ಎಲೆಕ್ಷನ್ ಎಂದ ಮೇಲೆ ಜಿದ್ದಾಜಿದ್ದಿ ಸಹಜ. ವಾಗ್ಯಿದ್ಧಗಳೂ ಸಹಜ. ಹೊಡೆದಾಟ ಆಗುತ್ತೆ.. ಆಗುತ್ತೆ.. ಆಗುತ್ತೆ.. ಆಗುತ್ತೆ.. ಅಂತಾ ಕಾಯ್ತಾ ಇದ್ದಾಗ ಅವರ ಪಾಡಿಗೆ ಅವರು ಹೋಗ್ತಾರೆ. ಇವರ ಪಾಡಿಗೆ ಇವರು ಹೋಗ್ತಾರೆ. ಆದರೆ ವರುಣಾದಲಿಲ ಆಗುತ್ತಿರುವುದೇ ಬೇರೆ..
ವರುಣಾ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದ ಕ್ಷೇತ್ರ. 2018ರಲ್ಲಿ ಮಗನಿಗಾಗಿ ಅಪ್ಪ ಸಿದ್ದರಾಮಯ್ಯ ತ್ಯಾಗ ಮಾಡಿದ್ದರು. 2023ರಲ್ಲಿ ಅಪ್ಪನಿಗಾಗಿ ಮಗ ತ್ಯಾಗ ಮಾಡಿದ್ದಾರೆ. ಇತ್ತ ಕೋಲಾರದಲ್ಲೂ ಸ್ಪರ್ಧಿಸಲು ಉತ್ಸುಕರಾಗಿರುವ ಸಿದ್ದರಾಮಯ್ಯ, ವರುಣಾ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಗೆದ್ದಂತೆಯೇ ಆಗಿದೆ. ಏಕೆಂದರೆ ಎದುರಾಳಿ ಅಭ್ಯರ್ಥಿಗಳೇ ಇಲ್ಲ.
ಜೆಡಿಎಸ್, ಈಗಾಗಲೇ ವರುಣ ಕ್ಷೇತ್ರಕ್ಕೆ ಅಭಿಷೇಕ್ ಅವರನ್ನು ಕ್ಯಾಂಡಿಡೇಟ್ ಆಗಿ ಘೋಷಿಸಿದೆ. ಕಳೆದ ಬಾರಿಯೂ ಸ್ಪರ್ಧಿಸಿ ಸೋತಿದ್ದ ಅಭಿಷೇಕ್, ಈ ಬಾರಿಯೂ ಅಖಾಡಕ್ಕಿಳಿಯುತ್ತಿದ್ದಾರೆ. ಆದರೆ ಟಿಕೆಟ್ ಘೋಷಣೆಯಾದಾಗಿನಿಂದ ಅಭಿಷೇಕ್ ಕಾರ್ಯಕರ್ತರಿಗೆ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಅಲ್ಲೆಲ್ಲೋ ಇದ್ದೇನೆ.. ಇಲ್ಲೆಲ್ಲೋ ಇದ್ದೇನೆ ಎನ್ನುತ್ತಿರುವ ಅಭಿಷೇಕ್, ಪ್ರಚಾರಕ್ಕೂ ತಲೆಕೆಡಿಸಿಕೊಂಡಿಲ್ಲ. ಆದರೆ ಯತೀಂದ್ರ ಸಿದ್ದರಾಮಯ್ಯ ಮಾತ್ರ ವರುಣಾದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪ್ರತಿದಿನ ಕನಿಷ್ಠ 10 ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದಾರೆ. ಸುಮಾರು ಒಂದು-ಒಂದೂವರೆ ತಿಂಗಳಿಂದಲೂ ವರುಣಾದಲ್ಲಿಯೇ ಬೀಡುಬಿಟ್ಟಿರುವ ಯತೀಂದ್ರ, ಅಪ್ಪನನ್ನು ಗೆಲ್ಲಿಸಿಯೇ ತೀರುವ ಹಠಕ್ಕೆ ಬಿದ್ದಿದ್ದಾರೆ.


ಒಟ್ಟಿನಲ್ಲಿ ಸಿದ್ದರಾಮಯ್ಯ ಚುನಾವಣೆ ಶುರುವಾಗುವುದಕ್ಕೆ ಮೊದಲೇ ಅರ್ಧ ಯುದ್ಧ ಗೆದ್ದಂತಾಗಿದೆ. ಅಂದಹಾಗೆ ಸಿದ್ದರಾಮಯ್ಯನವರು ಬಿಜೆಪಿ-ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆ ಎನ್ನುತ್ತಾರೆ. ಅತ್ತ ಕುಮಾರಸ್ವಾಮಿ ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ ಎನ್ನುತ್ತಾರೆ. ಅತ್ತ ಬಿಜೆಪಿಯವರು ಜೆಡಿಎಸ್-ಕಾಂಗ್ರೆಸ್`ಗೆ ಈ ಆರೋಪ ಹೊರಿಸುತ್ತಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಕಡೆಯಿಂದಲೂ ಅಡ್ಜಸ್ಟ್ ಮಾಡಿಕೊಂಡಿದ್ದಾರೆ ಕುಹಕವಾಡುತ್ತಿದ್ದಾರೆ ಕ್ಷೇತ್ರದ ಯೂತ್ ಲೀಡರ್ಸ್.



