ಸಿದ್ದರಾಮಯ್ಯ ಬಾದಾಮಿಯಲ್ಲಿ ಎಲೆಕ್ಷನ್ ನಿಲ್ಲೋದಿಲ್ಲ ಅನ್ನೋದು ಮೊದಲೇ ಗೊತ್ತಿದ್ದ ಸತ್ಯ. ಕಳೆದ ಬಾರಿ ಅಷ್ಟು ಹವಾ ಇದ್ದರೂ ಕೊನೆಗೆ ಗೆದ್ದಿದ್ದು ಕೇವಲ 1696 ವೋಟುಗಳಿಂದ. ಸಿದ್ದರಾಮಯ್ಯ ಅವರಿಗೆ 67,599 ಮತಗಳು ಸಿಕ್ಕರೆ, ಬಿಜೆಪಿಯ ಶ್ರೀರಾಮುಲು ಅವರಿಗೆ 65,903 ಮತಗಳು ಸಿಕ್ಕಿದ್ದವು. ಜೆಡಿಎಸ್ 24,484 ಮತಗಳನ್ನು ಪಡೆದಿತ್ತು. ನೋಟಾ ಮತಗಳೇ 2007 ಇದ್ದವು. ಇವುಗಳಲ್ಲಿ ಯಾವುದೊಂದು ಏರುಪೇರಾಗಿದ್ದರೂ ಸಿದ್ದು ಚಾಮುಂಡೇಶ್ವರಿಯಲ್ಲಷ್ಟೇ ಅಲ್ಲ, ಬಾದಾಮಿಯಲ್ಲೂ ಸೋಲಬೇಕಿತ್ತು. ಬಹುಶಃ ಕಾಂಗ್ರೆಸ್‍ಗೆ ಬಂದ ನಂತರ ಸಿದ್ದು ಎದುರುಸಿದ 2ನೇ ಅತೀ ದೊಡ್ಡ ಚುನಾವಣೆ ಇದು ಎನ್ನಬಹುದು.
ಈಗ ಭಾನುವಾರವಿಡೀ ಕೋಲಾರ ಸುತ್ತಿದ ಸಿದ್ದರಾಮಯ್ಯ ನಾಮಪತ್ರ ಹಾಕೋಕೆ ಬರುತ್ತೇನೆ ಅನ್ನೋ ಮೂಲಕ ಕೋಲಾರದಲ್ಲಿಯೇ ನಿಲ್ಲುವುದಾಗಿ ಘೋಷಿಸಿಯೂ ಆಗಿದೆ. ಆದರೆ ಆಟ ಶುರುವಾಗುವುದೇ ಈಗ. ಘೋಷಿಸುವವರೆಗೂ ಒಂದು ಲೆಕ್ಕ. ಘೋಷಿಸಿದ ಮೇಲೆ ಇನ್ನೊಂದು ಲೆಕ್ಕ. ಕೋಲಾರದಲ್ಲಿ ಈಗಾಗಲೇ ಸಣ್ಣದೊಂದು ಬಂಡಾಯದ ಅಲೆಯೂ ಎದ್ದಿದೆ. ಸಂಸದ ಕೆ.ಹೆಚ್.ಮುನಿಯಪ್ಪ ಕೋಲಾರದಲ್ಲಿ ಪ್ರಭಾವಿ ಮುಖಂಡ. ದಲಿತರು ಬೇರೆ. ಅವರನ್ನು ಒಲಿಸಿಕೊಳ್ಳದಿದ್ದರೆ ಗೆಲುವು ಸುಲಭವಲ್ಲ ಎನ್ನುವುದು ಸಿದ್ದರಾಮಯ್ಯ ಅವರಿಗೂ ಗೊತ್ತು. ಕೆ.ಹೆಚ್.ಮುನಿಯಪ್ಪ ಅವರು ಕಾಂಗ್ರೆಸ್‍ನಲ್ಲಿ ನೆಮ್ಮದಿಯಾಗಿಯೇನೂ ಕುಳಿತಿಲ್ಲ. ಇತ್ತೀಚೆಗೆ ಪಕ್ಷಕ್ಕೆ ಬಂದ ಮುಳಬಾಗಿಲು ಶಾಸಕ ಕೊತನೂರು ಮಂಜುನಾಥ್, ಚಿಂತಾಮಣಿಯ ಮಾಜಿ ಶಾಸಕ ಸಿ.ಸುಧಾಕರ್ ಅವರ ಸೇರ್ಪಡೆ ಕುರಿತು ಮುನಿಯಪ್ಪ ಅವರಿಗೆ ಮಾಹಿತಿಯೇ ಇರಲಿಲ್ಲ. ಅದಕ್ಕೆ ತಕ್ಕಂತೆ ಅದಾದ ಕೆಲವೇ ದಿನಗಳಲ್ಲಿ ಬಿಜೆಪಿಯ ಕೆ.ಸುಧಾಕರ್ ಅವರನ್ನು ಭೇಟಿ ಮಾಡಿದ್ದ ಮುನಿಯಪ್ಪ ಸಂಚಲನ ಸೃಷ್ಟಿಸಿದ್ದರು. ಇದಕ್ಕೆಲ್ಲ ಸಿದ್ದರಾಮಯ್ಯನವರೇ ಕಾರಣ ಎನ್ನುವುದು ಅವರ ನಂಬಿಕೆ. ಜಿಲ್ಲೆಯಲ್ಲಿ ಒಂದೇ ಪಕ್ಷದಲ್ಲಿದ್ದರೂ ವಿರೋಧಿಗಳ ಲಿಸ್ಟಿನಲ್ಲೇ ಇರುವ ರಮೇಶ್ ಕುಮಾರ್ ಸಿದ್ದು ಬಣದಲ್ಲಿರೋದು ಇದಕ್ಕೆಲ್ಲ ಕಾರಣ.

ಆದರೆ ನಾನು ಬಿಜೆಪಿ ಸೇರುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡು ಊಹಾಪೋಹಗಳಿಗೆಲ್ಲ ಬ್ರೇಕ್ ಹಾಕಿದ್ದರು. ಆದರೆ ಅವರು ಸಮಾಧಾವಾಗಿಯೇನೂ ಇಲ್ಲ ಎನ್ನವುದು ಸಾಬೀತಾಗಿದೆ. ಸಿದ್ದು ಕೋಲಾರ ರೌಂಡ್ಸ್‍ನಲ್ಲಿ ಮುನಿಯಪ್ಪ ಹಾಗೂ ಅವರ ಮಗಳು ಶಾಸಕಿ ರೂಪಾ ಶಶಿಧರ್ ಇಬ್ಬರೂ ಇರಲಿಲ್ಲ. ರೂಪಾ ಶಶಿಧರ್ ಬೆಳೆಯಬಲ್ಲ ನಾಯಕಿ. ಸಿದ್ದರಾಮಯ್ಯ ಅವರ ರಾಜಕೀಯ ತಾಕತ್ತು ಗೊತ್ತು. ಆದರೆ ಸಿದ್ದು ಎದುರು ಇರುವುದು ತಂದೆ. ಅಪ್ಪನನ್ನೂ ಬಿಡುವುದಕ್ಕಾಗಲ್ಲ. ಪಕ್ಷದ ಹಿರಿಯರ ಎದುರು ಈ ಅಳಲನ್ನೂ ತೋಡಿಕೊಂಡಿದ್ದಾರಂತೆ ರೂಪಾ ಶಶಿಧರ್.
ಇದರ ಜೊತೆಗೆ ಸಿದ್ದು ಬಣದಲ್ಲಿರುವ ರಮೇಶ್ ಕುಮಾರ್ ತಮ್ಮದೇ ಪಕ್ಷದ ಸ್ಥಳೀಯ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿಲ್ಲ. ರಮೇಶ್ ಕುಮಾರ್ ಅವರಿಗೆ ಒಂದಿಷ್ಟು ಬೆಂಬಲ, ಸಪೋರ್ಟು ಇರುವುದೇ ಅವರು ಸಿದ್ದರಾಮಯ್ಯ ಜೊತೆಗಿದ್ದಾರೆ ಎಂಬ ಕಾರಣಕ್ಕಾಗಿ. ಕ್ಷೇತ್ರದಲ್ಲಿ ಬಿಟ್ಟರೆ ಹೊರಗೆ ವರ್ಚಸ್ಸಿಲ್ಲ. ಇಂತಹವರನ್ನು ನಂಬಿಕೊಂಡು ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತಿದ್ದರುವುದು ಶುಭಸೂಚನೆಯಲ್ಲ ಎನ್ನುವುದು ಇನ್ನೊಂದು ವಾದ.
ಒಟ್ಟಿನಲ್ಲಿ ಸಿದ್ದರಾಮಯ್ಯ ಕೋಲಾರಕ್ಕೆ ಬರುತ್ತೇನೆ ಎಂದು ಘೋಷಿಸುವುದಕ್ಕೆ ಮುನ್ನ ಇದ್ದ ವಾತಾವರಣ ಇದ್ದಕ್ಕಿದ್ದಂತೆ ಬದಲಾದಂತೆ ತೋರುತ್ತಿದೆ. ಕಳೆದ ಬಾರಿ ನಾನು ಬಾದಾಮಿಗೆ ಹೋಗಿ ಪ್ರಚಾರ ಮಾಡದೇ ಇದ್ದರೆ ಸಿದ್ದರಾಮಯ್ಯ 10 ಸಾವಿರ ಮತಗಳ ಅಂತರದಲ್ಲಿ ಸೋಲುತ್ತಿದ್ದರು. ಪ್ರಚಾರದಿಂದಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ 10 ಸಾವಿರ ಹೆಚ್ಚು ವೋಟು ಸಿಕ್ಕಿತು. ಇಲ್ಲದಿದ್ದರೆ ಸಿದ್ದು ಬಾದಾಮಿಯಲ್ಲೇ ಸೋಲುತ್ತಿದ್ದರು ಎಂಬ ಕುಮಾರಸ್ವಾಮಿ ಮಾತಿನಲ್ಲಿ ಒಂದು ನಿಗೂಢ ಸಂದೇಶವೂ ಇದೆ.
ಬಿಜೆಪಿಯವರಾಗಲೇ ದಾಳಿ ಶುರು ಮಾಡಿದ್ದಾರೆ. ಈ ದಾಳಿ ಮುಂದಿನ ಹಂತಕ್ಕೆ ಹೋದಾಗ ಇಡೀ ಚಿತ್ರಣವೇ ಬದಲಾಗಬಹುದು. ಅಂದಹಾಗೆ ಕೋಲಾರದಲ್ಲಿ ಬಿಜೆಪಿಯವರು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರಂತೆ. ಆ ಅಭ್ಯರ್ಥಿ ಯಾರು ಎನ್ನುವುದು ಬಿಜೆಪಿ ಅಧ್ಯಕ್ಷರಿಗೆ ಗೊತ್ತಿದೆಯೋ.. ಇಲ್ಲವೋ..
ಕೊನೆ ಕೊಸರು : ಸಿದ್ದರಾಮಯ್ಯ ಈ ಮೂಲಕ ಸೋನಿಯಾ ರಾಹುಲ್ ದಾರಿಗೆ ಸೇರಿದ್ದಾರೆ. ಸೋನಿಯಾ ಗಾಂಧಿ ಅಮೇಥಿಯಲ್ಲಿ ನಿಂತು ಗೆದ್ದವರು. ನಂತರ ಆ ಕ್ಷೇತ್ರವನ್ನು ತಮ್ಮ ಮಗನಿಗಾಗಿ ಬಿಟ್ಟುಕೊಟ್ಟರು. ತಾವು ರಾಯ್‍ಬರೇಲಿಗೆ ಹೋದರು. ಸಿದ್ದರಾಮಯ್ಯ ಕೂಡಾ ಹಾಗೆಯೇ. ವರುಣಾದಲ್ಲಿ ನಿಂತು ಗೆದ್ದರು. ನಂತರ ಅದನ್ನು ಮಗನಿಗೆ ಬಿಟ್ಟು ಕೊಟ್ಟರು. ತಾವು ಚಾಮುಂಡೇಶ್ವರಿಯಲ್ಲಿ ಸೋತರು. ಆಗ ಅವರಿಗೆ ಉಸಿರು ನೀಡಿದ್ದು ಬಾದಾಮಿ. ಈಗ ಬಾದಾಮಿಯನ್ನು ಬಿಟ್ಟು ಕೋಲಾರಕ್ಕೆ ಬರುತ್ತಿದ್ದಾರೆ. ರಾಹುಲ್ ಗಾಂಧಿಯೂ ಹಾಗೆ. ಅಮೇಥಿಯಲ್ಲಿ ಸೋಲು ಖಚಿತವಾಗುತ್ತಿದ್ದಂತೆ ವಯನಾಡುನಲ್ಲಿ ನಿಂತು ಗೆದ್ದರು. ಅಂದಹಾಗೆ ಚಾಮುಂಡೇಶ್ವರಿ ಸೋಲು ಖಚಿತವಾಗುತ್ತಿದ್ದಂತೆ ಸಿದ್ದು ಹೇಗೆ ಬಾದಾಮಿಯಲ್ಲೂ ಹೋಗಿ ನಿಂತರೋ.. ಹಾಗೆಯೇ ರಾಹುಲ್ ಗಾಂಧಿ ಕೂಡಾ ಅಮೇಥಿ ಸೋಲು ಖಚಿತವಾದ ಮೇಲೆ ವಯನಾಡುಗೆ ಹೋಗಿ ಗೆದ್ದದ್ದು.



