟ್, ಇಂಟರ್ನ್ಯಾಷನಲ್ ಕ್ರಿಕೆಟ್ ಎರಡೂ ಕಡೆ ಶಾಕ್ಗೊಳಗಾಗಿರುವ ಜಡೇಜಾಗೆ ಈಗ ಫ್ಯಾಮಿಲಿಯಲ್ಲೂ ಪಾಲಿಟಿಕ್ಸ್ ಎದುರಿಸುವಂತಾಗಿದೆ.
ಜಡೇಜಾ ಗುಜರಾತ್ನವರು. ಈಗ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಘೋಷಣೆಯಾಗಿದೆ. ಜಾಮ್ನಗರ ಉತ್ತರ ವಿಧಾನಸಭಾ ಕ್ಷೇತ್ರ ಕೌಟುಂಬಿಕ ರಾಜಕೀಯ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾರ ಪತ್ನಿ ರಿವಾಬಾ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ರಿವಾಬಾ ಖ್ಯಾತ ಉದ್ಯಮಿಯ ಪುತ್ರಿ. 2019ರಲ್ಲಿ ಬಿಜೆಪಿ ಸೇರಿ ಸ್ಥಳೀಯ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿ ಹಾಲಿ ಬಿಜೆಪಿ ಶಾಸಕ ಧಮೇಂದ್ರ ಅವರಿಗೂ ಉತ್ತಮ ಹೆಸರು ಉಳಿದಿಲ್ಲ. ಹೀಗಾಗಿ ರಿವಾಬಾಗೆ ಸೀಟು ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಅತ್ತ ಜಡೇಜಾ ತಂಗಿ ನೈನಾ ಕಾಂಗ್ರೆಸ್ ನಾಯಕಿ. ಜಾಮ್ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ. ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಅವರಿಗೂ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.
ಹೀಗೆ ಇಬ್ಬರಿಗೂ ಸೀಟು ಸಿಕ್ಕರೆ ಜಡೇಜಾ ಪತ್ನಿ ಮತ್ತು ಸೋದರಿ ನಡುವಿನ ಸೆಣಸು ಇಡೀ ದೇಶದ ಗಮನ ಸೆಳೆಯುವುದು ಖಚಿತ. ಇತ್ತೀಚೆಗೆ ತಮ್ಮ ಮಗಳ ಜನ್ಮದಿನ ಸಂದರ್ಭದಲ್ಲಿ ಸಾವಿರಾರು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಹಣ ಕಟ್ಟಿದ್ದರು. ಅಂತಾದ್ದೊಂದು ಸೇವೆಗೆ ಅವಕಾಶ ಕೊಟ್ಟ ಮೋದಿಗೆ ಥ್ಯಾಂಕ್ಸ್ ಹೇಳಿದ್ದರು. ಅದನ್ನು ನೋಡಿದರೆ ಪತ್ನಿಯ ಪರವೇ ನಿಲ್ಲಬಹುದು. ಆದರೆ ರವೀಂದ್ರ ಜಡೇಜಾ ಸೋದರಿ ನೈನಾರನ್ನು ತುಂಬಾ ಪ್ರೀತಿಸುತ್ತಾರೆ. ಈಗ ಅವರ ಕಷ್ಟ.. ಯಾರಿಗೆ ಜೈ ಎನ್ನಬೇಕು ಎನ್ನುವುದು.



